ಮಂಗಳವಾರ, ಆಗಸ್ಟ್ 4, 2020
26 °C
ಕೆ.ಆರ್. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆ ದಿಢೀರ್‌ ಜಾರಿ

ಕಡ್ಡಾಯ ಶುಲ್ಕ ಪಾವತಿಗೆ ಒತ್ತಡ: ಆಕ್ರೋಶ

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

ಕಡ್ಡಾಯ ಶುಲ್ಕ ಪಾವತಿಗೆ ಒತ್ತಡ: ಆಕ್ರೋಶ

ಬೆಂಗಳೂರು: ‘ಸಮವಸ್ತ್ರ ಶುಲ್ಕ ಪಾವತಿಸದ ಹೊರತು ಪರೀಕ್ಷಾ ಶುಲ್ಕ ಸ್ವೀಕರಿಸುವುದಿಲ್ಲ. ಪ್ರಥಮ ಹಾಗೂ ದ್ವಿತೀಯ ವರ್ಷದ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಶುಲ್ಕ ಪಾವತಿಸಲೇಬೇಕು...’

ಕೆ.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನೀಲಾಂಬಿಕಾ ಪಟ್ಟಣ ಶೆಟ್ಟಿ, ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಈ ರೀತಿ ಸೂಚಿಸಿದ್ದಾರೆ. ಸಮವಸ್ತ್ರ ಶುಲ್ಕದ ಜತೆಗೆ ಪರೀಕ್ಷಾ ಶುಲ್ಕ ಸ್ವೀಕರಿಸಿ ಎಂದು ಸಿಬ್ಬಂದಿಗೂ ತಾಕೀತು ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಶೈಕ್ಷಣಿಕ ವರ್ಷದ ಕೊನೆಯಲ್ಲಿ ದಿಢೀರ್‌ ಸಮವಸ್ತ್ರ ಸಂಹಿತೆ ಜಾರಿಗೊಳಿಸಿರುವ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಕೆಲ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಆರ್.ಪುರ, ಮಹದೇವಪುರ, ಹೊಸಕೋಟೆ, ಚಿಂತಾಮಣಿ ಹಾಗೂ ಮಾಲೂರು ತಾಲ್ಲೂಕುಗಳ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಓದುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷಾ ಶುಲ್ಕದ ಜತೆಗೆ ಸಮವಸ್ತ್ರ ಶುಲ್ಕ ಪಾವತಿಸಿದ್ದಾರೆ.

‘ಕೆಲ ದಿನಗಳ ಹಿಂದೆ ಸಭೆ ನಡೆಸಿ ಸಮವಸ್ತ್ರ ಜಾರಿಗೊಳಿಸುವ ಕುರಿತು ನಿರ್ಧರಿಸಲಾಗಿದೆ. ಸಮವಸ್ತ್ರ ಶುಲ್ಕ ಸ್ವೀಕರಿಸಿ ಎಂದು ಪ್ರಾಂಶುಪಾಲರು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಕಾಲೇಜಿನ ಸಿಬ್ಬಂದಿ ತಿಳಿಸಿದರು.

‘ಇಷ್ಟು ದಿನ ಇಲ್ಲದ್ದು ಈಗೇಕೆ’: ‘ನಾವು ಬಡವರು. ಪರೀಕ್ಷಾ ಶುಲ್ಕವನ್ನೂ ಕಟ್ಟಲಾಗದ ಪರಿಸ್ಥಿತಿ ನಮ್ಮದು. ಅದರ ಜತೆಗೆ ಸಮವಸ್ತ್ರ ಶುಲ್ಕವನ್ನೂ ಪಾವತಿಸಿ ಅಂದರೆ ಎಲ್ಲಿಂದ ಹಣ ತರುವುದು. ಇಷ್ಟು ದಿನ ಸಮವಸ್ತ್ರ ಇರಲಿಲ್ಲ. ಈ ನಿಯಮವನ್ನು ಈಗೇಕೆ ಜಾರಿಗೊಳಿಸುತ್ತಿದ್ದಾರೆ’ ಎಂದು ಕೆಲ ವಿದ್ಯಾರ್ಥಿಗಳು ಪ್ರಶ್ನಿಸಿದರು.

‘ಸಮವಸ್ತ್ರ ಜಾರಿ ಕುರಿತು ನಮ್ಮ ಒಪ್ಪಿಗೆಯನ್ನು ಯಾರೂ ಕೇಳಿಲ್ಲ. ತರಗತಿ ಪ್ರತಿನಿಧಿಗಳು ಹಾಗೂ ಕೆಲ ಉಪನ್ಯಾಸಕರು ಮಾತ್ರ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಿರುವಾಗ ನಾವೇಕೆ ಶುಲ್ಕ ಪಾವತಿಸಬೇಕು’ ಎಂದರು.

‘ಖಾಸಗಿ ಕಾಲೇಜುಗಳಿಗೆ ಹೆಚ್ಚಿನ ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಮಗನನ್ನು ಇಲ್ಲಿಗೆ ಸೇರಿಸಿದ್ದೇನೆ. ಆದರೆ, ಇಲ್ಲೂ ವಿನಾಕಾರಣ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಈ ಕಾಲೇಜಿಗೆ ಬಂದ ಪ್ರಾಂಶುಪಾಲರು ಇಷ್ಟು ದಿನ ಇಲ್ಲದ ಸಮವಸ್ತ್ರ ಸಂಹಿತೆಯನ್ನು ಈಗೇಕೆ ಜಾರಿ ಮಾಡಿದ್ದಾರೋ ಗೊತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವಿದ್ಯಾರ್ಥಿಯೊಬ್ಬರ ತಂದೆ ಹೇಳಿದರು.

‘ಸಮವಸ್ತ್ರ ಸಂಹಿತೆಗೆ ನಮ್ಮ ಅಡ್ಡಿ ಇಲ್ಲ. ಆದರೆ, ಸಮವಸ್ತ್ರ ಶುಲ್ಕ ಪಾವತಿಸಿದರೆ ಮಾತ್ರ ಪರೀಕ್ಷಾ ಶುಲ್ಕ ಸ್ವೀಕರಿಸಲಾಗುತ್ತದೆ ಎಂಬ ನಿಲುವು ಸರಿಯಲ್ಲ. ಕಾಲವಾಕಾಶ ನೀಡಿದರೆ ಹೇಗಾದರೂ ಹಣ ಹೊಂದಿಸಬಹುದು ಅಥವಾ ಮುಂದಿನ ವರ್ಷದಿಂದ ಬೇಕಿದ್ದರೆ ಪ್ರವೇಶ ಶುಲ್ಕದ ಜತೆಗೆ ಈ ಶುಲ್ಕವನ್ನೂ ವಸೂಲಿ ಮಾಡಲಿ’ ಎಂದರು.

ಕಟ್ಟಡಗಳನ್ನು ಕಟ್ಟುವುದನ್ನು ಬಿಟ್ಟರೆ ಕಾಲೇಜಿನಲ್ಲಿ ಬೇರೆ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡದೆ ಅನಗತ್ಯ ವಿಚಾರಗಳಿಗೆ ಕಾಲೇಜಿನ ಆಡಳಿತ ಮಂಡಳಿ ಹೆಚ್ಚು ಆಸಕ್ತಿ ಹೊಂದಿದೆ ಎಂದು ಪೋಷಕರು ಕಿಡಿಕಾರಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು, ಪ್ರಾಂಶುಪಾಲರು ಸಂಪರ್ಕಕ್ಕೆ ಸಿಗಲಿಲ್ಲ.

‘ವಿರೋಧ ವ್ಯಕ್ತಪಡಿಸಿದವರಿಗೆ ಉಸ್ತುವಾರಿ’

ಕೆಲ ದಿನಗಳ ಹಿಂದೆ ಕಾಲೇಜಿನ ಎಲ್ಲ ಉಪನ್ಯಾಸಕರ ಜತೆ ಆಡಳಿತ ಮಂಡಳಿಯು ಸಭೆ ನಡೆಸಿತ್ತು. ಆಗ ಸಮವಸ್ತ್ರದ ಬಗ್ಗೆ ಪ್ರಾಂಶುಪಾಲರು ಪ್ರಸ್ತಾಪಿಸಿದರು. ಅದಕ್ಕೆ ಕೆಲ ಉಪನ್ಯಾಸಕರು ವಿರೋಧ ವ್ಯಕ್ತಪಡಿಸಿದ್ದರು ಎಂದು ಕಾಲೇಜಿನ ಸಿಬ್ಬಂದಿ ತಿಳಿಸಿದರು.

‘ಸಮವಸ್ತ್ರ ಕಡ್ಡಾಯಗೊಳಿಸುವುದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದವರೇ ಇಂದು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅವರ ಈ ವರ್ತನೆಗೆ ಏನನ್ನಬೇಕು ಎಂದು ಗೊತ್ತಾಗುತ್ತಿಲ್ಲ’ ಎಂದರು.

‘ಆದೇಶ ಹೊರಡಿಸಿಲ್ಲ’

ಸಮವಸ್ತ್ರ ಜಾರಿ ವಿಚಾರ ಕಾಲೇಜಿನ ಆಡಳಿತ ಮಂಡಳಿಗೆ ಬಿಟ್ಟದ್ದು. ಅದು ಕಡ್ಡಾಯವಲ್ಲ. ಸಮವಸ್ತ್ರ ಕಡ್ಡಾಯ ಎಂಬ ಆದೇಶ ಹೊರಡಿಸಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಎನ್.ಮಂಜುಳಾ ತಿಳಿಸಿದರು.

‘ಕಾಲೇಜಿನ ಹಿತದೃಷ್ಟಿಯಿಂದ ಆಯಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕೆಲ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ. ವಿದ್ಯಾರ್ಥಿಗಳ ಬೇಡಿಕೆ ಮೇರೆಗೆ ಸಮವಸ್ತ್ರ ಜಾರಿ ನಿರ್ಧಾರ ಕೈಗೊಂಡಿರಬಹುದು. ಅದು ತಪ್ಪಲ್ಲ. ಆದರೆ, ಸಮವಸ್ತ್ರ ಶುಲ್ಕ ಕಟ್ಟಿದರೆ ಮಾತ್ರ ಪರೀಕ್ಷಾ ಶುಲ್ಕ ಸ್ವೀಕರಿಸುತ್ತೇವೆ ಎನ್ನುವುದು ಸರಿಯಲ್ಲ. ಈ ಬಗ್ಗೆ ವಿಚಾರಣೆ ನಡೆಸುತ್ತೇನೆ. ಲೋಪ ಸಾಬೀತಾದರೆ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು.

ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಯಾವುದೇ ಆದೇಶ ಮಾಡಿಲ್ಲ ಎಂದು ಕುಲಪತಿ ಕೆಂಪರಾಜು ತಿಳಿಸಿದರು.

**

ಅಂಕಿ–ಅಂಶ

2,500 – ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು

₹ 1,475 – ವಿದ್ಯಾರ್ಥಿಯಿಂದ ವಸೂಲಿ ಮಾಡುತ್ತಿರುವ ಸಮವಸ್ತ್ರ ಶುಲ್ಕ

₹ 36.87 ಲಕ್ಷ – ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಶುಲ್ಕ ಪಾವತಿಸಿದರೆ ಸಂಗ್ರಹವಾಗುವ ಮೊತ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.