ಭಾನುವಾರ, ಡಿಸೆಂಬರ್ 8, 2019
24 °C

ಬೇಸಿಗೆಯಲ್ಲಿ ಎಂಥ ಪಾದರಕ್ಷೆ ಧರಿಸಬೇಕು?

Published:
Updated:
ಬೇಸಿಗೆಯಲ್ಲಿ ಎಂಥ ಪಾದರಕ್ಷೆ ಧರಿಸಬೇಕು?

ಬಿಸಿಲ ಕಾಲದಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಪಾದಗಳಿಗೆ ಹಿತವಾಗುವ ಪಾದರಕ್ಷೆಗಳನ್ನು ಧರಿಸುವುದು ಕೂಡಾ ಅಷ್ಟೇ ಮುಖ್ಯ. ಓಡಾಡುವಾಗ ಶೂ ಬಳಸಿದರೆ ಸೆಖೆ ಮತ್ತಷ್ಟು ಹೆಚ್ಚಾಗಿ ಮನಸಿಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ ಪಾದಗಳಿಗೆ ಗಾಳಿಯಾಡದೆ ಸಣ್ಣಸಣ್ಣ ಗುಳ್ಳೆ ಅಥವಾ ದದ್ದುಗಳು ಕೂಡಾ ಅಗಬಹುದು.

ಬೇಸಿಗೆಯಲ್ಲಿ ಉಡುಗೆಯ ಕಡೆಗೆ ಮಾತ್ರವಲ್ಲ ತೊಡುಗೆ ಕಡೆಗೂ ಗಮನ ಹರಿಸಬೇಕು ಎನ್ನುತ್ತಾರೆ ಫ್ಯಾಷನ್ ತಜ್ಞರು. ಬೇಸಿಗೆ ಕಾಲದಲ್ಲಿ ದೇಹ ಹೆಚ್ಚು ಬೆವರುತ್ತದೆ. ಅದರಲ್ಲೂ ಪಾದಗಳಲ್ಲಿ ಬೆವರು ಬೇಗ ಶೇಖರಗೊಳ್ಳುತ್ತದೆ. ಬೆವರಿನ ಕಾರಣದಿಂದ ಸಾಕ್ಸ್ ಮತ್ತು ಶೂ ದುರ್ವಾಸನೆ ಬೀರುವುದರಿಂದ ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟಾಗುತ್ತದೆ.

ಬೇಸಿಗೆ ಕಾಲದಲ್ಲಿ ಪಾದಗಳಿಗೆ ಹಿತವಾಗುವಂಥ ಎಂಥ ಪಾದರಕ್ಷೆಗಳನ್ನು ಧರಿಸಬೇಕು ಎನ್ನುವ ಕುರಿತು ಇಲ್ಲಿದೆ ಕೆಲ ಟಿಪ್ಸ್.

* ಅಥ್ಲೆಟಿಕ್ ಸ್ಯಾಂಡಲ್ಸ್: ದಪ್ಪಗಿದ್ದವರು ಮತ್ತು ತೆಳ್ಳಗಿದ್ದವರು ಇಬ್ಬರಿಗೂ ಸರಿಹೊಂದುವಂಥ ಪಾದರಕ್ಷೆ ಅಥ್ಲೆಟಿಕ್‌ ಸ್ಯಾಂಡಲ್ಸ್. ಪಿಕ್‌ನಿಕ್, ಟ್ರೆಕ್ಕಿಂಗ್, ವಿಹಾರ ಇತ್ಯಾದಿ ಸಂದರ್ಭಗಳಲ್ಲೂ ಅಥ್ಲೆಟಿಕ್ ಸ್ಯಾಂಡಲ್ಸ್ ಧರಿಸಲು ಆರಾಮದಾಯಕವಾಗಿರುತ್ತದೆ. ಕಾಲು ಉಳುಕದಂತೆ ತಡೆಯಲು ಬೆಲ್ಟ್ ಇರುವ ಸ್ಯಾಂಡಲ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

* ಚಪ್ಪಟೆ ಸ್ಯಾಂಡಲ್: ಚಪ್ಪಟೆಯಾಗಿರುವ ಹಗುರವಾದ ಪಾದರಕ್ಷೆಗಳನ್ನು ಧರಿಸುವುದು ಒಳ್ಳೆಯದು. ಇದರಿಂದ ಪಾದಗಳ ಮೇಲೆ ಒತ್ತಡವುಂಟಾಗುವುದಿಲ್ಲ. ದೀರ್ಘ ನಡಿಗೆಗೂ ಇದು ಒಳ್ಳೇದು. ಚರ್ಮದಿಂದ ತಯಾರಾದ ಚಪ್ಪಲಿಗಳಿಗೆ ಆದ್ಯತೆ ಕೊಡಿ. ಕೊಳ್ಳುವ ಮುನ್ನ ಪಾದರಕ್ಷೆಗಳನ್ನು ಹಾಕಿಕೊಂಡು ಒಂದೆರೆಡು ಸುತ್ತು ಓಡಾಡಿ.

* ಲೋಫರ್ಸ್: ನೋಡಲು ಶೂ ರೀತಿ ಕಾಣುತ್ತೆ. ಆದರೆ ಲೇಸ್ ಇರುವುದಿಲ್ಲ. ಈ ಮಾದರಿಯ ಶೂಗಳನ್ನು ಧರಿಸಿದಾಗ ಸಾಕ್ಸ್‌ ಇರಲೇಬೇಕು ಎಂದೇನಿಲ್ಲ. ಇದರಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿನ್ಯಾಸಗಳು ಸಿಗುತ್ತವೆ. ಬೇಸಿಗೆ, ಚಳಿಗಾಲ ಮತ್ತು ಮಳೆಗಾಲ ಮೂರು ಕಾಲಕ್ಕೂ ಲೋಫರ್ಸ್‌ಗಳನ್ನು ಧರಿಸಬಹುದು.

* ಸ್ನೀಕರ್ಸ್‌: ಕ್ಯಾನ್‌ವಾಸ್‌ನಿಂದ ತಯಾರಾಗಿರುವ ಸ್ನೀಕರ್ಸ್ ಬೇಸಿಗೆ ಕಾಲಕ್ಕೆ ಸೂಕ್ತ. ಕಾಲೇಜು ಹುಡುಗರಿಂದ ಹಿಡಿದು ಉದ್ಯೋಗಿಗಳ ತನಕ ಸ್ನೀಕರ್ಸ್‌ ಧರಿಸಬಹುದು. ಸ್ನೀಕರ್ಸ್‌ನಲ್ಲಿ ಗಾಳಿಯಾಡಲು ಅವಕಾಶವಿರುತ್ತದೆ.

ಪ್ರತಿಕ್ರಿಯಿಸಿ (+)