ಭಾನುವಾರ, ಡಿಸೆಂಬರ್ 15, 2019
23 °C

6 ತಿಂಗಳಲ್ಲಿ ಬಿಕ್ಕಟ್ಟಿನಿಂದ ಪಾರು

ಪಿಟಿಐ Updated:

ಅಕ್ಷರ ಗಾತ್ರ : | |

6 ತಿಂಗಳಲ್ಲಿ ಬಿಕ್ಕಟ್ಟಿನಿಂದ ಪಾರು

ನವದೆಹಲಿ: ನೀರವ್‌ ಮೋದಿ ವಂಚನೆ ಪ್ರಕರಣ ಸೃಷ್ಟಿಸಿದ ಅವ್ಯವಸ್ಥೆಯಿಂದ ಆರು ತಿಂಗಳಲ್ಲಿ ಹೊರ ಬರುವುದಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಮೆಹ್ತಾ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ಮತ್ತು ಅವರ ಸಹಚರರು ಸೇರಿಕೊಂಡು ಬ್ಯಾಂಕ್‌ಗೆ ₹ 13 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವಂಚನೆ ಎಸಗಿದ್ದಾರೆ. ಮುಂಬೈನಲ್ಲಿನ ಶಾಖೆಯೊಂದರ ಸಿಬ್ಬಂದಿಯ ಜತೆ ಸೇರಿಕೊಂಡು ಎಸಗಿರುವ ಈ ವಂಚನೆಯು ದೇಶದ ಬ್ಯಾಂಕಿಂಗ್‌ ಇತಿಹಾಸದಲ್ಲಿಯೇ ದೊಡ್ಡ ಪ್ರಕರಣವಾಗಿದೆ.

‘ಬಿಕ್ಕಟ್ಟಿನಿಂದ ಪಾರಾಗಲು ಕೇಂದ್ರ ಸರ್ಕಾರ, ಪಾಲುದಾರರು ಮತ್ತು ಉದ್ಯೋಗಿಗಳಿಂದ ಗಮನಾರ್ಹ ಬೆಂಬಲ ವ್ಯಕ್ತವಾಗಿದೆ. ಈಗ ಎಲ್ಲವೂ ನಿಯಂತ್ರಣದಲ್ಲಿ ಇದೆ. ಈ ಸಮಸ್ಯೆಯಿಂದ ಉದ್ಭವಿಸಿದ ಬಿಕ್ಕಟ್ಟಿನಿಂದ  6 ತಿಂಗಳಲ್ಲಿ   ಹೊರಬರುವ ನಿರೀಕ್ಷೆ ನಮ್ಮದಾಗಿದೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಸ್ವದೇಶಿ ಚಳವಳಿ ಸಂದರ್ಭದಲ್ಲಿ ಲಾಲಾ ಲಜಪತ್‌ ರಾಯ್‌ ಅವರಿಂದ ಸ್ಥಾಪನೆಗೊಂಡಿರುವ 123 ವರ್ಷಗಳ ಇತಿಹಾಸ ಇರುವ ಬ್ಯಾಂಕ್‌, ದೇಶ ದಾದ್ಯಂತ 7 ಸಾವಿರ ಶಾಖೆಗಳನ್ನು ಹೊಂದಿದೆ. ದೇಶಿ ವಹಿವಾಟು ₹ 10 ಲಕ್ಷ ಕೋಟಿ ಇದೆ. ಹೀಗಾಗಿ ಈ ಹಗರಣವು ಈ ಅವಧಿಯಲ್ಲಿ ನಮ್ಮ ಗ್ರಾಹಕರ ಆತ್ಮವಿಶ್ವಾಸಕ್ಕೆ ಕಿಂಚಿತ್ತೂ ಧಕ್ಕೆ ಒದಗಿಸಿಲ್ಲ.

ಗ್ರಾಹಕರ ವಿಶ್ವಾಸ: ‘ಈ ಪ್ರತಿಕೂಲ ದಿನಗಳಲ್ಲಿಯೂ ಬ್ಯಾಂಕ್‌ನ ವಹಿವಾಟು ಬ್ಯಾಂಕಿಂಗ್‌ ಉದ್ಯಮದ ಮಟ್ಟಕ್ಕಿಂತ ಉತ್ತಮ ಪ್ರಗತಿ ದಾಖಲಿಸಿದೆ. ಸಾಲ ನೀಡಿಕೆ ಪ್ರಮಾಣ ಶೇ 10ರಷ್ಟು ಹೆಚ್ಚಳಗೊಂಡಿದೆ. ಠೇವಣಿ ಸಂಗ್ರಹ ಶೇ 6.2ರಷ್ಟು ಏರಿಕೆಯಾಗಿದೆ. ಇವೆಲ್ಲವು ಬ್ಯಾಂಕ್‌ ಗ್ರಾಹಕರ ವಿಶ್ವಾಸಕ್ಕೆ ಎರವಾಗದಿರುವುದನ್ನು ಸಾಬೀತುಪಡಿಸುತ್ತವೆ.

‘ಬ್ಯಾಂಕ್‌ನ 70 ಸಾವಿರದಷ್ಟು ಸಿಬ್ಬಂದಿ ನನಗೆ ಬೆಂಬಲ ನೀಡಿದ್ದಾರೆ. ಪ್ರತಿಯೊಬ್ಬ ಗ್ರಾಹಕರಿಗೆ ಸಮರ್ಪಕ ಸೇವೆ ಸಲ್ಲಿಸಲು ಅವರೆಲ್ಲ ಪರಿಶ್ರಮಪಟ್ಟಿದ್ದಾರೆ.

‘7 ಸಾವಿರ ಶಾಖೆಗಳ ಪೈಕಿ ಒಂದು ಶಾಖೆಯಲ್ಲಿ ಮಾತ್ರ ನಡೆದ ಏಕೈಕ ವಂಚನೆ ಪ್ರಕರಣ ಇದಾಗಿದೆ. ಇದರಿಂದ ನಾವು ಪಾಠ ಕಲಿತಿದ್ದೇವೆ. ನಮ್ಮ ವ್ಯವಸ್ಥೆ ಬಲಪಡಿಸಲೂ ಇದು ಅವಕಾಶ ಒದಗಿಸಿಕೊಟ್ಟಿದೆ’ ಎಂದರು.  ಸಾಲ ಪಡೆದವರು ಸುಸ್ತಿದಾರರಾದರೆ ಅದನ್ನು ತುಂಬಿಕೊಡುವ ಬಗ್ಗೆ ಬ್ಯಾಂಕ್‌ ನೀಡುವ ಖಾತರಿ ಪತ್ರಗಳನ್ನು (ಎಲ್‌ಒಯು)  ಅಂತರ ಬ್ಯಾಂಕ್‌ ದೂರಸಂಪರ್ಕ ವ್ಯವಸ್ಥೆಯಾಗಿರುವ ‘ಸ್ವಿಫ್ಟ್‌’ ಮೂಲಕ ರವಾನಿಸುವುದನ್ನು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಜೋಡಿಸುವ ಪ್ರಕ್ರಿಯೆಯನ್ನು ಈ ತಿಂಗಳ ಅಂತ್ಯದ ಒಳಗೆ ಪೂರ್ಣಗೊಳಿಸುವುದಾಗಿಯೂ ಅವರು ಹೇಳಿದ್ದಾರೆ.

ನೀರವ್‌ಗೆ ಜಾಮೀನು ರಹಿತ ವಾರಂಟ್

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಎಸಗಿದ ಪ್ರಕರಣ ಸಂಬಂಧ ವಜ್ರದ ವ್ಯಾಪಾರಿ ನೀರವ್‌ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್‌ ಚೋಕ್ಸಿ ವಿರುದ್ಧ ಮುಂಬೈನಲ್ಲಿನ ಸಿಬಿಐ ವಿಶೇಷ ನ್ಯಾಯಾಲಯವು ಜಾಮೀನುರಹಿತ ವಾರಂಟ್‌ (ಎನ್‌ಬಿಡಬ್ಲ್ಯು) ಹೊರಡಿಸಿದೆ.

₹ 13 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ತನಿಖೆಗೆ ಹಾಜರಾಗಲು ಇವರಿಬ್ಬರೂ ಸತತವಾಗಿ ನಿರಾಕರಿಸುತ್ತಿರುವುದರಿಂದ ಜಾಮೀನುರಹಿತ ವಾರಂಟ್‌ ಜಾರಿ ಮಾಡಬೇಕೆಂಬ ತನಿಖಾ ಸಂಸ್ಥೆಯ ಮನವಿಯನ್ನು ಕೋರ್ಟ್‌ ಮ‌ನ್ನಿಸಿದೆ.

* ಸದ್ಯಕ್ಕೆ ಎಲ್ಲವೂ ನಿಯಂತ್ರಣದಲ್ಲಿ ಇದೆ. ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ. ನಾವೀಗ ಚೇತರಿಕೆ ಹಂತದಲ್ಲಿ ಇದ್ದೇವೆ

 - ಸುನಿಲ್‌ ಮೆಹ್ತಾ, ಪಿಎನ್‌ಬಿ ವ್ಯವಸ್ಥಾಪಕ ನಿರ್ದೇಶಕ

ಪ್ರತಿಕ್ರಿಯಿಸಿ (+)