ನಿವೃತ್ತ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಭಾಗ್ಯ ವಿಸ್ತರಿಸಿ

7
ಗದಗದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಎಂ.ಎನ್.ಮಹೇಂದ್ರಕರ ಒತ್ತಾಯ

ನಿವೃತ್ತ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಭಾಗ್ಯ ವಿಸ್ತರಿಸಿ

Published:
Updated:

ಗದಗ: ‘ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿ, ನಿವೃತ್ತರಾದ ಪೊಲೀಸ್ ಸಿಬ್ಬಂದಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ಭಾಗ್ಯ ಯೋಜನೆ ವಿಸ್ತರಿಸಬೇಕು’ ಎಂದು ನಿವೃತ್ತ ಎಆರ್‍ಎಸ್‍ಐ ಎಂ.ಎನ್.ಮಹೇಂದ್ರಕರ ಒತ್ತಾಯಿಸಿದರು.ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೆಟಗೇರಿಯ ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಕವಾಯತ್‌ ಮೈದಾನದಲ್ಲಿ ಸೋಮವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಬ್ಬ, ಹರಿದಿನಗಳಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬದ ಜತೆಗಿರದೇ ಸಮಾಜದ ಹಿತಕ್ಕಾಗಿ ಕೆಲಸ ಮಾಡುತ್ತಾರೆ. ನಿವೃತ್ತಿಯ ನಂತರ ಅವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗದೆ ನೋವು ಪಡುತ್ತಾರೆ. ನಿವೃತ್ತ ನೌಕರರಿಗೆ ಆರೋಗ್ಯ ಭದ್ರತೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಏ.2, 1965ರಿಂದ ಪ್ರತಿವರ್ಷ ಪೊಲೀಸ್ ಧ್ವಜ ದಿನ ಆಚರಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬದ ಕಡೆಗೆ ಗಮನ ಹರಿಸದೇ, ಹಗಲಿರುಳೂ ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ. ನಿವೃತ್ತಿಯ ಬಳಿಕ ಅವರನ್ನು ಸ್ಮರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಎಸ್ಪಿ ಕೆ.ಸಂತೋಷಬಾಬು ಹೇಳಿದರು.

‘ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಪೊಲೀಸ್ ಧ್ವಜ ಸ್ಟಿಕ್ಕರ್‌ಗಳ ಮಾರಾಟದಿಂದ ಸಂಗ್ರಹವಾಗುವ ನಿಧಿಯಲ್ಲಿ ಶೇ 25ರಷ್ಟು ಪೊಲೀಸ್ ಕಲ್ಯಾಣ ನಿಧಿ, ಶೇ 50ರಷ್ಟು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಹಾಗೂ ಶೇ 25ರಷ್ಟು ಹಣವನ್ನು ಕೇಂದ್ರ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ’ ಎಂದರು.‘ಸೇವೆಯಲ್ಲಿರುವ ಹಾಗೂ ನಿವೃತ್ತ ಸಿಬ್ಬಂದಿಯ ಆರೋಗ್ಯಕ್ಕೆ, ಮಕ್ಕಳ ಕಲ್ಯಾಣಕ್ಕೆ ಈ ನಿಧಿಯನ್ನು ವಿನಿಯೋಗಿಸಲಾಗುವುದು’ ಎಂದು ಸಂತೋಷಬಾಬು ತಿಳಿಸಿದರು.

ವಿವಿಧ ಪೊಲೀಸ್ ತುಕಡಿಗಳಿಂದ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು.ಡಿಸಿಆರ್‌ಬಿ ಡಿವೈಎಸ್ಪಿ ವೈ.ಎಸ್.ಏಗನಗೌಡ್ರ ಸ್ವಾಗತಿಸಿದರು. ಎಂ.ಟಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಡಿಎಆರ್ ಡಿವೈಎಸ್ಪಿ ವಿ.ವಿ.ನಾಯಕ್ ವಂದಿಸಿದರು.

**

ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮನಿಧಿ ಸಮಿತಿ ಸಭೆ ನಡೆಯಲಿದೆ. ಇಲ್ಲಿ ನಿವೃತ್ತ ಪೊಲೀಸರ ಕುಂದುಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ – ಕೆ. ಸಂತೋಷಬಾಬು,ಎಸ್‌ಪಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry