ವ್ಯಕ್ತಿ ಪ್ರತಿಷ್ಠೆ ಕಣದಲ್ಲಿ ಪಕ್ಷಗಳ ಅಬ್ಬರ

7
ಭದ್ರಾವತಿ: ಕ್ಷೇತ್ರದಲ್ಲಿ ಹೆಚ್ಚಿದ ಪಕ್ಷೇತರರ ಚಟುವಟಿಕೆ

ವ್ಯಕ್ತಿ ಪ್ರತಿಷ್ಠೆ ಕಣದಲ್ಲಿ ಪಕ್ಷಗಳ ಅಬ್ಬರ

Published:
Updated:

 

ಭದ್ರಾವತಿ: ಕಳೆದೆರಡು ದಶಕಗಳಿಂದ ವ್ಯಕ್ತಿ ಪ್ರತಿಷ್ಠೆಯ ಕಣವಾಗಿದ್ದ ಭದ್ರಾವತಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಬ್ಬರದ ಧ್ವನಿ ಹೆಚ್ಚಾಗಿದೆ.ಶಾಸಕ ಎಂ.ಜೆ. ಅಪ್ಪಾಜಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಪಕ್ಷ ಹಸಿರು ನಿಶಾನೆ ತೋರಿಸಿದೆ. ಆದರೆ ಅವರ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತರಾಗಿರುವ ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ, ಕಾಂಗ್ರೆಸ್‌ ಟಿಕೆಟ್‌ ಸಿಗುವ ವಿಶ್ವಾಸದಿಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇದರ ನಡುವೆ ಅಲ್ಪಸಂಖ್ಯಾತ, ಮಹಿಳಾ ಕೋಟಾದಡಿ ಕಾಂಗ್ರೆಸ್ ಟಿಕೆಟ್‌ ಬಯಸಿ ಬಲ್ಕೀಷ್ ಬಾನು ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಮಹಮ್ಮದ್ ಸನಾವುಲ್ಲಾ ಕೂಡ ಅಲ್ಪಸಂಖ್ಯಾತ ಕೋಟಾದಡಿ ಪ್ರಯತ್ನ ನಡೆಸಿದ್ದಾರೆ.ಬಿಜೆಪಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಹಲವು ಆಕಾಂಕ್ಷಿಗಳ ಜತೆಗೆ ಈಚೆಗಷ್ಟೇ ಪಕ್ಷ ಸೇರಿದ ಪ್ರವೀಣ ಪಟೇಲ್ ಹೆಸರು ಸೇರ್ಪಡೆಯಾಗಿದೆ. ಇದು ಪಕ್ಷದ ಮೂಲ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಸಂಸದ ಬಿ.ಎಸ್. ಯಡಿಯೂರಪ್ಪ ಅವರು ಸ್ವತಃ ಪ್ರವೀಣ ಪಟೇಲ್ ಹೆಸರನ್ನು ಶಿಕಾರಿಪುರದ ತಮ್ಮ ನಿವಾಸದಲ್ಲಿ ಘೋಷಣೆ ಮಾಡುವ ಮೂಲಕ ಸಾದರ ಲಿಂಗಾಯತ ಅಭ್ಯರ್ಥಿಗೆ ಮಣೆ ಹಾಕಲು ಮುಂದಾಗಿದ್ದಾರೆ.ಆದರೆ ಕಾಂಗ್ರೆಸ್ ಪಕ್ಷದಿಂದ ಬಂದಿರುವ ಪಟೇಲ್ ಅವರಿಗೆ ಏಕಾಏಕಿ ಮಣೆ ಹಾಕಿರುವುದು ಕಾರ್ಯಕರ್ತರ ಅಸಮಾಧಾನ ಹೆಚ್ಚು ಮಾಡಿದೆ. ಮಾತ್ರವಲ್ಲ, ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ಒಗ್ಗಟ್ಟು ಪ್ರದರ್ಶಿಸಲು ಕಾರಣವಾಗಿದೆ. ಈ ನಡುವೆ ಸಂಘ ಪರಿವಾರದ ನಂಟು ಹೊಂದಿರುವ ಜಿ. ಧರ್ಮಪ್ರಸಾದ್ ತಮ್ಮ ಉಮೇದು ವಾರಿಕೆ ಬಲ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಮತ್ತೊಂದೆಡೆ ಇನ್ನಿತರ ಆಕಾಂಕ್ಷಿಗಳು ಪಟೇಲ್ ಅವರ ಬದಲಿಗೆ ಸ್ಥಳೀಯರಿಗೆ ಟಿಕೆಟ್‌ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಮುಖಂಡರ ಬೇಟೆ: ಹಾಲಿ ಮತ್ತು ಮಾಜಿ ಶಾಸಕರು ತಮ್ಮ ಹಿಂದಿನ ರಾಜಕೀಯ ಪ್ರೌಢಿಮೆಯ ಎಲ್ಲಾ ಕಸರತ್ತು ಆರಂಭಿಸಿದ್ದು, ಕ್ಷೇತ್ರದ ವಿವಿಧ ಜಾತಿ, ಜನಾಂಗ, ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ತಮ್ಮತ್ತ ಸೆಳೆಯುವ ತಂತ್ರಗಾರಿಕೆ ಆರಂಭಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕೆಲವರನ್ನು ಅಪ್ಪಾಜಿ ಖುದ್ದು ಭೇಟಿ ಮಾಡಿ ತಮ್ಮ ಬೆಂಬಲಕ್ಕೆ ಬರುವಂತೆ ಮನವೊಲಿಸುತ್ತಿದ್ದಾರೆ. ಮತ್ತೊಂದೆಡೆ ಸಂಗಮೇಶ್ ವೈಯಕ್ತಿಕ ವರ್ಚಸ್ಸಿನ ಬಲದಿಂದ ಈ ಕೆಲಸಕ್ಕೆ ಮುಂದಾಗಿದ್ದಾರೆ.ಈ ನಡುವೆ ಬಿಜೆಪಿ ಬೂತ್ ಸಮಿತಿ ಮಾಡುವಲ್ಲಿ ಎರಡು ಪಕ್ಷಗಳಿಗಿಂತ ಮುಂದಡಿ ಇಟ್ಟಿದೆ. ಬೂತ್ ಮಟ್ಟದಲ್ಲಿ ಪಕ್ಷ ಬೆಳೆಸಲು ಹೊರ ಊರಿನಿಂದ ಬಂದಿರುವ ವಿಸ್ತಾರಕರು ಇಲ್ಲಿಯ ತನಕ 185ಕ್ಕೂ ಅಧಿಕ ಬೂತ್ ಸಮಿತಿ ರಚಿಸಿದ್ದಾರೆ. ಈ ಕಾರ್ಯದಲ್ಲಿ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಕೆಲಸ ಮಾಡುತ್ತಿರುವ ವಿಸ್ತಾರಕರು ಆಯಾ ಬೂತ್ ಹಾಗೂ ಶಕ್ತಿ ಕೇಂದ್ರದ ಮೂಲಕ ಸಭೆಗಳನ್ನು ನಡೆಸುವ ಕೆಲಸ ಮಾಡುತ್ತಿದ್ದು, ಅಭ್ಯರ್ಥಿಗಿಂತ ಪಕ್ಷ, ಕಮಲ ಚಿನ್ಹೆ ಪರಿಗಣಿಸಿ ಎಂಬ ಸಂದೇಶ ಸಾರಿದ್ದಾರೆ.

ವಿಶಿಷ್ಟ ಕಾರ್ಯಯೋಜನೆ, ನವಶಕ್ತಿ ಸಮಾವೇಶ ನಡೆಸುವ ಮೂಲಕ ಬಿಜೆಪಿಯು ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ನಡೆಸಿದೆ. ನೀತಿ ಸಂಹಿತೆ ಜಾರಿಯಾಗುವ ಮೊದಲು ಕ್ರಿಕೆಟ್, ಕಬಡ್ಡಿ, ಸಂಗೀತ ಕಾರ್ಯಕ್ರಮ ಪ್ರಾಯೋಜಕತ್ವದ ಕಡೆ ಮುಖ ಮಾಡಿದ್ದ ಮುಖಂಡರು ಈಗ ಹೊರ ಊರುಗಳಿಗೆ ಕಳುಹಿಸುವ, ಟೀಷರ್ಟ್ ವಿತರಿಸುವ ಹಾಗೂ ಇನ್ನಿತರೆ ಚಟುವಟಿಕೆಗೆ ಹೆಸರು ಬಾರದ ರೀತಿಯಲ್ಲಿ ನೆರವು ನೀಡುವ ತಂತ್ರಗಾರಿಕೆ ಬಳಸಿದ್ದಾರೆ. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಬಹುತೇಕ ತಡೆ ಒಡ್ಡುವಲ್ಲಿ ಎಎಪಿ, ಎಂಇಪಿ ಹಾಗೂ ಪಕ್ಷೇತರರು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ವೈಯಕ್ತಿಕ ನೆಲೆಗಟ್ಟಿನಲ್ಲಿ ಸಾಕಷ್ಟು ಹೆಸರು ಮಾಡಿರುವ ವ್ಯಕ್ತಿಗಳು ಸ್ಪರ್ಧಿಗಳಾಗಲು ಬಯಸಿದ್ದು, ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಪಕ್ಷಗಳ ಚಟುವಟಿಕೆಗಿಂತ ನಾವೇನೂ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಇವರ ಹೋರಾಟ ಒಂದೆಡೆ ನಡೆದಿದೆ.

–ಕೆ.ಎನ್. ಶ್ರೀಹರ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry