ಸೋಮವಾರ, ಆಗಸ್ಟ್ 10, 2020
26 °C
ಜಾಗೃತಿ ಅಭಿಯಾನದಲ್ಲಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಕಳವಳ

ವಚನಭ್ರಷ್ಟರಾಗಿರುವ ಜನಪ್ರತಿನಿಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಚನಭ್ರಷ್ಟರಾಗಿರುವ ಜನಪ್ರತಿನಿಧಿಗಳು

ಕೋಲಾರ: ‘ಎಲ್ಲರನ್ನು ಸಮನಾಗಿ ಕಾಣುತ್ತೇವೆ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸುವ ಜನಪ್ರತಿನಿಧಿಗಳು ವಚನ ಭ್ರಷ್ಟರಾಗಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ ವ್ಯಕ್ತಪಡಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಪಾಯದಲ್ಲಿದೆ ಬಯಲುಸೀಮೆ’ ಕುರಿತ ಸತ್ಯಶೋಧನೆ ಜನಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ಜನಪ್ರತಿನಿಧಿಗಳ ಮಾತು ಮತ್ತು ಕೃತಿಗೆ ಸಂಬಂಧವೇ ಇಲ್ಲವಾಗಿದೆ’ ಎಂದು ವಿಷಾದಿಸಿದರು.

‘ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ನ್ಯಾಯಮೂರ್ತಿಗಳು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಾಮಾಜಿಕ ನ್ಯಾಯ ಒದಗಿಸುತ್ತೇವೆ. ತಾರತಮ್ಯ ಮಾಡದೆ ಆಡಳಿತ ನಡೆಸುತ್ತೇವೆ ಎಂದು ಹೇಳುತ್ತಾರೆ. ಆದರೆ, ನುಡಿದಂತೆ ನಡೆಯುವುದಿಲ್ಲ. ಬಹುಪಾಲು ಜನಪ್ರತಿನಿಧಿಗಳು ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ನಡೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರಗಳು ರೈತರಿಗೆ ಸಾಲ, ಸಹಾಯಧನ ಸೌಲಭ್ಯ ಒದಗಿಸುವ ಬದಲು ನೀರಾವರಿ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸಬೇಕು. ರೈತರು ದೇಶದ ಬೆನ್ನೆಲುಬು ಎನ್ನುವ ಜನಪ್ರತಿನಿಧಿಗಳು ಆ ಬೆನ್ನೆಲುಬನ್ನೇ ಮುರಿದಿದ್ದಾರೆ. ಅಧಿಕಾರದ ಗದ್ದುಗೆ ಏರಿದ ಬಳಿಕ ರೈತರು, ಗ್ರಾಮೀಣ ಭಾಗದ ಜನರತ್ತ ತಿರುಗಿಯೂ ನೋಡುವುದಿಲ್ಲ’ ಎಂದರು.

ಅರಣ್ಯರೋದನ: ‘ಅವಿಭಜಿತ ಕೋಲಾರ ಜಿಲ್ಲೆಯ ಜನ ಹಲವು ದಶಕಗಳಿಂದ ಶಾಶ್ವತ ನೀರಾವರಿ ಯೋಜನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಜನರ ಕೂಗು ಅರಣ್ಯರೋದನವಾಗಿದೆ. ಜನ ನ್ಯಾಯ ಒದಗಿಸಿದ ರಾಜಕೀಯ ಪಕ್ಷಗಳನ್ನು ಚುನಾವಣೆ ಸಂದರ್ಭದಲ್ಲಿ ಪ್ರಶ್ನಿಸಬೇಕು. ರಾಜಕಾರಣಿಗಳು ಪ್ರಶ್ನೆಗೆ ಉತ್ತರಿಸಿದ ನಂತರವಷ್ಟೇ ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಶಾಶ್ವತ ನೀರಾವರಿಗೆ ಸಂಬಂಧಿಸಿದಂತೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಗೊತ್ತಿರಬೇಕಾದವರೆ ವಿಷಯ ತಿಳಿದುಕೊಂಡಿಲ್ಲ. ತಿಳಿಯುವ ಪ್ರಯತ್ನವನ್ನೂ ಮಾಡಿಲ್ಲ. ರಾಜಕಾರಣಿಗಳಿಗೆ ನೀರಿನ ಸಮಸ್ಯೆ ಬಗೆಹರಿಸುವ ಕಾಳಜಿಯೂ ಇಲ್ಲ. ರಾಜ್ಯವನ್ನು ಪ್ರತಿನಿಧಿಸುವ ಸಂಸದರು, ಸಚಿವರು ಕೇಂದ್ರ ಸರ್ಕಾರದ ಮಟ್ಟದಲ್ಲಿ ನೀರಿನ ಸಮಸ್ಯೆ ಬಗ್ಗೆ ಚಕಾರ ಎತ್ತುವುದಿಲ್ಲ’ ಎಂದು ಕಿಡಿಕಾರಿದರು.

ಅನ್ಯಾಯವಾಗಿದೆ: ‘ಜಿಲ್ಲೆಯ ಜನರಿಗೆ ಅನ್ಯಾಯವಾಗಿದೆ. ನ್ಯಾಯ ಒದಗಿಸಿ ಕೊಡದವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರಯೋಜನವೇನು? ನೀರಿಗಾಗಿ ಹೋರಾಟ ಮಾಡುವವರ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಸುವುದು ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಜನರಿಗೆ ಅನ್ಯಾಯ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಿ. ಅದನ್ನು ಬಿಟ್ಟು ನೀರಾವರಿ ವಿಷಯದಲ್ಲಿ ಈ ಭಾಗಕ್ಕೆ ಅನ್ಯಾಯ ಆಗಿರುವುದರ ವಿರುದ್ಧ ಹೋರಾಟ ಮಾಡಿದವರ ಮೇಲೆ ದೂರು ದಾಖಲಿಸುವ ಚಾಳಿಯನ್ನು ಜನಪ್ರತಿನಿಧಿಗಳು ಬಿಡಬೇಕು’ ಎಂದು ಹೇಳಿದರು.

ಸಮಾನತೆ ಇಲ್ಲ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೈತರಿಗೆ ಸಮಾನತೆ ಇಲ್ಲವಾಗಿದೆ. ಕೈಗಾರಿಕೆಗಳಿಗೆ 24 ತಾಸು ವಿದ್ಯುತ್ ಪೂರೈಕೆ ಮಾಡಬೇಕಾದ ಸರ್ಕಾರ 6 ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿದೆ. ರೈತರಿಗೆ ಮೂಲ ಹಕ್ಕುಗಳನ್ನು ಕೊಟ್ಟಿಲ್ಲ. ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಹ ಸಿಗುತ್ತಿಲ್ಲ. ಹೀಗೆ ಹಲವು ವಿಷಯಗಳಲ್ಲಿ ಅನ್ಯಾಯ ಮಾಡಿರುವ ಸರ್ಕಾರದ ವಿರುದ್ಧ ರೈತರು ಸಿಡಿದೇಳಬೇಕು. ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳು ಒಂದೇ ಆಗಿವೆ. ವಿದೇಶದಿಂದ ಕಪ್ಪು ಹಣ ತರುತ್ತೇವೆ. ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹ 15 ಸಾವಿರ ಜಮಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲಿಲ್ಲ’ ಎಂದು ಟೀಕಿಸಿದರು.

ಸಂದೇಶ ರವಾನಿಸಿ: ‘ಬಯಲುಸೀಮೆ ಜಿಲ್ಲೆಗಳಲ್ಲಿ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸದಿದ್ದರೆ ಈ ಭಾಗದ ಜನರ ಬಂಡಾಯ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ರಾಜಕೀಯ ಪಕ್ಷಗಳಿಗೆ ರವಾನಿಸಬೇಕು’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.

‘ನೀರಾವರಿ ತಜ್ಞ ಪರಮಶಿವಯ್ಯ ಅವರ ವರದಿ ಸ್ಮಶಾನ ಸೇರಿದೆ. ಮತ್ತೊಂದೆಡೆ ಸರ್ಕಾರಿ ಸಾಮ್ಯದ ಸಂಸ್ಥೆಗಳ ವರದಿಗಳು ದಶಕಗಳಿಂದ ದೂಳು ತಿನ್ನುತ್ತಿವೆ. ನದಿ ಜೋಡಣೆ ಸಂಬಂಧ ಸರ್ಕಾರ ಗಂಭೀರ ಚಿಂತನೆ ನಡೆಸಿಲ್ಲ. ಬಯಲುಸೀಮೆ ಅಭಿವೃದ್ಧಿ ಮಂಡಳಿ, ನೀರಾವರಿ ತಾಂತ್ರಿಕ ಸಲಹಾ ಸಮಿತಿಯನ್ನು ಕಡೆಗಣಿಸಲಾಗಿದೆ’ ಎಂದು ಆಕ್ರೋಶ

ವ್ಯಕ್ತಪಡಿಸಿದರು.

‘ರಾಜಕಾರಣಿಗಳಿಗೆ ಚಿತ್ತ ಶುದ್ಧಿ ಮತ್ತು ಇಚ್ಚಾಶಕ್ತಿ ಇದ್ದರೆ ಮಾತ್ರ ಸಮಗ್ರ ನೀರಾವರಿ ಯೋಜನೆ ಜಾರಿ ಸಾಧ್ಯ. ಸರ್ಕಾರ ಜಾರಿಗೊಳಿಸಿರುವ ನೀರಾವರಿ ಯೋಜನೆಗಳು ಭ್ರಷ್ಟರನ್ನು ಸೃಷ್ಟಿಸುತ್ತಿವೆ. ಯೋಜನೆಗಳ ಕುರಿತು ಮರು ಅಧ್ಯಯನ ಮಾಡಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಬದಲಿಗೆ ನೀರಾವರಿ ಹೋರಾಟಗಾರರ ನೈತಿಕ ಶಕ್ತಿ ಕುಂದಿಸಿ ಜನರ ದಿಕ್ಕು ತಪ್ಪಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಕೀಲ ಕೆ.ವಿ.ಶಂಕರಪ್ಪ, ನಗರಸಭಾ ಸದಸ್ಯರಾದ ಎಸ್‌.ಆರ್‌.ಮುರಳಿಗೌಡ, ರವೀಂದ್ರ, ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ, ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಹರೀಶ್, ಸಂಚಾಲಕರಾದ ವಿ.ಕೆ.ರಾಜೇಶ್‌, ಪುಟ್ಟರಾಜು, ಜಿ.ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

**

ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ನೀಡುವ ಕಪ್ಪು ಹಣ ಪಡೆದರೂ ಚಿಂತೆಯಿಲ್ಲ. ಆದರೆ ಜನತು ಮತ ಹಾಕುವಾಗ ತುಂಬಾ ಎಚ್ಚರ ವಹಿಸಬೇಕು  – ವಿ.ಗೋಪಾಲಗೌಡ,ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ.

**

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.