ಸೋಮವಾರ, ಜೂಲೈ 13, 2020
23 °C

ವ್ಯಾನಿಟಿ ಬ್ಯಾಗ್ ಒಳಹೊರಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಾನಿಟಿ ಬ್ಯಾಗ್ ಒಳಹೊರಗೆ...

‘ಅಯ್ಯೋ ಇಷ್ಟು ದೊಡ್ಡ ವ್ಯಾನಿಟಿ ಬ್ಯಾಗ್ ಹೊತ್ಕೊಂಡು ಯಾಕೆ ತಿರುಗ್ತೀಯಾ ಮಾರಾಯ್ತಿ?. ಇಷ್ಟೊಂದು ಭಾರ ಬೇರೆ. ಸಣ್ಣ ಬ್ಯಾಗ್ ಇಟ್ಕೊಬಾರದಾ?’ ಹಾಗಂತ ಬಹುತೇಕ ಗಂಡಂದಿರು ತಮ್ಮ ಹೆಂಡ್ತಿಯರಿಗೆ ಆಗಾಗ ಹೇಳ್ತಾನೆ ಇರ್ತಾರೆ.

‘ನಮ್ ವ್ಯಾನಿಟಿ ಬ್ಯಾಗ್ ತಂಟೆಗೆ ಬಂದ್ರೆ ಸುಮ್ಮನೆ ಇರೋಲ್ಲ. ನಿಮಗೇನ್ರಿ ಗೊತ್ತು ಯಾವ ಸಾಮಾನು ಯಾವಾಗ ಬೇಕಾಗುತ್ತೆ ಅಂತ. ನಿಮ್ಮ ಥರ ಕೈಬೀಸಿಕೊಂಡು ಬರೋಕಾಗಲ್ಲ ನಮಗೆ’ ಅಂತ ಹೆಂಡ್ತಿ ಉತ್ತರಿಸಿದಾಗ ಪಾಪ ಬಡಪಾಯಿ ಗಂಡನಿಗೆ ತೆಪ್ಪಗಾಗದೇ ವಿಧಿಯಿಲ್ಲ.

ನಿಜ ಹೇಳುವುದಾದರೆ, ಶೇ 80ರಷ್ಟು ಮಹಿಳೆಯರು ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಅನಗತ್ಯ ವಸ್ತುಗಳನ್ನು ತುಂಬಿಕೊಂಡಿರುತ್ತಾರೆ. ಅವು ಕೆಲಸಕ್ಕೆ ಬರಲಿ, ಬಾರದಿರಲಿ ಸುಮ್ಮನೆ ಬ್ಯಾಗಿನಲ್ಲಿ ತುರುಕಿಕೊಳ್ಳೋದು ಕೆಲ ಮಹಿಳೆಯರಿಗೆ ಗೀಳು ಆಗಿರುತ್ತೆ. ದೊಡ್ಡದಾದ ಚೆಂದನೆಯ ವ್ಯಾನಿಟಿ ಬ್ಯಾಗ್ ಹೆಗಲಿಗೇರಿಸಿಕೊಂಡು ಸ್ಟೈಲಾಗಿ ನಡೆಯುವುದೇ ಫ್ಯಾಷನ್ ಅಂದುಕೊಂಡಿದ್ದರೆ ಅದು ನಿಜಕ್ಕೂ ತಪ್ಪು. ಏಕೆಂದರೆ ಇಂಥ ವ್ಯಾನಿಟ್ ಬ್ಯಾಗ್‌, ಪರ್ಸ್‌ಗಳು ರೋಗಾಣುಗಳ ಆಗರವಾಗಿರುತ್ತವೆಯಂತೆ!

