ಮಂಗಳವಾರ, ಜೂಲೈ 7, 2020
27 °C

ಕೆಪಿಎಸ್‌ಸಿಗೆ ಕಾಯಕಲ್ಪ ಕಲ್ಪಿಸೋರು ಯಾರಪ್ಪ?!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಕೆಪಿಎಸ್‌ಸಿಗೆ ಕಾಯಕಲ್ಪ ಕಲ್ಪಿಸೋರು ಯಾರಪ್ಪ?!

ಬೆಂಗಳೂರು:  ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತು ರಾಜಕೀಯ ಎರಡೂ ಒಂದಕ್ಕೊಂದು ಅಂಟಿಕೊಂಡೇ ಇವೆ. ಅದು ಬಿಟ್ಟು ಇದಿಲ್ಲ. ಇದು ಬಿಟ್ಟು ಅದಿಲ್ಲ. ಆಯೋಗದ ಸದಸ್ಯರು, ಅಧ್ಯಕ್ಷರನ್ನು ಆಯ್ಕೆ ಮಾಡುವುದರಿಂದ ಹಿಡಿದು ಆಯೋಗ ನಡೆಸುವ ನೇಮಕಾತಿ ಪ್ರಕ್ರಿಯೆವರೆಗೆ ಎಲ್ಲದರಲ್ಲೂ ರಾಜಕೀಯ ಹಸ್ತಕ್ಷೇಪ ಇದ್ದೇ ಇದೆ. ಈ ವಿಷಯದಲ್ಲಿ ಆ ಪಕ್ಷ, ಈ ಪಕ್ಷ ಎಂಬ ಭೇದವಿಲ್ಲ. ಎಲ್ಲರೂ ಹಸ್ತಕ್ಷೇಪ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ರಹಸ್ಯ.

ಆಯೋಗ ಶಾಸನಬದ್ಧ ಸಂಸ್ಥೆಯಾಗಿದ್ದರೂ ಇಲ್ಲಿ ನಿಷ್ಪಕ್ಷಪಾತ ಎನ್ನುವ ಶಬ್ದವೇ ಇಲ್ಲ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಎಲ್ಲವೂ ಮಿತಿಮೀರಿವೆ. ಕಳೆದ ಹಲವಾರು ವರ್ಷಗಳಿಂದ ಕೆಪಿಎಸ್‌ಸಿ ವಿಶ್ವಾಸಾರ್ಹತೆ ಕುಸಿದು ಪಾತಾಳ ತಲುಪಿದೆ. ಅಲ್ಲಿಂದ ಅದನ್ನು ಮೇಲೆತ್ತುವ ಪ್ರಯತ್ನವೇ ನಡೆದಿಲ್ಲ. ಇತ್ತೀಚೆಗೆ ನಡೆದ ಅಕ್ರಮಗಳನ್ನು ಕಲಬುರ್ಗಿ ಪೊಲೀಸರು ಬಯಲಿಗೆಳೆದಿದ್ದಾರೆ.

ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕದ ರೀತಿಯನ್ನು ಪರಿಶೀಲಿಸಿದರೆ, ಆಯಾ ಕಾಲದ ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ನೇಮಕಾತಿಗಳು ನಡೆದಿರುವುದು ಗೊತ್ತಾಗುತ್ತದೆ. ಆಯೋಗ ನಡೆಸಿದ ನೇಮಕಾತಿಗಳಲ್ಲಿಯೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಪಕ್ಷದ ಬಂಟರು, ಜಾತಿ, ಜನಾಂಗದವರು ಕೆಲಸ ಗಿಟ್ಟಿಸಿಕೊಂಡಿದ್ದೂ ಸುಳ್ಳಲ್ಲ ಎನ್ನುವುದು ವೇದ್ಯವಾಗುತ್ತದೆ. ಕೆಪಿಎಸ್‌ಸಿಯಲ್ಲಿ ಏನೇ ಅಕ್ರಮ ನಡೆದರೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಬಾಯಿ ಬಿಟ್ಟಿದ್ದು ಕಡಿಮೆ. ಆಗೊಮ್ಮೆ ಈಗೊಮ್ಮೆ ಬಾಯಿಬಿಟ್ಟಿದ್ದರೂ ಅದು ತೋರಿಕೆಗೆ ಮಾತ್ರ.

‘ಹೊಸ ಅಗಸ ಬಟ್ಟೆಯನ್ನು ಎತ್ತಿ ಎತ್ತಿ ಒಗೆದ’ ಎಂಬ ಮಾತಿನಂತೆ, 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಪಿಎಸ್‌ಸಿಗೆ ಕಾಯಕಲ್ಪ ಕಲ್ಪಿಸಲು ವೀರಾವೇಶದ ಮಾತ ನಾಡಿತಾದರೂ ಈಗ ಅಲ್ಲಿ ಎಲ್ಲವೂ ‘ಮಾಮೂಲಿ’.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊತ್ತಿನಲ್ಲಿಯೇ 2011ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿತ್ತು. ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿತು. ಈ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿಯನ್ನು ತಕ್ಷಣವೇ ಸಿಐಡಿಗೆ ಒಪ್ಪಿಸಲಾಯಿತು. ಜೊತೆಗೆ ಕೆಪಿಎಸ್‌ಸಿಗೆ ಕಾಯಕಲ್ಪ ಕಲ್ಪಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ನೀಡಲು ಪಿ.ಸಿ.ಹೋಟಾ ಸಮಿತಿ ರಚಿಸಲಾಯಿತು.

ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರೂ ಆಗಿದ್ದ ಪಿ.ಸಿ.ಹೋಟಾ 2013ರ ಆಗಸ್ಟ್‌ನಲ್ಲಿಯೇ ವರದಿ ನೀಡಿದರು. ಹೋಟಾ ಅವರು ನೀಡಿದ್ದ 67 ಶಿಫಾರಸುಗಳಲ್ಲಿ ತನಗೆ ಅಗತ್ಯವಾದ ಶಿಫಾರಸುಗಳನ್ನು ಮಾತ್ರ ಒಪ್ಪಿಕೊಂಡು ಉಳಿದವುಗಳನ್ನು ಕಸದಬುಟ್ಟಿಗೆ ಎಸೆಯುವ ಕೆಲಸವನ್ನು ಸರ್ಕಾರ ಮಾಡಿತು. ಆ ಮೂಲಕ, ಕುಲಗೆಟ್ಟು ಹೋಗಿದ್ದ ವ್ಯವಸ್ಥೆಯನ್ನು ಸುಧಾರಿಸುವ ಒಳ್ಳೆಯ ಅವಕಾಶದಿಂದಲೂ ವಂಚಿತವಾಯಿತು.

ಆಯೋಗದಲ್ಲಿ ಇರುವ ಶೇ 50ರಷ್ಟು ನೌಕರರನ್ನು ವರ್ಗಾಯಿಸಬೇಕು, ಅಧ್ಯಕ್ಷರ ಆಯ್ಕೆಗೆ ಶೋಧನಾ ಸಮಿತಿ ರಚಿಸಬೇಕು, ಮೌಖಿಕ ಸಂದರ್ಶನ ಸಮಿತಿಯಲ್ಲಿ ಐಐಎಂ, ಐಐಎಸ್‌ಸಿ, ವಿಟಿಯು ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ವಿಷಯ ತಜ್ಞರು ಇರಬೇಕು, ಹೊರ ರಾಜ್ಯದಿಂದಲೂ ವಿಷಯ ತಜ್ಞರನ್ನು ಕರೆಸಬೇಕು, ಸಂದರ್ಶನ ತಂಡದಲ್ಲಿ ಯಾರು ಯಾರು ಇರುತ್ತಾರೆ ಎನ್ನುವುದನ್ನು ಗೋಪ್ಯವಾಗಿರಿಸಬೇಕು, ಸಂದರ್ಶನದ ಅರ್ಧಗಂಟೆ ಮೊದಲು ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು... ಹೀಗೆ ಹಲವಾರು ಅತ್ಯುತ್ತಮ ಸಲಹೆಗಳನ್ನು ಹೋಟಾ ಸಮಿತಿ ನೀಡಿತ್ತು. ಆದರೆ ಅವುಗಳ ಅನುಷ್ಠಾನದ ಶ್ರಮಕ್ಕೆ ಸರ್ಕಾರ ಕೈ ಹಾಕಲೇ ಇಲ್ಲ.

ಈ ನಡುವೆ, 2014ರ ಆಗಸ್ಟ್ 7ರಂದು ಸಿಐಡಿ ತನಿಖಾ ವರದಿಯನ್ನು ನೀಡಿತು. 2011ನೇ ಸಾಲಿನಲ್ಲಿ ನಡೆದ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎನ್ನುವುದನ್ನು ಬಯಲಿಗೆಳೆಯಿತು. ಇದನ್ನು ಆಧಾರವಾಗಿಟ್ಟುಕೊಂಡು, ಆಯೋಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆಯ್ಕೆ ಪಟ್ಟಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿತು. ಇದೊಂದು ದಿಟ್ಟ ಕ್ರಮ ಎಂದೇ ಬಣ್ಣಿಸಲಾಗಿತ್ತು. ಆದರೆ ಇದನ್ನು ಕೆಲವರು ಕೆಎಟಿಯಲ್ಲಿ ಪ್ರಶ್ನೆ ಮಾಡಿದರು. 2016 ಅ.19ರಂದು ಕೆಎಟಿ ತೀರ್ಪು ನೀಡಿ ಎಲ್ಲ 362 ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ನೀಡುವಂತೆ ಸೂಚಿಸಿತು. ಅಷ್ಟರಲ್ಲಾಗಲೇ ಸರ್ಕಾರ ಕೆಪಿಎಸ್‌ಸಿ ಕಾಯಕಲ್ಪದ ನಿರ್ಧಾರದಿಂದ ಹಿಂದೆ ಸರಿದಾಗಿತ್ತು. ಕೆಎಟಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುವ ಉತ್ಸಾಹವನ್ನು ಕಳೆದುಕೊಂಡಿತ್ತು. ನೇಮಕಾತಿ ಆದೇಶ ನೀಡಲು ಆರಂಭಿಸಿತು.

ಆದರೆ ಕೆಲವು ಅಭ್ಯರ್ಥಿಗಳು ಕೆಎಟಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದರು. ಹೈಕೋರ್ಟ್ 2018ರ ಮಾರ್ಚ್ 9ರಂದು ತೀರ್ಪು ನೀಡಿ, ಎಲ್ಲ 362 ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಪಡಿಸಿತು. ಇದರ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್‌ಗೆ ಹೋದಾಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ ಮುಖ್ಯ ಲಿಖಿತ ಪರೀಕ್ಷೆಯಲ್ಲಿಯೂ ಅಕ್ರಮಗಳು ನಡೆದಿವೆಯೇ ಎನ್ನುವುದನ್ನು ಪರಿಶೀಲಿಸುವಂತೆ ಹೈಕೋರ್ಟ್‌ಗೆ ಸೂಚಿಸಿದೆ.

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ನೇಮಕಾತಿ ಪ್ರಕ್ರಿಯೆಗಳು ವಿವಾದ ರಹಿತವಾಗಿ ನಡೆದ ಉದಾಹರಣೆಗಳೇ ಇಲ್ಲ. 1998, 1999, 2004ರ ಸಾಲಿನ ನೇಮಕಾತಿ ವಿಷಯ ಇನ್ನೂ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಇದೆ. ಈ ಮೂರೂ ಸಾಲಿನಲ್ಲಿ ನೇಮಕವಾದ 729 ಅಧಿಕಾರಿಗಳ ಪೈಕಿ 484 ಅಧಿಕಾರಿಗಳು ಅಕ್ರಮವಾಗಿ ನೇಮಕಗೊಂಡಿದ್ದಾರೆ ಎನ್ನುವುದು ಸಿಐಡಿ ಮತ್ತು ಹೈಕೋರ್ಟ್ ಸತ್ಯಶೋಧನಾ ಸಮಿತಿ ತನಿಖೆಯಿಂದ ಪತ್ತೆಯಾಗಿದೆ.

ಕೆಪಿಎಸ್‌ಸಿ ನೇಮಕಾತಿಯ ವಿಷಯದಲ್ಲಿ ಈವರೆಗೂ ಎಲ್ಲ ರಾಜಕೀಯ ಪಕ್ಷಗಳೂ ಪರಸ್ಪರ ಸಹಕಾರದಿಂದಲೇ ಕೆಲಸ ಮಾಡಿವೆ. ಯಾರೂ ದಿಟ್ಟ ಕ್ರಮ ಕೈಗೊಂಡಿಲ್ಲ. ರಾಜಕಾರಣಿಗಳ ಪಾಲಿಗೆ ಕಲ್ಪವೃಕ್ಷ, ಕಾಮಧೇನು ಆಗಿರುವ ಕೆಪಿಎಸ್‌ಸಿಗೆ ಕಾಯಕಲ್ಪ ಸದ್ಯಕ್ಕಂತೂ ಕನಸಾಗಿಯೇ ಉಳಿದಿದೆ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಕೆಲಸ ಎನ್ನುವುದು ಗಗನ ಕುಸುಮವೇ ಆಗಿದೆ.

ಕೆಪಿಎಸ್‌ಸಿಗೆ ಕಾಯಕಲ್ಪ ಕಲ್ಪಿಸುವ ವಿಷಯದಲ್ಲಿ ಯಾವ ಪಕ್ಷಗಳು ಎಷ್ಟು ಬದ್ಧತೆ ಹೊಂದಿವೆ ಎಂಬುದನ್ನು ಅರಿಯುವ ನಿಟ್ಟಿನಲ್ಲಿ, ಮೂರೂ ಪ್ರಮುಖ ಪಕ್ಷಗಳ ಮುಖಂಡರಿಂದ ಪಡೆದ ಪ್ರತಿಕ್ರಿಯೆ ಇಲ್ಲಿದೆ:

1) ತಂತ್ರಜ್ಞಾನ ಬಳಸುತ್ತೇವೆ: ಟಿ.ಬಿ.ಜಯಚಂದ್ರ, ಕಾಂಗ್ರೆಸ್‌

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯನಿರ್ವಹಣೆ ಭ್ರಷ್ಟಾಚಾರ ಮುಕ್ತವಾಗಿರಬೇಕು, ಸಂಪೂರ್ಣ ಪಾರದರ್ಶಕವಾಗಿರಬೇಕು ಎಂಬುದು ನಮ್ಮ ಗುರಿ. ಈ ಗುರಿ ಸಾಧನೆಗಾಗಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ.

ಈಗಾಗಲೇ ನಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ. ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಿದ್ದೇವೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅನುಸರಿಸುತ್ತಿರುವ ನೇಮಕಾತಿ ವಿಧಾನಗಳನ್ನೇ ಕೆಪಿಎಸ್‌ಸಿಯಲ್ಲೂ ಅಳವಡಿಸಿಕೊಂಡಿದ್ದೇವೆ.

ಲಿಖಿತ ಪರೀಕ್ಷೆಯ ಅಂಕಗಳು ಆಯೋಗದ ಕಾರ್ಯದರ್ಶಿ ಹೊರತುಪಡಿಸಿ ಯಾರಿಗೂ ಗೊತ್ತಿರುವುದಿಲ್ಲ. ಯಾರು ಯಾವ ಅಭ್ಯರ್ಥಿಗಳ ಸಂದರ್ಶನ ಮಾಡುತ್ತಾರೆ ಎಂಬುದು ಕೊನೇ ಗಳಿಗೆವರೆಗೂ ಗೊತ್ತಾಗದಂತೆ ವ್ಯವಸ್ಥೆ ಮಾಡಿದ್ದೇವೆ. ಪರಿಣಾಮವಾಗಿ, ಆಯೋಗದ ವಿರುದ್ಧ ಹಿಂದೆ ಮಾಡಲಾಗುತ್ತಿದ್ದ ಆರೋಪಗಳು ಈಗ ಕೇಳಿ ಬರುತ್ತಿಲ್ಲ.

ಅಧಿಕಾರಿಗಳ ಸೇವಾವಧಿ ಸರಾಸರಿ 30 ವರ್ಷಗಳು. ಅರ್ಹತೆ, ಯೋಗ್ಯತೆ ಮತ್ತು ಪ್ರಾಮಾಣಿಕತೆಗೆ ಮಾನ್ಯತೆ ಸಿಕ್ಕರೆ, ಯಾವುದೇ ಅಭ್ಯರ್ಥಿ ಅಧಿಕಾರಿಯಾಗಿ ಭ್ರಷ್ಟನಾಗುವುದಿಲ್ಲ ಎಂಬ ನಂಬಿಕೆ ನನ್ನದು.

2) ಸ್ವಜನ ಪಕ್ಷಪಾತದಿಂದ ಮುಕ್ತಿ:ಸುರೇಶ್ ಕುಮಾರ್, ಬಿಜೆಪಿ

l ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಕೂಪವಾಗಿರುವ ಲೋಕಸೇವಾ ಆಯೋಗವನ್ನು ಸ್ವಚ್ಛ ಮಾಡುತ್ತೇವೆ.

l ಕರ್ನಾಟಕ ಲೋಕಸೇವಾ ಆಯೋಗದ ಕಳೆದು ಹೋಗಿರುವ ವರ್ಚಸ್ಸನ್ನು ಮರುಸ್ಥಾಪಿಸಿ ಸಂಸ್ಥೆಗೆ ಅಗತ್ಯ ಶಕ್ತಿ ನೀಡಲು ಮೂಲಭೂತ ಸೌಲಭ್ಯಗಳನ್ನು ನೀಡಲಾಗುವುದು.

l ಹೋಟಾ ಸಮಿತಿ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಅನುಷ್ಠಾನಕ್ಕೆ ತರಲಾಗುವುದು.

l ಪರಿಣಾಮಕಾರಿಯಾದ ನೇಮಕಾತಿಯ ಮೂಲಕ ಸಾರ್ವಜನಿಕ ಸೇವೆ ಉತ್ತಮಗೊಳಿಸಲು ವಿವಿಧ ಸಂಸ್ಥೆಗಳ ಸಮನ್ವಯ ಅಗತ್ಯ.

l ಆಡಳಿತೇತರ ಕಾರಣಗಳಿಂದಾಗಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ ಆಯೋಗದ ಗುಣಮಟ್ಟಕ್ಕೆ ಪೆಟ್ಟು ಬೀಳುವ ಜೊತೆಗೆ ಅಪಖ್ಯಾತಿಗೂ ವಿಪುಲವಾದ ಅವಕಾಶ ಸಿಗುವಂತಾಗಿದೆ. ಆದುದರಿಂದ ಈಗ ಹೆಚ್ಚಳ ಮಾಡಿರುವ ಆಯೋಗದ ಸದಸ್ಯರ ಸಂಖ್ಯೆಯನ್ನು ಈಗಿರುವ 13ರಿಂದ 7ಕ್ಕೆ ಇಳಿಸಲಾಗುವುದು.

l ಅಭ್ಯರ್ಥಿಗಳನ್ನು ಸಂದರ್ಶನ/ ವ್ಯಕ್ತಿತ್ವ ಪರೀಕ್ಷೆಗೆ ಕರೆಯಲು ಹಾಲಿ ಇರುವ 1:5 ಪ್ರಮಾಣದಿಂದ, ಕೇಂದ್ರ ಲೋಕಸೇವಾ ಆಯೋಗ ಮತ್ತು ಹಲವು ರಾಜ್ಯಗಳ ಲೋಕಸೇವಾ ಆಯೋಗಗಳಲ್ಲಿರುವಂತೆ 1:2 ಅಥವಾ 1:3 ಪ್ರಮಾಣಕ್ಕೆ ಇಳಿಸಲಾಗುವುದು.

3) ಪಾರದರ್ಶಕ ನೇಮಕಾತಿ: ರಮೇಶ್ ಬಾಬು, ಜೆಡಿಎಸ್‌

l ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆಯನ್ನು ಪಾರದರ್ಶಕವಾಗಿ ಮಾಡಲಾಗುವುದು. ದಕ್ಷರು, ಪ್ರಾಮಾಣಿಕರನ್ನೇ ನೇಮಿಸಲಾಗುವುದು.

l ಹೋಟಾ ಸಮಿತಿ ವರದಿಯನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಲಾಗುವುದು.

l ಪ್ರತಿ ವರ್ಷವೂ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು.

l ಬೇರೆ ಬೇರೆ ಇಲಾಖೆಗಳು ನೇರವಾಗಿ ನೇಮಕಾತಿ ಮಾಡಿಕೊಳ್ಳುವುದನ್ನು ತಪ್ಪಿಸಲಾಗುವುದು. ಎಲ್ಲ ನೇಮಕಾತಿಗಳನ್ನು ಆಯೋಗದ ಮೂಲಕವೇ ನಡೆಸಲಾಗುವುದು. ನೇಮಕಾತಿ ಪ್ರಕ್ರಿಯೆಯನ್ನು ನಿಷ್ಪಕ್ಷಪಾತವಾಗಿ ನಡೆಸಲಾಗುವುದು. ಆಯೋಗದ ಮೇಲಿನ ಕಳಂಕವನ್ನು ತೊಡೆದು ಹಾಕಲಾಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.