ಶುಕ್ರವಾರ, ಡಿಸೆಂಬರ್ 13, 2019
19 °C

ಕಾಶ್ಮೀರ: 12 ಉಗ್ರರ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಾಶ್ಮೀರ: 12 ಉಗ್ರರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಮೂರು ಕಡೆಗಳಲ್ಲಿ ಭದ್ರತಾ ಪಡೆಗಳು ಏಕಕಾಲದಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ 12 ಉಗ್ರರು ಬಲಿಯಾಗಿದ್ದಾರೆ. ಮೂವರು ಯೋಧರು ಹುತಾತ್ಮರಾಗಿದ್ದು, ನಾಲ್ವರು ನಾಗರಿಕರು ಕೂಡ ಜೀವ ಕಳೆದುಕೊಂಡಿದ್ದಾರೆ. ಶೋಪಿಯಾನ್‌ನ ಕಾಚ್‌ದೂರಾ, ದಿಯಾಲ್‌ಗಾಮ್‌ ಮತ್ತು ದ್ರಗಾದ್‌ನಲ್ಲಿ ಈ ಕಾರ್ಯಾಚರಣೆಗಳು ನಡೆದವು.

ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ದೊಡ್ಡ ಕಾರ್ಯಾಚರಣೆ ಇದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ಎಸ್‌.ಪಿ. ವೈದ್‌ ತಿಳಿಸಿದ್ದಾರೆ. ಹಿಜ್ಬುಲ್‌ ಮುಜಾಹಿದೀನ್‌ ಮತ್ತು ಲಷ್ಕರ್‌–ಎ– ತಯ್ಯಿಬದಂತಹ ಉಗ್ರಗಾಮಿ ಸಂಘಟನೆಗಳಿಗೆ ಈ ಕಾರ್ಯಾಚರಣೆಯಿಂದ ಭಾರಿ ಹೊಡೆತ ಬಿದ್ದಿದೆ ಎಂದು ಅವರು ಹೇಳಿದ್ದಾರೆ.

ಶೋಪಿಯಾನ್‌ನ ಕಾಚ್‌ದೂರಾ ಎಂಬಲ್ಲಿ ನಡೆದ ಮುಖಾಮುಖಿಯಲ್ಲಿ ಮೂವರು ಯೋಧರು ಮೃತಪಟ್ಟರು. ಅಲ್ಲಿ ಮೂವರು ಉಗ್ರರ ದೇಹ ದೊರಕಿದೆ. ಸೋಮವಾರ ಶೋಧ ಮುಂದುವರಿಯಲಿದೆ. ಕಾಚ್‌ದೂರಾದಲ್ಲಿ 4–5 ಉಗ್ರರು ಇರುವ ಬಗ್ಗೆ ಮಾಹಿತಿ ದೊರೆತಿತ್ತು. ಅಲ್ಲಿ ಎಷ್ಟು ಉಗ್ರರಿದ್ದರು ಎಂಬುದು ಈ ಪ್ರದೇಶದ ಸಮಗ್ರ ಶೋಧದ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲು ತೂರಾಟ ಮತ್ತೆ ಶುರು: ದ್ರಗಾದ್‌ ಮತ್ತು ಕಾಚ್‌ದೂರಾದಲ್ಲಿ ಒಬ್ಬೊಬ್ಬ ನಾಗರಿಕರು ಮೃತಪಟ್ಟಿದ್ದಾರೆ.

ಕಾಚ್‌ದೂರಾ ಎನ್‌ಕೌಂಟರ್‌ ಸ್ಥಳದಲ್ಲಿ ಸ್ಥಳೀಯರು ಹಿಂಸಾಚಾರಕ್ಕೆ ಇಳಿದರು. ಪೊಲೀಸರು ಹಾರಿಸಿದ ಪೆಲೆಟ್‌ ಗುಂಡುಗಳಿಂದ 25 ಮಂದಿ ಗಾಯಗೊಂಡಿದ್ದಾರೆ. ಆರು ಮಂದಿಗೆ ಗುಂಡಿನ ಗಾಯಗಳಾಗಿವೆ.

ದ್ರಗಾದ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರು ಉಗ್ರರು ಹತರಾಗಿದ್ದಾರೆ. ಇವರೆಲ್ಲರೂ ಸ್ಥಳೀಯರು. ಅವರ ಮೃತದೇಹಗಳನ್ನು ಸಂಬಂಧಿಕರು ಪಡೆದುಕೊಂಡಿದ್ದಾರೆ.

ಎನ್‌ಕೌಂಟರ್ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಇವರೆಲ್ಲರೂ ಭದ್ರತಾ ಸಿಬ್ಬಂದಿಯತ್ತ ಕಲ್ಲು ತೂರಾಟ ನಡೆಸಿದ್ದಾರೆ.

‘ಉಗ್ರರ ವಿರುದ್ಧ ಹೋರಾಟ ಮುಂದುವರಿಯಲಿದೆ. ಯೋಧರತ್ತ ಜನರು ಕಲ್ಲು ತೂರುವುದನ್ನು ನಿಲ್ಲಿಸದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕಾಗುತ್ತದೆ. ಮಕ್ಕಳು ಕಲ್ಲು ತೂರುವುದನ್ನು ನೋಡಲು ಬೇಸರವಾಗುತ್ತದೆ. ಮಕ್ಕಳು ಹಿಂಸಾಚಾರಕ್ಕೆ ಇಳಿಯದಂತೆ ಹೆತ್ತವರು ಮನವೊಲಿಸಬೇಕು. ಅವರೆಲ್ಲರೂ ಮುಖ್ಯವಾಹಿನಿಗೆ ಬರಬೇಕು’ ಎಂದು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಇನ್ಸ್‌ಪೆಕ್ಟರ್‌ ಜನರಲ್‌ ಝುಲ್ಫೀಕರ್‌ ಹಸನ್‌ ಹೇಳಿದ್ದಾರೆ.

ಪ್ರತೀಕಾರ

ಲೆ. ಉಮರ್‌ ಫಯಾಜ್‌ ಅವರನ್ನು ಉಗ್ರರು ಕಳೆದ ವರ್ಷ ಹತ್ಯೆ ಮಾಡಿದ್ದರು. ಆ ಹತ್ಯೆಗೆ ಇದು ಪ್ರತೀಕಾರ ಎಂದು 15ನೇ ಕೋರ್‌ನ ಕಮಾಂಡರ್‌ ಲೆ. ಜ. ಎ.ಕೆ. ಭಟ್‌ ಹೇಳಿದ್ದಾರೆ. ಇಶಾಕ್‌ ಮಲಿಕ್‌ ಮತ್ತು ರಯೀಸ್‌ ಥೋಕರ್‌ ಅವರು ಫಯಾಜ್‌ ಅವರನ್ನು ಹತ್ಯೆ ಮಾಡಿದ ಗುಂಪಿನಲ್ಲಿದ್ದರು. ಈ ಇಬ್ಬರೂ ಉಗ್ರರನ್ನು ಭಾನುವಾರದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.

**

ಹುರಿಯತ್‌ ಮುಖಂಡರಾದ ಸಯ್ಯದ್‌ ಅಲಿ ಷಾ ಗಿಲಾನಿ, ಮೀರ್‌ವೈಜ್‌ ಉಮರ್‌ ಫಾರೂಕ್‌, ಯಾಸಿನ್‌ ಮಲಿಕ್‌ ಅವರಿಗೆ ಗೃಹಬಂಧನ

ಎನ್‌ಕೌಂಟರ್‌ ಖಂಡಿಸಿ ಎರಡು ದಿನಗಳ ಕಾಶ್ಮೀರ ಬಂದ್‌ಗೆ ಪ್ರತ್ಯೇಕತಾವಾದಿಗಳಿಂದ ಕರೆ

ಪ್ರತಿಕ್ರಿಯಿಸಿ (+)