ಬುಧವಾರ, ಆಗಸ್ಟ್ 5, 2020
21 °C
ಕಾಂಗ್ರೆಸ್‌ ವಿರುದ್ಧ ಮೂರು ಆರೋಪ ಪಟ್ಟಿ ಬಿಡುಗಡೆ

‘ರೈತನಿಗೆ ನೋವು ಕೊಟ್ಟ ಗೂಂಡಾ ಸರ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೈತನಿಗೆ ನೋವು ಕೊಟ್ಟ ಗೂಂಡಾ ಸರ್ಕಾರ’

ಬೆಂಗಳೂರು: ‘ಸಿದ್ದರಾಮಯ್ಯ ಸರ್ಕಾರ ಬೆಂಗಳೂರಿಗೆ ಸಂಚಕಾರ’, ‘ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿ’, ‘ಅನ್ನಕೊಟ್ಟ ರೈತನಿಗೆ ನೋವು ಕೊಟ್ಟ ಕಾಂಗ್ರೆಸ್‌’ ಎಂಬ ಶೀರ್ಷಿಕೆಗಳಡಿ ಮೂರು ಆರೋಪ ಪಟ್ಟಿಗಳನ್ನು ಭಾನುವಾರ ಬಿಡುಗಡೆ ಮಾಡಿರುವ ಬಿಜೆಪಿ, ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಕೆಂಡಕಾರಿದೆ.

ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳ ತುಣುಕುಗಳನ್ನು ಆಧರಿಸಿ ಸಿದ್ಧಪಡಿಸಿದ ಈ ಆರೋಪ ಪಟ್ಟಿಗಳನ್ನು ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್‌, ಡಿ.ವಿ. ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಿಡುಗಡೆ ಮಾಡಿದರು.

ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 64 ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ ಎಂದು ಬಿಜೆಪಿ ಅಂಕಿ ಅಂಶ ನೀಡಿದೆ. ಬೆಂಗಳೂರು ಕಸ ವಿಲೇವಾರಿ ಮಾಫಿಯಾದಲ್ಲಿ ಪ್ರಭಾವಿ ಸಚಿವರು ಭಾಗಿಯಾಗಿದ್ದು, ನಗರಾಭಿವೃದ್ಧಿ ಇಲಾಖೆ ಸಾಧನೆ ಶೂನ್ಯ. ರಾಜಧಾನಿಯಲ್ಲೇ ಮಲ ಹೊರುವ ಪದ್ಧತಿ ಜೀವಂತವಾಗಿದೆ. ಅತ್ಯಾಚಾರ, ಅಪಹರಣಗಳಿಂದ ಮಕ್ಕಳು ನರಳುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಶಾಸಕ ಎನ್‌.ಎ. ಹ್ಯಾರೀಸ್‌ ಪುತ್ರನ ಗೂಂಡಾಗಿರಿ ಬಗ್ಗೆಯೂ ಪ್ರಸ್ತಾಪಿಸಿದೆ. ಈ ಪ್ರಕರಣಗಳು ಮತ್ತು ದೂರುಗಳು ಯಾವ ಹಂತಗಳಲ್ಲಿವೆ ಎಂದೂ ಪಟ್ಟಿ ಮಾಡಲಾಗಿದೆ.

ಪೊಲೀಸ್‌ ಅಧಿಕಾರಿಗಳಿಗೆ ಕಿರುಕುಳ, ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆ, ಕಾಂಗ್ರೆಸ್‌ ನಾಯಕರು, ಅವರ ಮಕ್ಕಳ ಅನುಯಾಯಿಗಳ ವರ್ತನೆಯ ಬಗ್ಗೆಯೂ ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

2013–14ರಿಂದ ಈವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ ನೀಡಲಾಗಿದೆ. ‘3,800 ರೈತರು ಸಾವಿಗೆ ಶರಣಾಗಿದ್ದು, ಕಳಪೆ ಬಿತ್ತನೆ ಬೀಜ, ಬೆಳೆ ನಷ್ಟದಿಂದ ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದೊಂದು ಕೃಷಿಕ ವಿರೋಧಿ ಸರ್ಕಾರ’ ಎಂದೂ ಬಿಜೆಪಿ ಆರೋಪಿಸಿದೆ.

**

‘ಕಾಂಗ್ರೆಸ್‌ನಿಂದ ನೆಗೆಟಿವ್ ಪ್ರಚಾರ’

‘ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ಗುರಿ ಮಾಡಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಬಿಂಬಿಸಿಕೊಳ್ಳಲು ಯಾವುದೇ ಸಾಧನೆಗಳಿಲ್ಲ’ ಎಂದು ರವಿಶಂಕರ ಪ್ರಸಾದ್‌ ಆರೋಪಿಸಿದರು.

‘ಸಕಾರಾತ್ಮಕ ಅಂಶಗಳನ್ನು ಮುಂದಿಟ್ಟು ಚುನಾವಣೆ ಎದುರಿಸಬೇಕಾದ ಸರ್ಕಾರ, ಹತಾಶೆಗೊಂಡಿದೆ. ಹೀಗಾಗಿ ನೆಗೆಟಿವ್‌ ವಿಚಾರಗಳಿಗೆ ಒತ್ತು ನೀಡುತ್ತಿದೆ’ ಎಂದೂ ದೂರಿದರು.

‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಿಂದೆ ಸಿದ್ದರಾಮಯ್ಯ ಹೋದರೆ ಸೋಲು ಖಚಿತ’ ಎಂದು ಲೇವಡಿ ಮಾಡಿದ ರವಿಶಂಕರ ಪ್ರಸಾದ್‌, ‘ರಾಹುಲ್‌ ಪ್ರಚಾರ ನಡೆಸಿದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೋಲು ಕಂಡಿದೆ. ನಾಗಾಲ್ಯಾಂಡ್‌, ತ್ರಿಪುರಾದಲ್ಲಿ ಕೈ ಪಕ್ಷ ತೀರಾ ಕಳಪೆ ಪ್ರದರ್ಶನ ತೋರಿಸಿರುವುದು ಅದಕ್ಕೆ ನಿದರ್ಶನ’ ಎಂದರು.

‘ಬೆಂಗಳೂರಿಗೆ ಅಗತ್ಯವಾದ ಮೂಲಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಮೆಟ್ರೊ ಯೋಜನೆಗೆ ಅಗತ್ಯವಾದ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವುದರಿಂದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.