ಸೂರ್ಯನ ಪ್ರಖರತೆಗೆ ಕಂಗಾಲಾದ ಜನ

7
ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಎಳನೀರು, ಮಣ್ಣಿನ ಮಡಿಕೆಯ ನೀರೇ ಆಧಾರ

ಸೂರ್ಯನ ಪ್ರಖರತೆಗೆ ಕಂಗಾಲಾದ ಜನ

Published:
Updated:

ರಾಮದುರ್ಗ: ದಿನದಿಂದ ದಿನಕ್ಕೆ ಏರುತ್ತಿರುವ ಬೇಸಿಗೆ ಬೇಗೆಗೆ ತತ್ತರಿಸಿದ ಪಟ್ಟಣದ ಜನ, ಬಿಸಿಲಿನ ತಾಪ ತಾಳಲಾರದೇ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ರಾಮದುರ್ಗ ಪಟ್ಟಣದಲ್ಲಿ ತಾಪಮಾನ 36ರಿಂದ 38 ಡಿಗ್ರಿ ಸೆಲ್ಸಿಯಸ್ ತನಕ ತಲುಪಿದೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ತಲೆಯ ಮೇಲೆ ಬಟ್ಟೆ ಹೊದ್ದುಕೊಂಡು ವಾಹನ ಸವಾರರು ಸಂಚರಿಸಿದರೆ, ಕೆಲವರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.

ಬಿಸಿಲಿನ ಬೇಗೆಯ ಅನುಭವದಿಂದ ಹೊರ ಬರಲು ಪಾದಚಾರಿಗಳು ಎಳನೀರು, ಕೋಲ್ಡ್ರಿಂಕ್ಸ್, ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಇದರಿಂದ ರಸ್ತೆಯ ಬದಿಗೆ ಮಾರಾಟಕ್ಕೆ ಇಟ್ಟಿರುವ ಪಾನೀಯಗಳಿಗಾಗಿ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಪಟ್ಟಣದ ಸುತ್ತಲೂ ಇರುವ ಮುಳ್ಳೂರು, ಮುದಕವಿ ಹಾಗೂ ಮುದೇನೂರ ಗ್ರಾಮಗಳ ಗುಡ್ಡಗಳ ಪ್ರದೇಶ ಬಿಸಿಲಿನ ಹೊಡೆತಕ್ಕೆ ಕಾದು ನಿಲ್ಲುತ್ತಿದೆ. ಅಲ್ಲಿಂದ ಬೀಸುವ ಗಾಳಿಯೂ ಬೆಂಕಿಯ ಕೆನ್ನಾಲಿಗೆಯ ಅನುಭವ ನೀಡುತ್ತಿದೆ. ಇದರಿಂದ ಬಸವಳಿದ ಜನ ಮನೆ ಬಿಟ್ಟು ಹೊರಬೀಳುವುದು ಅಪರೂಪವಾಗಿದೆ.

ಉಳ್ಳವರು ಎಳನೀರು, ತಂಪು ಪಾನೀಯ ಹಾಗೂ ಕಲ್ಲಂಗಡಿ ಹಣ್ಣು ಖರೀದಿಸಿ ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳುತ್ತಾರೆ. ಪ್ರತಿದಿನ ಕೂಲಿಯಿಂದಲೇ ತುತ್ತಿನ ಚೀಲ ತುಂಬಿಸಿಕೊಳ್ಳುವವರು ಮಣ್ಣಿನ ಮಡಿಕೆಯ ನೀರು ಕುಡಿದು ನಿಟ್ಟುಸಿರು ಬಿಡುತ್ತಿದ್ದಾರೆ.

ಬೆಳಗಿನ ಸಮಯದಲ್ಲಿ ಸೂರ್ಯನ ಪ್ರಖರತೆಯಲ್ಲಿ ಅಷ್ಟೊಂದು ವ್ಯತ್ಯಾಸ ಕಂಡು ಬರುವುದಿಲ್ಲ. ಆದರೆ 10 ಗಂಟೆ ನಂತರ ಶೆಖೆ ಅನುಭವ ಹೆಚ್ಚಾಗುತ್ತಾ ಸಾಗುತ್ತದೆ. ಬಿಸಿಲಿನ ಝಳಕ್ಕೆ ಮಕ್ಕಳು ಮತ್ತು ವೃದ್ಧರ ಪಾಡು ಹೇಳತೀರದಾಗಿದೆ.ತಾಪಕ್ಕೆ ತತ್ತರಿಸಿ ಹೋಗಿರುವ ಜನತೆ ಮಳೆರಾಯನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಒಂದೆರಡು ದಿನ ತುಂತುರ ಮಳೆಯಾಗಿದೆ. ಭೂಮಿಯ ಶೆಖೆಯನ್ನು ನಿವಾರಿಸಲು ದೊಡ್ಡ ಮಳೆಯ ಅನಿವಾರ್ಯತೆ ಇದೆ ಎಂಬ ಲೆಕ್ಕಾಚಾರದಲ್ಲಿ ಜನ ಕಾಲ ನೂಕುತ್ತಿದ್ದಾರೆ. ಸಾರ್ವಜನಿಕರಿಗೆ ಬೇಸಿಗೆ ಕಾಟ ಹೆಚ್ಚಾಗುತ್ತಿದ್ದಂತೆ ಪಾನೀಯ ಅಂಗಡಿಗಳ ವ್ಯಾಪಾರ ಭರ್ಜರಿಯಾಗಿ ಸಾಗಿದೆ. ಬಿಸಿಲಿನಿಂದ ರೋಸಿ ಹೋಗಿರುವ ಜನ ಪ್ರತಿ ಕ್ಷಣವು ಮಳೆರಾಯನ ಆಗಮನಕ್ಕೆ ಹಾತೊರೆಯುತ್ತಿದ್ದಾರೆ.

**

ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯುದ್ದಕ್ಕೂ ಮರಗಳಿಲ್ಲ. ನೆರಳಿಗಾಗಿ ರಸ್ತೆಯುದ್ದಕ್ಕೂ ಗಿಡ ನೆಡುವುದು ಅಗತ್ಯವಾಗಿದೆ – ಇಕ್ಬಾಲ್‌ ಜಮಾದಾರ್, ಸ್ಥಳೀಯ ನಾಗರಿಕ.

**

ರಾಮದುರ್ಗದಲ್ಲಿ ಅತಿಯಾದ ಬಿಸಿಲು ಇರುವುದರಿಂದ ಎಳನೀರಿನ ವ್ಯಾಪಾರ ಭರ್ಜರಿಯಾಗಿದೆ. ಆದರೂ ಎಳನೀರನ್ನು ಕೊಂಡು ತಂದಿರುವ ರೇಟಿನಲ್ಲೇ ಮಾರುತ್ತಿದ್ದೇನೆ  – ಜಹಾಂಗೀರ್‌ ಖಾಜಿ, ಎಳನೀರು ವ್ಯಾಪಾರಿ’

**

ಚನ್ನಪ್ಪ ಮಾದರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry