7

ಕಾವೇರಿ: ಪ‍್ರತಿಭಟನೆ ಜೋರು

Published:
Updated:
ಕಾವೇರಿ: ಪ‍್ರತಿಭಟನೆ ಜೋರು

ಕೊಯಮತ್ತೂರು: ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ರಚಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದನ್ನು ವಿರೋಧಿಸಿ ಸೋಮವಾರ ತಮಿಳುನಾಡಿನ ಹಲವೆಡೆ ‍ಪ್ರತಿಭಟನೆ ನಡೆಸಲಾಗಿದೆ. ಈ ನಡುವೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಸೋಮವಾರ ಸಂಜೆಯ ವಿಮಾನದಲ್ಲಿ ದೆಹಲಿಗೆ ತೆರಳಿದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಇಬ್ಬರು ಡಿಎಂಕೆ ಕಾರ್ಯಕರ್ತರು ಸೀಮೆಎಣ್ಣೆ ಸುರಿದುಕೊಂಡು ‌ಆತ್ಮಾಹುತಿಗೆ ಯತ್ನಿಸಿದ್ದಾರೆ. ಇವರನ್ನು ಪಿ.ಟಿ. ಮುರುಗೇಶನ್ ಹಾಗೂ ಸಿಂಗೈ ಸದಾಶಿವಂ ಎಂದು ಗುರುತಿಸಲಾಗಿದೆ. ಇವರ ಯತ್ನ ತಡೆದು ಸಮೀಪದ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈತರು ಹಾಗೂ ಕೆಲವು ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ, ತಕ್ಷಣವೇ ಸಿಎಂಬಿ ರಚಿಸುವಂತೆ ಘೋಷಣೆ ಕೂಗಿದರು. ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ರಸ್ತೆ ಸಂಚಾರ ತಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಾವೇರಿ ಕಣಿವೆ ಭಾಗವಾಗಿರುವ ತಂಜಾವೂರಿನಲ್ಲಿ ಡಿಎಂಕೆ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಪ್ರತಿಭಟನೆ ನಡೆಸಿವೆ. ಚೆನ್ನೈ, ತಿರುವರೂರು ಹಾಗೂ ಮದುರೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ.

ವಿರೋಧ ಪಕ್ಷಗಳು ಹಾಗೂ ತಮಿಳುಪರ ಸಂಘಟನೆಗಳು ಕೊಯಮತ್ತೂರು, ತಿರುಚಿನಾಪಳ್ಳಿ ಹಾಗೂ ಪುದುಕೋಟ್ಟೈಗಳಲ್ಲಿ ರೈಲು ಸಂಚಾರ ತಡೆದಿದ್ದಾರೆ. ಚೆನ್ನೈ, ಈರೋಡ್ ಹಾಗೂ ಪುದುಚೇರಿಯಲ್ಲಿ ಕೇಂದ್ರ ಸರ್ಕಾರಿ ಕಚೇರಿಗಳ ಎದುರು ಪ್ರತಿಭಟಿಸಲಾಗಿದೆ.

ಉದ್ವಿಗ್ನ ವಾತಾವರಣ: ‘ಮೇ 17 ಮೂವ್‌ಮೆಂಟ್’ ಎನ್ನುವ ತಮಿಳುಪರ ಸಂಘಟನೆಯ ಕಾರ್ಯಕರ್ತರು ಕೇಂದ್ರ ಸರ್ಕಾರಿ ಕಚೇರಿಗಳಿರುವ ‘ಶಾಸ್ತ್ರಿ ಭವನ’ದ ಫಲಕದ ಮೇಲೆ ಚಪ್ಪಲಿ ತೂರಾಡಿದ್ದರಿಂದ ಕೆಲವು ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ಕಾಂಗ್ರೆಸ್ ಕಾರ್ಯಕರ್ತರು ತಿರುಚ್ಚಿಯಲ್ಲಿರುವ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ದ್ರಾವಿಡರ್ ವಿಡುದಲೈ ಕಳಗಂ ಹಾಗೂ ವಿವಿಧ ಸಂಘಟನೆಗಳು ಮದುರೆಯಲ್ಲಿ ಪ್ರತಿಭಟಿಸಿವೆ.

ಏಪ್ರಿಲ್ 5ರಂದು ರಾಜ್ಯವ್ಯಾಪಿ ಬಂದ್ ಆಚರಿಸುವಂತೆ ಡಿಎಂಕೆ ನೇತೃತ್ವದಲ್ಲಿ ವಿರೋಧ ಪಕ್ಷಗಳು ಕರೆ ನೀಡಿವೆ. ಸಿಎಂಬಿ ರಚಿಸುವವರೆಗೂ, ಚೆನ್ನೈನಲ್ಲಿ ಭಾನುವಾರ ನಡೆಸಲಾದ ರೀತಿಯದೇ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ಡಿಎಂಕೆ ಹೇಳಿದೆ.