ವರದಿಯೊಂದ ಪ್ರಕಾರ, ಸಾಂಕ್ರಾಮಿಕ ರೋಗ ಹರಡುವಲ್ಲಿ ವ್ಯಾನಿಟಿ ಬ್ಯಾಗ್ ಮತ್ತು ಪರ್ಸ್‌ಗಳು ಕೂಡಾ ಪಾತ್ರ ವಹಿಸುತ್ತವೆಯಂತೆ. ಪುರುಷರ ಪರ್ಸ್, ವ್ಯಾಲೆಟ್‌ಗಳಿಗಿಂತ ಮಹಿಳೆಯರು ಬಳಸುವ ಪರ್ಸ್, ವ್ಯಾನಿಟಿಬ್ಯಾಗ್, ಸೈಡ್ ಬ್ಯಾಗ್‌ಗಳಲ್ಲೇ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತವೆಯಂತೆ.

ಶೇ 2ರಷ್ಟು ಮಹಿಳೆಯರು ಮಾತ್ರ ತಿಂಗಳಿಗೊಮ್ಮೆ ತಮ್ಮ ವ್ಯಾನಿಟಿ ಬ್ಯಾಗ್‌ ಅನ್ನು ಸ್ವಚ್ಛಗೊಳಿಸುತ್ತಾರಂತೆ. ಶೇ 80ಕ್ಕೂ ಹೆಚ್ಚು ಮಹಿಳೆಯರು ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ಸ್ವಚ್ಛಗೊಳಿಸುವ ಗೋಜಿಗೇ ಹೋಗುವುದಿಲ್ಲವಂತೆ. ಇದರಿಂದ ಬ್ಯಾಕ್ಟೀರಿಯಾಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಹರಡುತ್ತವೆ. ಕಚೇರಿಯಲ್ಲಿ ಯಾರಿಗಾದರೂ ಸಾಂಕ್ರಾಮಿಕ ರೋಗ ಇದ್ದು ಅವರ ಪಕ್ಕದಲ್ಲೋ, ಎದುರಿನಲ್ಲೇ ನಿಮ್ಮ ವ್ಯಾನಿಟಿ ಬ್ಯಾಗ್ ಇಟ್ಟಿದ್ದರೆ ರೋಗಾಣುಗಳು ಸುಲಭವಾಗಿ ರೋಗಿಯ ದೇಹದಿಂದ ವ್ಯಾನಿಟಿ ಬ್ಯಾಗ್‌ನಲ್ಲಿ ಸೇರಿಕೊಳ್ಳಬಹುದು. ಅದೇ ಬ್ಯಾಗ್ ಅನ್ನು ಮನೆಗೆ ರೋಗಾಣುಗಳು ಸುಲಭವಾಗಿ ಹರಡುವ ಸಾಧ್ಯತೆ ಇರುತ್ತದೆ.

ಮತ್ತೆ ಕೆಲವರು ವ್ಯಾನಿಟಿ ಬ್ಯಾಗ್‌ನಲ್ಲಿ ಊಟದ ಡಬ್ಬಿ, ನೀರಿನ ಬಾಟಲ್, ಹಣ್ಣುಗಳು ಇತ್ಯಾದಿಗಳನ್ನು ಇಡುತ್ತಾರೆ. ದೀರ್ಘ ಕಾಲ ವ್ಯಾನಿಟಿ ಬ್ಯಾಗ್‌ನಲ್ಲಿ ಇರುವ ಈ ಆಹಾರ ಪದಾರ್ಥಗಳ ಮೇಲೆ ರೋಗಾಣುಗಳು ಸುಲಭವಾಗಿ ದಾಳಿ ನಡೆಸಬಹುದು. ಆದ್ದರಿಂದ ಆದಷ್ಟು ಊಟದ ಡಬ್ಬಿಗಾಗಿಯೇ ಪ್ರತ್ಯೇಕ ಬ್ಯಾಗ್ ಬಳಸುವುದು ಸೂಕ್ತ.

ಕಾಲೇಜು, ಕಚೇರಿ ಮತ್ತು ಮಾರ್ಕೆಟ್ ಮತ್ತಿತರ ಸ್ಥಳಗಳಿಗೆಂದೇ ಬಳಸುವ ವ್ಯಾನಿಟಿ ಬ್ಯಾಗ್‌ಗಳನ್ನು ಆಗಾಗ ಮರೆಯದೇ ಸ್ವಚ್ಛಗೊಳಿಸಬೇಕು.

* ವ್ಯಾನಿಟಿ ಬ್ಯಾಗ್‌ನ ಹೊರಭಾಗವನ್ನು ಸ್ವಚ್ಛಗೊಳಿಸಲು ಬೆಚ್ಚಗಿನ ನೀರಿಗೆ ತುಸು ಲಿಕ್ವಿಡ್ ಸೋಪ್ ಅಥವಾ ಒಂದೆರೆಡು ಹನಿ ಶ್ಯಾಂಪೂ ಮಿಶ್ರಣ ಮಾಡಿ. ನಂತರ ಹತ್ತಿಯ ಬಟ್ಟೆಯನ್ನು ಆ ನೀರಿನಲ್ಲಿ ಅದ್ದಿ ವ್ಯಾನಿಟಿ ಬ್ಯಾಗ್‌ನ ಹೊರ ಭಾಗವನ್ನು ಮೃದುವಾಗಿ ಒರೆಸಿ.

* ತುಸು ಉಗುರು ಬೆಚ್ಚಗಿನ ನೀರಿಗೆ ನಾಲ್ಕೈದು ಹನಿ ಡೆಂಟಾಲ್ ಮಿಶ್ರಣಮಾಡಿ ಹತ್ತಿಯನ್ನು ಅದರಲ್ಲಿ ಅದ್ದಿ, ವ್ಯಾನಿಟಿ ಬ್ಯಾಗ್ ಅನ್ನು ಸ್ವಚ್ಛಗೊಳಿಸಿ.

*ವ್ಯಾನಿಟಿ ಬ್ಯಾಗ್‌ನ ಮೂಲೆಗಳನ್ನು ಸ್ವಚ್ಛಗೊಳಿಸಲು ಟೂತ್ ಪಿಕ್‌ಗಳನ್ನು ಬಳಸಿ. ಇದರಿಂದ ಮೂಲೆಗಳಲ್ಲಿ ಶೇಖರವಾಗಿರುವ ಕಸ ಸುಲಭವಾಗಿ ಹೊರಬರುತ್ತದೆ.

* ಚರ್ಮದ ವ್ಯಾನಿಟಿ ಬ್ಯಾಗ್‌ಗಳ ಹೊರಮೈಯನ್ನು ನೀರಿನಿಂದ ಸ್ವಚ್ಛಗೊಳಿಸಬೇಡಿ. ನೀರಿನ ಬದಲು ವ್ಯಾಸಲೀನ್ ಜೆಲ್ಲಿ ಬಳಸಿ.

* ವ್ಯಾನಿಟಿ ಬ್ಯಾಗ್ ಅನ್ನು ಸ್ವಚ್ಛಗೊಳಿಸಿದ ತಕ್ಷಣವೇ ಸಾಮಾನುಗಳನ್ನು ಇಡಬೇಡಿ. ತುಸು ಹೊತ್ತು ಗಾಳಿಯಾಡಲು ಬಿಡಿ.

*ವ್ಯಾನಿಟಿ ಬ್ಯಾಗ್‌ನಲ್ಲಿ ನಿಮಗೆ ಅಗತ್ಯವಿರುವಷ್ಟು ಮಾತ್ರ ಸೌಂದರ್ಯವರ್ಧಕಗಳನ್ನು ಇಟ್ಟುಕೊಳ್ಳಿ.

* ವಾಟರ್ ಪ್ರೂಫ್ ವ್ಯಾನಿಟಿ ಬ್ಯಾಗ್ ಅನ್ನೇ ಕೊಳ್ಳಿ. ಮಳೆಗಾಲದಲ್ಲಿ ಬ್ಯಾಗ್ ನೆನೆದಾದ ಬ್ಯಾಕ್ಟೀರಿಯಾಗಳು ಸುಲಭವಾಗಿ ನೆಲೆಸುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.