ಗಿರಿಜನರ ಸಮಸ್ಯೆ ಆಲಿಸಿದ ಅಧಿಕಾರಿಗಳು

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ತಾಲ್ಲೂಕು ಪಂಚಾಯಿತಿ ಇಒ, ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಬುಧವಾರ ಭೇಟಿ ನೀಡಿ ಧರಣಿನಿರತ ಆದಿವಾಸಿಗಳ ಸಮಸ್ಯೆ ಆಲಿಸಿದರು.ಈ ಬಾರಿ ಮತದಾನ ಬಹಿಷ್ಕಾರಕ್ಕೆ ಗಿರಿಜನರು ನಿರ್ಧರಿಸುವ ಕುರಿತು ‘ಪ್ರಜಾವಾಣಿ’ಯಲ್ಲಿ ಬುಧವಾರ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚತ್ತ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಆದಿವಾಸಿಗಳ ಜತೆ ಸಮಾಲೋಚನೆ ನಡೆಸಿದರು.‘14ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆ ಪರಿಹ ರಿಸಲು ಚುನಾವಣಾಧಿನಕಾರಿಯಿಂದ ಅನುಮತಿ ಪಡೆಯಲಾಗುವುದು. ಇದೇ ರೀತಿ, 1 ಮತ್ತು 3ರ ಬ್ಲಾಕ್ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಕೃಷ್ಣಕುಮಾರ್ ತಿಳಿಸಿದರು.
‘ಪುನರ್ವಸತಿ ಕೇಂದ್ರದ 2,3,4ರ ಘಟಕದ ಕೊಳವೆಬಾವಿಯಲ್ಲಿ ಅಂತರ್ಜಲ ಇಲ್ಲ. ಆದ್ದರಿಂದ ಇಲ್ಲಿ ತಲಾ 3 ಸಾವಿರ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯದ ಪ್ಲಾಸ್ಟಿಕ್ ಕಂಟೇನರ್ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಬ್ಲಾಕ್ 5ರಲ್ಲಿ ಕೊಳವೆಬಾವಿ ಪಂಪ್ ಸೆಟ್ ದುರಸ್ತಿಗೊಳಿಸಿ ನೀರು ಸರಬರಾಜು ಮಾಡಲಾಗುವುದು’ ಎಂದು ಭರವಸೆ ನೀಡಿದರು. ‘ಅಧಿಕಾರಿಗಳು ಭೇಟಿ ನೀಡಿ ಎರಡು ದಿನದಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು’ ಎಂದು ಆದಿವಾಸಿ ವ್ಯವಸಾಯ ಆಂದೋಲನ ಸಮಿತಿ ಸಂಚಾಲಕ ಎಂ.ಬಿ.ಪ್ರಭು ತಿಳಿಸಿದರು.
‘ಇಲ್ಲಿಗೆ ಸ್ಥಳಾಂತರಗೊಂಡ ನಂತರ ಕಂದಾಯ ಇಲಾಖೆಗೆ ನೂರಾರು ಅರ್ಜಿ ಸಲ್ಲಿಸಿದ್ದರೂ ಇಲ್ಲಿವರೆಗೆ ಯಾವುದೇ ಸಮಸ್ಯೆಗೂ ಸ್ಪಂದಿಸಿಲ್ಲ. ಕಂದಾಯ ಇಲಾಖೆಗೆ ಸೇರಿದ 4 ಬೇಡಿಕೆ ಈಡೇರಿ ಸಬೇಕು. ಲ್ಯಾಂಪ್ ಸೊಸೈಟಿಗೆ 134 ಮಂದಿ ಆದಿವಾಸಿಗಳನ್ನು ಸದಸ್ಯ ರನ್ನಾಗಿ ನೇಮಕ ಮಾಡಬೇಕು. ಇವು ಈಡೇರಿದರೆ ಮಾತ್ರ ಮತದಾ ನದಲ್ಲಿ ಭಾಗ ವಹಿಸುತ್ತೇನೆ’ ಎಂದು ಆದಿವಾಸಿ ವ್ಯವಸಾಯ ಆಂದೋಲನದ ಮುಖಂಡ ಜೆ.ಕೆ.ತಿಮ್ಮಯ್ಯ ಹೇಳಿದರು.
ಗೋವಿಂದನಹಳ್ಳಿ ಪಿಡಿಒ ನರಹರಿ ಮತ್ತು ದೊಡ್ಡಹೆಜ್ಜೂರು ಪಿಡಿಒ ಯಶೋದಾ ಹಾಜರಿದ್ದರು.
**
ಗಿರಿಜನರಿಗೆ ಕೃಷಿ ಭೂಮಿ, ಪಹಣಿ, ಪಟ್ಟಾ ಎಲ್ಲವೂ ನೀಡಲಿದ್ದೇವೆ. ಈ ಹಿಂದೆ ನೀಡಿದ ಪಹಣಿಯಲ್ಲಿ ನೂನ್ಯತೆ ಇದ್ದು, ಸರಿಪಡಿಸಲು ಕ್ರಮ ತೆಗೆದುಕೊಂಡಿವೆ – ಕೆ.ನಿತೀಶ್, ಉಪವಿಭಾಗಾಧಿಕಾರಿ.
**