4

ಬಹು ಆಯ್ಕೆಯ ಬದುಕು... ಹುಷಾರು ಗೆಳತಿ!

Published:
Updated:
ಬಹು ಆಯ್ಕೆಯ ಬದುಕು... ಹುಷಾರು ಗೆಳತಿ!

ಅವಳ ಹೆಸರು ವಿನುತಾ. ವಯಸ್ಸು 20. ಓದುತ್ತಿದ್ದದ್ದು ಬಿ.ಎ. ಸುಮಾರು ದಿನಗಳಿಂದಲೂ ಕೇಳುತ್ತಿದ್ದಳು, ‘ನಿಮ್ಮ ಹತ್ತಿರ ಮಾತನ್ನಾಡಬೇಕು’ ಎಂದು. ಒಂದು ದಿನ ಅಚಾನಕ್ ಎದುರಿಗೇ ಸಿಕ್ಕಳು. ಮತ್ತೆ ದುಂಬಾಲು ಬಿದ್ದು ಕೇಳಿದಳು. ‘ಸರಿ ಆಯ್ತು ನಡಿ, ಏನು ಹೇಳುತ್ತೀಯೋ ಹೇಳು’ ಎಂದೆ. ಮುಜುಗರದಿಂದ ಆರಂಭಿಸಿದಳು. ಮನೆಯ ಬಡತನ, ಬೇಜವಾಬ್ದಾರಿ ತಂದೆ, ತಾಯಿಯ ಕೆಟ್ಟತನಗಳು, ಓದಲಿಕ್ಕೂ ಹಣವಿಲ್ಲದ ಗತಿ, ಜೊತೆಗೆ... ಅತ್ತೆಮಗನ ಪ್ರೀತಿ. ಅತ್ತಳು, ಹಗುರಾದಳು.

‘ಅತ್ತೆ ಮನೆಯಲ್ಲಿ ಮದುವೆಯಾಗು ಎನ್ನುತ್ತಿದ್ದಾರೆ, ಏನು ಮಾಡಲಿ?’ ಎಂದಳು. ಪರಿಸ್ಥಿತಿಯ ಅರಿವಾಯಿತು; ಕೂರಿಸಿಕೊಂಡು ಹೇಳಿದೆ. ಕೈಲಾದ ಸಹಾಯ ಮಾಡುತ್ತೇನೆ, ಮೊದಲು ಓದು, ಆಮೇಲೆ ಮದುವೆ, ಆತುರ ಬೇಡ. ಈ ಕೆಲವು ದಿನಗಳಲ್ಲಿ ಹುಡುಗ ಹೇಗಿದ್ದಾನೆಂದು ನಿನಗೆ ಅರ್ಥವಾಗುತ್ತದೆ, ಹ್ಞೂಂ... ಎಂದಳು. ಹಾಗೇ ನಡೆದುಕೊಂಡಳು. ನಡುವೆ ಸಿಕ್ಕಾಗ ‘ಅತ್ತೆ ಮಗ ಕೊಡಿಸಿದ ಡ್ರೆಸ್’ ಎಂದು ಕಣ್ಣಲ್ಲಿ ಹೊಳಪು ತುಂಬಿ ತೋರಿಸುತ್ತಿದ್ದಳು. ಹುಡುಗನ ಬಗ್ಗೆ ನನಗಿನ್ನೂ ನಂಬಿಕೆ ಬಂದಿರಲಿಲ್ಲ, ಪದೇ ಪದೇ ಕೇಳುತ್ತಿದ್ದೆ, ‘ಇಲ್ಲ, ಅಂವ ಚೆನ್ನಾಗಿದ್ದಾನೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ’ಎನ್ನುತ್ತಿದ್ದಳು. ‘ಹುಡುಗಿ ಚೆಂದಾಗಿರಲಿ’ ಎಂದುಕೊಳ್ಳುತ್ತಿದ್ದೆ.

ಈ ನಡುವೆ ಒಂದು ವರ್ಷ ನಮ್ಮ ಭೇಟಿ ಆಗಲಿಲ್ಲ, ಮೊನ್ನೆ ತಾನೇ ಸಿಕ್ಕ ಸುದ್ದಿ, ಪ್ರೀತಿಸಿದ ಅತ್ತೆಮಗನನ್ನು ವಿನುತಾ ಮದುವೆಯಾದಳು, ಮೂರು ತಿಂಗಳಿನ್ನೂ ಕಳೆದಿರಲಿಲ್ಲ, ಗಂಡ ಹೆಂಡತಿ ಜಗಳ, ತನ್ನದೆಂದು ಒಂದು ಸ್ವಂತ ಕೆಲಸವಿಲ್ಲದ ಗಂಡ ಕುಡಿದು ಬಂದು ದಿನಾ ಹೊಡೆಯತ್ತಿದ್ದ. ಕೊನೆಗೆ ತೀರಾ ಪೆಟ್ರೋಲ್ ಸುರಿಯಲು ಮುಂದಾದಾಗ ಮನೆ ಬಿಟ್ಟು ಓಡಿ ಬಂದಿದ್ದಳು. ಈಗ ವಿನುತಾ ಡಿವೋರ್ಸಿಗೆ ಕಾಯುತ್ತಿದ್ದಾಳೆ. ಕೇಳಿ ಸಂಕಟವಾಯಿತು. ಇಷ್ಟು ಸಣ್ಣ ವಯಸ್ಸಿಗೆ ಈ ಅನುಭವ ಅವಳಿಗಾಗಬಾರದಿತ್ತು. ಅವಳ ಗೆಳತಿಯರನ್ನು ವಿಚಾರಿಸಿದಾಗ ‘ಅವಳ ಫೋನ್ ಕೂಡ ಇಲ್ಲ, ಮನೆ ಗೊತ್ತಿಲ್ಲ, ನಮಗೂ ಬೇಜಾರಾಗ್ತಿದೆ’ ಎಂದರು.

ನಿಜ, ಬದುಕಿನಲ್ಲಿ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ. ಬದುಕಿಗೆ ಏರಿಳಿತಗಳು ತುಂಬ ಸಹಜ, ಆದರೂ ಕೆಲವು ಆಯ್ಕೆಗಳಲ್ಲಿ ನಾವು ಕೊಂಚ ಜಾಗರೂಕತೆ ವಹಿಸಬಹುದು. ಬಾಚಿಕೊಂಡಷ್ಟೂ ಬದುಕಿನಲ್ಲಿ ಅವಕಾಶಗಳಿವೆ, ಕೆಲವು ಬೊಗಸೆಯ ಸಂದಿಯಲ್ಲಿ ಜಾರಿಹೋಗಬಹುದು, ಬೇಸರವಿಲ್ಲ, ಹೊಸದೊಂದು ದಾರಿ ತೆರೆದುಕೊಳ್ಳುತ್ತದೆ. ಆದರೆ ಬದುಕಿನ ಕೆಲವು ಘಟನೆಗಳು, ಸನ್ನಿವೇಶಗಳು ನಮ್ಮನ್ನು ಇನ್ನು ಮೇಲಕ್ಕೇಳಲಾರದಷ್ಟು ಪ್ರಪಾತಕ್ಕೆ ತಳ್ಳಿಬಿಡಬಹುದು. ಅದನ್ನು ಎದುರಿಸಲು ಒಂದು ಸಿದ್ಧತೆ ಬೇಕಲ್ಲ. ಅದಕ್ಕಾಗಿ ಓದು, ಬರಹ, ಉದ್ಯೋಗ ಎಲ್ಲ. ವಿನುತಾಳ ಬದುಕನ್ನೇ ನೋಡಿ, ಸ್ವಲ್ಪ ಒತ್ತಡವನ್ನು ತಾಳಿಕೊಂಡು ವಿನುತಾ ತನ್ನ ಓದನ್ನು ಮುಗಿಸಿಕೊಳ್ಳಬಹುದಿತ್ತು.

ಒಂದು ಉದ್ಯೋಗ ಅಂತಿದ್ದರೆ ಬಂದ ಈ ಸನ್ನಿವೇಶವನ್ನು ಅವಳು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸಬಹುದಿತ್ತು, ಅಥವಾ ಅತ್ತೆ ಮಗನಿಗೆ ‘ನೀನು ನಿನಗೊಂದು ಕೆಲಸ ಹುಡುಕಿಕೊಳ್ಳದಿದ್ದರೆ ಮದುವೆ ಆಗಲು ಸಾಧ್ಯವಿಲ್ಲ’ ಎನ್ನಬಹುದಿತ್ತು. ಆದರೆ ಯಾವುದೂ ಹಾಗಾಲಿಲ್ಲ. ಈಗ ವಿನುತಾ ಮತ್ತೆ ಅದೇ ತಂದೆಯ ಬೇಜವಾಬ್ದಾರಿ, ತಾಯಿಯ ಕೆಟ್ಟತನಗಳು, ಸಹೋದರಿಯರ ಮೂದಲಿಕೆಯ ನಡುವೆ ಕಣ್ಣೀರು ಹಾಕುತ್ತಿದ್ದಾಳೆ.

ಇಪ್ಪತ್ತೈದರ ಒಳಗಿನ ವಯಸ್ಸಿನಲ್ಲಿ ಹಲವು ಹೆಣ್ಣುಮಕ್ಕಳಿಗೆ ಪ್ರೀತಿಯ ಬಗ್ಗೆ ಸರಿಯಾದ ಕಲ್ಪನೆ ಇರುವುದಿಲ್ಲ. ಕೊಡಿಸಿದ ನಾಲ್ಕು ಡ್ರೆಸ್ಸಿಗೆ, ಇಬ್ಬರೇ ಕುಳಿತು ತಿಂದ ಐಸ್‌ಕ್ರೀಂ, ಜೊತೆಯಲ್ಲಿ ನೋಡಿದ ಫಿಲ್ಮಿಗೆ, ಸುತ್ತಾಡಿದ ಪಾರ್ಕುಗಳ ರೋಮಾಂಚನಕ್ಕೆ ತೆರೆದುಕೊಳ್ಳುತ್ತಾರೆ.

ಹಲವು ಸಲ ಬದುಕನ್ನು ನಡೆಸಿಕೊಂಡು ಹೋಗುವ ಶಕ್ತಿ ಇದಕ್ಕೆ ಇರುವುದಿಲ್ಲ. ಆದರೆ ಹೆಣ್ಣುಮಕ್ಕಳು ಹೆಚ್ಚು ಆಕರ್ಷಿತರಾಗುವುದು ಇಂತಹ ಭಾವನಾತ್ಮಕ ಸ್ಪಂದನೆಗಳಿಗೇ. ಆದರೆ ವಾಸ್ತವದ ಬದುಕು ಹಾಗಿರುವುದಿಲ್ಲ. ಅದು ಹೆಚ್ಚು ಜವಾಬ್ದಾರಿಯನ್ನು ಬೇಡುತ್ತದೆ. ಪ್ರೀತಿಗೆ ಜವಾಬ್ದಾರಿ ಕಡಿಮೆಯಿದ್ದಷ್ಟೂ ಅದರ ಆಯಸ್ಸು ಕಡಿಮೆ. ಹೆಚ್ಚಿದ್ದಷ್ಟೂ ಆಯಸ್ಸು ಜಾಸ್ತಿ. ಪ್ರೀತಿ ಎಂದರೆ ಕೇವಲ ರೋಮಾಂಚನ ಮಾತ್ರವಲ್ಲ, ಜವಾಬ್ದಾರಿ ಕೂಡ. ಎಷ್ಟೋ ಹೆಣ್ಣುಮಕ್ಕಳು ಪ್ರೀತಿಗಾಗಿ ತಮ್ಮ ವಿದ್ಯಾಭ್ಯಾಸವನ್ನು ಹಾಳುಮಾಡಿಕೊಳ್ಳುತ್ತಾರೆ, ಅಪ್ಪ–ಅಮ್ಮನ ಸಂಬಂಧ ಕಳೆದುಕೊಳ್ಳುತ್ತಾರೆ, ಉದ್ಯೋಗ ಮರೆಯುತ್ತಾರೆ, ತಮ್ಮ ಜೀವನದ ಕನಸುಗಳ ಜೊತೆ ರಾಜಿ ಮಾಡಿಕೊಳ್ಳುತ್ತಾರೆ. ಕೊನೆಗೆ... ತಮ್ಮ ಜೀವವನ್ನೂ ಕಳೆದುಕೊಳ್ಳಲು ತಯಾರಾಗುತ್ತಾರೆ.

ಮುಂದಿನ ಬದುಕಿನ ಬಗ್ಗೆ ಯೋಚನೆಯಿರುವುದಿಲ್ಲ.

ಪ್ರಿಯಾ ಮತ್ತು ಶ್ರೇಯಾ ಸಂಬಂಧಿಕರು, ಒಂದೇ ವಯಸ್ಸಿನವರು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರೂ ಆತ್ಮೀಯ ಗೆಳತಿಯರು. ಒಂದೇ ತರಗತಿಯ ಒಂದೇ ವಿಷಯ ಇಬ್ಬರೂ ಓದುತ್ತಿದ್ದುದು. ದುರಂತವೆಂದರೆ ಈ ಇಬ್ಬರು ಗೆಳತಿಯರು ಒಂದೇ ಕಡೆ ಒಂದೇ ಬ್ರಾಂಡಿನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾರಣ ‘ಪ್ರೀತಿ’ ಎಂಬ ನಿರ್ಧಾರಕ್ಕೆ ಜಗತ್ತು ಬಂದಿತು. ಒಮ್ಮೆ ಯೋಚಿಸಿದರೆ ಅನಿಸುತ್ತದೆ, ಆ ಇಬ್ಬರು ಗೆಳತಿಯರು ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ ಎಷ್ಟು ದಿನದಿಂದ ಯೋಜನೆ ರೂಪಿಸಿರಬೇಕು! ಇಂಥ ಸ್ಥಳದಲ್ಲಿ, ಇಂತಿಷ್ಟು ಗಂಟೆಗೆ, ಈ ಬ್ರಾಂಡಿನ ವಿಷವನ್ನು ಯಾರೂ ಕಾಣದ ಜಾಗದಲ್ಲಿ ಸೇವಿಸಬೇಕು ಎಂದು ತೀರ್ಮಾನಿಸಬೇಕಾದರೆ ಎಷ್ಟು ಬುದ್ಧಿ ಉಪಯೋಗಿಸಿರಬೇಡ! ಅದೇ ಬುದ್ಧಿಯನ್ನು ತಮ್ಮ ಸಮಸ್ಯೆಯ ಪರಿಹಾರಕ್ಕೆ ಉಪಯೋಗಿಸಿದರೆ ಖಂಡಿತವಾಗಿಯೂ ಸಮಸ್ಯೆ ಪರಿಹಾರವಾಗುತ್ತಿತ್ತು. ಬದುಕು ತೆರೆದಿರುತ್ತಿತ್ತು. ಆತುರದ ನಿರ್ಧಾರ ಅವರ ತಂದೆ–ತಾಯಿಗಳ ಜೀವನಪರ್ಯಂತದ ದುಃಖಕ್ಕೆ ಕಾರಣವಾಯಿತು.

ಕೆಲವು ಮಕ್ಕಳು ನನ್ನ ಹತ್ತಿರ ಕೇಳಿದ್ದಾರೆ, ‘ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಅವರ ದುಃಖ ಕೊನೆಯಾಗುತ್ತದಲ್ಲ’ ಅಂತ. ಆದರೆ ಅದು ಹಾಗಲ್ಲ, ‘ಅದರಿಂದ ಸುಖ ಕೂಡ ಕೊನೆಯಾಗುತ್ತಲ್ಲ, ಅದೂ ಅಲ್ಲದೇ ಸತ್ತ ನಂತರದ ಸ್ಥಿತಿಯ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇಲ್ಲವಲ್ಲ’. ಆತ್ಮಹತ್ಯೆ ಮಾಡಿಕೊಳ್ಳುವವರಿಂದ ಜಗತ್ತಿಗೂ ಯಾವ ಸುಖವೂ ಸಿಗುವುದಿಲ್ಲ.

ಬದುಕು ಬದುಕಲಿಕ್ಕೆ ಇರುವಂಥದ್ದು, ಕೊನೆಗಾಣಿಸಲಿಕ್ಕಲ್ಲ. ಹಾಗೊಂದು ವೇಳೆ ಇದ್ದಿದ್ದರೆ ಎಲ್ಲ ಸಮಸ್ಯೆಗೂ ಸಾವೇ ಪರಿಹಾರವಾಗಬೇಕಾಗಿತ್ತು. ಜಗತ್ತು ಇಷ್ಟು ಮುಂದುವರೆಯಲು ಸಾಧ್ಯವಿತ್ತೇ? ಸಣ್ಣ ಸಮಸ್ಯೆ ಬಂದ ಕೂಡಲೇ ಸತ್ತು ಬಿಡುವುದು ಇದ್ದವರ ಹೊಸ ಸಮಸ್ಯೆಯ ಉದ್ಭವಕ್ಕೂ ಕಾರಣವಾಗಬಹುದು.