ಆರು ವಾರಗಳಲ್ಲಿ ಸಿಎಂಬಿ ರಚಿಸುವಂತೆ ಸುಪ್ರೀಂ ಕೋರ್ಟ್‌ ಫೆ.16ರಂದು ಆದೇಶ ನೀಡಿತ್ತು. ಈ ಅವಧಿ ಮಾರ್ಚ್ 29ಕ್ಕೆ ಅಂತ್ಯವಾಗಿದ್ದು, ಆದೇಶಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರ ಮಾರ್ಚ್‌ 31ರಂದು ಸುಪ್ರೀಂ ಮೆಟ್ಟಿಲೇರಿತ್ತು.   ಸುಪ್ರೀಂ ಆದೇಶದಲ್ಲಿ, ಕಾವೇರಿ ನದಿ ನೀರು ಹಂಚಿಕೆಯಲ್ಲಿ 270 ಟಿಎಂಸಿ ಇದ್ದ ಕರ್ನಾಟಕದ ಪಾಲನ್ನು 14.75 ಟಿಎಂಸಿ ಅಷ್ಟು ಹೆಚ್ಚಿಸಲಾಗಿದೆ. ಇದರಿಂದ ಕಾವೇರಿ ಜಲ ವಿವಾದ ನ್ಯಾಯಮಂಡಳಿ ನೀಡಿದ್ದ ತೀರ್ಪು ಪರಿಷ್ಕರಣೆಯಾಗಿದೆ.

ರಾಜೀನಾಮೆ ನೀಡಿ ಹಿಂಪಡೆದ ಎಐಎಡಿಎಂಕೆ ಸಂಸದ

ನವದೆಹಲಿ:
ಸಿಎಂಬಿ ರಚನೆ ವಿಳಂಬವಾಗುತ್ತಿರುವುದನ್ನು ವಿರೋಧಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಐಎಡಿಎಂಕೆ ರಾಜ್ಯಸಭಾ ಸಂಸದ ಎಸ್‌.ಮುತ್ತುಕರುಪ್ಪನ್ ಬಳಿಕ ಇದನ್ನು ಹಿಂಪಡೆದಿದ್ದಾರೆ.

ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯನಾಯ್ಡು ಅವರಿಗೆ ರವಾನಿಸಬೇಕಿದ್ದ ರಾಜೀನಾಮೆ ಪತ್ರವನ್ನು ಮುತ್ತುಕರುಪ್ಪನ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ, ಮುಖ್ಯಮಂತ್ರಿ ಇ.ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಓ.ಪನೀರ್‌ಸೆಲ್ವಂ ಅವರು ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರು.

‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮನವಿಯಿಂದಾಗಿ ನಾನು ರಾಜೀನಾಮೆ ಪತ್ರವನ್ನು ಸಭಾಪತಿಗೆ ಸಲ್ಲಿಸಿಲ್ಲ. ನನ್ನ ರಾಜೀನಾಮೆ ಹಿಂಪಡೆಯುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ರಾಜ್ಯಸಭಾ ಸಂಸದರಾಗಿ ಅವರ ಅವಧಿ ಇನ್ನೂ ಎರಡು ವರ್ಷ ಇದೆ.

ಒತ್ತಡ ಹೇರುವ ತಂತ್ರ: ಸಿದ್ದರಾಮಯ್ಯ

ಮೈಸೂರು:
ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ತಮಿಳುನಾಡು ಬಂದ್‌ಗೆ ಕರೆ ಕೊಟ್ಟಿರುವುದು ರಾಜ್ಯದ ಮೇಲೆ ಒತ್ತಡ ಹೇರುವ ತಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿಲ್ಲ. ಬದಲಿಗೆ ‘ಸ್ಕೀಂ’ ರಚಿಸಿ ಎಂದು ಹೇಳಿದೆ. ಇದನ್ನು ಅರ್ಥ ಮಾಡಿಕೊಳ್ಳದೇ ತಮಿಳುನಾಡು ಬಂದ್‌ಗೆ ಕರೆಕೊಟ್ಟಿದೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಮೇಕೆದಾಟು ಯೋಜನೆ ಮಾಡಲು ರಾಜ್ಯ ಸರ್ಕಾರ ಈಗಲೂ ಬದ್ಧವಾಗಿದೆ. ಈಗಾಗಲೇ ಅದಕ್ಕಾಗಿ ಡಿಪಿಆರ್ ಸಹ ಸಿದ್ಧಪಡಿಸಿ ಕಳುಹಿಸಲಾಗಿದೆ. ಕೇಂದ್ರದಿಂದ ಅನುಮತಿ ಬಂದ ಕೂಡಲೇ ಯೋಜನೆಗೆ ಚಾಲನೆ ಕೊಡಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry