ಭಾನುವಾರ, ಡಿಸೆಂಬರ್ 15, 2019
25 °C
ಕೂಲಿಗಾಗಿ ಪ್ರತಿ ವರ್ಷ ಕೊಡಗಿಗೆ ವಲಸೆ ಬರುವ ಕುಟುಂಬಗಳು; ಗಾಳಿ, ಮಳೆಯ ಆತಂಕ

ರಸ್ತೆ ಬದಿಯೇ ಕಾರ್ಮಿಕರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ಬದಿಯೇ ಕಾರ್ಮಿಕರ ಬದುಕು

ಮಡಿಕೇರಿ: ಅವರದ್ದು ದೂರದ ಊರು. ಮನೆ, ನೆಂಟರು, ಕುಟುಂಬದ ಹಿರಿಯ ಜೀವಗಳನ್ನು ಬಿಟ್ಟು ಬದುಕು ಕಟ್ಟಿಕೊಳ್ಳಲು ಮಂಜಿನ ನಗರಿಗೆ ಬಂದಿದ್ದಾರೆ. ಅವರೆಲ್ಲಾ ರೇಸ್‌ ಕೋರ್ಸ್‌ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್‌ ಟೆಂಟ್‌ ಹಾಕಿಕೊಂಡು ನೆಲೆ ನಿಂತಿದ್ದಾರೆ. ಗುಳೆ ಬಂದ ಕಾರ್ಮಿಕರಿಗೆ ಯಾವ ಸೌಲಭ್ಯವೂ ಇಲ್ಲ. ಬೃಹತ್‌ ಚರಂಡಿ ಬದಿಯಲ್ಲಿ ಮಣ್ಣಿನ ನಡುವೆ ಬದುಕು ಕಟ್ಟಿಕೊಳ್ಳಬೇಕಾಗಿದೆ.

ಉತ್ತರ ಕರ್ನಾಟಕ ಹಾಗೂ ಹೊರ ರಾಜ್ಯದಿಂದ ಬಂದವರಿಗೆ ಸೂರೂ ಇಲ್ಲ. ಮಳೆ, ಗಾಳಿ, ಚಳಿಗೆ ಪುಟ್ಟ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಹೈರಾಣಾಗುತ್ತಿದ್ದಾರೆ. ಯುಗಾದಿ ಸಂದರ್ಭದಲ್ಲಿ ಸುರಿದ ಮಳೆಗೆ ಕಾರ್ಮಿಕರ ಬದುಕು ಮೂರಾಬಟ್ಟೆ ಆಗಿತ್ತು.

ಬರ ಮತ್ತಿತರ ಕಾರಣಕ್ಕೆ ಇಲ್ಲಿಗೆ ಬಂದರೂ ಕಾರ್ಮಿಕರ ಸಮಸ್ಯೆ ಮಾತ್ರ ಪರಿಹಾರಗೊಂಡಿಲ್ಲ. ಪಿ.ಟಿ. ಪರಮೇಶ್ವರ್‌ ನಾಯಕ್‌ ಅವರು ಕಾರ್ಮಿಕ ಸಚಿವರಾಗಿದ್ದ ವೇಳೆ ಗುಳೆ ಕಾರ್ಮಿಕರ ವಾಸ್ತವ್ಯಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಸಭಾಭವನ ನಿರ್ಮಾಣದ ಆದೇಶ ನೀಡಲಾಗಿತ್ತು. ಅದು ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಇನ್ನೂ ಈಡೇರಿಲ್ಲ. ಕಾರ್ಮಿಕರ ಸಂಕಷ್ಟ ಮಾತ್ರ ನಿಂತಿಲ್ಲ.

ಈ ಹಿಂದೆ ತೋಟಗಾರಿಕೆ ಇಲಾಖೆಗೆ ಸೇರಿದ್ದ ಖಾಲಿ ಪ್ರದೇಶದಲ್ಲಿ ಪ್ರತಿವರ್ಷ ಮಡಿಕೇರಿಗೆ ಬರುವ ನೂರಾರು ಕಾರ್ಮಿಕ ಕುಟುಂಬಗಳು ಅಲ್ಲಿ ನೆಲೆ ನಿಲ್ಲುತ್ತಿದ್ದವು. ಖಾಸಗಿ ಬಸ್ ನಿಲ್ದಾಣಕ್ಕಾಗಿ ಟೆಂಟ್‌ ತೆರವು ಮಾಡಲಾಯಿತು. ಪಕ್ಕದಲ್ಲೇ ವಾಸಕ್ಕೆ ಕಾರ್ಮಿಕರು ಮುಂದಾರು. ಅಲ್ಲಿಂದಲೂ ಎತ್ತಂಗಡಿ ಮಾಡಲಾಯಿತು. ಇದೀಗ ಹಾಕಿ ಕ್ರೀಡಾಂಗಣದ ಬಳಿ ವಾಸ್ತವ್ಯ ಹೂಡಿದ್ದಾರೆ. ಮತ್ತೆ ತೆರವು ಮಾಡುವ ಆತಂಕದಲ್ಲಿ ಕಾರ್ಮಿಕರು ನಿತ್ಯ ಜೀವನ ದೂಡುತ್ತಿದ್ದಾರೆ.

ಕೂಲಿ ಹುಡುಕಿಕೊಂಡು ಪ್ರತಿವರ್ಷವೂ ನೂರಾರು ಕುಟುಂಬಗಳು ಕೊಡಗಿಗೆ ಬರುತ್ತವೆ. ಕಾಫಿ ತೋಟಗಳಲ್ಲಿ ಕೂಲಿ ಕೆಲಸ, ಮಣ್ಣು ಕೆಲಸ, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಾರೆ. ನವೆಂಬರ್‌– ಡಿಸೆಂಬರ್‌ ವೇಳೆಗೆ ಕೊಡಗಿಗೆ ಬರುವ ಕಾರ್ಮಿಕರು ಜಡಿಮಳೆ ಆರಂಭಗೊಳ್ಳುವ ತನಕವೂ ಜಿಲ್ಲೆಯಲ್ಲಿ ಬೀಡುಬಿಟ್ಟಿರುತ್ತಾರೆ. ಪ್ರತಿವರ್ಷವೂ ಅವರಿಗೆ ವಾಸ್ತವ್ಯಕ್ಕೆ ತೊಂದರೆ ಉಂಟಾಗುತ್ತಿದೆ.

‘ನಮ್ಮೂರಲ್ಲಿ ಬೇಸಿಗೆ ದಿನಗಳಲ್ಲಿ ಕೂಲಿ ಸಿಗುವುದಿಲ್ಲ. ಕೆಲಸ ಕೊಟ್ಟರೂ ಕೊಡಗಿನಷ್ಟು ಹಣ ನೀಡುವುದಿಲ್ಲ. ಹೀಗಾಗಿ, ಮಕ್ಕಳ ಸಮೇತ ಇಲ್ಲಿಗೆ ಬರುತ್ತೇವೆ. ನಗರದಲ್ಲಿ ಸಾಕಷ್ಟು ಮನೆ ನಿರ್ಮಾಣ ಕೆಲಸಗಳು ನಡೆಯುತ್ತಿವೆ. ಇಲ್ಲಿ ನಮಗೆ ಕೆಲಸ ಸಿಗುತ್ತದೆ’ ಎಂದು ರಾಯಚೂರಿನ ಮಹಿಳೆ ಪದ್ಮಮ್ಮ ಹೇಳುತ್ತಾರೆ.

ಜೀವಭಯ: ಕಾರ್ಮಿಕರು ರಸ್ತೆಬದಿಯಲ್ಲಿ ಬದುಕು ಸಾಗಿಸುತ್ತಿರುವ ಕಾರಣ ಜೀವಭಯ ಕಾಡುತ್ತಿದೆ. ನಗರದಲ್ಲಿ ಖಾಲಿ ಪ್ರದೇಶಗಳು ಇಲ್ಲದಿರುವ ಕಾರಣಕ್ಕೆ ಕಾರ್ಮಿಕರ ವಾಸ್ತವ್ಯಕ್ಕೆ ತೊಂದರೆ ಉಂಟಾಗಿದೆ.

**

ನಗರಕ್ಕೆ ಹೊರ ಭಾಗಗಳಿಂದ ಪ್ರತಿ ವರ್ಷ ನೂರಾರು ಕಾರ್ಮಿಕರು ಬರುತ್ತಾರೆ. ಆದರೆ, ಸೂಕ್ತ ಸೌಲಭ್ಯ ಇಲ್ಲದೆ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಇತ್ತ ಗಮನ ಹರಿಸಬೇಕು – ಪ್ರಸಾದ್‌ ರೈ, ಸುಬ್ರಮಣ್ಯ ನಗರ ನಿವಾಸಿ.

**

ವಿಕಾಸ್‌ ಬಿ. ಪೂಜಾರಿ

ಪ್ರತಿಕ್ರಿಯಿಸಿ (+)