ರಾಜ್ಯ ಸರ್ಕಾರದ ವಿರುದ್ಧ ‘ರಣ ಕಹಳೆ’

7
ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ, ಮೋದಿ ಸರ್ಕಾರದ ಸಾಧನೆ ಪಟ್ಟಿ ತೆರೆದಿಟ್ಟ ಸ್ಮೃತಿ ಇರಾನಿ

ರಾಜ್ಯ ಸರ್ಕಾರದ ವಿರುದ್ಧ ‘ರಣ ಕಹಳೆ’

Published:
Updated:

ಧಾರವಾಡ: ‘ಅಂದು, ಬ್ರಿಟಿಷರ ವಿರುದ್ಧ ಕಿತ್ತೂರು ಚನ್ನಮ್ಮ ರಣ ಕಹಳೆ ಮೊಳಗಿಸಿದ್ದರು. ಇಂದು, ಅಧಿಕಾರದ ಹೆಸರಿನಲ್ಲಿ ಭ್ರಷ್ಟಾಚಾರ, ದುರಾಡಳಿತ ಹಾಗೂ ಸ್ವಜನಪಕ್ಷಪಾತ ನಡೆಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊಳಗಿಸಬೇಕಿದೆ’ ಎಂದು ಕೇಂದ್ರ ಜವಳಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆ ವಿಭಾಗ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ–ಚಿಂತನ’ ಕಾರ್ಯಕ್ರಮ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಧಿಕಾರ ದುರ್ಬಳಕೆಯಿಂದ ಐಎಎಸ್‌ ಅಧಿಕಾರಿಗಳೂ ನೆಮ್ಮದಿಯಿಂದ ಕೆಲಸ ಮಾಡದಂಥ ವಾತಾವರಣ ನಿರ್ಮಾಣಗೊಂಡಿದೆ. ಇಲ್ಲಿ ಮಹಿಳೆ ಹಾಗೂ ದಲಿತರ ಮೇಲೆ ಸಾಕಷ್ಟು ದೌರ್ಜನ್ಯಗಳಾಗಿವೆ. ಇಂಥ ಸರ್ಕಾರವನ್ನು ಕಿತ್ತೊಗೆದು ಸೇವಕರಂತೆ ಜನಸೇವೆ ಮಾಡುವ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಹೇಳಿದರು.

‘ಧಾರವಾಡದಲ್ಲಿ ಐಐಟಿ ಸ್ಥಾಪನೆಯ ಕನಸು ಈ ಹಿಂದಿನ ಸರ್ಕಾರದಲ್ಲಿದ್ದ ಮಾನವ ಸಂಪನ್ಮೂಲ ಸಚಿವರಾದ ಅರ್ಜುನ್ ಸಿಂಗ್ ಹಾಗೂ ಕಪಿಲ್ ಸಿಬಲ್‌ ಅವರಿಂದ ಸಾಧ್ಯವಾಗಲಿಲ್ಲ. ಆದರೆ, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ತಕ್ಷಣ ಈ ಶಿಕ್ಷಣ ಕಾಶಿಗೆ ಐಐಟಿ ಪ್ರಾಪ್ತಿಯಾಯಿತು’ ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ದೇಶವನ್ನು ಇಬ್ಭಾಗ ಮಾಡಿದಾಗಿನಿಂದ ಇಂದಿನವರೆಗೂ ಧರ್ಮ, ಜಾತಿ, ಸಮಾಜವನ್ನು ಒಡೆದು ಆಳುವುದೇ ಕಾಂಗ್ರೆಸ್ ನಾಯಕರಿಗೆ ರೂಢಿಯಾಗಿದೆ. ಈಗ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಂಬೇಡ್ಕರ್‌ ಅವರಿಗೆ ಚುನಾವಣೆ ಟಿಕೆಟ್ ನೀಡದ, ಅಧಿಕಾರ ನೀಡಲು ಸತಾಯಿಸಿದ ಹಾಗೂ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಸೂಕ್ತ ಜಾಗ ನೀಡದ ಕಾಂಗ್ರೆಸಿಗರಿಂದ ದಲಿತರಿಗೆ ಅನ್ಯಾಯವಾಗಿದೆಯೇ ಹೊರತು, ಬಿಜೆಪಿಯಿಂದಲ್ಲ’ ಎಂದರು.

‘ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ₹400ಕೋಟಿ ನೀಡಿದರೆ, ರಾಜ್ಯ ಸರ್ಕಾರ ₹4ಕೋಟಿ ನೀಡಿದೆ. ಯುಪಿಎ ಸರ್ಕಾರದಲ್ಲಿ ರಸ್ತೆ ಅಭಿವೃದ್ಧಿಗೆ ರಾಜ್ಯಕ್ಕೆ ₹1,100 ಕೋಟಿ ಬಿಡುಗಡೆಯಾಗಿತ್ತು. ಆದರೆ, ಸಚಿವ ನಿತಿನ್ ಗಡ್ಕರಿ  ಅವಳಿ ನಗರದ ರಸ್ತೆ ಅಭಿವೃದ್ಧಿಗೆ ₹1,145ಕೋಟಿ ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌, ಶಾಸಕ ಅವರಿಂದ ಬೆಲ್ಲದ, ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ಪಾಲಿಕೆ ಉಪ ಮೇಯರ್‌ ಮೇನಕಾ ಹುರಳಿ, ಪಕ್ಷದ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ಪೂರ್ಣಾ ಪಾಟೀಲ ಹಾಜರಿದ್ದರು.

ಯೋಗೀಶಗೌಡ ಹೆಸರು ಪ್ರಸ್ತಾಪ

‘ರಾಜ್ಯ ಸರ್ಕಾರ ಇಲ್ಲಿನ ಜನರ ಜತೆ ಚೆಲ್ಲಾಟವಾಡುತ್ತಿದೆ. ಜಿಲ್ಲಾ ಪಂಚಾಯ್ತಿ ಹೆಬ್ಬಳ್ಳಿ ಕ್ಷೇತ್ರದ ಸದಸ್ಯ ಯೋಗೀಶಗೌಡ ಗೌಡರ ಹತ್ಯೆಯ ನಂತರ ಅವರ ತಾಯಿಯ ನೋವಿಗೆ ಸರಿಯಾದ ಬೆಲೆ ಸಿಕ್ಕಿಲ್ಲ. ಅಧಿಕಾರ ದುರ್ಬಳಕೆ, ಒತ್ತಡದಿಂದ ಸಮಾಜ ಸುಧಾರಣೆಗೆ ತೊಂದರೆಯಾಗಿದೆ. ಗೂಂಡಾರಾಜ್‌ ಆಗಿರುವ ಜಿಲ್ಲೆಯನ್ನು ಮರಳಿ ಸಾಂಸ್ಕೃತಿಕ ಜಿಲ್ಲೆಯನ್ನಾಗಿಸಬೇಕಿದೆ’ ಎಂದು ಧಾರವಾಡ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಹೇಳಿದರು.

**

ನರೇಂದ್ರ ಮೋದಿಗೂ ಮೊದಲು ಪ್ರಧಾನಿಯಾಗಿದ್ದ ಯಾರೊಬ್ಬರಿಗೂ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ಇರಬೇಕು ಎಂದು ಎಂದೂ ಅನಿಸಲಿಲ್ಲ. ಇವರಿಂದ ವಿಕಾಸವನ್ನು ನಿರೀಕ್ಷಿಸಲು ಸಾಧ್ಯವೇ?  – ಸ್ಮೃತಿ ಇರಾನಿ,ಕೇಂದ್ರ ಸಚಿವೆ

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry