ಮಂಗಳವಾರ, ಡಿಸೆಂಬರ್ 10, 2019
26 °C
ಅಥಣಿಯಲ್ಲಿ ಮುರುಘೇಂದ್ರ ಶಿವಯೋಗಿಗಳ 97ನೇ ಜಾತ್ರೆ ಅಂಗವಾಗಿ ಆಯೋಜನೆ

ಈ ಹೋರಿಗಳು ₹ 2.70 ಲಕ್ಷಕ್ಕೆ ಬಿಕರಿ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಈ ಹೋರಿಗಳು ₹ 2.70 ಲಕ್ಷಕ್ಕೆ ಬಿಕರಿ!

ಅಥಣಿ:‌ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ ಹಾಗೂ ಸುತ್ತಮುತ್ತಲಿನ 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ತಾಲ್ಲೂಕು, ಬೆಳಗಾವಿ ಜಿಲ್ಲೆಯ ವಿವಿಧೆಡೆಯಿಂದ ಮಾತ್ರವಲ್ಲದೇ ವಿಜಯಪುರ ಮತ್ತು ಮಹಾರಾಷ್ಟ್ರದಿಂದಲೂ ರೈತರು ತಮ್ಮ ರಾಸುಗಳೊಂದಿಗೆ ಬಂದಿದ್ದಾರೆ.ಮುರುಘೇಂದ್ರ ಶಿವಯೋಗಿಗಳ 97ನೇ ಜಾತ್ರಾ ಮಹೋತ್ಸವ ಅಂಗವಾಗಿ ದನಗಳ ಜಾತ್ರೆ ಆಯೋಜಿಸಲಾಗಿದೆ. ಈ ಭಾಗದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಇದು ದನ–ಕರುಗಳ ವ್ಯಾಪಾರಕ್ಕೆ ಹೆಸರುವಾಸಿ. ವಿವಿಧೆಡೆಯಿಂದ ರೈತರು ಎತ್ತುಗಳನ್ನು ಮಾರಲು, ಖರೀದಿಸಲು ಹಾಗೂ ವೀಕ್ಷಿಸಲು ಬರುತ್ತಿದ್ದಾರೆ. ಜಾತ್ರಾ ಮಹೋತ್ಸವ ಸಮಿತಿಯಿಂದ ಅಲ್ಲಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ನೂರಾರು ಮಂದಿ ತಮ್ಮ ಎತ್ತುಗಳೊಂದಿಗೆ ಬಂದಿದ್ದಾರೆ.  ಮಾರ್ಚ್‌ 31ರಿಂದ ಆರಂಭಗೊಂಡಿರುವ ದನಗಳ ಪರಿಷೆಗೆ ಏ. 4ರಂದು ತೆರೆ ಬೀಳಲಿದೆ. ಬಹಳಷ್ಟು ರೈತರು ಎತ್ತು, ಹೋರಿಗಳನ್ನು ಮಾರಿದ್ದೂ ಆಗಿದೆ. ಖರೀದಿಸಿದ್ದೂ ನಡೆದಿದೆ.

ವರಮಾನ ತಂದುಕೊಟ್ಟಿವೆ: ರಾಯಬಾಗ ತಾಲ್ಲೂಕು ಹಾರೊಗೇರಿಯ ಭೀಮಪ್ಪ ಮಲ್ಲಪ್ಪ ಹಳ್ಳೂರ ಅವರು ತಂದಿದ್ದ ಕಿಲಾರಿ ಹೋರಿ ಜೋಡಿ ₹ 2.70 ಲಕ್ಷಕ್ಕೆ ಮಾರಾಟವಾಗಿ ದಾಖಲೆ ಬರೆದವು. ಎರಡು ವರ್ಷ ವಯಸ್ಸಿನ ಈ ಜೋಡಿಯನ್ನು ನಂದೇಶ್ವರದ ಮಹಾದೇವ ಎನ್ನುವವರು ಖರೀದಿಸಿದ್ದಾರೆ. ‘ಒಂದೊಂದನ್ನೂ ಒಂದೊಂದು ಕಡೆಯಿಂದ ತಂದು ಸಾಕಿದ್ದೆ. ಹಲವೆಡೆ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಈ ಜೋಡಿಗಳು ಬಹುಮಾನವನ್ನೂ ತಂದುಕೊಟ್ಟಿದ್ದವು. ಈಗ, ಒಳ್ಳೆಯ ವರಮಾನವನ್ನೂ ತಂದುಕೊಟ್ಟಿವೆ’ ಎಂದು ಭೀಮಪ್ಪ ತಿಳಿಸಿದರು.

‘ಈ ಭಾಗದಲ್ಲಿ ಬಹಳಷ್ಟು ಮಂದಿ ಕರುಗಳನ್ನು ತಂದು ಚೆನ್ನಾಗಿ ಸಾಕಿ, ಇಂತಹ ಜಾತ್ರೆಗಳಿಗೆ ತಂದು ಪ್ರದರ್ಶಿಸುತ್ತಾರೆ. ಲಾಭದಾಯಕ ಎನಿಸುವ ಬೆಲೆ ಸಿಕ್ಕರಷ್ಟೇ ಮಾರುತ್ತಾರೆ. ಕರುಗಳಿಗೆ ಹಾಗೂ ದಷ್ಟಪುಷ್ಟವಾದ ಎತ್ತುಗಳಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಕೆಲವರು ಇವುಗಳನ್ನು ಕೃಷಿಯಲ್ಲಿ ಬಳಸುವುದಕ್ಕೆ ಖರೀದಿಸುತ್ತಾರೆ. ಕೆಲವರು, ಬೇರೆ ಕಡೆಗಳಿಗೆ ತೆಗೆದುಕೊಂಡು ಹೋಗಿ ಇನ್ನೂ ಹೆಚ್ಚಿನ ಬೆಲೆಗೆ ಮಾರುವುದಕ್ಕೂ ಖರೀದಿಸುವುದುಂಟು. ಈ ಬಾರಿ ಜಾತ್ರೆಯಲ್ಲಿ ಸಾವಿರ ಜೋಡಿಗೂ ಹೆಚ್ಚಿನ ಎತ್ತುಗಳು ಪಾಲ್ಗೊಂಡಿವೆ. ಲಕ್ಷಾಂತರ ರೂಪಾಯಿ ವಹಿವಾಟು ನಡೆದಿದೆ’ ಎಂದು ಕೋಳಿಗುಡ್ಡದ ರೈತ ಯಲ್ಲಪ್ಪ ನರಗಟ್ಟಿ ಮಾಹಿತಿ ನೀಡಿದರು.

ಸಾಕಲಾಗದೆಯೂ: ‘ಬೇಸಿಗೆ ಆರಂಭವಾಗುತ್ತಿರುವುದರಿಂದ ಕುಡಿಯುವ ನೀರು, ಮೇವಿಗೆ ತೊಂದರೆ ಇರುತ್ತದೆ. ಹೀಗಾಗಿ, ಸಾಕುವುದಕ್ಕೆ ಸಾಧ್ಯವಿಲ್ಲದವರೂ ತಮ್ಮ ರಾಸುಗಳನ್ನು ಮಾರಿಬಿಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು. ‘ಇಲ್ಲಿಗೆ ಬೆಳಗಾವಿ, ವಿಜಯಪುರ ಜಿಲ್ಲೆ ಮಾತ್ರವಲ್ಲದೇ ಮಹಾರಾಷ್ಟ್ರದಿಂದಲೂ ಬರುತ್ತಾರೆ. ಚೆನ್ನಾಗಿರುವ ಎತ್ತುಗಳ ಹೆಚ್ಚಿನ ‘ಮೌಲ್ಯ’ ಸಿಗುತ್ತದೆ. ಎತ್ತುಗಳು ಎಷ್ಟು ಹಲ್ಲುಗಳನ್ನು ಹೊಂದಿವೆ ಎನ್ನುವುದರ ಮೇಲೆ ಬೆಲೆ ನಿರ್ಧರಿಸಲಾಗುತ್ತದೆ’ ಎಂದವರು ಅಥಣಿ ತಾಲ್ಲೂಕು ರಡ್ಡೇರಹಟ್ಟಿಯ ಶಂಕರ ಶಿವಪ್ಪ ಭೋಸಲೆ.

‘ನಾಲ್ಕು ವರ್ಷದಿಂದ ಇವುಗಳನ್ನು ಸಾಕಿದ್ದೆವು. ನಿತ್ಯ 2 ಕೆ.ಜಿ.ಯಷ್ಟು ಹಿಂಡಿಯಲ್ಲೇ ಹುಲ್ಲು, ಮುಸರಿ ಹಾಕುತ್ತಿದ್ದೆವು. ಬೆಳಿಗ್ಗೆ ನೇಗಿಲು ಕಟ್ಟಿದರೆ, ಮಧ್ಯಾಹ್ನದವರೆಗೆ ಎರಡು ಎಕರೆಯಷ್ಟು ಉಳುಮೆ ಮಾಡುವ ಸಾಮರ್ಥ್ಯವನ್ನು ಈ ಎತ್ತುಗಳು ಹೊಂದಿವೆ. ಲಾಭ ಬಂತೆಂದು ಮಾರಿದೆ. ಮತ್ತೆ ಕರುಗಳನ್ನು ತಂದು ಸಾಕುತ್ತೇವೆ’ ಎಂದರು.

ಕೋಳಿಗುಡ್ಡದ ಸಿದ್ದಪ್ಪ ನಾಗಪ್ಪ ಕುಳಲಿ ತಮ್ಮ 9 ತಿಂಗಳು ವಯಸ್ಸಿನ ಕರುವನ್ನು₹ 1.50 ಲಕ್ಷಕ್ಕೆ ಕೇಳಿದರೂ ನೀಡಿಲ್ಲ! ‘ಹಲ್ಲು ಬರಲು ಇನ್ನೂ ಎರಡು ವರ್ಷ ಬೇಕು. ಖರೀದಿಸಿದವರಿಗೆ ಇದರಿಂದ ಹೆಚ್ಚಿನ ಲಾಭವಿದೆ. ₹ 2.50 ಲಕ್ಷ ಸಿಕ್ಕರಷ್ಟೇ ಮಾರುತ್ತೇನೆ. ಇಲ್ಲವೇ ನಾನೇ ಇಟ್ಟುಕೊಳ್ಳುತ್ತೇನೆ’ ಎಂದವರು ಕೋಳಿಗುಡ್ಡದ ಸಿದ್ದಪ್ಪ ನಾಗಪ್ಪ ಕುಳಲಿ.

ಎತ್ತುಗಳಿಗೆ ಕನಿಷ್ಠ ₹ 50ಸಾವಿರದಿಂದ ₹ 2.50 ಲಕ್ಷದವರೆಗೆ ಬೆಲೆ ಹೇಳಲಾಗುತ್ತಿದೆ. ರೈತರು, ಹಲ್ಲುಗಳೆಷ್ಟಿವೆ, ವಯಸ್ಸೆಷ್ಟು ಎನ್ನುವುದನ್ನು ಪರಿಶೀಲಿಸಿ ಖರೀದಿಸುತ್ತಾರೆ.‌‌

ಗುಲಾಲು, ಪಟಾಕಿ!

ನೂರಾರು ದನಗಳು ಭಾಗವಹಿಸುವ ಜಾತ್ರೆಯಲ್ಲಿ ಯಾವುದಾದರೂ ಎತ್ತುಗಳಿಗೆ ಗುಲಾಲು ಹಚ್ಚಲಾಗಿದೆ ಎಂದರೆ ಅವು ಮಾರಾಟವಾಗಿವೆ ಎಂದರ್ಥ! ಮಾರಿದವರು ಖುಷಿಯಿಂದ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.ಈ ರೀತಿಯ ಪರಿಷೆಗೆ ಬರುವವರು ಹುಲ್ಲನ್ನೂ ತಂದಿರುತ್ತಾರೆ. ಜಾತ್ರೆ ಆಯೋಜಿಸುವವರು ನೀರಿನ ವ್ಯವಸ್ಥೆ  ಮಾಡುತ್ತಾರೆ. ಕೆಲ ರೈತರೊಂದಿಗೆ ಮಕ್ಕಳೂ ಬಂದಿರುತ್ತಾರೆ. ಒಳ್ಳೆಯ ವರಮಾನ ಬಂದರೆ ಖುಷಿಯಿಂದ ಮನೆ ಕಡೆ ಹೆಜ್ಜೆ ಹಾಕುತ್ತಾರೆ; ಬರದಿದ್ದರೂ ಸಂಭ್ರಮದಿಂದಲೇ ಹೋಗುತ್ತಾರೆ!

ಪ್ರತಿಕ್ರಿಯಿಸಿ (+)