ಹಲವು ತಂದೆ ತಾಯಿಗಳು ಘಟನೆಯಾದ ನಂತರ ಹೇಳುವುದನ್ನು ಕೇಳುತ್ತೇವೆ. ನಮ್ಮ ಮಗಳು ನಮ್ಮ ಹತ್ತಿರ ಇಂಥ ಸಮಸ್ಯೆಯಿದೆ ಎಂದು ಹೇಳಿದ್ದರೆ ನಾವೇನಾದರೂ ಮಾಡಬಹುದಿತ್ತು ಅಂತ. ಎಷ್ಟೋ ಸಲ ಮಕ್ಕಳು ತಮ್ಮ ಸಮಸ್ಯೆಯನ್ನು ತಮ್ಮ ಹೆತ್ತವರ ಬಳಿ ಹೇಳಿಕೊಂಡಿರುವುದಿಲ್ಲ. ಹೀಗೆ ಹೇಳಿಕೊಳ್ಳುವುದರಿಂದ ಮನೆಯಲ್ಲಿ ಬೈಸಿಕೊಳ್ಳಬೇಕಾಗುತ್ತದೆ ಎಂಬುದು ಅವರ ಆತಂಕ.

ಆದರೆ ಮನೆಯಲ್ಲಿ ಬೈಸಿಕೊಂಡರೂ ಹೆತ್ತವರು ಮಕ್ಕಳನ್ನು ಅವರ ಸಮಸ್ಯೆಗೆ ಅವರನ್ನು ಬಿಟ್ಟುಬಿಡುವುದಿಲ್ಲ. ತಾವೂ ಜೊತೆಯಾಗುತ್ತಾರೆ, ಪರಿಹಾರ ಹುಡುಕುವ ಕೈ ಬಲಿಷ್ಠವಾಗುತ್ತದೆ. ಹಂಚಿಕೊಳ್ಳುವುದು ಎಷ್ಟೋ ಆತ್ಮಹತ್ಯೆಯನ್ನು ತಪ್ಪಿಸುತ್ತದೆ. ಬದುಕಿನ ಆಯ್ಕೆಗೆ ಮಕ್ಕಳನ್ನು ಮರಳಿಸುತ್ತದೆ. ಪ್ರೀತಿಯಂತಹ ಸೂಕ್ಷ್ಮ ವಿಷಯದಲ್ಲಿ ಹೆಣ್ಣುಮಕ್ಕಳು ಸೂಕ್ತ ಹಾಗೂ ಪ್ರಬುದ್ಧ ನಿರ್ಧಾರ ತೆಗೆದುಕೊಳ್ಳುವಂತಾಗುತ್ತದೆ.

‘ನಮ್ಮ ಮನೆಯಲ್ಲಿ ಟಿ.ವಿ. ನೋಡಲಿಕ್ಕೂ ಬಿಡುವುದಿಲ್ಲ, ಅದೇನು? ಕೆಟ್ಟ ಸಾಂಗ್ ಹಾಕ್ಕೊಂಡು ನೋಡ್ತೀರಾ, ಅಂತ ಬೈದು ಟಿ.ವಿ. ಆಫ್ ಮಾಡ್ತಾರೆ, ದಿನಾ ಮನೆಯಲ್ಲಿ ಜಗಳ, ಅಪ್ಪ ಅಮ್ಮನಿಗೆ ನಮ್ ಮೇಲೆ ನಂಬಿಕೆಯಿಲ್ಲ, ತುಂಬಾ ಬೇಜಾರು’ ಎನ್ನುವ ಮಕ್ಕಳಿದ್ದಾರೆ. ಟಿ.ವಿ. ನೋಡುವುದು ತಪ್ಪಲ್ಲ, ಆದರೆ ಅದರ ಕೆಟ್ಟ ಪರಿಣಾಮ ಮಕ್ಕಳ ಮೇಲೆ ಆಗಬಾರದೆಂಬ ಕಾಳಜಿ ಅಪ್ಪ ಅಮ್ಮನದ್ದು. ಹೆಣ್ಣುಮಕ್ಕಳಿಗೆ ಮೊದಲಿನಂತೆ ಮನೆಯಲ್ಲಿ ಕೂರಬೇಕಾಗಿಲ್ಲ, ಉದ್ಯೋಗ ಪಡೆಯಬಹುದು, ತಮ್ಮಿಷ್ಟದ ಬದುಕನ್ನು ಕಟ್ಟಿಕೊಳ್ಳುವ ಅವಕಾಶವಿದ್ದರೂ ಎಷ್ಟೋ ಸಲ ತಾವೇ ಮಾಡಿಕೊಂಡ ತಪ್ಪಿಗೆ ಇಡೀ ಜೀವನ ಕೊರಗುವಂತಹ ಸನ್ನಿವೇಶ ತಂದುಕೊಂಡ ಹೆಣ್ಣುಮಕ್ಕಳಿಗೇನೂ ಕೊರತೆಯಿಲ್ಲ.

ಸುನೀತಾ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿ. ಅಧ್ಯಾಪಕರಿಗೆಲ್ಲ ಅಚ್ಚುಮೆಚ್ಚು. ಅವಳು ಕ್ಲಾಸಿನಲ್ಲಿ ಇರುತ್ತಾಳೆಂದರೆ ವಿಶೇಷ ಸಿದ್ಧತೆಯೊಂದಿಗೆ ಅಧ್ಯಾಪಕರು ಹೋಗುತ್ತಿದ್ದರು. ಯಾಕೆಂದರೆ ಕ್ಲಾಸಿನಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಅವಳ ಪ್ರಶ್ನೆ ಅಷ್ಟು ಇರುತ್ತಿತ್ತು. ಕೇಳಿದರೆ ಐ.ಎ.ಎಸ್. ಮಾಡುವುದು ತನ್ನ ಗುರಿ ಎನ್ನುತ್ತಿದ್ದಳು. ಇಂಥ ಬುದ್ಧಿವಂತ ಹುಡುಗಿ ಪ್ರೀತಿಯಲ್ಲಿ ಬಿದ್ದಿದ್ದು ಅವಳ ಮನೆಯವರಿಗಾಗಲೀ ಅವಳ ಶಿಕ್ಷಕರಿಗಾಗಲೀ ಗೊತ್ತಾಗಲಿಲ್ಲ. ಕಾಲೇಜಿಗೆ ಹೋದ ಹುಡುಗಿ ಮನೆಗೆ ವಾಪಸ್ಸಾಗಲಿಲ್ಲ.

ವಿಚಾರಿಸಿದಾಗ ಗೊತ್ತಾಗಿತ್ತು ಅವಳಿಗಿಂತ 18 ವರ್ಷ ದೊಡ್ಡವನಾದ, ಈಗಾಗಲೇ ಮೂರು ಮಕ್ಕಳ ತಂದೆಯ ಮಡದಿಯಾಗಿ ಅವನ ಮನೆ ಸೇರಿದ್ದಳು ಅಂತ. ಮದುವೆಯಾಗಿ ಹತ್ತು ವರ್ಷ ಅವನಿಗಾಗಿ, ಅವನ ಮಕ್ಕಳಿಗಾಗಿ ದುಡಿದಳು. ಅವಳ ಐ.ಎ.ಎಸ್., ಅವಳ ಕಾಲೇಜ್ ಎಲ್ಲ ಬಿಟ್ಟುಹೋಯಿತು. ಈಗ ಡಿವೋರ್ಸಿಗೆ ರೆಡಿಯಾಗುತ್ತಿದ್ದಾಳೆ. ಬದುಕು ಅವಳ ತಪ್ಪು ಆಯ್ಕೆಯ ಬಗ್ಗೆ ಅವಳಿಗೆ ಸರಿಯಾದ ತಿಳಿವಳಿಕೆ ಮೂಡಿಸಿದೆ. ಆದರೆ ಕಳೆದ ಕಾಲವನ್ನಾರು ತಂದುಕೊಡುತ್ತಾರೆ? ಈ ಹಂತದಲ್ಲಿ ಅವಳಿಗೆ ಸಹಾಯ ಮಾಡುವವರು ಯಾರು? ಅದರರ್ಥ ಪ್ರೀತಿಸಬಾರದು ಅಂತ ಅಲ್ಲ, ಕೆಲವೊಮ್ಮೆ ನಾವು ತೆಗೆದುಕೊಂಡ ನಿರ್ಧಾರಗಳ ಮರು ವಿಮರ್ಶೆಯ ಅಗತ್ಯವಿರುತ್ತದೆ. ಸರಿಯಾದ ನಿರ್ಧಾರ ಎಂದು ಅಂದುಕೊಂಡಿದ್ದು ಮುಂದೊಂದು ದಿನ ತಪ್ಪು ಎನ್ನಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಕಷ್ಟಗಳ ಪರಂಪರೆ ಎದುರಾಗುವುದೇ ಅಲ್ಲಿ. ಅದನ್ನು ಎದುರಿಸುವ ಕಿಂಚಿತ್ ಪ್ರಯತ್ನ ನಮ್ಮಲ್ಲಿರಬೇಕು. ಜೊತೆಗೆ ಒಂದು ಸಣ್ಣ ಸಿದ್ಧತೆ.

ಗಗನ ಕೂಡ ಬುದ್ಧಿವಂತ ಹುಡುಗಿ, ಆದರೆ ಮನೆಯಲ್ಲಿ ಬಡತನ, ತಾಯಿಗೆ ಬಾಣಂತನದಲ್ಲಿ ಸನ್ನಿಯಾಗಿದ್ದು ಇನ್ನೂ ಕಡಿಮೆಯಾಗಿಲ್ಲ, ಮನೆಯ ಕೆಲಸವೆಲ್ಲ ಇವಳ ತಲೆಯ ಮೇಲೆ. ಮೂರು ಮಕ್ಕಳ ಬಡ ತಂದೆ, ಹೆಂಡತಿಯನ್ನೂ ಮಕ್ಕಳನ್ನೂ ಸಾಕಲು ಇನ್ನಿಲ್ಲದಂತೆ ದುಡಿಯುತ್ತಿದ್ದಾರೆ. ತಾನು ಏನಾದರೂ ಪರವಾಗಿಲ್ಲ, ಮಕ್ಕಳು ಚೆನ್ನಾಗಿರಬೇಕು ಎಂಬುದು ಅವರ ಆಸೆ. ಬಿ.ಕಾಂ. ಆದಮೇಲೆ ಮುಂದಕ್ಕೆ ಓದಬೇಕೆಂದು ಗಗನಾಳಿಗೆ ತುಂಬಾ ಆಸೆಯಿತ್ತು, ಆದರೆ ದುಡ್ಡು ಹೊಂದಿಸುವುದು ಹೇಗೆ? ಬಡ ತಂದೆಗೆ ಕಣ್ಣೀರು. ಮಗಳ ತಲೆ ನೇವರಿಸಿ ತಂದೆ ಅತ್ತರು. ಅವತ್ತು ರಾತ್ರಿ ಗಗನಾಳಿಗೆ ನಿದ್ದೆ ಬರಲಿಲ್ಲ, ಕನಸನ್ನು ಬಲಿಕೊಡಲು ಅವಳು ಸಿದ್ಧಳಿರಲಿಲ್ಲ.

ಒಂದು ನಿರ್ಧಾರಕ್ಕೆ ಬಂದಳು. ಕಿವಿಯಲ್ಲಿ ಓಲೆಯಿತ್ತು. ಕತ್ತಿನಲ್ಲೊಂದು ಪುಟ್ಟ ಸರ. ಒಂದು ವರ್ಷದ ಫೀ, ಹಾಸ್ಟೆಲ್ ಖರ್ಚಿಗೆ ಅದು ಸಾಕಾಗಿತ್ತು. ಬೆಳಿಗ್ಗೆ ಎದ್ದವಳು ಅಪ್ಪನನ್ನು ಅದನ್ನು ಮಾರಾಟ ಮಾಡಲು ಹೇಳಿದಳು. ಅಪ್ಪ ಹೌಹಾರಿದ! ಮತ್ತೆ ಕಣ್ಣೀರು, ಮಗಳ ಹಠಕ್ಕೆ, ಕೊಟ್ಟ ಸಾಂತ್ವನಕ್ಕೆ ಅಪ್ಪ ಒಪ್ಪಲೇಬೇಕಾಯ್ತು. ಕೈಯ್ಯಲ್ಲಿ ದುಡ್ಡು ಹಿಡಿದು ಬೆಂಗಳೂರಿಗೆ ಬಂದಳು. ಅವಳಿಷ್ಟದ ಎಂಬಿಎಗೆ ಸೇರಿದಳು. ಎರಡನೇ ವರ್ಷಕ್ಕೆಂದು ಪಾರ್ಟ್ ಟೈಮ್ ಜಾಬ್ ಮಾಡಿ ಹಣ ಸಂಗ್ರಹಿಸಿಕೊಂಡಳು. ಎರಡನೇ ವರ್ಷವೂ ಮುಗಿಯಿತು. ಈಗ ಕೈ ತುಂಬಾ ಸಂಪಾದನೆ. ಇಷ್ಟಪಡುವ ಗಂಡ, ಮುದ್ದಾದ ಮಗು, ಮೈ ತುಂಬ ಬಂಗಾರ ಹೇರಿಕೊಂಡು ಅಪ್ಪನ ಮುಂದೆ ನಗುತ್ತಾ ನಿಲ್ಲುತ್ತಾಳೆ. ಅಪ್ಪನಿಗೆ ಸಂತೃಪ್ತಿ. ಮೊನ್ನೆ ಸಿಕ್ಕವಳು ಹೇಳುತ್ತಿದ್ದಳು ಅಪ್ಪನಿಗೆ ಕಣ್ಣು ಅಪರೇಷನ್ ಮಾಡಿಸಿದೆ ಅಂತ.

ಪ್ರತೀಕ್ಷಾ ಎಂಜಿನಿಯರಿಂಗ್ ಓದುತ್ತಿರುವಾಗ ಹುಡುಗನೊಬ್ಬ ನಿನ್ನನ್ನು ಪ್ರೀತಿಸುತ್ತೇನೆ ಎಂದ, ಅವಳು ಹೇಳಿದಳು, ನಾಲ್ಕು ವರ್ಷ ಕಾಯಿ ಎಂದು. ಕಾದ, ಅವಳ ಓದು, ಉದ್ಯೋಗ ಎಲ್ಲ ಆಯಿತು. ಜೊತೆಗೆ ಈಗ ಮದುವೆ...

ಕಣ್ಣ ಮುಂದೆ ಎಲ್ಲ ಆಯ್ಕೆಗಳೂ ಇರುತ್ತವೆ, ಆಯ್ದುಕೊಳ್ಳುವವರು ನಾವು. ಮನೆ ಮನೆ ಮುಸುರೆ ತಿಕ್ಕುವ ಕೆಲಸದಿಂದ ಹಿಡಿದು ವಿಜ್ಞಾನಿ, ಪೈಲಟ್ ಆಗುವ ತನಕ ಹೆಣ್ಣಿಗೆ ಇಂದು ಅವಕಾಶಗಳಿವೆ. ನಮಗೆ ಯಾವುದು ಬೇಕು ಎಂದು ನಿರ್ಧಾರ ಮಾಡುವವರು ನಾವೇ ಆಗಿರುತ್ತೇವೆ. ನಿರ್ಧಾರ ಮಾತ್ರವಲ್ಲ, ನಾವಂದುಕೊಂಡ ಗುರಿ ತಲುಪಲು ಏಕಾಗ್ರತೆ, ತ್ಯಾಗ ಎರಡೂ ಬೇಕು. ಅಲ್ಲಿಯ ತನಕ ಮನಸ್ಸನ್ನು ಸ್ವಲ್ಪ ಆಚೀಚೆ ಹೋಗದಂತೆ ನೋಡಿಕೊಳ್ಳುವುದು ಒಳ್ಳೆಯದು. ಎಲ್ಲಕ್ಕೂ ಕೊನೆಗೆ ಪರಿಣಾಮ ಎದುರಿಸುವವಳು ಹೆಣ್ಣೇ ಆದ್ದರಿಂದ ಗಂಡಿಗಿಂತ ಹೆಣ್ಣು ಎಚ್ಚರಿಕೆ ವಹಿಸಬೇಕಾಗುತ್ತದೆ. ಬದುಕು ಬಹು ಆಯ್ಕೆಯದು; ಹುಶಾರುತನವೂ ನಮ್ಮದೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry