ಬುಧವಾರ, ಡಿಸೆಂಬರ್ 11, 2019
15 °C
ಹಾವೇರಿ ವಿಕಾಸಪರ್ವ ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ

ಜನರೇ ಹೈಕಮಾಂಡ್: ಪರ್ಸೆಂಟೇಜ್ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರೇ ಹೈಕಮಾಂಡ್: ಪರ್ಸೆಂಟೇಜ್  ಇಲ್ಲ

ಹಾವೇರಿ: ‘ನಮಗೆ ಕರ್ನಾಟಕದ ಜನರೇ ಹೈಕಮಾಂಡ್ ಆಗಿದ್ದು, ‘ಪರ್ಸೆಂಟೇಜ್’ ಸಲ್ಲಿಸಬೇಕಾಗಿಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಜೆಡಿಎಸ್ ಆಯೋಜಿಸಿದ ‘ವಿಕಾಸ ಪರ್ವ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ‘10 ಪರ್ಸೆಂಟ್’ ಸರ್ಕಾರ ಹಾಗೂ ಕೇಂದ್ರದಲ್ಲಿ ಬಿಜೆಪಿ ‘90 ಪರ್ಸೆಂಟ್’ ಸರ್ಕಾರ ನಡೆಸುತ್ತಿದೆ ಎಂದು ಪರಸ್ಪರ ಆರೋಪಿಸಿಕೊಂಡಿದ್ದಾರೆ. ಆದರೆ, ನಮಗೆ ನೀವೇ ಹೈಕಮಾಂಡ್ ಆಗಿರುವ ಕಾರಣ ಪರ್ಸೆಂಟೇಜ್ ಅವಶ್ಯಕತೆ ಇಲ್ಲ’ ಎಂದರು.‘ನಾನು ನಿಮ್ಮ ಮನೆ ಸೇವಕನಾಗಬೇಕೇ ಹೊರತು, ಬಿಜೆಪಿ ಅಥವಾ ಕಾಂಗ್ರೆಸ್ ಮನೆ ಬಾಗಿಲು ಕಾಯುವಂತಹ ಸಮ್ಮಿಶ್ರ ಸರ್ಕಾರದ ಸ್ಥಿತಿ ಬೇಡ’ ಎಂದರು.

‘ಎಚ್‌.ಡಿ. ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಟ್ಟರೂ, ಅನಂತಕುಮಾರ್ ಮತ್ತು ಕೆ.ಎಸ್.ಈಶ್ವರಪ್ಪ ಪಿತೂರಿಯಿಂದ ತಪ್ಪಿತು ಎಂದು ಬಿ.ಎಸ್.ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಆದರೂ, ನೀವು ನನಗೆ ಶಿಕ್ಷೆ ಕೊಟ್ಟಿರಿ. ನೀವು ನನ್ನನ್ನು 11 ವರ್ಷ ಅಧಿಕಾರದಿಂದ ದೂರವಿಟ್ಟರೂ, ನಾನು ನಿಮ್ಮ ಬಗ್ಗೆ ಕಾಳಜಿ ವಹಿಸಿದ್ದೇನೆ. ಈಗ ಅವಕಾಶ ನೀಡಿ’ ಎಂದರು.

‘ಹಾವೇರಿಯಲ್ಲಿ ಪಕ್ಷಕ್ಕೆ ಶಕ್ತಿ ಇಲ್ಲ. ಆದರೆ, ಈ ಬಾರಿ 3ರಿಂದ 4 ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಶಕ್ತಿ ನೀಡಿ ಎಂದು ಮನವಿ ಮಾಡಲು ಬಂದಿದ್ದೇನೆ. ನಿಮಗೆ ಜಾತಿ ವ್ಯಾಮೋಹದ ಪಕ್ಷಗಳು ಬೇಕಾ? ರೈತರ ರಕ್ಷಣೆ ಮಾಡುವ ಜೆಡಿಎಸ್ ಬೇಕಾ? ಎಂದು ನೀವೇ ನಿರ್ಧರಿಸಿ’ ಎಂದರು.‘ಗೋಹತ್ಯೆ ನಿಷೇಧ’ದ ಬಗ್ಗೆ ಬೊಬ್ಬೆ ಹೊಡೆಯುವ ಬಿಜೆಪಿ ಮತ್ತು ಆರ್‌ಎಸ್ಎಸ್ ನಾಯಕರು ವಯಸ್ಸಾದ ಹಸುಗಳಿಗೆ ಹುಲ್ಲು, ನೀರು ನೀಡಿದವರಲ್ಲ. ಅಷ್ಟೊಂದು ಆದ್ಯತೆಯನ್ನು ವೃದ್ಧ ತಂದೆ –ತಾಯಿಗಳ ಬಗ್ಗೆ ನೀಡುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ಹಿರಿಯ ನಾಗರಿಕರಿಗೆ ತಿಂಗಳಿಗೆ ₹ 5 ಸಾವಿರ ಮಾಸಾಶನ ನೀಡಲಾಗುವುದು’ ಎಂದರು.

‘ಕೇಂದ್ರದ ಬಿಜೆಪಿ ಸರ್ಕಾರವು ಮಹದಾಯಿ ನೀರು ಕೊಡಿಸಲಿಲ್ಲ. ಇತ್ತ ರಾಜ್ಯದ ಕಾಂಗ್ರೆಸ್ ಸರ್ಕಾರವು ನೀರು ಕೇಳಿದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿತು’ಎಂದು ಆರೋಪಿಸಿದರು.

‘ಬಿಜೆಪಿ ಆಡಳಿತದಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್‌ ನಡೆಯಿತು. ಸಾಲ ಮನ್ನಾ ಮಾಡುವುದೇ ಇಲ್ಲ ಎಂದು ಘೋಷಿಸಿತು.  ಈಗ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಪರೀಕ್ಷಿಸಲು ಮುಷ್ಟಿ ಅಕ್ಕಿ ಅಭಿಯಾನ ನಡೆಸುತ್ತಿದ್ದಾರೆ. ರೈತರ ಮನೆಯಲ್ಲಿ ಇನ್ನೂ ಅಕ್ಕಿ ಉಳಿದಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ’ ಎಂದು ದೂರಿದರು.

‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮೂಲಕ ರೈತರ ದರೋಡೆ ಮಾಡಲಾಗುತ್ತಿದೆ. ರೈತರಿಂದ ಕಂತು ಪಾವತಿಸಿಕೊಳ್ಳುತ್ತಿದ್ದಾರೆಯೇ

ಹೊರತು, ಪರಿಹಾರದ ಹಣ ಸಮರ್ಪಕವಾಗಿ ನೀಡುತ್ತಿಲ್ಲ’ ಎಂದು ಆರೋಪಿಸಿದ ಅವರು, ಇಂತಹ ಬಿಜೆಪಿ ಮತ್ತು ಕಾಂಗ್ರೆಸ್‌ ಅನ್ನು ಬೆಂಬಲಿಸುವವರನ್ನು ದೇವರೇ ಕಾಪಾಡಬೇಕು’ ಎಂದರು.

ಹಾವೇರಿ: ಹೆಲಿಕಾಪ್ಟರ್ ಮೂಲಕ ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್‌ಗೆ ಬಂದಿಳಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ನೇರವಾಗಿ ನಗರದ ಕಾಗಿನಲೆ ಕ್ರಾಸ್‌ನಲ್ಲಿರುವ ಹಜರತ್‌ ಮೆಹಬೂಬ್‌ ಸುಭಾನಿ ದರ್ಗಾಕ್ಕೆ ಭೇಟಿ ನೀಡಿ, ಸಮಾಧಿಗೆ ಗಲೇಫ್‌ (ಚಾದರ) ಸಮರ್ಪಿಸಿ ಗುಲಾಬಿ ಹೂಗಳನ್ನು ಹಾಕಿ ಪ್ರಾರ್ಥಿಸಿದರು. ದರ್ಗಾ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಹುಕ್ಕೇರಿಮಠಕ್ಕೆ ಭೇಟಿ ನೀಡಿದ ಅವರು ಲಿಂ. ಶಿವಬಸವ ಸ್ವಾಮೀಜಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಪೀಠಾಧ್ಯಕ್ಷ ಸದಾಶಿವ ಸ್ವಾಮೀಜಿ ಭೇಟಿ ಮಾಡಿ, ಆಶೀರ್ವಾದ ಪಡೆದರು.

ಅಲ್ಲಿಂದ, ಕ್ಷೇತ್ರದ ಪಕ್ಷದ ಅಭ್ಯರ್ಥಿ ಡಾ.ಸಂಜಯ್‌ ಡಾಂಗೆ ಜೊತೆ ‘ವಿಕಾಸ ವಾಹಿನಿ’ ಬಸ್ ಮೂಲಕ ಮೆರವಣಿಗೆಯಲ್ಲಿ ಬಂದರು. ಮಹಿಳಾ ಝಾಂಜ್‌ ಹಾಗೂ ಡೊಳ್ಳಿನ ಮೇಳವು ಮೆರವಣಿಗೆಯಲ್ಲಿ ಗಮನ ಸೆಳೆಯಿತು. ದಾರಿಯುದ್ದಕ್ಕೂ ಎಚ್‌ಡಿಕೆ ಅಭಿಮಾನಿಗಳು ಹೂವು, ಹಾರ ಹಾಕುವ ಮೂಲಕ ಅಭಿಮಾನ ಮೆರೆದರು. ಮೆರವಣಿಗೆ ಮಹಾತ್ಮ ಗಾಂಧಿ ವೃತ್ತಕ್ಕೆ ತಲುಪಿದಾಗ, ಹಾವೇರಿಯ ಸುಪ್ರಸಿದ್ಧ ಯಾಲಕ್ಕಿಯ ಬೃಹತ್‌ ಮಾಲೆಯನ್ನು ಕ್ರೇನ್‌ ಮೂಲಕ ಹಾಕಲಾಯಿತು.ಜನರ ಘೋಷಣೆಗಳ ಮಧ್ಯೆ ಮೆರವಣಿಗೆಯು ಸಭಾ ಕಾರ್ಯಕ್ರಮದ ಮುನ್ಸಿಪಲ್ ಹೈಸ್ಕೂಲ್‌ ತನಕ ಸಾಗಿ ಬಂತು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ, ಉಮೇಶ ತಳವಾರ ಮತ್ತಿತರರು ಇದ್ದರು.

**

ನಾನು ರಾಜಕೀಯ ಘಟನೆಯ ಕಾರಣ ಮುಖ್ಯಮಂತ್ರಿ ಆಗಿದ್ದೆ. ಈಗ ಬಹುಮತ ನೀಡಿದರೆ ಕೊಟ್ಟ ಮಾತು ಈಡೇರಿಸುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಆಗುವುದಿಲ್ಲ – ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್, ರಾಜ್ಯ ಘಟಕದ ಅಧ್ಯಕ್ಷ.

**

ಪ್ರತಿಕ್ರಿಯಿಸಿ (+)