ಶುದ್ಧ ಕುಡಿಯುವ ನೀರಿನ ಘಟಕ ಸದಾ ದುರಸ್ತಿ

ಮಂಗಳವಾರ, ಮಾರ್ಚ್ 26, 2019
29 °C
₹20 ಲಕ್ಷ ವೆಚ್ಚದ ನೀರಿನ ಘಟಕ, 4 ತಿಂಗಳಾದರೂ ದುರಸ್ತಿ ಮಾಡದಿರುವುದಕ್ಕೆ ಜನರ ಆಕ್ರೋಶ

ಶುದ್ಧ ಕುಡಿಯುವ ನೀರಿನ ಘಟಕ ಸದಾ ದುರಸ್ತಿ

Published:
Updated:
ಶುದ್ಧ ಕುಡಿಯುವ ನೀರಿನ ಘಟಕ ಸದಾ ದುರಸ್ತಿ

ಬ್ಯಾಡಗಿ: ತಾಲ್ಲೂಕಿನ ಕಾಗಿನೆಲೆ ಹೋಬಳಿ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಹೆಚ್ವಾಗಿದ್ದು, ನಿರ್ಮಿತಿ ಕೇಂದ್ರ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸದಾ ದುಸ್ತಿತಿಯಲ್ಲಿ ಇರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.

ಕಾಗಿನೆಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ₹20 ಲಕ್ಷ ವೆಚ್ಚದಲ್ಲಿ ಅಳವಡಿಸಿದ ಶುದ್ಧ ಕುಡಿವ ನೀರಿನ ಘಟಕ, ತಿಂಗಳಲ್ಲಿಯೇ ಎರಡ್ಮೂರು ಬಾರಿ ರಿಪೇರಿಗೆ ಬಂದಿದೆ. ಹೀಗಾಗಿ, ಹೊರ ರೋಗಿಗಳಿಗೆ ಕುಡಿಯುವ ನೀರು ದೊರೆಯದೆ ಇರುವುದಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

‘ಕಳೆದ 4 ತಿಂಗಳಿಂದ ಘಟಕ ದುರಸ್ತಿಯಲ್ಲಿದ್ದು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಗುತ್ತಿಗೆದಾರರು ಅಳವಡಿಸಿರುವ ಯಂತ್ರಗಳು ಕಳಪೆಯಾಗಿವೆ ಎನ್ನುವುದಕ್ಕೆ ಇದೊಂದು ಜೀವಂತ ಸಾಕ್ಷಿಯಾಗಿದೆ. ಘಟಕ ದುರಸ್ತಿ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ರೈತ ಮುಖಂಡ ಎಂ.ಎನ್‌.ನಾಯಕ ಆರೋಪಿಸಿದರು.

‘ಏಪ್ರಿಲ್‌ನಲ್ಲಿ ಬಿಸಿಲಿನ ಝಳಕ್ಕೆ ಜನರು ಬೆಂದು ಹೋಗಿದ್ದು, ರೋಗಿಗಳ ಪಾಡು ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ’ ಎಂದು ಗ್ರಾಮದ ನಿವಾಸಿ ಪೈರೋಜ ತಿಳವಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ಕೊಳವೆ ಬಾವಿಗಳ ನೀರು ಹೆಚ್ಚು ಸವಳಾಗಿರುವುದರಿಂದ ಜನರು ಶುದ್ಧ ನೀರಿನ ಘಟಕಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ರೋಗಿಗಳು ಕುಡಿಯುವ ನೀರಿಗಾಗಿ ಪೊಲೀಸ್‌ ಠಾಣೆ ಪಕ್ಕದಲ್ಲಿ ಅಥವಾ ಇಂಗಳಗೊಂದಿ ಪ್ಲಾಟ್‌ಗೆ ಹೋಗಬೇಕಾಗಿದೆ’ ಎಂದು ಸುಜಾವುದ್ದೀನ್ ನಾಯಕ ತಿಳಿಸಿದರು.

ಸಾಕಷ್ಟು ಬಾರಿ ರಿಪೇರಿ: ‘ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಈಗಾಗಲೇ 7–8 ಬಾರಿ ರಿಪೇರಿ ಮಾಡಿಸಲಾಗಿದೆ. ಕಿಡಿಗೇಡಿಗಳು ಅದರ ಕೇಬಲ್‌ ಹರಿದು ಕಿತ್ತು ಹಾಕುವುದರಿಂದ ಅದರ ಕಾಯಿನ್‌ ಹಾಕುವ ಯಂತ್ರ ಕೆಟ್ಟಿದೆ. ಒಂದೆರಡು ಬಾರಿ ಗ್ಲಾಸ್‌ ಸಹ ಒಡೆದಿದ್ದರು. ಅದನ್ನು ರಿಪೇರಿ ಮಾಡಿಸಲಾಗಿದೆ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಾಂತಾ ಕುದರಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲ್ತಿಯಲ್ಲಿವೆ. ಇಂಗಳಗೊಂದಿ ಪ್ಲಾಟ್‌ನಲ್ಲಿ ಒಂದು ಘಟಕ ಇರುವುದರಿಂದ ಜನರ ದಟ್ಟಣಿ ಅಷ್ಟೊಂದು ಆಗುವುದಿಲ್ಲ. ಹೀಗಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಇರುವ ಘಟಕವನ್ನು 3ನೇ ವಾರ್ಡ್‌ಗೆ ಸ್ಥಳಾಂತರಿಸಲು ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಒಂದು ವಾರದೊಳಗೆ ಇಡೀ ಘಟಕವನ್ನು ಸ್ಥಳಾಂತರ ಮಾಡಲಾಗುವುದು’ ಎಂದರು.

ಪ್ರಮೀಳಾ ಹುನಗುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry