ಸ್ಕೂಟರ್ ಹಸ್ತಾಂತರಕ್ಕೆ ನೀತಿ ಸಂಹಿತೆ ಅಡ್ಡಿ!

ಮಂಗಳವಾರ, ಮಾರ್ಚ್ 19, 2019
21 °C
ಕಾರವಾರದ ಮಯೂರವರ್ಮ ವೇದಿಕೆಯ ಗೋದಾಮಿನಲ್ಲಿ ನಿಲುಗಡೆ: ಫಲಾನುಭವಿಗಳಿಗೆ ನಿರಾಸೆ

ಸ್ಕೂಟರ್ ಹಸ್ತಾಂತರಕ್ಕೆ ನೀತಿ ಸಂಹಿತೆ ಅಡ್ಡಿ!

Published:
Updated:
ಸ್ಕೂಟರ್ ಹಸ್ತಾಂತರಕ್ಕೆ ನೀತಿ ಸಂಹಿತೆ ಅಡ್ಡಿ!

ಕಾರವಾರ: ಅಂಗವಿಕಲ ಫಲಾನುಭವಿಗಳಿಗೆ ಸರ್ಕಾರದಿಂದ ನೀಡಲಾಗುವ ತ್ರಿಚಕ್ರ ವಾಹನಗಳ ಹಂಚಿಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಇದರಿಂದ 14 ವಾಹನಗಳು ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯ ಹಿಂಭಾಗದ ಗೋದಾಮಿನಲ್ಲಿ ದೂಳು ಹಿಡಿಯುತ್ತಿವೆ.

ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕಾರವಾರ ತಾಲ್ಲೂಕಿನ ಒಟ್ಟು 14 ಅಂಗವಿಕಲರಿಗೆ ತ್ರಿಚಕ್ರಗಳ ಸ್ಕೂಟರ್‌ಗಳನ್ನು ಮಂಜೂರು ಮಾಡಲಾಗಿತ್ತು. ಇದಕ್ಕಾಗಿ 2017–18ನೇ ಸಾಲಿನಲ್ಲಿ ಶೇ 3ರಷ್ಟು ಅಂಗವಿಕಲರ ಕಾಯ್ದಿಟ್ಟ ನಿಧಿ ಬಳಕೆ ಮಾಡಲಾಗಿತ್ತು. ಈ ಸಂಬಂಧ ಗುತ್ತಿಗೆದಾರರಿಂದ ಪೂರೈಕೆ ಮಾಡಲಾದ ಟವಿಎಸ್ ಜುಪಿಟರ್‌ ಸ್ಕೂಟರ್‌ಗಳಿಗೆ ಹೆಚ್ಚುವರಿ ಎರಡು ಚಕ್ರಗಳ ಜೋಡಣೆ ಬಾಕಿಯಿತ್ತು. ಕಳೆದ ತಿಂಗಳು 27ರಂದು ಅವುಗಳನ್ನು ವಿತರಣೆ ಮಾಡಲು ದಿನಾಂಕವನ್ನೂ ನಿಗದಿ ಮಾಡಲಾಗಿತ್ತು. ಆದರೆ, ಅಂದೇ ನೀತಿಸಂಹಿತೆ ಜಾರಿಯಾದ ಕಾರಣ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು.

ಅಂಕೋಲಾದಲ್ಲಿ ಹಸ್ತಾಂತರ:

ಕಾರವಾರ ತಾಲ್ಲೂಕಿನಲ್ಲಿ ಚುನಾವಣಾ ನೀತಿ ಸಂಹಿತೆ ಅಡ್ಡಿಯಾದರೆ, ಅಂಕೋಲಾದಲ್ಲಿ ಅಂಗವಿಕಲರು ಒಂದು ದಿನ ಮೊದಲೇ ಸ್ಕೂಟರ್‌ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲಿ ಶಾಸಕ ಸತೀಶ ಸೈಲ್ ಅವರು ಮಾರ್ಚ್ 26ರಂದೇ ವಾಹನಗಳ ಕೀಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದ್ದರು.

ನಾಯಿಗಳ ಹಾವಳಿ:

ವಾಹನ ಪೂರೈಕೆಯ ಗುತ್ತಿಗೆ ಪಡೆದಿದ್ದವರು ವಾಹನಗಳನ್ನು ತಂದು ತಹಶೀಲ್ದಾರ್ ಕಚೇರಿಯ ಹಿಂಭಾಗದಲ್ಲಿ ನಿಲ್ಲಿಸಿದ್ದರು. ಆದರೆ, ಅಲ್ಲಿ ಅವುಗಳಿಗೆ ಸೂಕ್ತ ರಕ್ಷಣೆಯಿಲ್ಲದೇ ಬೀದಿನಾಯಿಗಳು ಹಾನಿ ಮಾಡಲು ಆರಂಭಿಸಿದ್ದವು. ಸೀಟಿನ ಮೇಲೆ ಗಲೀಜು ಮಾಡಿ, ಸ್ಪಾಂಜ್‌ ಅನ್ನು ಕಚ್ಚಿ ಹರಿದು ಹಾಕಿದ್ದವು. ಹೀಗಾಗಿ ಸ್ಕೂಟರ್‌ಗಳನ್ನು ಮಯೂರವರ್ಮ ವೇದಿಕೆಯ ಗೋದಾಮಿಮನಲ್ಲಿ ಇಡಲಾಗಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕವಷ್ಟೇ ಅವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು. ಅಲ್ಲಿಯವರೆಗೆ ಗೋದಾಮಿನಲ್ಲಿ ಸುರಕ್ಷಿತವಾಗಿ ಇಡಲಾಗುವುದು ಎಂದು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

**

ಮಾರ್ಚ್ 27ರಂದು ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ಬೈಕ್‌ಗಳನ್ನು ವಿತರಿಸಲು ದಿನಾಂಕ ನಿಗದಿಯಾಗಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣ ವಿತರಣೆ ಸಾಧ್ಯವಾಗಿಲ್ಲ – ಶ್ರೀದೇವಿ ಭಟ್, ಉಪ ತಹಶೀಲ್ದಾರ್

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry