ಜೆಡಿಎಸ್‌ಗೆ ಕಿಂಗ್ ಮೇಕರ್ ಆಗುವ ಭ್ರಮೆ

7
ಹೊಳಲ್ಕೆರೆ: ಜನಾಶೀರ್ವಾದ ಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ

ಜೆಡಿಎಸ್‌ಗೆ ಕಿಂಗ್ ಮೇಕರ್ ಆಗುವ ಭ್ರಮೆ

Published:
Updated:

 

ಹೊಳಲ್ಕೆರೆ: ಜೆಡಿಎಸ್ ಅವಕಾಶವಾದಿ ಪಕ್ಷವಾಗಿದ್ದು, ಕಿಂಗ್ ಮೇಕರ್ ಆಗುವ ಭ್ರಮೆಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.ಪಟ್ಟಣದ ಕೊಟ್ರೆನಂಜಪ್ಪ ಪಿಯು ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೆಡಿಎಸ್ ಪಕ್ಷ ಕೇವಲ ಐದಾರು ಜಿಲ್ಲೆಗಳಿಗೆ ಮೀಸಲಾದ ಪಕ್ಷ. ಅವರು ಈ ಬಾರಿ 25 ಸೀಟು ಗೆದ್ದರೆ ಹೆಚ್ಚಾಯ್ತು. ಮುಂದೆ ಎಂದೂ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗೆ ಹೇಳಿದರೆ ಕುಮಾರ ಸ್ವಾಮಿ ಮತ್ತು ದೇವೇಗೌಡರಿಗೆ ಸಿಟ್ಟು ಬರುತ್ತದೆ. ಆದರೆ ವಾಸ್ತವಾಂಶವನ್ನು ಹೇಳಲೇ ಬೇಕು. ಬಿಜೆಪಿಯವರು ಕೋಮುವಾದ, ಹಿಂದುತ್ವವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಕುಮಾರ ಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರೂ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ತಿಪ್ಪರಲಾಗ ಹಾಕಿದರೂ ಅವರಿಬ್ಬರೂ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.

ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಮುಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಹಕಾರಿಯಾಗಲಿದೆ. ಇಲ್ಲಿನ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಹೊಸ ತಿರುವು ನೀಡಲಿದೆ. ಕರ್ನಾಟಕದ ಜನ ನಮಗೆ ಮತ್ತೊಮ್ಮೆ ಆಶೀರ್ವಾದ ಮಾಡುವ ವಿಶ್ವಾಸ ಇದೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರ ಮೇಲೆ ಉತ್ತಮ ಪರಿಣಾಮ ಬೀರಿದ್ದು, ಮತ್ತೊಮ್ಮೆ ನಮ್ಮನ್ನೇ ಹರಸಲಿದ್ದಾರೆ. ನಾಡಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು. ಬಿಜೆಪಿಗೆ ಜನಪರ ಕಾಳಜಿ ಇಲ್ಲ. ಅವರು ಕಳಂಕಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಮಿಷನ್-150 ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಪರವಾಗಿದೆ. ರಾಜ್ಯದ 6.5 ಕೋಟಿ ಜನರಿಗೂ ನಮ್ಮ ಸೌಲಭ್ಯಗಳು ತಲುಪಿವೆ ಎಂದು ಹೇಳಿದರು.

‘ನಾವು ಚುನಾವಣೆಗೂ ಮೊದಲು ಕೊಟ್ಟಿದ್ದ 165 ಭರವಸೆಗಳಲ್ಲಿ 160 ಭರವಸೆಗಳನ್ನು ಈಡೇರಿಸಿದ್ದೇವೆ. ಯಡಿಯೂರಪ್ಪ ಬಿಜೆಪಿ ಗೆದ್ದರೆ ನೀರಾವರಿಗೆ ₹ 1 ಲಕ್ಷ ಕೋಟಿ ಕೊಡುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ ನೀರಾವರಿಗೆ ಕೇವಲ ₹ 18 ಸಾವಿರ ಕೋಟಿ ಖರ್ಚು ಮಾಡಿದ್ದರು. ನಾವು ₹ 45 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ನಮ್ಮ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಚುರುಕುಗೊಂಡಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪಟ್ಟಣದ ಶಾದಿ ಮಹಲ್, ಕ್ರೀಡಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶ ಮುಗಿದ ನಂತರ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನ ಬಿಸಿಲನ್ನೂ ಲೆಕ್ಕಿಸದೆ ಸಮಾವೇಶದಲ್ಲಿ ಪಾಲ್ಗೊಂಡರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅತಿಥಿಗಳನ್ನು ಸ್ವಾಗತಿಸಿದರು. ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಉಸ್ತುವಾರಿ ವೇಣುಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ, ಕೆ.ಎಚ್.ಮುನಿಯಪ್ಪ, ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಸುಧಾಕರ್, ರಘುಮೂರ್ತಿ, ಎನ್.ವೈ.ಗೋಪಾಲ ಕೃಷ್ಣ, ಜಯಮ್ಮ ಬಾಲರಾಜ್, ರಘು ಆಚಾರ್, ಉಗ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಫಾತ್ಯರಾಜನ್ ಇದ್ದರು.

ಕೈಕೊಟ್ಟ ಮೈಕ್

ಕಾಂಗ್ರೆಸ್ ನಾಯಕರು ಭಾಷಣ ಮಾಡುವಾಗ ಮೈಕ್ ಕೈಕೊಡುತ್ತಿತ್ತು. ಸಚಿವ ಎಚ್.ಆಂಜನೇಯ ಸ್ವಾಗತ ಭಾಷಣ ಮಾಡುತ್ತಿರುವಾಗ ಮೈಕ್ ಕೈಕೊಟ್ಟಿತು. ಬಿ.ಕೆ.ಹರಿಪ್ರಸಾದ್ ರಾಹುಲ್ ಗಾಂಧಿ ಭಾಷಣವನ್ನು ತರ್ಜಿಮೆ ಮಾಡುವಾಗಲೂ ಮೈಕ್ ಶಬ್ದ ಅಸ್ಪಷ್ಟವಾಗಿ ಕೇಳುತ್ತಿತ್ತು. ಮೈಕ್ ಶಬ್ದ ಕಡಿಮೆಯಾಗುತ್ತಿದ್ದಂತೆ ಜನ ಜೋರಾಗಿ ಕೂಗುತ್ತಿದ್ದರು. ರಾಹುಲ್ ಗಾಂಧಿ ಒಂದು ಗಂಟೆ ತಡವಾಗಿ ಬಂದರು. ಅಲ್ಲಿಯವರೆಗೆ ಆರ್ಕೆಸ್ಟ್ರಾ ತಂಡದವರು ಹಾಡುಗಳಿಂದ ರಂಜಿಸಿದರು.

ಕ್ರೀಡಾಂಗಣದ ತುಂಬ ಜನಸಾಗರ

ಜನಾಶೀರ್ವಾದ ಯಾತ್ರೆ ನಡೆದ ಪಟ್ಟಣದ ಕೊಟ್ರೆ ನಂಜಪ್ಪ ಪಿಯು ಕಾಲೇಜು ಮೈದಾನ ಜನರಿಂದ ತುಂಬಿತ್ತು. ಬೆಳಿಗ್ಗೆ 10ರಿಂದಲೇ ಜನ ಮೈದಾನದತ್ತ ಧಾವಿಸುತ್ತಿದ್ದರು. ತಾಲ್ಲೂಕಿನ ಹಳ್ಳಿಗಳು, ಭರಮಸಾಗರ, ಹೊಸದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಿಂದ ಜನ ಬಸ್‌ಗಳಲ್ಲಿ ಬಂದಿದ್ದರು. ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ಬೀಸುತ್ತಿದ್ದರು. ಕೆಲವರು ರಾಹುಲ್ ಗಾಂಧಿ ಮುಖವಾಡ ಧರಿಸಿ ಸಂಭ್ರಮಿಸಿದರು. ರಾಹುಲ್ ಗಾಂಧಿ ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ಶಿಳ್ಳೆ, ಕೂಗು ಮುಗಿಲು ಮುಟ್ಟಿತ್ತು. ರಾಹುಲ್ ಗಾಂಧಿ ಹಸನ್ಮುಖಿಯಾಗಿ ಜನರತ್ತ ಕೈಬೀಸಿದರು.

ಊಟ ಮಾಡದೆ ಹೊರಟ ರಾಹುಲ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಟ್ಟಣದ ವಾಗ್ದೇವಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಚಿತ್ರದುರ್ಗದ ಖಾಸಗಿ ಹೊಟೇಲ್ ನಿಂದ ವೈವಿಧ್ಯಮಯ ಊಟ ತರಿಸಲಾಗಿತ್ತು.ತುಮಕೂರಿನಲ್ಲಿ ಸಿದ್ಧಗಂಗಾ ಶ್ರೀಗಳ ಭೇಟಿಗೆ ತಡವಾಗುತ್ತದೆ ಎಂದು ರಾಹುಲ್ ಊಟ ಮಾಡದೆ ತೆರಳಿದರು. ಸಚಿವ ಎಚ್.ಆಂಜನೇಯ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರು ಊಟ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry