ಮಂಗಳವಾರ, ಆಗಸ್ಟ್ 4, 2020
26 °C
ಟೂರ್ನಿಯಲ್ಲಿ ಮೊದಲ ಪಂದ್ಯ ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ- ದಿನೇಶ್ ಕಾರ್ತಿಕ್ ಮುಖಾಮುಖಿ:

ಪಿಟಿಐ Updated:

ಅಕ್ಷರ ಗಾತ್ರ : | |

ವಿರಾಟ್ ಕೊಹ್ಲಿ- ದಿನೇಶ್ ಕಾರ್ತಿಕ್ ಮುಖಾಮುಖಿ:

ಕೋಲ್ಕತ್ತ: ಇಲ್ಲಿಯ ಹೂಗ್ಲಿ ನದಿಯಲ್ಲಿ ಕಳೆದ ಒಂದು ವರ್ಷದಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಅದೇ ಅವಧಿಯಲ್ಲಿ ವಿರಾಟ್ ಕೊಹ್ಲಿಯ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿಯೂ ಮಹತ್ವದ ಬದಲಾವಣೆಗಳಾಗಿವೆ. ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ರನ್‌ಗಳ ಹೊಳೆ, ದಾಖಲೆಯ ಮಳೆ ಸುರಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡ ಅಗ್ರಸ್ಥಾನಕ್ಕೇರಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ವಿವಾಹವಾಗಿದ್ದಾರೆ.

ಇದೀಗ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸಿನ ಪಯಣ ಆರಂಭಿಸಲು ಇಲ್ಲಿಗೆ ಬಂದಿಳಿದಿದ್ದಾರೆ. ವಿಶ್ವಶ್ರೇಷ್ಠ ಆಟಗಾರರು ಇದ್ದರೂ ಕಳೆದ ಹತ್ತು ವರ್ಷಗಳಲ್ಲಿ ಪ್ರಶಸ್ತಿ ಗೆಲ್ಲಲು ತಂಡಕ್ಕೆ ಸಾಧ್ಯವಾಗಿಲ್ಲ. ಆದರೂ ಪ್ರತಿವರ್ಷ ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆಯೂ ಬತ್ತಿಲ್ಲ. ‘ಈ ಬಾರಿ  ಕಪ್ ನಮ್ದೆ..’ ಎಂಬ ಘೋಷವಾಕ್ಯದೊಂದಿಗೆ ಆರ್‌ಸಿಬಿ ಕಣಕ್ಕಿಳಿಯಲಿದೆ. ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್) ತಂಡವನ್ನು ವಿರಾಟ್ ಬಳಗವು ಎದುರಿಸಲಿದೆ.

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್, ಯುವ ಆಟಗಾರ ಸರ್ಫರಾಜ್ ಖಾನ್, ಮಂದೀಪ್ ಸಿಂಗ್, ಕ್ವಿಂಟನ್ ಡಿ ಕಾಕ್ ಅವರ ಬ್ಯಾಟಿಂಗ್ ಬಲದ ನೆರವು ಇದೆ. ಆದರೆ ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್ ಅವರು ತಂಡದಲ್ಲಿಲ್ಲ. ಈ ಸಲ ಅವರು ಕಿಂಗ್ಸ್‌ ಇಲೆವನ್ ಪಂಜಾಬ್ ಪರ ಆಡಲಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ಅವರೂ ಪಂಜಾಬ್‌ ತಂಡದಲ್ಲಿದ್ದಾರೆ. ಅದರಿಂದಾಗಿ ಆರ್‌ಸಿಬಿ ವಿಕೆಟ್‌ಕೀಪಿಂಗ್ ಹೊಣೆಯನ್ನು ಪಾರ್ಥಿವ್ ಪಟೇಲ್ ನಿರ್ವಹಿಸಲಿದ್ದಾರೆ. ಅವರು ಕೊಹ್ಲಿ ಅಥವಾ ಎಬಿಡಿ ಜೊತೆಗೆ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯೂ ಇದೆ.

ತಂಡದ ಸ್ಪಿನ್ ಶಕ್ತಿ ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ವೇಗಿಗಳಾದ ಟಿಮ್ ಸೌಥಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಆವರು ಕೆಕೆಆರ್. ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಸವಾಲು ಎದುರಿಸಲಿದ್ದಾರೆ.

ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಎರಡು ಸಲ (2012 ಮತ್ತು 2014) ಪ್ರಶಸ್ತಿ ಗೆದ್ದಿತು. ಈಗ ಗೌತಮ್  ಕಾಲ ಮುಗಿದಿದೆ. ಚೆನ್ನೈ ಹುಡುಗ ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ತಂಡ ಆಡಲಿದೆ. ದಿನೇಶ್ ಈಚೆಗೆ ಶ್ರೀಲಂಕಾದಲ್ಲಿ ನಡೆದಿದ್ದ  ಟ್ವೆಂಟಿ–20 ತ್ರಿಕೋನ ಸರಣಿಯ ಫೈನಲ್‌ನಲ್ಲಿ ಬಾಂಗ್ಲಾ ಎದುರು ಕೊನೆಯ ಎಸೆತದಲ್ಲಿ ಸಿಕ್ಸರ್‌ ಎತ್ತಿ ಜಯದ ಕಾಣಿಕೆ ನೀಡಿದ್ದರು. ಕನ್ನಡಿಗರಾದ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ, ಆಲ್‌ರೌಂಡರ್ ಆರ್. ವಿನಯಕುಮಾರ್ ಉತ್ತಮ ಲಯದಲ್ಲಿದ್ದಾರೆ. ಆದರೆ ಹೋದ ವರ್ಷದ ಟೂರ್ನಿಯಲ್ಲಿ ಮಿಂಚಿದ್ದ ಮನೀಷ್ ಪಾಂಡೆ ಈ ಬಾರಿ ತಂಡದಲ್ಲಿಲ್ಲ. ಯುವ ಆಟಗಾರರಾದ ಕಮಲೇಶ್ ನಾಗರಕೋಟಿ, ಶುಭಮನ್ ಗಿಲ್, ಅನುಭವಿ ನಿತೀಶ್ ರಾಣಾ, ಕ್ರಿಸ್‌ ಲಿನ್ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್, ಸುನಿಲ್ ನಾರಾಯಣ್ ಅವರ ಸ್ಪಿನ್‌ ಮೋಡಿ ರಂಗೇರುವ ನಿರೀಕ್ಷೆ ಇದೆ. ಮಿಷೆಲ್ ಜಾನ್ಸನ್ ಅವರ ದಾಳಿಯನ್ನು ಎದುರಿಸುವ ಸವಾಲು ಬೆಂಗಳೂರು ತಂಡದ ಮುಂದೆ ಇದೆ.

ಈಡನ್ ಅಂಗಳದ ಪಿಚ್ ಸ್ಪರ್ಧಾತ್ಮಕವಾಗಿರುವಂತೆ ಕಾಣಿಸುತ್ತಿದೆ. ದಿಟ್ಟತನದಿಂದ ಆಡುವ ಬ್ಯಾಟ್ಸ್‌ಮನ್‌ಗಳು ಮತ್ತು ಚಾಣಾಕ್ಷ ಬೌಲಿಂಗ್ ಮಾಡುವ ಬೌಲರ್‌ಗಳು ಯಶಸ್ವಿಯಾಗುವ ನಿರೀಕ್ಷೆ ಇದೆ.

ತಂಡಗಳು ಇಂತಿವೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಸರ್ಫರಾಜ್ ಖಾನ್, ಕ್ರಿಸ್ ವೋಕ್ಸ್‌, ಯಜುವೇಂದ್ರ ಸಿಂಗ್ ಚಾಹಲ್, ಉಮೇಶ್ ಯಾದವ್, ಬ್ರೆಂಡನ್ ಮೆಕ್ಲಮ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಕ್ವಿಂಟನ್ ಡಿ ಕಾಕ್, ಮೊಹಮ್ಮದ್ ಸಿರಾಜ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೋರಿ ಆ್ಯಂಡರ್ಸನ್, ಮುರುಗನ್ ಅಶ್ವಿನ್, ಪಾರ್ಥಿವ್ ಪಟೇಲ್, ಮೋಯಿನ್ ಅಲಿ, ಮನದೀಪ್ ಸಿಂಗ್, ಮನನ್ ವೊಹ್ರಾ, ಪವನ್ ನೇಗಿ, ಟಿಮ್ ಸೌಥಿ, ಕುಲವಂತ್ ಕೆಜ್ರೋಲಿಯಾ, ಅನಿಕೇತ್ ಚೌಧರಿ, ಪವನ್ ದೇಶಪಾಂಡೆ, ಅನಿರುದ್ಧ ಜೋಶಿ‌. ಡೇನಿಯಲ್ ವೆಟೊರಿ (ಮುಖ್ಯ ಕೋಚ್), ಆಶಿಶ್ ನೆಹ್ರಾ, ಗ್ಯಾರಿ ಕರ್ಸ್ಟನ್ (ಸಲಹೆಗಾರರು).

ಕೋಲ್ಕತ್ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್ (ನಾಯಕ), ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ಆ್ಯಂಡ್ರೆ ರಸೆಲ್, ನಿತೀಶ್ ರಾಣಾ, ಸುನಿಲ್ ನಾರಾಯಣ, ಕುಲದೀಪ್ ಯಾದವ್, ಪಿಯೂಷ್ ಚಾವ್ಲಾ, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಮಿಷೆಲ್ ಜಾನ್ಸನ್, ಶುಭಮನ್ ಗಿಲ್, ಆರ್. ವಿನಯಕುಮಾರ್, ರಿಂಕು ಸಿಂಗ್, ಕ್ಯಾಮರಾನ್ ಡೆಲ್‌ಪೋರ್ಟ್, ಜೇವನ್ ಸೀರ್‌ಲೆಸ್, ಅಪೂರ್ವ್ ವಾಂಖೆಡೆ, ಇಶಾಂಕ್ ಜಗ್ಗಿ, ಟಾಮ್ ಕುರ‍್ರನ್. ಜಾಕ್ ಕಾಲಿಸ್ (ಮುಖ್ಯ ಕೋಚ್).

ಇಂದಿನ ಪಂದ್ಯಗಳು

ಕಿಂಗ್ಸ್‌ ಇಲೆವನ್‌ ಪಂಜಾಬ್‌–ಡೆಲ್ಲಿ ಡೇರ್‌ ಡೆವಿಲ್ಸ್‌

ಆರಂಭ: ಸಂಜೆ 4.

ಸ್ಥಳ: ಮೊಹಾಲಿ.

ಆರ್‌ಸಿಬಿ–ಕೆಕೆಆರ್‌

ಆರಂಭ: ರಾತ್ರಿ 8

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

**

ಭಾರತ ವಿಶ್ವಕಪ್ ಗೆದ್ದರೆ ಕೊಹ್ಲಿ ಜೆರ್ಸಿ ಬಿಚ್ಚಲಿದ್ದಾರೆ: ಗಂಗೂಲಿ ಚಟಾಕಿ

ಕೋಲ್ಕತ್ತ (ಪಿಟಿಐ): ಭಾರತ ತಂಡವು 2019ರಲ್ಲಿ ವಿಶ್ವಕಪ್ ಜಯಿಸಿದರೆ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಜರ್ಸಿ ಬಿಚ್ಚಿ ಆಕ್ಸ್‌ಫೋರ್ಡ್‌ ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡುವುದು ಖಚಿತ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಬೊರಿಯಾ ಮುಜುಂದಾರ್ ಅವರು ಬರೆದಿರುವ ‘ಇಲೆವನ್ ಗಾಡ್ಸ್ ಆ್ಯಂಡ್ ಮಿಲಿಯನ್ ಇಂಡಿಯನ್ಸ್‌’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

16 ವರ್ಷಗಳ ಹಿಂದೆ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾರತ ತಂಡವು ಸೌರವ್ ನಾಯಕತ್ವದಲ್ಲಿ ನ್ಯಾಟ್‌ವೆಸ್ಟ್‌ ಟ್ರೋಫಿ ಗೆದ್ದಿತ್ತು. ಆಗ ಅವರು ತಮ್ಮ ಜೆರ್ಸಿ ಬಿಚ್ಚಿ ಗಾಳಿಯಲ್ಲಿ ಬೀಸಿದ್ದರು. ಅದನ್ನು ನೆನಪಿಸಿಕೊಂಡ ಅವರು ಸಮಾರಂಭದಲ್ಲಿ ಹಾಜರಿದ್ದ ಕೊಹ್ಲಿ ಅವರನ್ನು ನೋಡಿ ಚಟಾಕಿ ಹಾರಿಸಿದರು.

‘ಮುಂದಿನ ವರ್ಷ ಲಾರ್ಡ್ಸ್‌ನಲ್ಲಿ ಭಾರತ ವಿಶ್ವಕಪ್ ಗೆಲ್ಲುವುದು ಬಹುತೇಕ ಖಚಿತ. ಮಾಧ್ಯಮದ ಛಾಯಾಗ್ರಾಹಕರು ಸಿದ್ಧವಾಗಿರಿ. ವಿರಾಟ್ ತಮ್ಮ ಜೆರ್ಸಿ ಬಿಚ್ಚಿ ಹಾಕಿ, ಕೈಯಲ್ಲಿ ಕಪ್ ಹಿಡಿದು ಸಂಭ್ರಮಿಸಲಿದ್ದಾರೆ’ ಎಂದು ಗಂಗೂಲಿ ಹೇಳಿದಾಗ ಸಭಿಕರು ನಗೆಗಡಲಲ್ಲಿ ತೇಲಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.