ಮಂಗಳವಾರ, ಆಗಸ್ಟ್ 11, 2020
26 °C
ಮಂಗಳೂರು ದಕ್ಷಿಣ ಕ್ಷೇತ್ರ ಚುನಾವಣಾ ಅಧಿಕಾರಿಗಳಿಂದ ಮಾಹಿತಿ

ರಾಜಕೀಯ ಮುಖಂಡರಿಗೆ ನೀತಿ ಸಂಹಿತೆ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಮುಖಂಡರಿಗೆ ನೀತಿ ಸಂಹಿತೆ ಪಾಠ

ಮಂಗಳೂರು: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಜನಪ್ರತಿನಿಧಿಗಳಿಗೆ ಶುಕ್ರವಾರ ಇಲ್ಲಿಯ ಮಹಾನಗರ ಪಾಲಿಕೆಯ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಲಾಯಿತು.

ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಪಕ್ಷಗಳು ಪಾಲಿಸಬೇಕಾದ ನಿಯಮಗಳ ಕುರಿತು ಕ್ಷೇತ್ರದ ಚುನಾವಣಾ ಅಧಿಕಾರಿ ಆ್ಯಂಟನಿ ಮಾರಿಯಾ ಇಮ್ಯಾನುವೆಲ್‌ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಶಬರೀನಾಥ ರೈ ಅವರು ಮಾಹಿತಿ ನೀಡಿದರು.

ಸಾರ್ವಜನಿಕ ಸಭೆ, ಸಂಚಾರ ವ್ಯವಸ್ಥೆ, ಧ್ವನಿವರ್ಧಕಗಳ ಬಳಕೆ, ಭದ್ರತಾ ವ್ಯವಸ್ಥೆ, ಮೆರವಣಿಗೆಯಲ್ಲಿ ಕೊಂಡೊಯ್ಯಬಹುದಾದ ಸಾಮಗ್ರಿಗಳು, ಪ್ರತಿಕೃತಿಗಳ ದಹನದಂತಹ ವಿಷಯಗಳಲ್ಲಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಕನಿಷ್ಠ 48 ಗಂಟೆ ಮುಂಚಿತವಾಗಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಚುನಾವಣಾ ಪ್ರಚಾರ ಅಥವಾ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಡೆಸಲಾಗುವ ಮೆರವಣಿಗೆಗೆ ಸಂಬಂಧಿಸಿದಂತೆ ಆಯಾ ಪೊಲೀಸ್‌ ಠಾಣೆಗಳಿಂದ ಅನುಮತಿ ಪಡೆಯಬೇಕು. ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಯಾವುದೇ ಅನುಮತಿ ಇಲ್ಲ. ಆದರೂ ಮಾಹಿತಿ ನೀಡುವುದು ಉತ್ತಮ ಎಂದರು.

ಪಕ್ಷದ ಅಧಿಕೃತ ಕಚೇರಿಗಳಲ್ಲಿ ಕಾರ್ಯಕರ್ತರು ನಡೆಸುವ ಸಭೆಗಳಿಗೆ ಅನುಮತಿ ಬೇಕಾಗಿಲ್ಲ. ಆದರೆ, ಸಾರ್ವಜನಿಕವಾಗಿ ನಡೆಸುವ ಸಭೆಗಳಿಗೆ ಅನುಮತಿ ಕಡ್ಡಾಯವಾಗಿದೆ. ತಾತ್ಕಾಲಿಕ ಕಚೇರಿಗೂ ಅನುಮತಿ ಪಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಖರ್ಚು–ವೆಚ್ಚ ತಂಡದ ಅಧಿಕಾರಿಯಾಗಿ ಅಶೋಕ್‌ ರಂಜನ್‌, ಮನೋಹರ್‌ ಕಾರ್ಯನಿರ್ವಹಿಸಲಿದ್ದಾರೆ. ಇದಲ್ಲದೇ ಸಂಚಾರಿ ತಂಡ, ಅಂಕಿ–ಅಂಶ ಮೇಲ್ವಿಚಾರಣಾ ತಂಡ, ಮಾದರಿ ನೀತಿ ಸಂಹಿತೆ ತಂಡ, ವಿಡಿಯೊ ಪರಿಶೀಲನಾ ತಂಡ, ವಿಡಿಯೊ ಮೇಲ್ವಿಚಾರಣಾ ತಂಡ, ಸಹಾಯಕ ಖರ್ಚು–ವೆಚ್ಚ ವೀಕ್ಷಣಾ ತಂಡಗಳ ಜತೆಗೆ ಸೆಕ್ಟರ್‌ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಪಾಲಿಕೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ: ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ಪಾಲಿಕೆಯ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ವಿವಿಧ ರೀತಿಯ ಅನುಮತಿಗಳಿಗೆ ಈ ಕಚೇರಿಯನ್ನು ಸಂಪರ್ಕಿಸಬಹುದು. ಸುವಿಧಾ ಆನ್‌ಲೈನ್‌ ವ್ಯವಸ್ಥೆಯಲ್ಲಿಯೂ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು ಎಂದು ಆ್ಯಂಟನಿ ಮರಿಯಾ ತಿಳಿಸಿದರು.

ಕ್ಷೇತ್ರದ ಚುನಾವಣಾ ಅಧಿಕಾರಿ ಆ್ಯಂಟನಿ ಮರಿಯಾ ಇಮ್ಯಾನುವೆಲ್‌ (ಮೊ.ಸಂ. 8277931060), ಸಹಾಯಕ ಚುನಾವಣಾ ಅಧಿಕಾರಿ ಶಬರೀನಾಥ ರೈ (ಮೊ.ಸಂ.9448582084) ಅವರನ್ನು ಸಂಪರ್ಕಿಸಬಹುದು.ಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಸಿಪಿಐ, ಸಿಪಿಎಂ, ಎಸ್‌ಡಿಪಿಐ, ವಿವಿಧ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ಶುಕ್ರವಾರ ನಗರದ ಪಾಲಿಕೆ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಲಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಮಹಾನಗರ ಪಾಲಿಕೆ ಸಿಬ್ಬಂದಿ 500 ಜನರು ಭಾಗವಹಿಸಿದ್ದರು.

ಬೆಳಿಗ್ಗೆ ಪಾಲಿಕೆ ಕಚೇರಿ ಆವರಣದಲ್ಲಿ ಸೇರಿದ ವಿದ್ಯಾರ್ಥಿಗಳು, ಸಿಬ್ಬಂದಿ, ಸರ್ಕಾರೇತರ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ಆರ್. ರವಿ, ಪಾಲಿಕೆ ಆಯುಕ್ತ ಮುಹಮ್ಮದ್‌ ನಜೀರ್ ನೇತೃತ್ವದಲ್ಲಿ ಮತದಾನದ ಮಹತ್ವ ಸಾರುವ ಭಿತ್ತಿಪತ್ರಗಳೊಂದಿಗೆ ರಸ್ತೆಯ ಎದುರು ಮಾನವ ಸರಪಳಿ ನಿರ್ಮಿಸಿದರು.

ಪಾಲಿಕೆ ಎದುರಿನ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಪ್ರಯಾಣಿಕರು, ಚಾಲಕರು, ಪಾದಚಾರಿಗಳಿಗೆ ಮತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು. ಸ್ವೀಪ್‌ ಸಮಿತಿ ವತಿಯಿಂದ ನಗರದ ವಿವಿಧೆಡೆ ಸಂಚರಿಸುತ್ತಿರುವ ಪ್ರಚಾರ ವಾಹನದ ಮೂಲಕವೂ ಮತದಾನದ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ.ಆರ್. ರವಿ, ಮತದಾನ ಜಾಗೃತಿ ಮೂಡಿಸಲು ನಗರದಲ್ಲಿ ವಿಶೇಷ ಮಾನವ ಸರಪಳಿ ನಿರ್ಮಿಸಲಾಗಿದೆ. ಪಾಲಿಕೆ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ 500 ಜನರು ಭಾಗವಹಿಸಿದ್ದಾರೆ. ಯುವ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಪ್ರಯತ್ನವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

**

ಯುವ ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುವುದರ ಜತೆಗೆ ಇತರರಿಗೂ ಪ್ರೋತ್ಸಾಹ ನೀಡಬೇಕಾಗಿದೆ ಡಾ.ಎಂ.ಆರ್‌. ರವಿ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.