ಮಂಗಳವಾರ, ಆಗಸ್ಟ್ 11, 2020
27 °C

ಗುರುನಮನಕ್ಕೆ ಭಕ್ತರ ಸಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುನಮನಕ್ಕೆ ಭಕ್ತರ ಸಾಲು

ತುಮಕೂರು: ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನೋತ್ಸವಕ್ಕೆ ಭಾನುವಾರ ಸಹಸ್ರಾರು ಭಕ್ತರು ಹಾಗೂ ಮಠಾಧೀಶರು ಸಾಕ್ಷಿಯಾದರು.

ಶನಿವಾರ ರಾತ್ರಿಯೇ ನಾಡಿನ ನಾನಾ ಭಾಗಗಳ ಭಕ್ತರು ಮಠಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ಮಠದ ಆವರಣದಲ್ಲಿ ಅಡಿಗಡಿಗೂ ಸಂಭ್ರಮ ಮನೆ ಮಾಡಿತ್ತು. ಹಳೇ ಮಠದಿಂದ ಹಿಡಿದು ಕ್ಯಾತಸಂದ್ರ ರಸ್ತೆಯವರೆಗೂ ಜನಸಂದಣಿ ಕಿಕ್ಕಿರಿದು ತುಂಬಿತ್ತು.

ಬೆಳಿಗ್ಗೆ 9ರ ವೇಳೆಗೆ ವಿವಿಧ ಮಠಾಧೀಶರು ಶಿವಕುಮಾರ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಭಕ್ತರ ಜಯಘೋಷ, ವಚನಗಾಯನ ಮೊಳಗಿತ್ತು. 10.30ಕ್ಕೆ ಪೂರ್ಣಕುಂಭ ಸ್ವಾಗತದಲ್ಲಿ ಸ್ವಾಮೀಜಿ ಅವರನ್ನು ಸಮಾರಂಭ ನಡೆದ ವೇದಿಕೆಗೆ ಕರೆತರಲಾಯಿತು. ಶ್ರೀಗಳು ಬರುತ್ತಿದ್ದಂತೆ ಜನರು ಎದ್ದು ನಿಂತು ಗೌರವ

ಸಲ್ಲಿಸಿದರು.

111 ಜ್ಯೋತಿಗಳನ್ನು ಬೆಳಗಿಸುವ ಮೂಲಕ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂಥನಾಥ ಸ್ವಾಮೀಜಿ ಮಾತನಾಡಿ, ‘ಪ್ರಕೃತಿಯ ನಿಯಮಗಳಿಗೆ ಅನುಗುಣವಾಗಿ ಬದುಕಿದರೆ 100 ವರ್ಷ ಬದುಕಬಹುದು. ಪ್ರಕೃತಿಯ ನಿಯಮಗಳನ್ನು ಮೆಟ್ಟಿ ನಿಲ್ಲುವುದು ಸಾಮಾನ್ಯರಿಗೆ ಸಾಧ್ಯವಿಲ್ಲ. ಅದು ಶಿವಕುಮಾರ ಶ್ರೀ ಅವರಂತಹ ಸಿದ್ಧಪುರುಷರಿಂದ ಮಾತ್ರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ನಾನು ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ವಾರಕ್ಕೆ ಇಲ್ಲ, 15 ದಿನಕ್ಕೆ ಒಮ್ಮೆ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ಮಠಕ್ಕೆ ಬರುತ್ತಿದ್ದೆ’ ಎಂದು ನೆನಪು ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು, ‘ಬಸವೋತ್ಸವನ್ನು ತುಂಬಿಕೊಂಡಿರುವ ಶಿವಕುಮಾರ ಸ್ವಾಮೀಜಿ ಯುಗದ ಉತ್ಸಾಹವಾಗಿದ್ದಾರೆ’ ಎಂದು ಬಣ್ಣಿಸಿದರು.

ಮಠಾಧೀಶರ ಸಾಲಿನಲ್ಲಿ ಯಡಿಯೂರಪ್ಪ

ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ಯಾವುದೇ ರಾಜಕಾರಣಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಸಿ.ಪಿ.ಯೋಗೀಶ್ವರ್ ವೇದಿಕೆಗೆ ಬಂದು ಶ್ರೀಗಳಿಗೆ ನಮಿಸಿದರು. ನಂತರ ಯಡಿಯೂರಪ್ಪ ಅವರು ಮಠಾಧೀಶರ ಸಾಲಿನಲ್ಲಿಯೇ ಕಾರ್ಯಕ್ರಮ ಮುಗಿಯುವವರೆಗೂ ಕುಳಿತಿದ್ದರು. ‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.