ಅಂತರರಾಜ್ಯ ಮಾದಕ ವಸ್ತು ಮಾರಾಟ ಜಾಲ ಪತ್ತೆ

7

ಅಂತರರಾಜ್ಯ ಮಾದಕ ವಸ್ತು ಮಾರಾಟ ಜಾಲ ಪತ್ತೆ

Published:
Updated:

ಬೆಂಗಳೂರು: ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು, ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳದ ಟಿ.ಎನ್‌.ನ್ಯಾನೇಶ್ (36), ಎಂ.ಎಸ್. ಅನಸ್‌ (26), ಟಿ.ಡಿ. ಪ್ರಜಿಲ್‌ದಾಸ್‌ (27), ಸಾಜನ್ ದಾಸ್‌ (22), ಶಾಫಿ ಕುಂಜು ಮರಕ್ಕರ್ (29), ಸಿ.ಕೆ.ಅಕ್ಷಯ್‌ಕುಮಾರ್ (22), ಶಿನಾಜ್‌ (27), ನಜೀಬ್ (25) ಹಾಗೂ ಮುಸ್ತಾಕ್‌ (20) ಬಂಧಿತರು. ಅವರಿಂದ 108 ಕೆ.ಜಿ ಗಾಂಜಾ, ಎಲೆಕ್ಟ್ರಾನಿಕ್ ತಕ್ಕಡಿ, 9 ಮೊಬೈಲ್‌, ಎರಡು ಕಾರು ಹಾಗೂ ಎಟಿಎಂ ಕಾರ್ಡ್‍ಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹50 ಲಕ್ಷ.

‘ಮೂರು ವರ್ಷಗಳ ಹಿಂದೆ ಕೇರಳದಿಂದ ನಗರಕ್ಕೆ ಬಂದಿದ್ದ ನ್ಯಾನೇಶ್, ಇಂದಿರಾನಗರದ ಸಮೀಪ ಎಲ್‌.ಬಿ.ಶಾಸ್ತ್ರಿನಗರದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದ. ಮನೆಯಲ್ಲೇ ಮಾದಕ ವಸ್ತುವನ್ನು ಸಂಗ್ರಹಿಸಿಟ್ಟುಕೊಂಡಿದ್ದ ಆತ ತನ್ನ ಸಹಚರರ ಮೂಲಕ ಕರ್ನಾಟಕ, ತಮಿಳುನಾಡು ಹಾಗೂ ಕೇರಳಕ್ಕೆ ಸರಬರಾಜು ಮಾಡುತ್ತಿದ್ದ’ ಎಂದು ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರತಿ ತಿಂಗಳು ಒಡಿಶಾಕ್ಕೆ ಹೋಗುತ್ತಿದ್ದ ನ್ಯಾನೇಶ್‌, ಅಲ್ಲಿಂದ ಗಾಂಜಾ ನಗರಕ್ಕೆ ತರುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ಘಟಕದ ಸಿಬ್ಬಂದಿ, ಆತನ ಬಂಧನಕ್ಕೆ ಬಲೆ ಬೀಸಿತ್ತು. ಇತ್ತೀಚೆಗೆ ಒಡಿಶಾಕ್ಕೆ ಹೋಗಿದ್ದ ಆರೋಪಿಗಳು, ಕಾರಿನಲ್ಲಿ ಗಾಂಜಾ ಸಮೇತ ವಾಪಸ್‌ ಬರುತ್ತಿದ್ದರು ಎಂಬ ಮಾಹಿತಿ ಇತ್ತು. ಅವರ ಬಂಧನಕ್ಕಾಗಿ  25 ಸಿಬ್ಬಂದಿ ತಂಡ, ನ್ಯಾನೇಶ್‌  ಮನೆ ಬಳಿಯೇ ಗಸ್ತು ತಿರುಗುತ್ತಿತ್ತು. ಶನಿವಾರ (ಏ. 7) ನಸುಕಿನ 3 ಗಂಟೆ ಸುಮಾರಿಗೆ ಮನೆಗೆ ಬಂದ ಆರೋಪಿಗಳನ್ನು ಸುತ್ತುವರಿದು ಬಂಧಿಸಿತು’ ಎಂದರು.

₹300, ₹500 ದರಕ್ಕೆ ಮಾರಾಟ:

ಆರೋಪಿಗಳು ಒಡಿಶಾದ ಕಾಜುವಾಕ್‌ ಗ್ರಾಮದಿಂದ ಗಾಂಜಾ ತರುತ್ತಿದ್ದರು. 8 ಹಾಗೂ 10 ಗ್ರಾಂ ತೂಕದ ಪೊಟ್ಟಣಗಳನ್ನು ಸಿದ್ಧಪಡಿಸಿ ಈಜಿಪುರ, ಮುರುಗೇಶ್‍ಪಾಳ್ಯ, ಬಾಣಸವಾಡಿ, ಹೆಣ್ಣೂರು, ಕೆ.ಆರ್.ಪುರ ಹಾಗೂ ರಾಮುಮೂರ್ತಿನಗರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ಪೊಟ್ಟಣಕ್ಕೆ ₹300ರಿಂದ ₹500 ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದರು. ‌

ಆರೋಪಿ ನ್ಯಾನೇಶ್ ಈ ಜಾಲದ ಮುಖ್ಯಸ್ಥನಾಗಿದ್ದ. ಕೇರಳದಲ್ಲೂ ಮಾದಕ ವಸ್ತು ಮಾರುತ್ತಿದ್ದ ಈತನಿಗಾಗಿ ಅಲ್ಲಿಯ ಪೊಲೀಸರು ಹುಡುಕುತ್ತಿದ್ದರಿಂದ ನಗರಕ್ಕೆ ಬಂದಿದ್ದ. ಇಲ್ಲಿಯೂ ಅದೇ ಕೆಲಸ ಮುಂದುವರಿಸಿದ್ದ. ಮನೆಯಲ್ಲೇ ಗಾಂಜಾ ಸಂಗ್ರಹಿಸಿಟ್ಟಿದ್ದರಿಂದ, ಅಕ್ಕ–ಪಕ್ಕದ ಮನೆಗಳಿಗೆ ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡಿದ್ದ ಮಾಲೀಕ, ಮನೆ ಖಾಲಿ ಮಾಡುವಂತೆ ಹೇಳಿದ್ದರು.  ‘ವಾರ ಬಿಟ್ಟು ಖಾಲಿ ಮಾಡುತ್ತೇನೆ’ ಎಂದು ನ್ಯಾನೇಶ್‌ ತಿಳಿಸಿದ್ದ ಎಂದರು.

ಮನೆಯಲ್ಲಿಯೇ ಹೂ ಕುಂಡವಿಟ್ಟುಕೊಂಡಿದ್ದ ಆರೋಪಿ, ಅದರಲ್ಲೇ ಗಾಂಜಾ ಗಿಡ ಬೆಳೆಸುತ್ತಿದ್ದ. ಆರು ತಿಂಗಳಲ್ಲೇ ಆ ಗಿಡ ದೊಡ್ಡದಾಗುತ್ತಿತ್ತು. ಒಂದು ಗಿಡದಿಂದ 5 ಕೆ.ಜಿ ಗಾಂಜಾ ಸಿಗುತ್ತಿತ್ತು. ದಾಳಿ ವೇಳೆ ಆತನ ಮನೆಯಲ್ಲಿ ಐದಾರು ಹೂಕುಂಡಗಳು ಪತ್ತೆಯಾಗಿವೆ. ನ್ಯಾನೇಶ್ ವಿರುದ್ಧ ಈ ಹಿಂದೆಯೇ ಜೀವನ್‌ಬಿಮಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದಲೇ ಆತ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಎಂಜಿನಿಯರಿಂಗ್‌ ಪದವೀಧರ, ಫುಟ್‌ಬಾಲ್‌ ಆಟಗಾರ

‘ಆರೋಪಿಗಳ ಪೈಕಿ ಪ್ರಜಿಲ್‌ ದಾಸ್‌, ಎಂಜಿನಿಯರಿಂಗ್‌ ಪದವೀಧರ. ಶಾಫಿ ಕುಂಜು ಮರಕ್ಕರ್‌, ಫುಟ್‌ಬಾಲ್‌ ಆಟಗಾರ. ಉಳಿದ ಆರೋಪಿಗಳು ನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ಒಬ್ಬನೇ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನ್ಯಾನೇಶ್, ಬಳಿಕ ತನ್ನೂರಿನವರನ್ನೇ ಸಹಚರರನ್ನಾಗಿಟ್ಟುಕೊಂಡು ಜಾಲ ವಿಸ್ತರಿಸಿಕೊಂಡಿದ್ದ. ಬಂಧನದ ಬಳಿಕವೇ ನ್ಯಾನೇಶ್‌ನೊಂದಿಗೆ ಸಹಚರರು ಇರುವುದು ತಿಳಿಯಿತು’ ಎಂದರು.

2,800 ರೌಡಿಗಳ ಬಂಧನ, ಬಿಡುಗಡೆ

‘ವಿಧಾನಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಇದುವರೆಗೆ ನಗರದಲ್ಲಿ 2,800 ರೌಡಿಗಳನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ’ ಎಂದು ಟಿ.ಸುನೀಲ್‌ಕುಮಾರ್‌ ತಿಳಿಸಿದರು.

‘ತಹಶೀಲ್ದಾರ್‌ ಎದುರು ರೌಡಿಗಳನ್ನು ಹಾಜರುಪಡಿಸಿದ್ದು, ಅಲ್ಲಿಯೇ ಅವರಿಗೆ ಜಾಮೀನು ಸಿಕ್ಕಿದೆ. ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದೇವೆ’ ಎಂದರು.

‘ನಮ್ಮ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಒಂದೊಂದು ಕ್ಷೇತ್ರಕ್ಕೆ ಒಬ್ಬ ಎಸಿಪಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಇದುವರೆಗೆ 8 ಪ್ರಕರಣಗಳು ದಾಖಲಾಗಿವೆ’ ಎಂದು ಅವರು ಮಾಹಿತಿ ನೀಡಿದರು.

**

ಆರೋಪಿಗಳನ್ನು ಬಂಧಿಸಿದ ಸಿಸಿಬಿಯ ‘ಮಹಿಳೆ ಮತ್ತು ಮಾದಕ ದ್ರವ್ಯ ಘಟಕ’ ಸಿಬ್ಬಂದಿಗೆ ₹1 ಲಕ್ಷ ಬಹುಮಾನ ನೀಡಲಾಗುವುದು – ಟಿ.ಸುನೀಲ್‌ಕುಮಾರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry