ಹಾರನ್‌ ರಹಿತ ಪ್ರದೇಶ ನಿರ್ಧರಿಸಲು ಸದ್ಯವೇ ಆದೇಶ: ಕಮಿಷನರ್‌

7
ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಫೋನ್‌ ಇನ್‌

ಹಾರನ್‌ ರಹಿತ ಪ್ರದೇಶ ನಿರ್ಧರಿಸಲು ಸದ್ಯವೇ ಆದೇಶ: ಕಮಿಷನರ್‌

Published:
Updated:

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಹಾರನ್‌ ರಹಿತ ಪ್ರದೇಶಗಳ ಪಟ್ಟಿಗೆ ಹೊಸ ಪ್ರದೇಶಗಳನ್ನು ಸೇರಿಸಲು ಸಿದ್ಧತೆಗಳು ನಡೆದಿವೆ.

ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ಇನ್‌ ಕಾರ್ಯಕ್ರಮದಲ್ಲಿ, ನಗರದಲ್ಲಿ ಕರ್ಕಶ ಹಾರನ್‌ನಿಂದ ನಾಗರಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದವು. ಈ ಸಂದರ್ಭದಲ್ಲಿ ಮಾತನಾಡಿದ, ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ಅವರು, ವ್ಯಾಕ್ಯೂಮ್‌ ಹಾರನ್‌ ಮಾಡುವ ಬಸ್‌ಗಳಿಗೆ ನೋಟಿಸ್‌ ನೀಡಿ ಹಾರನ್‌ ತೆರವು ಮಾಡುವ ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಿದರು. ಪದೇ ಪದೇ ಸಾರ್ವಜನಿಕರಿಗೆ ತೊಂದರೆ ಕೊಡುವ ಇಂತಹ ಬಸ್‌ಗಳನ್ನು ಅಗತ್ಯವಿದ್ದಲ್ಲಿ ವಶಕ್ಕೆ ಪಡೆಯುವಂತೆಯೂ ಸೂಚಿಸಿದರು.

ನಗರದ ವಾಣಿಜ್ಯ ಪ್ರದೇಶದಲ್ಲಿ 55 ಡಿಸಿಬಲ್‌ ಮತ್ತು ವಸತಿ ಪ್ರದೇಶದಲ್ಲಿ 55 ಡೆಸಿಬಲ್‌ ಹಾರನ್‌ ಹಾಕಲು ಅವಕಾಶವಿದೆ. ಹಾಗಂತ ಪದೇ ಪದೇ ಹಾರನ್‌ ಹಾಕಿ ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ಉಂಟುಮಾಡಬಾರದು. ಶಬ್ದ ಮಾಲಿನ್ಯದ ನಿಯಮಗಳನ್ನು ಉಲ್ಲಂಘಿಸುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಿಸಿಪಿ ಉಮಾ ಪ್ರಶಾಂತ್‌ ಮಾತನಾಡಿ, ನಗರದಲ್ಲಿ ಶಾಲೆ ಮತ್ತು ಆಸ್ಪತ್ರೆಯ ಬಳಿಯ ರಸ್ತೆಯನ್ನು ‘ಹಾರನ್‌ ರಹಿತ ಪ್ರದೇಶ’ ಎಂದು ಗುರುತಿಸಲಾಗಿದೆ. ಇದೀಗ ಇನ್ನಷ್ಟು ಪ್ರದೇಶಗಳನ್ನು ‘ಹಾರನ್‌ ರಹಿತ ಪ್ರದೇಶ’ ಎಂದು ಪರಿಗಣಿಸಿ ಆದೇಶ ಹೊರಡಿಸಲು ಸಿದ್ಧತೆಗಳು ನಡೆದಿವೆ ಎಂದರು.

ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಕರೆ ಮಾಡಿ, ‘ಖಾಸಗಿ ಕಟ್ಟಡಗಳ ಎದುರು ನೋಪಾರ್ಕಿಂಗ್‌ ಎಂಬ ಬೋರ್ಡ್‌ಗಳನ್ನು ಅನಧಿಕೃತವಾಗಿ ಹಾಕಿಕೊಳ್ಳುವ ಅಂಗಡಿ ಮಾಲೀಕರು ಪಾರ್ಕಿಂಗ್‌ಗೆ ಅವಕಾಶವೇ ನೀಡುವುದಿಲ್ಲ’ ಎಂದರು. ಈ ರೀತಿ ಖಾಸಗಿಯಾಗಿ ನೋ ಪಾರ್ಕಿಂಗ್‌ ಬೋರ್ಡ್‌ಗಳನ್ನು ಗುರುತಿಸಿ ಚಿತ್ರೀಕರಣ ಮಾಡಿಕೊಂಡು, ಬಳಿಕ ಅವುಗಳ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ಡಿಸಿಪಿ ವಿವರಿಸಿದರು.

ಕುತ್ತೆತ್ತೂರಿಗೆ 45 ಡಿ ಮತ್ತು 15 ಡಿ ಬಸ್‌ಗಳು ಬೆಳಿಗ್ಗೆ ಮಾತ್ರ ಬರುತ್ತವೆ. ಸಂಜೆ ಹೊತ್ತು ಬರುವುದಿಲ್ಲ ಎಂಬ ದೂರು ವ್ಯಕ್ತವಾಯಿತು. ಹೋಟೆಲ್‌ಗೆ ಪೇಂಟಿಂಗ್‌ ನಡೆಯುತ್ತಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಪೇಂಟು ಚೆಲ್ಲುತ್ತಿದೆ. ಕಾರ್ಮಿಕರಿಗೂ ಸುರಕ್ಷತೆ ಇಲ್ಲ. ರಸ್ತೆಯಲ್ಲಿ ಹಾದು ಹೋಗುವ ವಾಹನಗಳ ಮೇಲೂ ಬಣ್ಣ ಚೆಲ್ಲುತ್ತಿದ್ದಾರೆ ಎಂದು ಸದಾಶಿವ ಅವರು ಆರೋಪಿಸಿದರು. ರೈಲ್ವೆ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ ಹೊರಡಬೇಕು ಎಂದು ಅಭಿಜಿತ್‌ ಆಗ್ರಹಿಸಿದರು.

‘ಎಕ್ಕೂರಿನ ಮೈದಾನದಿಂದ ಸೂಟರ್‌ಪೇಟೆಗೆ ಹೋಗುವ ಹೊಸ ಮಾರ್ಗದಲ್ಲಿ ಗಾಂಜಾ ಸೇದುವ, ಯುವಕ ಯುವತಿಯರು ಅಸಭ್ಯವಾಗಿ ವರ್ತಿಸುವ ಘಟನೆಗಳು ನಡೆಯುತ್ತಿವೆ.

ಇದರಿಂದ ಸ್ಥಳೀಯ ನಿವಾಸಿಗಳು ಮುಜುಗರದ ಪರಿಸ್ಥಿತಿ ಎದುರಿಸುವಂತಾಗಿದೆ. ಈ ಪ್ರದೇಶದಲ್ಲಿ ಪಿಸಿಆರ್‌ ವಾಹನ ನಿಲ್ಲಿಸಬೇಕು’ ಎಂದು ಪ್ರಶಾಂತ್‌ ವಿವರಿಸಿದರು. ಕೆಎಂಸಿ ಆಸ್ಪತ್ರೆ ಎದುರು ಪ್ರಖರ ಎಲ್‌ಇಡಿ ಲೈಟ್‌ನಿಂದಾಗಿ ವಾಹನ ಚಲಾಯಿಸುವುದು ಕಷ್ಟವಾಗುತ್ತಿದೆ ಎಂದು ಅಬ್ದುಲ್‌ ದೂರು ಹೇಳಿಕೊಂಡರು.

ಕೃಷ್ಣ ಭಟ್‌, ಕೃಷ್ಣ ಬೋಂದೆಲ್‌, ಆಸಿಫ್‌, ಹಸನಬ್ಬ, ಸದಾನಂದ ಸುರತ್ಕಲ್‌, ಸದಾಶಿವ ಬಂಗೇರ, ಆಲ್ವಿನ್‌ ಕರೆ ಮಾಡಿ ದೂರು ಹೇಳಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry