ಶುಕ್ರವಾರ, ಡಿಸೆಂಬರ್ 13, 2019
19 °C

ಕಸುಬುದಾರಿಕೆಯ ಕಥನದಲ್ಲಿ ವ್ಯಂಗ್ಯದ ಸೂಜಿಮೊನೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಕಸುಬುದಾರಿಕೆಯ ಕಥನದಲ್ಲಿ ವ್ಯಂಗ್ಯದ ಸೂಜಿಮೊನೆ

ಚಿತ್ರ: ಬ್ಲ್ಯಾಕ್‌ಮೇಲ್ (ಹಿಂದಿ)

ನಿರ್ಮಾಣ: ಭೂಷಣ್ ಕುಮಾರ್, ಕಿಶನ್ ಕುಮಾರ್, ಅಭಿನಯ್ ದೇವ್, ಅಪೂರ್ವ ಸೆನ್ ಗುಪ್ತ

ನಿರ್ದೇಶನ: ಅಭಿನಯ್ ದೇವ್

ತಾರಾಗಣ: ಇರ್ಫಾನ್ ಖಾನ್, ಕೀರ್ತಿ ಕುಲ್ಹಾರಿ, ಅರುಣೋದಯ್ ಸಿಂಗ್, ದಿವ್ಯಾ ದತ್ತ, ಓಮಿ ವೈದ್ಯ

***

‘ಬ್ಲ್ಯಾಕ್ ಕಾಮಿಡಿ’ ಕುರಿತು ಅತೀವ ಮೋಹವುಳ್ಳ ನಿರ್ದೇಶಕ ಅಭಿನಯ್ ದೇವ್ ‘ಬ್ಲ್ಯಾಕ್‌ಮೇಲ್’ ಹಿಂದಿ ಸಿನಿಮಾದಲ್ಲಿಯೂ ತಮ್ಮ ಹಳೆಯ ತತ್ವವನ್ನೇ ಉಜ್ಜಿದ್ದಾರೆ (ಅವರ ‘ಡೆಲ್ಲಿ ಬೆಲ್ಲಿ’ ಸಿನಿಮಾ ಕೂಡ ಇದೇ ಜಾಯಮಾನದ್ದು). ಮಧ್ಯಮವರ್ಗದವರ ಆಧುನಿಕ ಬದುಕಿನ ಆರ್ಥಿಕ ಜಂಜಡ, ಭಾವಜಗತ್ತಿನ ತಲ್ಲಣ, ವ್ಯಭಿಚಾರ, ಟಾಯ್ಲೆಟ್ ಪೇಪರ್‌ಗೆ ಮಾರುಕಟ್ಟೆ ಒದಗಿಸಲು ಪ್ರಯೋಗಿಸುವ ‘ಎಂಬಿಎ ತಂತ್ರ’ ಇವೆಲ್ಲವನ್ನೂ ಅವರು ನಾಟಕೀಯ ರೀತಿಯಲ್ಲಿ, ಹಾಸ್ಯದ ಧಾಟಿಯಲ್ಲಿ ಹರಿಬಿಟ್ಟಿದ್ದಾರೆ.

ಈ ರೀತಿಯ ಚಿತ್ರಕಥೆ ಹೆಣೆಯುವುದು ಹೆಚ್ಚು ಜಾಣ್ಮೆಯನ್ನು ಬೇಡುತ್ತದೆ. ಒಂದು ಆಯಾಮದಲ್ಲಿ ಥ್ರಿಲ್ಲರ್‌ನಂತೆ, ಇನ್ನೊಂದು ಕೋನದಿಂದ ಹಾಸ್ಯದಂತೆ, ಮತ್ತೊಂದು ದೃಷ್ಟಿಯಲ್ಲಿ ಆತ್ಮವಿಮರ್ಶೆಯ ಸೂಜಿಮೊನೆಯಂತೆ ಕಾಣುವ ಚಿತ್ರಕಥೆಯಲ್ಲಿನ ಕಸುಬುದಾರಿಕೆಯನ್ನು ಮೆಚ್ಚಲೇಬೇಕು. ‘ಬಜರಂಗಿ ಭಾಯಿಜಾನ್’ ತರಹದ ಜನಪ್ರಿಯ ಚಲನಚಿತ್ರಕ್ಕೆ ಚಿತ್ರಕಥೆಯ ಕಾಣ್ಕೆ ನೀಡಿದ ಪರ್ವೀಜ್ ಶೇಖ್ ಈ ಸಿನಿಮಾಗೆ ದೃಶ್ಯಗಳನ್ನು ಪೋಣಿಸಿದ್ದಾರೆ. ಪ್ರದ್ಯುಮ್ನ ಸಿಂಗ್ ಮಾಲ್ ಬರೆದಿರುವ ಸಂಭಾಷಣೆ ಕಥನದ ಉದ್ದೇಶಕ್ಕೆ ಅಗತ್ಯವಿರುವ ವ್ಯಂಗ್ಯದ ರೂಹು ಒದಗಿಸಿದೆ.

ಕಥಾನಾಯಕ ದೇವ್ ತನ್ನ ಪತ್ನಿಗೆ ಅಚ್ಚರಿ ನೀಡಲು ನಿರ್ಧರಿಸುತ್ತಾನೆ. ಬುಧವಾರ ಹೂವಿನ ಮಾರುಕಟ್ಟೆಗೆ ರಜಾ. ಅವನು ಹೂಗುಚ್ಛ ಹುಡುಕಿಕೊಂಡು ಹೋಗುವುದು ಸ್ಮಶಾನಕ್ಕೆ. ಅಲ್ಲಿಂದ ಗುಲಾಬಿಗಳ ಗುಚ್ಛ ಹಿಡಿದುಬರುವ ನಾಯಕನಿಗೇ ಅಚ್ಚರಿಯೊಂದು ಎದುರಾಗುತ್ತದೆ. ಅಲ್ಲಿಂದಾಚೆಗಿನದ್ದು ‘ಬ್ಲ್ಯಾಕ್‌ಮೇಲ್ ಡ್ರಾಮಾ’.

ಊಹಾತೀತ ತಿರುವುಗಳಿರುವ ಚಿತ್ರದ ಬಹುತೇಕ ದೃಶ್ಯಗಳು ಮಂದಬೆಳಕಿನಲ್ಲಿ ಇವೆ. ಅರ್ಧ ಪಾವಿನಷ್ಟೂ ಮಾತಾಡದ ನಾಯಕನ ಸುತ್ತ ಇರುವ ಉಳಿದೆಲ್ಲ ಪಾತ್ರಗಳು ಹೆಚ್ಚೇ ನುಡಿಯುತ್ತಿರುತ್ತವೆ. ಅವುಗಳ ಆಂಗಿಕ ಅಭಿನಯವೂ ಢಾಳು. ವಿಡಿಯೊ ಗೇಮ್ ಆಡುವಾಗ ಮನಸ್ಸಿನಲ್ಲಿ ಉತ್ಪಾದನೆಯಾ

ಗಬಹುದಾದ ರಸಗಳನ್ನೇ ಈ ಸಿನಿಮಾ ಉಕ್ಕಿಸುತ್ತದೆ. ಅದಕ್ಕಾಗಿ ಆರಿಸಿಕೊಂಡ ಮಾರ್ಗದ ನೈತಿಕ ಪ್ರಶ್ನೆಯನ್ನು ಮಾತ್ರ ಬದಿಗಿಡಬೇಕು. ಮಧ್ಯಮವರ್ಗದ ಹತಾಶೆಯು ಅಪರಾಧ ಕೃತ್ಯ ಎಸಗುವ ಮನಸ್ಥಿತಿ ಸೃಷ್ಟಿಸಿ, ಟೈ ಕಟ್ಟಿಕೊಂಡು ನಾಜೂಕಾಗಿ ನಿಲ್ಲಬಲ್ಲ ಆಕೃತಿಯಾಗಿ ಮೂಡುವ ರೂಪಕ ಬೆಚ್ಚಿಬೀಳಿಸುತ್ತದೆ.

ಅಮಿತ್‌ ತ್ರಿವೇದಿ ಹಿನ್ನೆಲೆ ಸಂಗೀತ ಸಿನಿಮಾದ ಗತಿವರ್ಧಕವಾಗಿ ಕೆಲಸ ಮಾಡಿದೆ. ಉದ್ದಕ್ಕೂ ಕೇಳಿಸುವ ರ‍್ಯಾಪ್ ಹಾಡು ಹಳ್ಳ–ಗುಂಡಿಗಳ ರಸ್ತೆಯಂಥ ಮನಸ್ಥಿತಿಯನ್ನು ಬಿಂಬಿಸುವಷ್ಟು ಶಕ್ತವಾಗಿದೆ.

ಈಗ ಅಪರೂಪದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಎಂಥ ಪಾತ್ರಗಳಿಗೂ ಹೊಸ ಪ್ರಭೆ ನೀಡಬಲ್ಲರು ಎನ್ನುವುದಕ್ಕೆ ಈ ಸಿನಿಮಾದಲ್ಲೂ ಸಾಕಷ್ಟು ಉದಾಹಣೆಗಳು ಸಿಗುತ್ತವೆ. ಕಣ್ಣಿನಲ್ಲಿ ಮಾತ್ರ ನಟಿಸಬೇಕು ಎಂಬ ಅವರ ಸಂಕಲ್ಪಕ್ಕೆ ಹ್ಯಾಟ್ಸಾಫ್. ಅಮೆರಿಕನ್ ಶೈಲಿಯ ಇಂಗ್ಲಿಷ್‌ನಲ್ಲಿ ಮಾತನಾಡುವ ಓಮಿ ವೈದ್ಯ ಮೆಚ್ಚಬಹುದಾದ ಹಾಸ್ಯ ಪ್ರತಿಭೆ. ಕೀರ್ತಿ ಕುಲ್ಹಾರಿ, ಅರುಣೋದಯ್ ಸಿಂಗ್, ದಿವ್ಯಾ ದತ್ತ ಎಲ್ಲರೂ ಇವರಿಬ್ಬರ ಅಭಿನಯ ಚಾತುರ್ಯದ ಎದುರು ಮಂಕಾಗಿ ಕಾಣುತ್ತಾರೆ.

ಪ್ರತಿಕ್ರಿಯಿಸಿ (+)