ರೈಲ್ವೆ ನಿಲ್ದಾಣ ವೃತ್ತದಲ್ಲಿ ವಾಹನ ದಟ್ಟಣೆ

7
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣ; ಸಂಚಾರಕ್ಕೆ ತೊಂದರೆ

ರೈಲ್ವೆ ನಿಲ್ದಾಣ ವೃತ್ತದಲ್ಲಿ ವಾಹನ ದಟ್ಟಣೆ

Published:
Updated:

ರಾಯಚೂರು: ನಗರದ ರೈಲ್ವೆ ನಿಲ್ದಾಣ ಎದುರಿನ ಡಾ.ಬಾಬು ಜಗಜೀವನ ರಾಂ ವೃತ್ತದಲ್ಲಿ ಸದಾ ಜನಜಂಗುಳಿ ನೆರೆಯುವುದರಿಂದ ವಾಹನ ಸವಾರರು ನಿತ್ಯವೂ ಪರದಾಡುವಂತಾಗಿದೆ.

ವೃತ್ತವು ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167)ಯಲ್ಲಿ ಇದ್ದರೂ, ಅದನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಮಾಡಬೇಕಾದ ಕೆಲಸ ನನೆಗುದಿಗೆ ಬಿದ್ದಿದೆ. ಹೀಗಾಗಿ ಮಂತ್ರಾಲಯ ಮಾರ್ಗದಿಂದ ಬರುವ ವಾಹನಗಳು ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಮಂತ್ರಾಲಯದತ್ತ ಸಂಚರಿಸುವ ವಾಹನಗಳು ರೈಲ್ವೆ ನಿಲ್ದಾಣದ ವೃತ್ತದಲ್ಲಿ ಬಿಕ್ಕಟ್ಟಿಗೆ ಸಿಲುಕುತ್ತಿವೆ. ವಾಹನ ಹಾಗೂ ಜನದಟ್ಟಣೆ ದೃಶ್ಯವು ಸಂಜೆ ಹಾಗೂ ಬೆಳಿಗ್ಗೆ ಪ್ರತಿನಿತ್ಯ ಕಾಣುವ ಸಾಮಾನ್ಯ ನೋಟವಾಗಿ ಪರಿಣಮಿಸಿದೆ.

ವೃತ್ತದಲ್ಲಿ ರಸ್ತೆ ಇಕ್ಕಟ್ಟಾಗಿದೆ. ಪಾದಚಾರಿ ಮಾರ್ಗವೂ ಸಮರ್ಪಕವಾಗಿಲ್ಲ. ಕೆಲವು ಕಡೆ ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿದ್ದಾರೆ. ರಸ್ತೆ ಅಂಚಿನಲ್ಲಿಯೆ ಸಾಕಷ್ಟು ಅಂಗಡಿಗಳು ಇರುವುದರಿಂದ ಇದು ಜನನಿಬೀಡ ಪ್ರದೇಶವಾಗಿ ಮಾರ್ಪಟ್ಟಿದೆ.

ರೈಲ್ವೆ ನಿಲ್ದಾಣಕ್ಕೆ ಹೋಗುವವರಿಗೆ ಇದೇ ಮುಖ್ಯವಾದ ಮಾರ್ಗ. ರೈಲನ್ನು ಕೊನೆಯ ಗಳಿಗೆಯಲ್ಲಿ ಹತ್ತಲು ಧಾವಿಸುವ ಪ್ರಯಾಣಿಕರು ಕೆಲವು ಬಾರಿ ವೃತ್ತದಲ್ಲಿ ಏರ್ಪಡುವ ಜನ ಹಾಗೂ ವಾಹನ ದಟ್ಟಣೆಯಿಂದ ಸಮಸ್ಯೆ ಎದುರಿಸುತ್ತಾರೆ. ಒಟ್ಟಾರೆ ಈ ವೃತ್ತವು ವ್ಯಾಪಾರಿಗಳಿಂದ, ರೈಲ್ವೆ ಪ್ರಯಾಣಿಕರಿಂದ, ಬೀದಿ ಅಂಗಡಿ ಆಹಾರ ಸೇವಿಸುವವರಿಂದ, ಆಟೊ ಚಾಲಕರಿಂದ ಹಾಗೂ ಜನಸಾಮಾನ್ಯರಿಂದ ಸದಾ ತುಂಬಿಕೊಂಡಿರುತ್ತದೆ. ಯಾರಿಗೂ ಸಮರ್ಪಕ ವ್ಯವಸ್ಥೆ ಇಲ್ಲದಿರು

ವುದರಿಂದ ಎಲ್ಲರೂ ಜಾಗೃತಿಯಿಂದ ಇರುತ್ತಾರೆ. ಸ್ವಲ್ಪ ಯಾಮಾರಿದರೂ ಅಪಾಯ ಎದುರಿಸಬೇಕಾಗುತ್ತದೆ.

ಬಿಟ್ಟು ಬಸವೇಶ್ವರ ವೃತ್ತದಿಂದ ಐಬಿವರೆಗೂ ರಾಷ್ಟ್ರೀಯ ಹೆದ್ದಾರಿಯನ್ನು ಸಿಮೆಂಟ್‌ ಕಾಂಕ್ರಿಟ್‌ ಮಾಡಲಾಗಿದೆ. ಡಾ.ಬಾಬು ಜಗಜೀಗನರಾಂ ವೃತ್ತದಲ್ಲಿ ಮಾತ್ರ ಕಾಮಗಾರಿ ಬಾಕಿ ಉಳಿದಿದೆ. ವೃತ್ತದ ಪಕ್ಕದ ಕೆಲವು ಮಳಿಗೆಗಳು ಹೆದ್ದಾರಿ ವಿಸ್ತಾರಗೊಳಿಸುವುದಕ್ಕೆ ಅಡ್ಡಿಯಾಗಿವೆ. ತೆರವು ಕಾರ್ಯಕ್ಕಾಗಿ ಮಳಿಗೆಗಳ ಮೇಲೆ ಗುರುತು ಹಾಕಿದ್ದಾರೆ. ಇದಕ್ಕೆ ಕೆಲವು ಮಳಿಗೆದಾರರು ಆಕ್ಷೇಪ ವ್ಯಕ್ತಪಡಿಸಿ, ಕೋರ್ಟ್‌ ಮೊರೆ ಹೋಗಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕೆಲವು ಮಳಿಗೆದಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಮಸ್ಯೆ ಇತ್ಯರ್ಥ ಆಗಬೇಕಿದೆ. ತೆರವು ಕಾರ್ಯಾಚರಣೆಗೆ ಸಂಬಂಧಿಸಿದ ನಿರ್ಣಯವು ವಿಳಂಬವಾಗುತ್ತಿರುವುದು ಡಾ.ಬಾಬು ಜಗಜೀಗನರಾಂ ವೃತ್ತದಲ್ಲಿ ಸಮಸ್ಯೆ ಇಮ್ಮಡಿಸುವುದಕ್ಕೆ ಕಾರಣವಾಗಿದೆ.

**

ವೃತ್ತದ ಪಕ್ಕದಲ್ಲಿರುವ ಕೆಲವು ಮಳಿಗೆದಾರರು ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಪಾಲಿಸಲಾಗುವುದು – ಈರಣ್ಣ ಬಿರಾದಾರ, ಜಿಲ್ಲಾ ನಗರ ಅಭಿವೃದ್ಧಿ ಕೋಶಾಧಿಕಾರಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry