ಸೋಮವಾರ, ಡಿಸೆಂಬರ್ 9, 2019
22 °C
ಐ ಡ್ರೀಮ್‌ ಇನ್‌ ಅನದರ್ ಲ್ಯಾಂಗ್ವೇಜ್‌

ಐ ಡ್ರೀಮ್‌ ಇನ್‌ ಅನದರ್ ಲ್ಯಾಂಗ್ವೇಜ್‌

Published:
Updated:
ಐ ಡ್ರೀಮ್‌ ಇನ್‌ ಅನದರ್ ಲ್ಯಾಂಗ್ವೇಜ್‌

ಜೆಕ್ರಿಲ್‌. ಇದೊಂದು ಭಾಷೆ. ಅದು ಮನುಷ್ಯರ ಭಾಷೆ ಯಷ್ಟೇ ಅಲ್ಲ. ಆ ಹಳ್ಳಿಯ ಪರಿಸರದ ಭಾಷೆಯೂ ಹೌದು. ಅಲ್ಲಿನ ಪ್ರಾಣಿ ಪಕ್ಷಿಗಳಿಗೂ ಆ ಭಾಷೆ ಅರ್ಥವಾಗುತ್ತದೆ. ಅಂಥ ಅನನ್ಯ ಭಾಷೆಯನ್ನು ಮಾತಾಡುವ ಇಬ್ಬರೇ ಇಬ್ಬರು ವ್ಯಕ್ತಿಗಳು ಜಗತ್ತಿನಲ್ಲಿದ್ದಾರೆ. ಅಂದರೆ ಆ ಇಬ್ಬರು ತೀರಿಕೊಂಡರೆ ಜೆಕ್ರಿಲ್‌ ಸತ್ತ ಹಾಗೆಯೇ. ಅಂಥದ್ದೊಂದು ಭಾಷೆಯನ್ನು ಕಲಿತುಕೊಳ್ಳಬೇಕು– ಅದರ ಧ್ವನಿವಿನ್ಯಾಸ ಗಳನ್ನು, ಅದರಲ್ಲಿನ ಸ್ಮೃತಿಕೋಶವನ್ನು ದಾಖಲಿಸಬೇಕು ಎಂಬ ಉದ್ದೇಶದಿಂದ ಅಮೆರಿಕದ ತರುಣ ಭಾಷಾ ಶಾಸ್ತ್ರಜ್ಞ ಮಾರ್ಟಿನ್‌ ಆ ಹಳ್ಳಿಗೆ ಬಂದಿದ್ದಾನೆ.

ಇಲ್ಲೊಂದು ಸಮಸ್ಯೆಯಿದೆ. ಜೆಕ್ರಿಲ್ ಭಾಷೆ ಬಲ್ಲ ಇಬ್ಬರು ವ್ಯಕ್ತಿಗಳು ಮೊದಲು ಪ್ರಾಣಸ್ನೇಹಿತರಾಗಿದ್ದವರು. ಆದರೆ ಯಾವುದೋ ಕಾರಣಕ್ಕೆ ಈಗ ಪರಮ ಶತ್ರುಗಳಾಗಿದ್ದಾರೆ. ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳದಷ್ಟು ದ್ವೇಷಿಸುತ್ತಾರೆ. ಇದೇ ಕಾರಣದಿಂದ ಕಳೆದ ಐವತ್ತು ವರ್ಷಗಳಿಂದ ಅವರು ಮಾತಾಡಿಕೊಂಡಿಲ್ಲ. ಅಂದರೆ ಕಳೆದ ಐವತ್ತು ವರ್ಷಗಳಿಂದ ಆ ಭಾಷೆ ಬಳಕೆಯಾಗಿಲ್ಲ!

