ಊಟಿಯಲ್ಲಿ ಕರ್ನಾಟಕ ಸಿರಿ

7

ಊಟಿಯಲ್ಲಿ ಕರ್ನಾಟಕ ಸಿರಿ

Published:
Updated:
ಊಟಿಯಲ್ಲಿ ಕರ್ನಾಟಕ ಸಿರಿ

ಊಟಿ ದಕ್ಷಿಣ ಭಾರತದ ಪ್ರಮುಖ ಗಿರಿಧಾಮಗಳಲ್ಲೊಂದು. ಮಧುಚಂದ್ರಕ್ಕೆ ಪ್ರಶಸ್ತವೆನಿಸಿದ ಊಟಿಗೆ ಭೇಟಿ ನೀಡುವವರ ಸಂಖ್ಯೆ ಈ ದಿನಗಳಲ್ಲಿ ಹೆಚ್ಚು. ಊಟಿಯ ಮುಖ್ಯ ಆಕರ್ಷಣೆಯೆಂದರೆ ಇಲ್ಲಿನ ಸರ್ಕಾರಿ ಪುಷ್ಟೋದ್ಯಾನ. ಬ್ರಿಟಿಷ್ ಅಧಿಕಾರಿಗಳಿಂದ 55 ಹೆಕ್ಟೇರ್ ಪ್ರದೇಶದಲ್ಲಿ ರೂಪಿಸಲ್ಪಟ್ಟ ಈ ಉದ್ಯಾನ ಇಂದಿಗೂ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿ ವರ್ಷವೂ ಮೇ ತಿಂಗಳಲ್ಲಿ ಇಲ್ಲಿ ಆಯೋಜಿಸುವ ಪುಷ್ಪ ಪ್ರದರ್ಶನ ನೋಡುಗರ ಮನಸೆಳೆಯುತ್ತದೆ.

ಊಟಿಯಲ್ಲಿ ಮೈಸೂರು ಮಹಾರಾಜರಿಗೆ ಸೇರಿದ ಜಾಗವಿದೆ. ಇಲ್ಲಿ ಬೇಸಿಗೆಯ ಅರಮನೆಯೂ ಇದ್ದು ಈ ಪ್ರದೇಶವನ್ನು ಫರ್ನ್ ಹಿಲ್ ಎಂದು ಕರೆಯಲಾಗುತ್ತದೆ. ಈ ಪ್ರದೇಶಕ್ಕೆ ಹೊಂದಿಕೊಂಡಂತಿರುವ 38 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ ತೋಟಗಾರಿಕಾ ಇಲಾಖೆ ಪುಷ್ಪೋದ್ಯಾನವನ್ನು ಅಭಿವೃದ್ಧಿಪಡಿಸಿದೆ. ಈ ಬಾರಿ ಊಟಿಗೆ ಭೇಟಿ ನೀಡುವವರಿಗೆ ಹೂ ತುಂಬಿದ ಎರಡೆರಡು ಉದ್ಯಾನಗಳು ಕೈಬೀಸಿ ಕರೆಯುತ್ತವೆ.

ಇದೇ ಜನವರಿ ತಿಂಗಳಲ್ಲಿ ಉದ್ಘಾಟನೆಗೊಂಡು ಸಾರ್ವಜನಿಕರ ಭೇಟಿಗೆ ಮುಕ್ತವಾದ ಈ ‘ಕರ್ನಾಟಕ ಸಿರಿ’ ಉದ್ಯಾನ ಹಲವು ವೈಶಿಷ್ಟ್ಯಗಳ ತಾಣ. ಎರಡು ಬೆಟ್ಟಗಳು ಕೂಡುವ ಕಣಿವೆಯ ಇಳಿಜಾರಿನಲ್ಲಿ ಸುತ್ತುವರೆದ ಟೀ ತೋಟಗಳ ನಡುವಿನಲ್ಲಿ ರೂಪ ತಳೆದ ಈ ಉದ್ಯಾನ ತನ್ನ ಆಕರ್ಷಕ ವಿನ್ಯಾಸದಿಂದಲೇ ಗಮನಸೆಳೆಯುತ್ತದೆ.

ಊಟಿಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದಾದ ಊಟಿ ಲೇಕ್‍ನ ಮೇಲ್ಬದಿಯ ಬೆಟ್ಟಸಾಲಿನಲ್ಲಿದೆ ಈ ‘ಕರ್ನಾಟಕ ಸಿರಿ’ ತೋಟಗಾರಿಕಾ ಉದ್ಯಾನ. 27 ಅಡಿ ಎತ್ತರ ಹಾಗೂ 25 ಅಡಿ ಅಗಲದ ಆಕರ್ಷಕ ಶೈಲಿಯ ಹೆಬ್ಬಾಗಿಲನ್ನು ಪ್ರವೇಶಿಸಿದರೆ ಉದ್ಯಾನದ ವಿಹಂಗಮ ನೋಟ ನಿಮ್ಮನ್ನು ಸ್ವಾಗತಿಸುತ್ತದೆ. ಇದರ ಮೋಹಕತೆ ನಮ್ಮನ್ನು ಉದ್ಯಾನದಲ್ಲಿ ವಿಹರಿಸಲು ಪ್ರೇರೇಪಿಸುವಂತಿದೆ.

(ಬಣ್ಣದ ಹೂಗಳ ಸೆರಗಿನ ಚಿತ್ತಾಕರ್ಷಕ ವಿನ್ಯಾಸ)

ಹೆಬ್ಬಾಗಿಲನ್ನು ದಾಟಿ ಮುಂದೆ ಹೆಜ್ಜೆ ಹಾಕಿದಂತೆ ದಾರಿಯ ಎರಡೂ ಬದಿಗಳಲ್ಲಿ ಬಗೆಬಗೆಯ ಹೂಗಳು ನಿಮ್ಮನ್ನು ಬರಮಾಡಿಕೊಳ್ಳುತ್ತವೆ. ರಸ್ತೆಯ ಇಕ್ಕೆಲದಲ್ಲಿ ಇಳಿಜಾರಿನಲ್ಲಿ ನೆಟ್ಟ ಬಿಗೋನಿಯಾ ಜಾತಿಯ ಹೂಗಿಡಗಳು, ಹೂವಿನ ಹಾಸಿಗೆಯಂತೆ ಕಾಣುವ ಡೈಸಿ, ಸಾಲ್ವಿಯಾ, ಪೆಟೂನಿಯಾ, ಇಂಪೇಷನ್ಸ್ ಹೂ ಹಾಸುಗಳು ಉದ್ಯಾನದ ಅಂದವನ್ನು ಇಮ್ಮುಡಿಗೊಳಿಸಿವೆ. ವಿವಿಧ ಬಗೆಯ ಕಳ್ಳಿ ಸಸ್ಯಗಳು ಬಣ್ಣಬಣ್ಣದ ಸೇವಂತಿಕೆ ಹೂಗಳ ನಡುವೆ ದುಂಡು ಕಲ್ಲಿನಲ್ಲಿ ನಿರ್ಮಿಸಲಾದ ಪ್ರಾಣಿಗಳ ಆಕೃತಿಗಳು ಮನಸೆಳೆಯುತ್ತವೆ. ಈ ಹಾದಿಯುದ್ದಕ್ಕೂ ಹುಲ್ಲು ಹಾಸಿನ ನಡುವೆ ಅಲ್ಲಲ್ಲಿ ರಚಿಸಲಾದ ಪುಟ್ಟಪುಟ್ಟ ಉದ್ಯಾನಗಳು ಮನೋಹರವಾಗಿವೆ. ಮುಂದೆ ಸಾಗಿದಂತೆ ಶೀತವಲಯದ ಗಾಜಿನ ಮನೆಯ ಸಮೀಪ ಬರುತ್ತೇವೆ. 1979 ರಲ್ಲಿ ನಿರ್ಮಿಸಲಾದ ಈ ಗಾಜಿನ ಮನೆಯಲ್ಲಿ ಸಮುದ್ರಮಟ್ಟಕ್ಕಿಂತ 7000 ಅಡಿ ಎತ್ತರದ ಪ್ರದೇಶಗಳಲ್ಲಿ ಬೆಳೆಯುವ ಹೂ ಗಿಡಗಳನ್ನು ಬೆಳೆಸಲಾಗಿದೆ. ಸಿಕ್ಕಿಂ ರಾಜ್ಯದ ಶೀತ ವಲಯದಲ್ಲಿ ಬೆಳೆವ ಸಿಂಬಿಡಿಯಂ ಎಂಬ ಸೀತಾಳೆ ಹೂವು ಇಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ವಿಶೇಷವೆನಿಸದೇ ಇರದು.

ಹುಲ್ಲು ಹಾಸಿನ ಮೋದ

ಈ ಉದ್ಯಾನವು ಇಳಿಜಾರು ಕಣಿವೆಯಲ್ಲಿರುವುದರಿಂದ ಹಂತಹಂತವಾಗಿ ಕೆಳಗಿಳಿಯಬೇಕಿದ್ದು ನಡುವೆ ಹುಲ್ಲುಹಾಸಿನ ಜಾಗಗಳಿವೆ. ಇಲ್ಲಿ ಹುಲುಸಾಗಿ ಬೆಳೆದು ನಿರ್ವಹಣೆಗೊಂಡ ಹಸಿರು ಹುಲ್ಲುಹಾಸು ವಿಹರಿಸಲು, ವಿರಮಿಸಲು, ಮಕ್ಕಳಿಗೆ ಆಟವಾಡಲು, ಇಲ್ಲಿನ ಸೌಂದರ್ಯ ಸವಿಯಲು ಪ್ರಶಸ್ತವೆನಿಸಿದೆ. ಹಂತಹಂತವಾಗಿ ಕೆಳಗಿಳಿಯಲು ಇರುವ ಮೆಟ್ಟಿಲುಗಳ ಇಕ್ಕೆಲದಲ್ಲೂ ದಟ್ಟವಾಗಿ ಬೆಳೆಯಬಲ್ಲ ಕ್ಯೂಪ್ರಸ್ ಹಾಗೂ ಸೈಪ್ರಸ್ ಜಾತಿಯ ಪೊದೆಗಳಿದ್ದು ಇವುಗಳ ನಡುವೆ ಸಂಚರಿಸುವುದೇ ಒಂದು ಆನಂದ. ಸಮೃದ್ಧವಾಗಿ ಬೆಳೆದ ಈ ಹುಲ್ಲು ಪೊದೆಗಳಲ್ಲಿ ಟೊಪಿಯರಿ ವಿನ್ಯಾಸಗಳು ರೂಪುಗೊಂಡಿವೆ. ಟೊಪಿಯರಿ ವಿನ್ಯಾಸವೆಂದರೆ ಪ್ರಾಣಿ-ಪಕ್ಷಿ ಹಾಗೂ ಇತರೆ ಆಕೃತಿಗಳನ್ನು ಈ ಹುಲುಸಾಗಿ ಬೆಳೆದ ಹುಲ್ಲಿನ ಪೊದೆಯಲ್ಲಿ ರಚಿಸುವುದು. ಈ ಉದ್ಯಾನದಲ್ಲಿ ಈ ರೀತಿಯ ರಚನೆಗಳು ಬಹಳಷ್ಟಿದ್ದು ಉದ್ಯಾನಕ್ಕೆ ಮೆರುಗು ನೀಡಲು ಸಹಕಾರಿಯಾಗಿದೆ. ಇಲ್ಲಿ ಮೇಜ್ ಗಾರ್ಡನ್ ಸಹ ಇದ್ದು 12 ಅಡಿ ಎತ್ತರ ಬೆಳೆದ ಈ ಹುಲ್ಲು ಪೊದೆಯಲ್ಲಿ ಚಕ್ರವ್ಯೂಹದಂಥ ಕ್ಲಿಷ್ಟಕರ ವಿನ್ಯಾಸ ರಚಿಸಲಾಗಿದೆ. ಇದು ಚಿಣ್ಣರು ಹಾಗೂ ವಯಸ್ಕರಿಗೂ ಮೆದುಳಿಗೆ ಕಸರತ್ತು ನೀಡುವಂತಿದೆ.

ಹುಲ್ಲುಹಾಸಿನ ಇಳಿಜಾರಿನ ಕೊನೆಯ ಭಾಗದಲ್ಲಿ ತೆರೆದ ವೇದಿಕೆಯಿದ್ದು ಇದರ ಸುತ್ತಲೂ ಮನಸೆಳೆಯುವ ಹೂಗಿಡಗಳ ವಿನ್ಯಾಸವಿದೆ. ಈ ವೇದಿಕೆಯಲ್ಲಿ ಪ್ರವಾಸಿಗಳಿಗೆ ಸೂಕ್ತವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದ್ದು ಸುಮಾರು ಒಂದು ಸಾವಿರ ಪ್ರವಾಸಿಗರು ವಿರಮಿಸಬಹುದಾಗಿದೆ.

(1979 ರಲ್ಲಿ ನಿರ್ಮಿಸಲಾದ ಗಾಜಿನ ಮನೆ)

ಇಟಾಲಿಯನ್ ಗಾರ್ಡನ್

ಊಟಿಯ ಬೊಟಾನಿಕಲ್ ಗಾರ್ಡನ್‍ನಲ್ಲಿ ಇರುವಂತೆಯೇ ಆದರೆ ತುಸು ವಿಭಿನ್ನವಾಗಿ ವಿನ್ಯಾಸಗೊಳಿಸಿದ ಇಟಾಲಿಯನ್ ಗಾರ್ಡನ್ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ. ಈ ಇಟಾಲಿಯನ್ ಗಾರ್ಡನ್‌ನ ವಿಶಾಲ ಅಂಗಳದಲ್ಲಿ ವೃತ್ತಾಕಾರ, ಆಯತಾಕಾರ, ಗೋಲಾಕಾರದ ಮಡಿಗಳಲ್ಲಿ ಮನಸೆಳೆಯುವ ಹೂಗಳನ್ನು ಬೆಳೆಸಿದ್ದು ಪ್ರವಾಸಿಗಳು ಆನಂದದಿಂದ ವಿಹರಿಸಲು ಸೂಕ್ತವೆನಿಸಿದೆ.

ಊಟಿಯೆಂದರೆ ಹೂ ತುಂಬಿದ ಉದ್ಯಾನಗಳ ಸಾಮ್ರಾಜ್ಯವೆಂದರೆ ತಪ್ಪಾಗಲಾರದು. ಅಂತೆಯೇ ಊಟಿ ಪ್ರವಾಸಿ ಪ್ರಿಯವಾಗಲು ಮತ್ತೊಂದು ಕಾರಣ ಇಲ್ಲಿನ ತಂಪು ತಂಪು ಹವೆ. ಈ ಉದ್ಯಾನವನ್ನು ಹೂ ಚೆಲುವಿನಿಂದ ಕಂಗೊಳಿಸುವುದರ ಜೊತೆಗೆ ಇಕೋ- ಟೂರಿಸಂ ತಾಣವಾಗಿಸಬೇಕೆಂಬ ಉದ್ದೇಶವಿದೆ.

ಮಳೆಗಾಲದಲ್ಲಿ ಪ್ರಾಕೃತಿಕವಾಗಿ ನೀರು ಹರಿಯುವ ಇಳಿಜಾರನ್ನು ಪ್ರವಾಸಿ ಆಕರ್ಷಣೆಯಾಗಿ ಪರಿವರ್ತಿಸಿರುವುದು ಕರ್ನಾಟಕ ಸಿರಿ ಉದ್ಯಾನವ ವಿಶೇಷ. ನೀರು ಹರಿವ ಜಾಗದಲ್ಲಿ ವ್ಯವಸ್ಥಿತವಾಗಿ ಕಲ್ಲಿನ ಜಾರುಗೋಡೆಗಳನ್ನು ನಿರ್ಮಿಸಲಾಗಿದೆ. ನೀರು ಈ ಜಾರುಬಂಡೆಗಳಿಂದ ಧುಮ್ಮಿಕ್ಕಿ ಹರಿದು ಜಲಪಾತಗಳನ್ನು ಸೃಷ್ಟಿ ಮಾಡುತ್ತದೆ. ಹೀಗೆ ನಾಲ್ಕು ಹಂತದಲ್ಲಿ ಜಾರುವ ನೀರಿಗೆ ಸಣ್ಣ ಸಣ್ಣ ಸರೋವರ ನಿರ್ಮಿಸಲಾಗಿದೆ. ಈ ಸರೋವರಗಳಲ್ಲಿ ಆಲಂಕಾರಿಕ ಮೀನುಗಳು, ಬಾತುಕೋಳಿಗಳು, ಹಂಸಗಳಿದ್ದು ಉದ್ಯಾನದ ಅಂದ ಮತ್ತಷ್ಟು ಹೆಚ್ಚಿದೆ. ಇಲ್ಲಿನ ಕನಿಷ್ಠ ತಾಪಮಾನಕ್ಕೆ ಒಗ್ಗುವ ‘ಸ್ಯಾಂಡಿನೋ’ ಮತ್ತು ‘ನೀಲಗಿರಿ’ ಹೆಸರಿನ ಗಿಡ್ಡ ತಳಿಯ ಮುದ್ದಾದ ಇಪ್ಪತ್ತು ಕುರಿಗಳನ್ನು ಇಲ್ಲಿನ ಎರಡು ಎಕರೆ ಪ್ರದೇಶದಲ್ಲಿ ಓಡಾಡಲು ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಕೋ- ಟೂರಿಸಂಗೆ ಇಂಬು ನೀಡುವ ಉದ್ದೇಶ ಇದರ ಹಿಂದೆ ಇದೆ.

ಊಟಿಯ ಈ ಉದ್ಯಾನವನ್ನು ಸಂದರ್ಶಿಸುತ್ತಿದ್ದಾಗ ಕರ್ನಾಟಕ ತೋಟಗಾರಿಕಾ ಇಲಾಖೆ, ಊಟಿ, ಇಲ್ಲಿನ ಸಹಾಯಕ ತೋಟಗಾರಿಕೆ ಅಧಿಕಾರಿ ಕೃಷ್ಣಮೂರ್ತಿಯವರು ಮಾತಿಗೆ ಸಿಕ್ಕಿದ್ದರು. ‘ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆ ಈ ಉದ್ಯಾನವನವನ್ನು ಪ್ರತಿಷ್ಠಿತ ಉದ್ಯಾನವನ್ನಾಗಿಸುವ ಸಂಕಲ್ಪ ಹೊತ್ತಿದೆ. ಶೇ 60 ರಷ್ಟು ಅಭಿವೃದ್ಧಿಯಾಗಿರುವ ಈ ಉದ್ಯಾನಕ್ಕೆ ಪ್ರವಾಸಿಗರು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ’ ಎಂದು ತಿಳಿಸಿದರು. ‘ಮುಂದಿನ ದಿನಗಳಲ್ಲಿ ಇಲ್ಲಿ ತೂಗು ಸೇತುವೆ, ಚೇಸಿಂಗ್ ಫೌಂಟೇನ್, ಜಪಾನೀಸ್ ಪಗೋಡ ಮಾದರಿಯ ವೀಕ್ಷಣಾ ಗೋಪುರ, ಉಪಾಹಾರ ಗೃಹ ನಿರ್ಮಾಣವಾಗಲಿದೆ. ಅಲ್ಲದೆ ಮೊದಲನೆ ಅಂತಸ್ತಿನಲ್ಲಿ ಶೀತವಲಯದ ಹೂಗಳ ಪ್ರದರ್ಶನದ ಟೆಂಪರೇಟ್ ಹೌಸ್ ಹಾಗೂ ಕೆಳ ಅಂತಸ್ತಿನಲ್ಲಿ ಅಕ್ವೇರಿಯಂ ಬರಲಿದೆ. ಇದು ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುವಲ್ಲಿ ಸಫಲವಾಗುತ್ತವೆ’ ಎಂದು ಅವರು ಮುಂದಿನ ಯೋಜನೆಗಳ ಕುರಿತು ವಿವರಿಸಿದರು.

ಊಟಿಯಲ್ಲಿ ತಮಿಳುನಾಡು ಸರ್ಕಾರದ ‘ಊಟಿ ಬೊಟಾನಿಕಲ್ ಗಾರ್ಡನ್’ನಲ್ಲಿ ಪ್ರತಿವರ್ಷವೂ ಮೇ ತಿಂಗಳಲ್ಲಿ ನಡೆಯುವ ಪುಷ್ಪ ಪ್ರದರ್ಶನ ಲಕ್ಷಾಂತರ ಪ್ರವಾಸಿಗಳನ್ನು ತನ್ನತ್ತ ಸೆಳೆಯುತ್ತದೆ. ‘ಕರ್ನಾಟಕ ಸಿರಿ’ ಉದ್ಯಾನದಲ್ಲಿ ಕ್ರಿಸ್ಮಸ್- ಸಂಕ್ರಾಂತಿ-ಪೊಂಗಲ್ ಹಬ್ಬಕ್ಕೆ ಹೊಂದಿಕೊಂಡಂತೆ ಡಿಸೆಂಬರ್ ತಿಂಗಳಲ್ಲಿ ‘ಚಳಿಗಾಲದ ಪುಷ್ಪ ಪ್ರದರ್ಶನ’ ನಡೆಸಲು ಉದ್ದೇಶಿಸಿದೆ. ಬೇಸಿಗೆಯಲ್ಲಿ ಹಾಗೂ ಚಳಿಗಾಲದ ದಿನಗಳಲ್ಲೇ ಪ್ರವಾಸಿಗಳು ಹೆಚ್ಚಿರುವ ಊಟಿಯಲ್ಲಿ ಎರಡೆರಡು ಪುಷ್ಪ ಪ್ರದರ್ಶನಗಳು ನಡೆದು ಪ್ರವಾಸಿಗರಿಗೆ ಬೋನಸ್ ನೀಡುವಂತಿವೆ.

(ಇಕ್ಕೆಲಗಳ ಹಸಿರ ರಾಶಿಯ ನಡುವಿನ ದಾರಿಯಲ್ಲಿ ನಡೆಯುವುದೇ ಒಂದು ಸಂಭ್ರಮ)

ತಲುಪುವುದು ಹೇಗೆ

ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಪ್ರವಾಸಿಗಳಿಗೆ ಪ್ರವೇಶವಿರುವ ಈ ಕರ್ನಾಟಕ ಸಿರಿ ಉದ್ಯಾನ ಫರ್ನ್ ಹಿಲ್ ಬೆಟ್ಟಸಾಲಿನಲ್ಲಿದ್ದು ಊಟಿ ಬಸ್ ನಿಲ್ದಾಣದಿಂದ ಮೂರು ಕಿ.ಮೀ. ದೂರದಲ್ಲಿದೆ. ಬಸ್ ನಿಲ್ದಾಣದಿಂದ ಊಟಿ ಲೇಕ್‍ಗೆ ತೆರಳುವ ನಾರ್ಥ್‌ ಲೇಕ್ ರಸ್ತೆಯಲ್ಲಿ ಲೇಕ್‌ನ ಪಕ್ಕದಲ್ಲೇ ಬಳಸುತ್ತಾ ಸಾಗಿದರೆ ಈ ಉದ್ಯಾನ ತಲುಪಬಹುದು. ‘ಕರ್ನಾಟಕ ಗಾರ್ಡನ್’ ಎಂದರೆ ಮಾರ್ಗ ತೋರಿಸುತ್ತಾರೆ.

ಹಿನ್ನೆಲೆ ಹೀಗಿದೆ

ಊಟಿಯಲ್ಲಿ ಮೈಸೂರು ಮಹಾರಾಜರಿಗೆ ಸೇರಿದ್ದ ಈ ಜಾಗ ಕರ್ನಾಟಕ ತೋಟಗಾರಿಕೆಗೆ ಸೇರಿದ್ದಾದರೂ ಹೇಗೆ ಎಂಬ ಕುತೂಹಲ ನಿಮ್ಮನ್ನು ಕಾಡಬಹುದು. 1960 ರ ವೇಳೆಯಲ್ಲಿ ಆಲೂಗೆಡ್ಡೆ ಬೆಳೆಯುತ್ತಿದ್ದ ಹಾಸನ, ಕೋಲಾರ ಮೊದಲಾದ ಜಿಲ್ಲೆಗಳ ರೈತರು ಬಿತ್ತನೆ ಬೀಜವನ್ನು ದೂರದ ಶಿಮ್ಲಾದಿಂದ ತರಿಸುತ್ತಿದ್ದರು. ಭಾರತದ ತೋಟಗಾರಿಕೆಯ ಪಿತಾಮಹರೆನಿಸಿದ ಎಂ.ಎಚ್. ಮರಿಗೌಡರು ಊಟಿಯ ತಂಪು ವಾತಾವರಣದಲ್ಲಿ ಆಲೂಗೆಡ್ಡೆಯ ಬಿತ್ತನೆ ಬೀಜ ಬೆಳೆದು ರೈತರಿಗೆ ಒದಗಿಸಿದರೆ ಸಾಗಾಣಿಕ ವೆಚ್ಚ ತಗ್ಗುತ್ತದೆಂದು ತೀರ್ಮಾನಿಸಿ 1964ರಲ್ಲಿ ಮೈಸೂರಿನ ಅರಸರಾಗಿದ್ದ ಜಯಚಾಮರಾಜ ಒಡೆಯರಲ್ಲಿ ಊಟಿಯಲ್ಲಿ ತೋಟಗಾರಿಕಾ ಇಲಾಖೆಗೆ ಅರಸರ ಜಾಗವನ್ನು ನೀಡಬೇಕೆಂದು ಕೋರಿದರು. ಅಂದು ಮೈಸೂರಿನ ಅರಸರು ನೀಡಿದ ಜಾಗ ಇಂದು ‘ಕರ್ನಾಟಕ ತೋಟಗಾರಿಕೆ ಸಿರಿ’ಯಾಗಿ ಹೊರರಾಜ್ಯದಲ್ಲಿನ ಮೊದಲ ಉದ್ಯಾನವೆಂಬ ಪ್ರಶಂಸೆಗೆ ಪಾತ್ರವಾಗಿದೆ. ಈ ಜಾಗವನ್ನು ಕೊಡುಗೆಯಾಗಿ ನೀಡಿದ ಮೈಸೂರು ಮಹಾರಾಜರ ಔದಾರ್ಯವನ್ನು ಗೌರವ ಪೂರ್ವಕವಾಗಿ ಸ್ಮರಿಸಲು ಈ ಉದ್ಯಾನದ ಹೆಬ್ಬಾಗಿಲಿನ ಎರಡೂ ಕಡೆ ಗಂಡಭೇರುಂಡದ ಲಾಂಛನವನ್ನು ನಿರ್ಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry