ಭಾನುವಾರ, ಡಿಸೆಂಬರ್ 15, 2019
19 °C
ಪೆಟ್ರೋಲ್‌ ಬಂಕ್‌ ಮಾಲೀಕರಿಂದ ವಕೀಲ ಕೆ.ಎಸ್.ಮಂಜುನಾಥ್‌ ಮೇಲೆ ಹಲ್ಲೆ, ನಿಂದನೆ

ದೂರು ಸ್ವೀಕರಿಸದ ಪೊಲೀಸರು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂರು ಸ್ವೀಕರಿಸದ ಪೊಲೀಸರು: ಪ್ರತಿಭಟನೆ

ಹೊಸಕೋಟೆ: ವಕೀಲ ಕೆ.ಎಸ್.ಮಂಜುನಾಥ್‌ ಮೇಲೆ ನಡೆದ ಹಲ್ಲೆ ಸಂಬಂಧ ದೂರು ದಾಖಲಿಸಿಕೊಳ್ಳದ ಪೊಲೀಸರ ಕ್ರಮವನ್ನು ಖಂಡಿಸಿ ವಕೀಲರ ಸಂಘದ ತಾಲ್ಲೂಕು ಘಟಕದ ಸದಸ್ಯರು ಡಿವೈಎಸ್‌ಪಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಕೋರ್ಟ್‌ನ ಕಲಾಪಗಳಿಗೆ ಗೈರು ಹಾಜರಾದ ವಕೀಲರು ಡಿವೈಎಸ್‌ಪಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಕೆಂಬಡಗಾನಹಳ್ಳಿಯ ಮಂಜುನಾಥ್‌ ಅವರು ಭಾನುವಾರ ರಾತ್ರಿ ಭೀಮಕ್ಕನಹಳ್ಳಿಯ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿದ್ದರು. ಅಳತೆಯಲ್ಲಿ ವ್ಯತ್ಯಾಸ ಉಂಟಾದ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಈ ವೇಳೆ, ಬಂಕ್‌ ಮಾಲೀಕರು ಮಂಜುನಾಥ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಕುರಿತ ದೂರನ್ನು ನಂದಗುಡಿ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸ್ವೀಕರಿಸಲಿಲ್ಲ. ವಕೀಲರ ಪರಿಸ್ಥಿತಿಯೇ ಹೀಗಾದರೆ, ಜನಸಾಮಾನ್ಯರ ಸ್ಥಿತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಅಹವಾಲು ಆಲಿಸಿದ ಡಿವೈಎಸ್‌ಪಿ ಎನ್.ಕುಮಾರ್, ಈ ಬಗ್ಗೆ ಎಸ್‌ಐ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ, ಅವರ ಮಾತಿಗೆ ಜಗ್ಗದ ವಕೀಲರು, ‘ಎಸ್‌ಐ ಸ್ಥಳಕ್ಕೆ ಬರುವವರೆಗೂ ಧರಣಿ ನಡೆಸುತ್ತೇವೆ’ ಎಂದು ಪಟ್ಟುಹಿಡಿದರು.

ಸ್ಥಳಕ್ಕೆ ಬಂದ ಎಸ್‌ಐ, ‘ತಾಂತ್ರಿಕ ಕಾರಣದಿಂದ ಎಫ್ಐಆರ್‌ ದಾಖಲಿಸಲು ಆಗಲಿಲ್ಲ. ದೂರನ್ನು ಕೂಡಲೇ ದಾಖಲಿಸಿಕೊಳ್ಳುತ್ತೇನೆ’ ಎಂದರು. ಬಳಿಕ ಧರಣಿ ಹಿಂದಕ್ಕೆ ಪಡೆದರು.

ಪ್ರತಿಕ್ರಿಯಿಸಿ (+)