ವೃದ್ಧಾಪ್ಯದ ದಿನಗಳಲ್ಲಿಯೂ ಮನಸಲ್ಲಿನ ದ್ವೇಷದ ಕಿಚ್ಚನ್ನು ಉಳಿಸಿಕೊಂಡಿರುವ ಆ ಒಬ್ಬರನ್ನು ಮಾರ್ಟಿನ್‌ ಒಂದುಮಾಡಲು, ಅವರಿಬ್ಬರೂ ಆ ಭಾಷೆಯನ್ನು ಮಾತಾಡಿಕೊಳ್ಳಲು ಹರಸಾಹಸ ಪಡುವುದು ‘ಐ ಡ್ರೀಮ್‌ ಇನ್‌ ಅನದರ್‌ ಲ್ಯಾಂಗ್ವೇಜ್‌’ ಸಿನಿಮಾದ ವಸ್ತು. ಎರ್ನೆಸ್ಟೋ ಕಾಂಟ್ರೆರಸ್‌ ನಿರ್ದೇಶನದ ಈ ಸಿನಿಮಾ ಸ್ಪಾನಿಷ್‌ ಭಾಷೆಯದು. ಮೆಕ್ಸಿಕೊ ದೇಶದ ಒಂದು ಭಾಷೆಯ ಅಳಿವಿನ ಕಥೆಯನ್ನು ಗಾಢವಾಗಿ ಕಟ್ಟಿಕೊಡುವ  ಈ ಸಿನಿಮಾ ವಸ್ತು ವಿಭಿನ್ನತೆಯಿಂದಷ್ಟೇ ಅಲ್ಲ, ಇಡೀ ಸಿನಿಮಾವೇ ಶಕ್ತಿಶಾಲಿ ರೂಪಕ ಆಗುವ ರೀತಿಯಲ್ಲಿ ಕಟ್ಟಿದ ರೀತಿಯಿಂದಲೂ ಬೆರಗು ಹುಟ್ಟಿಸುತ್ತದೆ.

ಭಾಷೆ ಎನ್ನುವುದು ತನ್ನಷ್ಟಕ್ಕೆ ತಾನೇ ಸ್ವತಂತ್ರ ಅರ್ಥ– ಅಸ್ತಿತ್ವ ಹೊಂದಿರುವುದಿಲ್ಲ. ಸುತ್ತಲಿನ ಪರಿಸರ, ಜನರ ಜೀವನ, ಅದರೊಂದಿಗೆ ಪ್ರಕೃತಿ ಹೆಣೆದುಕೊಂಡಿರುವ ಸಂಬಂಧ, ಹಲವು ತಲೆಮಾರುಗಳ ಸ್ಮೃತಿಯ ಕೋಶ ಈ ಎಲ್ಲದರಿಂದ ರೂಪುಗೊಂಡಿರುತ್ತದೆ. ಒಂದು ಭಾಷೆಯ ಸಾವೂ ಈ ಮೇಲಿನ ಎಲ್ಲದರ ಸಾವೂ ಆಗಿರುತ್ತದೆ. ಅದೊಂದು ಸಮುದಾಯದ ಸಾಂಸ್ಕೃತಿಕ ವಿನಾಶ.

ಈ ಚಿತ್ರದ ಸತ್ವ ಇರುವುದೂ ಅಲ್ಲಿಯೇ. ನಿರ್ದೇಶಕರು ಒಂದು ಭಾಷೆಯನ್ನು ಬರೀ ಭಾಷೆಯಾಗಿ ನೋಡದೇ ಸಮುದಾಯವಾಗಿ, ಅದರಲ್ಲಿನ ನಂಬಿಕೆ, ಸಂಪ್ರದಾಯ, ಭಾವನೆಗಳ ಅಭಿವ್ಯಕ್ತಿಯ ದಾರಿಯಾಗಿ ನೋಡಿದ್ದಾರೆ. ಹಾಗಾಗಿಯೇ ಜೆಕ್ರಿಲ್‌ ಕಥೆ ಹೇಳುತ್ತಿರುವಾಗಲೇ ಆ ಹಳ್ಳಿಯ ಬದುಕು, ಕಾಡು, ಸಮುದ್ರ, ಗುಡಿಸಲು, ಹಾದಿ, ಮಳೆ, ಮನುಷ್ಯ ಸಂಬಂಧಗಳಲ್ಲಿನ ವಿಷಮತೆ ಅವರನ್ನೇ ಸುಡುವ ಬಗೆ, ಸಣ್ಣತನ, ಸ್ವಾರ್ಥ ಎಲ್ಲವನ್ನೂ ಅಷ್ಟೇ ಸೂಕ್ಷ್ಮವಾಗಿ ಹೇಳುವುದು ಮುಖ್ಯವಾಗಿದೆ.

ಸ್ಪಾನಿಷ್‌ ಭಾಷೆಯಲ್ಲಿಯೇ ಸಂಭಾಷಣೆಗಳಿರುವ ಈ ಚಿತ್ರದಲ್ಲಿ ಜೆಕ್ರಿಲ್‌ ಭಾಷೆ ಬಂದಾಗೆಲ್ಲ ಇಂಗ್ಲಿಷ್‌ ಸಬ್‌ ಟೈಟಲ್‌ ಇಟ್ಟಿಲ್ಲ. ಅಂದರೆ ಆ ಭಾಷೆಯ ಅರ್ಥ ಜಗತ್ತಿಗೇ ಗೊತ್ತಿಲ್ಲ. ನಿರ್ದೇಶಕರಿಗೂ ಗೊತ್ತಿಲ್ಲ. ಅದರ ಸಾಧ್ಯತೆ, ಸತ್ವಗಳ ಕುರಿತು ನೋಡುಗರಲ್ಲಿಯೂ ಕುತೂಹಲ ಉಳಿಸಲಿಕ್ಕೇ ಹಾಗೆ ಮಾಡಿರಬಹುದೇ?

ಜೆಕ್ರಿಲ್‌ ಮಾತಾಡುವ ವೃದ್ಧನ ಮೊಮ್ಮಗಳು, ಸ್ಥಳೀಯ ರೆಡಿಯೊದಲ್ಲಿ ಇಂಗ್ಲಿಷ್‌ ಪಾಠ ಮಾಡುತ್ತಾಳೆ. ಅವಳಿಗೆ ಅರ್ಧ ಜಗತ್ತೇ ಮಾತಾಡುವ ಇಂಗ್ಲಿಷ್‌ನಲ್ಲಿ ಪರಿಣತೆ ಆಗಬೇಕು, ಅಮೆರಿಕಕ್ಕೆ ಹೋಗಬೇಕು ಎಂಬ ಕನಸು. ಅದು ಜಗತ್ತಿನ ಹಲವು ಪ್ರಾದೇಶಿಕ ಭಾಷೆಗಳನ್ನು ಮಾತಾಡುವ ಅಸಂಖ್ಯಾತರ ಕನಸೂ ಹೌದು. ಈ ಮೂಲಕ ನಿರ್ದೇಶಕರು ನಾವೆಲ್ಲ ಇಂದು ಮಾತಾಡುತ್ತಿರುವ ಭಾಷೆಯನ್ನು ಇಂಗ್ಲಿಷ್‌ ಮುಂದೊಂದು ದಿನ ಹೇಗೆ ನುಂಗಿಹಾಕಬಹುದು? ಅದರಿಂದ ನಾವು ಕಳೆದುಕೊಳ್ಳುವುದು ಏನು ಎಂಬುದನ್ನು ಹೇಳುತ್ತಿದ್ದಾರೆ ಎಂದೂ ಅನಿಸುತ್ತದೆ. ಇದೇ ಕಾರಣಕ್ಕೆ ಈ ಚಿತ್ರ ಮನಸಲ್ಲಿ ಕೂತು ನಮ್ಮನ್ನು ಕಾಡುತ್ತದೆ. goo.gl/9qBFrZ ಕೊಂಡಿ ಬಳಸಿ ಈ ಚಿತ್ರ ವೀಕ್ಷಿಸಬಹುದು.

ಪ್ರತಿಕ್ರಿಯಿಸಿ (+)