ಗನ್‌ ತೋರಿಸಿ ಬೆದರಿಕೆ

7
‘ಎಂಎಲ್‌ಸಿ’ಸೋಮಣ್ಣ ವಿರುದ್ಧ ಮತ್ತೊಂದು ಎಫ್‌ಐಆರ್‌

ಗನ್‌ ತೋರಿಸಿ ಬೆದರಿಕೆ

Published:
Updated:

ಬೆಂಗಳೂರು: ಬಟ್ಟೆ ವ್ಯಾಪಾರಿಯೊಬ್ಬರಿಂದ 187 ಚಿನ್ನದ ತಾಳಿಗಳು ಹಾಗೂ ಬ್ಯಾಂಕ್ ಅಧಿಕಾರಿಯೊಬ್ಬರಿಂದ ₹2.40 ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ಬಂಧಿತನಾಗಿರುವ ಎಲ್‌. ಸೋಮಣ್ಣ ಅಲಿಯಾಸ್ ‘ಎಂಎಲ್‌ಸಿ’ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

‘ಮಾಜಿ ಎಂಎಲ್‌ಸಿ ಎಂದು ಪರಿಚಯಿಸಿಕೊಂಡಿದ್ದ ಸೋಮಣ್ಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ)  ಬಡಾವಣೆಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ₹62 ಲಕ್ಷ ಪಡೆದು ವಂಚಿಸಿದ್ದಾನೆ. ಆ ಹಣ ವಾಪಸ್‌ ಕೇಳಿದ್ದಕ್ಕೆ ಗನ್‌ ತೋರಿಸಿ ಕೊಲೆ ಬೆದರಿಕೆವೊಡ್ಡಿದ್ದಾನೆ’ ಎಂದು ಎ.ಪುರುಷೋತ್ತಮ ಎಂಬುವರು ಬುಧವಾರ (ಏ.4) ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ಸದ್ಯ ಬಸವೇಶ್ವರ ನಗರ ಠಾಣೆ ಪೊಲೀಸರ ವಶದಲ್ಲಿದ್ದಾನೆ. ವೈಯಾಲಿಕಾವಲ್‌ ಠಾಣೆಯಲ್ಲೂ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

‘2015ರ ಫೆಬ್ರುವರಿಯಲ್ಲಿ ನಮ್ಮ ಮನೆಯ ಬಾಡಿಗೆದಾರರ ಮೂಲಕ ಸೋಮಣ್ಣನ ಪರಿಚಯವಾಗಿತ್ತು. ಆತನನ್ನು ನಂಬಿದ್ದ ನಾವು, ಚಿನ್ನಾಭರಣ ಹಾಗೂ ಮನೆ ಅಡವಿಟ್ಟು ₹62 ಲಕ್ಷ ನೀಡಿದ್ದೆವು. ವರ್ಷ ಕಳೆದರೂ ಆರೋಪಿಯು ನಿವೇಶನ ಕೊಡಿಸಿರಲಿಲ್ಲ. ಅದನ್ನು ಕೇಳಲೆಂದು ನನ್ನ ಪತ್ನಿಯೊಂದಿಗೆ 2016ರಲ್ಲಿ ಸಹಕಾರ ನಗರದಲ್ಲಿರುವ ಆರೋಪಿಯ ಮನೆಗೆ ಹೋಗಿದ್ದೆ. ಅವಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ, ಗನ್‌ ತೋರಿಸಿ ಕೊಲೆ ಬೆದರಿಕೆ ಒಡ್ಡಿದ್ದ’ ಎಂದು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ವಂಚನೆ ಸಂಬಂಧ ದಾಖಲೆ ನೀಡುವಂತೆ ದೂರುದಾರರನ್ನು ಕೋರಿದ್ದೇವೆ. ಅವರು ದಾಖಲೆ ನೀಡಿದ ನಂತರ ಅದನ್ನು ಪರಿಶೀಲಿಸಿ ಮುಂದುವರಿಯಲಿದ್ದೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry