ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಆಡಳಿತ ದೇಶಕ್ಕೆ ಮಾದರಿ ಅಲ್ಲ

Last Updated 3 ಏಪ್ರಿಲ್ 2018, 20:03 IST
ಅಕ್ಷರ ಗಾತ್ರ

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ದೇಶಕ್ಕೆ ಮಾದರಿಯಲ್ಲ. ಇತರ ಯಾವುದೇ ರಾಜ್ಯಗಳೂ ಈ ಆಡಳಿತವನ್ನು ಮಾದರಿಯಾಗಿ ಅನುಸರಿಸಬೇಕಾಗಿಲ್ಲ. ಜನ ಒಂದು ತಲೆಯ ಹಾವು ಮತ್ತು ಇಮ್ಮಂಡೆ (ಎರಡು ತಲೆ) ಹಾವುಗಳ ಮಧ್ಯೆ ಸಿಕ್ಕಿ ಹಾಕಿ
ಕೊಂಡಿದ್ದಾರೆ. ರಾಜ್ಯ ಮತ್ತು ದೇಶಕ್ಕೆ ಸಿದ್ಧ ಮಾದರಿಯ ರಾಜಕಾರಣದಿಂದ ಹೊರತಾದ ಚೈತನ್ಯಶೀಲ ‘ಪರ್ಯಾಯ ರಾಜಕಾರಣ’ದ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಾರೆ ಸ್ವರಾಜ್‌ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್‌. ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಬೆಂಗಳೂರಿಗೆ
ಬಂದಿದ್ದ ಅವರು ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದರು.

l ಸ್ವರಾಜ್‌ ಇಂಡಿಯಾದ ಉದ್ದೇಶವೇನು? ರಾಜಕೀಯದಲ್ಲಿ ಅದು ಯಾವ ರೀತಿಯ ಬದಲಾವಣೆ ತರಬಲ್ಲದು?

ಸ್ವರಾಜ್‌ ಇಂಡಿಯಾ ಪರ್ಯಾಯ ರಾಜಕಾರಣಕ್ಕಾಗಿ (alternative politics) ಹುಟ್ಟಿಕೊಂಡಿರುವ ಪಕ್ಷ. ಪರ್ಯಾಯ ರಾಜಕಾರಣ ಎಂದರೆ, ಹತ್ತರ ಜೊತೆ ಹನ್ನೊಂದನೇ ಪಕ್ಷದ ಸೇರ್ಪಡೆಯಲ್ಲ. ಹೊಸ ದೃಷ್ಟಿಕೋನ, ತಾಜಾ ಶಕ್ತಿ ಮತ್ತು ಚೈತನ್ಯವನ್ನು ಒಳಗೊಂಡಿರುವ ಪಕ್ಷ. ಹೊಸ ನೀತಿ ಮತ್ತು ತತ್ವಗಳನ್ನು ಅಳವಡಿಸಿಕೊಂಡಿದೆ. ದೇಶದಲ್ಲಿ ಹೊಸ ಬಗೆಯ ಸ್ವರಾಜ್ಯವನ್ನು ಹುಟ್ಟು ಹಾಕಬಲ್ಲ ಮೂರು ಶಕ್ತಿಗಳ ಸಂಗಮವೇ ಸ್ವರಾಜ್‌ ಇಂಡಿಯಾದ ಬುನಾದಿ. ರೈತ ಚಳವಳಿ, ದಲಿತ ಚಳವಳಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಳ ಸಂಗಮದ ಮಹಾಮೈತ್ರಿಯನ್ನು ಇಲ್ಲಿ ಕಾಣಬಹುದು. ನಾವು ನಮ್ಮದೇ ಆದ ನೀತಿ ಸಂಹಿತೆಯನ್ನು ಹಾಕಿಕೊಂಡಿದ್ದೇವೆ. ರಾಜಕೀಯದಲ್ಲಿ ಸಹಜ ಎನಿಸಿರುವ ಹಣ ಮತ್ತು ತೋಳ್ಬಲದಿಂದ ನಾವು ದೂರ. ಸ್ವರಾಜ್‌ ಇಂಡಿಯಾವು ಜನಾಂದೋಲನದ ಅಭಿವ್ಯಕ್ತಿಯಾಗಿದೆ. ಇತರ ಎಲ್ಲ ಆಂದೋಲನಗಳು ನಮ್ಮ ಸ್ವಾಭಾವಿಕ ಮಿತ್ರರು. ಕರ್ನಾಟಕದಲ್ಲಿ ಇದನ್ನು ಮಹಾಮೈತ್ರಿ ಎಂದು ಕರೆಯಲಾಗುತ್ತಿದೆ. ಇದರಿಂದಾಗಿ ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣದ ಉದಯವನ್ನು ಕಾಣಬಹುದಾಗಿದೆ.

l ಸ್ವರಾಜ್‌ ಇಂಡಿಯಾದಿಂದ ಎಷ್ಟು ಜನ ಸ್ಪರ್ಧಿಸುತ್ತಾರೆ? ಅಭ್ಯರ್ಥಿಗಳ ಆಯ್ಕೆಗೆ ಮಾನದಂಡವೇನು?

ನಮ್ಮ ಪಕ್ಷದಿಂದ 6 ಜನ ಸ್ಪರ್ಧಿಸುತ್ತಾರೆ. ಒಂದಿಬ್ಬರು ಪಕ್ಷೇತರರಿಗೆ ಬೆಂಬಲ ನೀಡುತ್ತೇವೆ. ಚಪಲಕ್ಕಾಗಿ ನೂರಾರು ಟಿಕೆಟ್‌ಗಳನ್ನು ಹಂಚುವುದಕ್ಕೆ ಹೋಗುವುದಿಲ್ಲ. ಅದರಿಂದ ಪ್ರಯೋಜನವಿಲ್ಲ. ಅಭ್ಯರ್ಥಿಗಳನ್ನು ದೆಹಲಿಯಲ್ಲಿ ಕುಳಿತು ನಿರ್ಧರಿಸುವುದಿಲ್ಲ. ಸ್ಥಳೀಯ ಮಟ್ಟದಲ್ಲೇ ಆಯ್ಕೆ ಮಾಡಲಾಗುತ್ತದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ನಮ್ಮ ಸಿದ್ಧಾಂತದಲ್ಲಿ ನಂಬಿಕೆ ಹೊಂದಿರಬೇಕು. ರಾಜಕೀಯದಲ್ಲಿರಬೇಕು, ಸಾಮಾಜಿಕ ಸೇವೆಯಲ್ಲಿ ಅರ್ಥಪೂರ್ಣ ಕೆಲಸ ಮಾಡಿರಬೇಕು. ಸಾಂಪ್ರದಾಯಿಕ ಶೈಲಿಯಲ್ಲಿ ರಾಜಕಾರಣ ಮಾಡಿರುವ ಅನುಭವದ ಅಗತ್ಯವಿಲ್ಲ. ಚುನಾವಣೆಯೊಂದೇ ಸರ್ವಸ್ವ ಎಂಬ ಭಾವನೆ ಹೊಂದಿರಬೇಕಾಗಿಯೂ ಇಲ್ಲ. ಜಾತೀಯತೆ, ಕೋಮುವಾದ, ಭ್ರಷ್ಟಾಚಾರ, ಅಪರಾಧದ ಹಿನ್ನೆಲೆ ಇದ್ದವರಿಗೆ ಪ್ರವೇಶವೇ ಇಲ್ಲ. ಇವಿಷ್ಟೇ ನಮ್ಮ ಮಾನದಂಡ.

l ಬಿಜೆಪಿಯನ್ನು ಬಲವಾಗಿ ವಿರೋಧಿಸುತ್ತಿರುವ ಕಾಂಗ್ರೆಸ್‌ ಅನ್ನು ಬೆಂಬಲಿಸುವಿರಾ?

ಮೊದಲೇ ಹೇಳಿದಂತೆ, ಪರ್ಯಾಯ ರಾಜಕಾರಣ ಎಂದರೆ ಇನ್ನೊಂದು ಪಕ್ಷವನ್ನು ಬೆಂಬಲಿಸುವುದಕ್ಕೆ ಇರುವುದಲ್ಲ. ನಮ್ಮ ರಾಜಕೀಯ ಆ ರೀತಿಯದ್ದಲ್ಲ. ದೇಶದ ಸಮಸ್ಯೆ ಬಗ್ಗೆ ದೇವನೂರ ಮಹಾದೇವ ಅವರು ಚೆನ್ನಾಗಿ ಹೇಳುತ್ತಾರೆ; ಜನ ಒಂದು ತಲೆಯ ಹಾವು ಮತ್ತು ಇಮ್ಮಂಡೆ (ಎರಡು ತಲೆ) ಹಾವುಗಳ ಮಧ್ಯೆ ಸಿಲುಕಿದ್ದಾರೆ. ಇವುಗಳ ಮಧ್ಯೆ ಜನರಿಗೆ ಆಯ್ಕೆಯೇ ಇಲ್ಲವಾಗಿದೆ. ಸ್ವರಾಜ್‌ ಪಕ್ಷ ಯಾರನ್ನೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ದೇಶದ ಇಂದಿನ ದುರಂತ ಎಂದರೆ, ಒಂದು ಕಡೆ ಮೋದಿ ಇನ್ನೊಂದು ಕಡೆ ರಾಹುಲ್‌ ಇದ್ದಾರೆ. ಈ ಹುಸಿ ಆಯ್ಕೆಗಳನ್ನು  ತಿರಸ್ಕರಿಸಬೇಕು. ಪರ್ಯಾಯ ರಾಜಕಾರಣದ ಬಗ್ಗೆ ಚಿಂತಿಸುವವರ ಗುಂಪು ಚಿಕ್ಕದು. ನಮ್ಮ ಮಿತಿ ಗೊತ್ತಿದೆ. ಹಾಗೆಂದು ಯಾವುದೇ ಒಂದು ಪಕ್ಷದ ಪರ ಅಥವಾ ವಿರುದ್ಧ ಇದ್ದೇವೆ ಎಂದು ಹೇಳುವುದಿಲ್ಲ. ಬಿಜೆಪಿ ದೇಶದ ಮೂಲಭೂತ ನೆಲೆಗಟ್ಟಿಗೆ ಬೆದರಿಕೆ ಒಡ್ಡಿದೆ. ಯಾವುದೇ ಸೂಕ್ತ ಪರ್ಯಾಯ ಇಲ್ಲದಿರುವುದರಿಂದ ಇಂತಹ ಸ್ಥಿತಿ ಉದ್ಭವಿಸಿದೆ. ಮೋದಿ ಇಂದು ಅಧಿಕಾರಕ್ಕೆ ಬಂದು ಕೂರಲು ಕಾಂಗ್ರೆಸ್‌ ಪಕ್ಷವೇ ಕಾರಣ ಮತ್ತು ಅದರ ಕಾಣಿಕೆಯೇ ದೊಡ್ಡದು.

l ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ?

ಸಿದ್ದರಾಮಯ್ಯ ಹೇಗೆ, ಅವರ ಆಡಳಿತ ಹೇಗಿತ್ತು ಎಂಬುದನ್ನು ಅಳೆದು ತೂಗಲು ನಾನು ಸರಿಯಾದ ವ್ಯಕ್ತಿ ಅಲ್ಲ. ನಾನು ಹೊರಗಿನವನು. ಬಹಳಷ್ಟು ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ನಾನು ಯಾವುದೇ ತೀರ್ಪು ಕೊಡಲು ಆಗುವುದಿಲ್ಲ. ಇವರು ಬಿಜೆಪಿಯ ಹಿಂದಿನ ಮುಖ್ಯಮಂತ್ರಿಗಳಿಗಿಂತ ಉತ್ತಮರೇ ಅಥವಾ ಹಿಂದಿನ ಕಾಂಗ್ರೆಸ್‌ ಸರ್ಕಾರಗಳಲ್ಲಿದ್ದ ಮುಖ್ಯಮಂತ್ರಿಗಳಿಗಿಂತ ಉತ್ತಮರಿದ್ದರೇ ಎಂಬುದೂ ಗೊತ್ತಿಲ್ಲ.

ಆದರೆ, ಕರ್ನಾಟಕದ ಆಡಳಿತ ದೇಶಕ್ಕೆ ಒಂದು ಮಾದರಿ, ಅದು ಎಲ್ಲ ರಾಜ್ಯಗಳಲ್ಲಿಯೂ ಪ್ರತಿಬಿಂಬಿತವಾಗಬೇಕು ಎಂದು ಖಂಡಿತಾ ಹೇಳಲು ಸಾಧ್ಯವಿಲ್ಲ. ಏಕೆಂದರೆ ರೈತರ ಆತ್ಮಹತ್ಯೆ ಪ್ರಕರಣಗಳು ಕರ್ನಾಟಕದಲ್ಲಿಯೇ ಅತಿ ಹೆಚ್ಚು. ಇಲ್ಲಿ ಎಲ್ಲವೂ ಸರಿಯಾಗಿದ್ದರೆ, ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ರಾಜ್ಯದಲ್ಲಿ ನಿರುದ್ಯೋಗ ಸ್ಥಿತಿ ನಾಟಕೀಯವಾಗಿ ಬದಲಾಗಿಲ್ಲ. ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿಯೂ ಉತ್ತಮವಾಗಿಲ್ಲ. ಬೇಸರದಿಂದಲೇ ಹೇಳಬೇಕಾದ ಸಂಗತಿ ಎಂದರೆ, ಮಾದರಿ ಆಡಳಿತ ಎಂದು ಹೇಳುವ ಸ್ಥಿತಿಯಲ್ಲಿ ಇಲ್ಲ.

l ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಪರ್ಯಾಯವಾಗಲು ಕಾಂಗ್ರೆಸ್‌ ಅಥವಾ ಇತರ ಪಕ್ಷಗಳ ಜೊತೆ ಕೈಜೋಡಿಸುವ ಉದ್ದೇಶವಿದೆಯೇ?

ದೇಶದ ಸ್ಥಿತಿ ಕರ್ನಾಟಕಕ್ಕಿಂತ ಭಿನ್ನವಾಗಿ ಇಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಜನರ ಸಮಸ್ಯೆಗಳ ಬಗ್ಗೆ ಸೂಕ್ಷ್ಮ ಜ್ಞಾನ ಇಲ್ಲ. ಅವುಗಳಿಗೆ ಅರ್ಥಪೂರ್ಣವಾಗಿ ಸ್ಪಂದಿಸುವ ಮಾತು ಹಾಗಿರಲಿ, ಅವುಗಳನ್ನು ಅರ್ಥೈಸುವ ಆಳ
ವಾದ ಪ್ರಜ್ಞೆಯೇ ಇಲ್ಲ. ದೇಶದ ರಾಜಕಾರಣದಲ್ಲಿ ವಿವಿಧ ಬಗೆಯ ಆಟಗಳನ್ನು ಕಾಣಬಹುದು. ಅಸಹಾಯಕತೆ, ಬೇರೆ ಆಯ್ಕೆಯೇ ಇಲ್ಲ ಎಂಬ ವಾದ ಅಂತಹ ಒಂದು ಆಟ. ಮೋದಿ ಎದುರಿಸಲು ಅದೇ ಮಮತಾ, ಲಾಲೂ ಮುಂತಾದವರ ಬೆನ್ನು ಹಿಡಿಯಬೇಕು. ದೇಶಕ್ಕೆ ಬದಲಿ ನಾಯಕತ್ವ ಎಂದರೆ ರಾಹುಲ್‌ ಅಲ್ಲ. ಜನ ಈಗಲ್ಲದಿದ್ದರೂ ಮುಂದೆ ‘ಪರ್ಯಾಯ’ದ ಬಗ್ಗೆ ಯೋಚಿಸುತ್ತಾರೆ. ಕೇವಲ ಮೋದಿ– ರಾಹುಲ್‌ ಮಧ್ಯೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದೇ ಒಂದು ದೊಡ್ಡ ಜೋಕ್‌. ಒಂದು ಕಾಲದಲ್ಲಿ ಮಹಾತ್ಮ ಗಾಂಧಿ, ನೆಹರೂ, ಪಟೇಲ್‌ ಅವರಂತಹ ನಾಯಕರು ಇದ್ದ ದೇಶವಾಗಿತ್ತು ಇದು. ದೇಶದಲ್ಲಿ ನೈಜ ವಿರೋಧ ಪಕ್ಷ ಉದಯವಾಗಬೇಕು. ಈಗ ನಿಜವಾದ ವಿರೋಧ ಪಕ್ಷ ಸಂಸತ್ತಿನಲ್ಲಿ ಇಲ್ಲ. ಬೀದಿಯಲ್ಲಿ ಇದೆ.

l ರಾಜ್ಯದಲ್ಲಿ ಸ್ವರಾಜ್‌ ಇಂಡಿಯಾ ನಂಟು ಯಾರ ಜೊತೆಗಿದೆ?

ಮುಖ್ಯವಾಗಿ ರೈತ ಸಂಘ ಮತ್ತು ದಲಿತ ಸಂಘಟನೆಗಳ ಜೊತೆಗೆ. ರಾಜ್ಯದಲ್ಲಿ ರೈತ ಸಂಘದಲ್ಲಿ ಬಣಗಳಿವೆ ನಿಜ, ರೈತರ ಹೋರಾಟದಲ್ಲಿ ಒಂದಕ್ಕಿಂತ ಹೆಚ್ಚು ಗುಂಪುಗಳ ಜತೆ ಕಾರ್ಯ ನಿರ್ವಹಿಸಿದ್ದೇವೆ. ಪುಟ್ಟಣ್ಣಯ್ಯ ಅವರು ಮುನ್ನಡೆಸಿಕೊಂಡು ಬಂದಿದ್ದ ರೈತ ಸಂಘವೇ ಮೂಲ ರೈತ ಸಂಘ. ರೈತ ಸಂಘ ಹುಟ್ಟುಹಾಕಿದ ಸ್ಥಾಪಕರು ಇದೇ ಬಣದೊಂದಿಗೆ ನಂಟು ಹೊಂದಿದ್ದಾರೆ. ರೈತ ಹೋರಾಟವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ. ನೈತಿಕತೆ ಮತ್ತು ಮೌಲ್ಯಗಳು ಮುಖ್ಯವಾಗುತ್ತವೆ. ರೈತ ಹೋರಾಟದ ಸ್ವರೂಪವೇ ಅಂಥದ್ದು. ದೇಶದೆಲ್ಲೆಡೆ ಇದನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT