ಶುಕ್ರವಾರ, ಡಿಸೆಂಬರ್ 13, 2019
19 °C

ಬಿಜೆಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವ ಜನಾದೇಶ ಬೇಡ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವ ಜನಾದೇಶ ಬೇಡ: ಎಚ್‌ಡಿಕೆ

ಹಿರೇಕೆರೂರ (ಹಾವೇರಿ ಜಿಲ್ಲೆ): ‘ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ, ಜೆಡಿಎಸ್‌ಗೆ ಸ್ಪಷ್ಟ ಬಹುಮತ ಕೊಡಬೇಕು. ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ರಚಿಸುವಂತಹ ಪರಿಸ್ಥಿತಿ ನಿರ್ಮಿಸಬೇಡಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗುರುವಾರ ಇಲ್ಲಿ ಮನವಿ ಮಾಡಿದರು.

ಪಟ್ಟಣದಲ್ಲಿ ಗುರುವಾರ ಜೆಡಿಎಸ್ ಆಯೋಜಿಸಿದ್ದ ವಿಕಾಸ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತದೆ. ಖಾತೆ ಬದಲಾವಣೆ, ಹಕ್ಕುಪತ್ರಕ್ಕಾಗಿ ರೈತರು ಅರ್ಜಿ ಕೊಟ್ಟು ಹೋದರೆ, ವಾರದೊಳಗೆ ಕಂದಾಯ ಇಲಾಖೆಯ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ಆದೇಶ ನೀಡುವ ವ್ಯವಸ್ಥೆ ಜಾರಿಗೆ ತರುತ್ತೇನೆ’ ಎಂದು ಹೇಳಿದರು.

‘ರೈತರು ₹ 100 ಖರ್ಚು ಮಾಡಿ ಬೆಳೆದ ಉತ್ಪನ್ನಕ್ಕೆ ₹ 150 ವಾಪಸ್ ಸಿಗುವಂತೆ ಮಾಡುತ್ತೇನೆ. ಕೃಷಿಗೆ 24 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು. ಐಎಎಸ್‌ ಅಧಿಕಾರಿಗಳ ಸಲಹೆ ಬದಲಾಗಿ, ರೈತರ ಸಲಹೆಯಂತೆ ಅಧಿಕಾರ ನಡೆಸುತ್ತೇನೆ’ ಎಂದು ಹೇಳಿದರು.

‘ಗರ್ಭಿಣಿಯರಿಗೆ 6 ತಿಂಗಳ ಕಾಲ ₹6,000, ಅಂಗವಿಕಲರಿಗೆ ₹ 2,000 ಸಹಾಯಧನ, ವೃದ್ಧರಿಗೆ ₹ 5,000 ಗೌರವಧನ ನೀಡಲಾಗುವುದು. ಎಲ್ಲ ಯೋಜನೆಗಳನ್ನೂ ತೆರಿಗೆ ಹಣದಲ್ಲೇ ಜಾರಿಗೆ ತರುತ್ತೇನೆಯೇ ಹೊರತು ಸಾಲ ಮಾಡುವುದಿಲ್ಲ’ ಎಂದರು.

‘ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿಲ್ಲ. ಅವರಿಗೆ ಈಗಾಗಲೇ ಅಧಿಕಾರ ಕೊಟ್ಟಿದ್ದೀರಿ. ಈ ಬಾರಿ ನನಗೆ ಸ್ವತಂತ್ರವಾಗಿ ಅಧಿಕಾರ ಕೊಡಿ. ಯಾವುದೇ ತೆರಿಗೆ ಹೆಚ್ಚಿಸದೇ ರೈತರ ಸಾಲ ಮನ್ನಾ ಮಾಡುತ್ತೇನೆ’ ಎಂದರು.

‘ರೈತರು ಆತ್ಮಹತ್ಯೆ ಮಾಡಿಕೊಂಡಾಗ ಬಾರದ ಬಿಜೆಪಿಯವರು, ಈಗ ಮುಷ್ಟಿ ಅಕ್ಕಿ ಸಂಗ್ರಹಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದ ಅವರು, ‘ಹೊಸ ಕೃಷಿ ನೀತಿ ಜಾರಿಗೆ ತರುತ್ತೇನೆ. ಇಸ್ರೇಲ್ ವಿಜ್ಞಾನಿಗಳನ್ನು ಕರೆಸಿಕೊಂಡು ರೈತರಲ್ಲಿ ಜಾಗೃತಿ ಮೂಡಿಸುತ್ತೇನೆ. ಬಡ್ಡಿರಹಿತ ಸಾಲ ನೀಡಲಾಗುವುದು’ ಎಂದು ಹೇಳಿದರು.

ಹಿರೇಕೆರೂರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿದ್ಧಪ್ಪ ಗುಡದಪ್ಪನವರ ಇದ್ದರು. ಸಂಜೆ ಶಿಗ್ಗಾವಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)