ಮೂವರು ಸಚಿವರ ಸೃಷ್ಟಿಸಿದ ಮಳವಳ್ಳಿ ಕ್ಷೇತ್ರ

7
ಇಬ್ಬರನ್ನು ನಾಲ್ಕು ಬಾರಿ ಗೆಲ್ಲಿಸಿದ ಮತದಾರರು, ಮೊದಲೆರಡು ಚುನಾವಣೆಯಲ್ಲಿ ದ್ವಿಸದಸ್ಯರು

ಮೂವರು ಸಚಿವರ ಸೃಷ್ಟಿಸಿದ ಮಳವಳ್ಳಿ ಕ್ಷೇತ್ರ

Published:
Updated:

ಮಂಡ್ಯ: ಲೋಕೋಪಯೋಗಿ, ಉನ್ನತ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಂತಹ ಖಾತೆ ನಿರ್ವಹಣೆ ಮಾಡಿದ ಮೂವರು ಸಚಿವರನ್ನು ನೀಡಿದ ಕೀರ್ತಿ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮೇಲಿದೆ. 24ರ ಹರೆಯದ ‘ಬಾಲ ಶಾಸಕ’ನ ಆಯ್ಕೆ, ಇಬ್ಬರು ನಾಯಕರನ್ನು ನಾಲ್ಕು ಬಾರಿ ಗೆಲ್ಲಿಸಿದ ಹಿರಿಮೆ ಮಳವಳ್ಳಿ ಮತದಾರರದ್ದು.

1952ರಿಂದ ಇಲ್ಲಿಯವರೆಗೆ ಮಳವಳ್ಳಿ ಕ್ಷೇತ್ರ 14 ಸಾರ್ವತ್ರಿಕ ಚುನಾವಣೆ ಕಂಡಿದೆ. 1952 ಮತ್ತು 1957ರ ಚುನಾವಣೆಯಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದು ಎರಡು ಬಾರಿ ಸಾಮಾನ್ಯ ಮತ್ತು ಪರಿಶಿಷ್ಟ ಜಾತಿಯ ಇಬ್ಬರು ಶಾಸಕರು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

1962ರಲ್ಲಿ ಕಿರುಗಾವಲು ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ನಂತರ ಮಳವಳ್ಳಿ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ರೂಪಗೊಂಡಿತು. ದಲಿತ ನಾಯಕನೊಬ್ಬ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದೂ ಇತಿಹಾಸ ಸೃಷ್ಟಿಸಿದೆ.

ಮೊತ್ತಮೊದಲ ಚುನಾವಣೆಯಲ್ಲಿ ವೀರಶೈವ ಸಮುದಾಯದ ಮುಖಂಡ, ಹೋರಾಟಗಾರ, ವಕೀಲ ಬಿ.ಪಿ.ನಾಗರಾಜಮೂರ್ತಿ ಕ್ಷೇತ್ರದಲ್ಲಿ ಜಯಗಳಿಸಿದ್ದು ಒಂದು ದಾಖಲೆಯಾಗಿ ಉಳಿದಿದೆ.

ಹೋರಾಟದ ಹಿನ್ನೆಲೆಯಲ್ಲಿ ಬಂದ ಬಿ.ಪಿ.ನಾಗರಾಜ ಮೂರ್ತಿ ಅವರು 1952ರ ಚುನಾವಣೆಯಲ್ಲಿ ಕಿಸಾನ್‌ ಮಜ್ದೂರ್‌ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮೀಸಲು ಕ್ಷೇತ್ರದಿಂದ ಎಸ್‌ಸಿಎಫ್‌ (ಶೆಡ್ಯೂಲ್‌ ಕ್ಯಾಸ್ಟ್‌ ಫೆಡರೇಷನ್‌) ಪಕ್ಷದಿಂದ ಸ್ಪರ್ಧಿಸಿದ್ದ ಎನ್‌.ಚಿಕ್ಕಲಿಂಗಯ್ಯ ಗೆಲುವು ಸಾಧಿಸಿದರು. 1957ರ ಚುನಾವಣೆಯಲ್ಲಿ ಕೆ.ವಿ.ಶಂಕರಗೌಡ ಹಾಗೂ ಎಚ್‌.ಕೆ.ವೀರಣ್ಣಗೌಡ ಅವರು ಬೆಂಬಲಿಗರಾಗಿದ್ದ ಎಚ್‌.ವಿ.ವೀರೇಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದರು.

ಎಂ.ಮಲ್ಲಿಕಾರ್ಜುನ್‌ ರಂಗ ಪ್ರವೇಶ: ಸರಳ, ಸಜ್ಜನ ಎಂದೇ ಹೆಸರಾಗಿದ್ದ ಎಂ. ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಜಾತ್ಯತೀತ ನಿಲುವಿನ ಅವರು 1957ರಲ್ಲಿ (ಮೀಸಲು) ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1962ರ ಹೊತ್ತಿಗೆ ಮಳವಳ್ಳಿ ಕ್ಷೇತ್ರ ಸಂಪೂರ್ಣ ಮೀಸಲು ಕ್ಷೇತ್ರವಾಗಿ ಮಾರ್ಪಾಟಾಯಿತು. ಆ ಚುನಾವಣೆಯಲ್ಲಿ ಎಂ. ಮಲ್ಲಿಕಾರ್ಜುನಸ್ವಾಮಿ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಆಯ್ಕೆಯಾದರು. ಮತ್ತೆ 1967ರ ಚುನವಣೆಯಲ್ಲೂ ಮಲ್ಲಿಕಾರ್ಜುನಸ್ವಾಮಿ ಕಾಂಗ್ರೆಸ್‌ ಶಾಸಕರಾದರು. ನಂತರ ಕಾಂಗ್ರೆಸ್‌ ಇಬ್ಭಾಗವಾದಾಗ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು ನಾಲ್ಕನೇ ಬಾರಿಗೆ ಗೆದ್ದರು.

ಮಳವಳ್ಳಿ ಮಾತ್ರವಲ್ಲದೆ ರಾಜ್ಯದಾದ್ಯಂತ ತಮ್ಮ ಪ್ರಸಿದ್ಧಿಯನ್ನು ವಿಸ್ತರಿಸಿಕೊಂಡಿದ್ದ ಮಲ್ಲಿಕಾರ್ಜುನ ಸ್ವಾಮಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದರು. ಆದರೆ 1978ರ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲು ನಿರಾಕರಿಸಿತು.

ಕಾಂಗ್ರೆಸ್‌ನ ನಿಷ್ಠಾವಂತ ಮುಖಂಡರಾಗಿದ್ದ ಎಂ.ಶಿವಯ್ಯ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿತು. ಪಕ್ಷದ ವಿರುದ್ಧ ಬಂಡೆದ್ದ ಮಲ್ಲಿಕಾರ್ಜುನಸ್ವಾಮಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್‌ನ ಒಳಜಗಳದಲ್ಲಿ ಯುವ ನಾಯಕ ಕೆ.ಎಲ್‌.ಮರಿಸ್ವಾಮಿ ಗೆಲುವು ಸಾಧಿಸಿದರು.

ಬಾಲಶಾಸಕನ ಪ್ರವೇಶ: 24ನೇ ವಯಸ್ಸಿಗೆ ಘಟಾನುಘಟಿಗಳನ್ನು ಸೋಲಿಸಿ ಕೆ.ಎಲ್‌.ಮರಿಸ್ವಾಮಿ ವಿಧಾನಸಭೆಗೆ ಪ್ರವೇಶಿಸಿದರು. ಬಾಲಶಾಸಕ ಎಂದೇ ಪ್ರಖ್ಯಾತಿ ಪಡೆದಿದ್ದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಆದರೆ ಅವರು ರಾಜಕಾರಣದಲ್ಲಿ ಹೆಚ್ಚುಕಾಲ ನಿಲ್ಲಲು ಸಾಧ್ಯವಾಗಲಿಲ್ಲ. ಹಲವು ಬಾರಿ ಪಕ್ಷಾಂತರ ಮಾಡಿದರು. 35 ವರ್ಷ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದರು. ಆ ನಂತದ ಉದಯಿಸಿದ ನಾಯಕ ಬಿ.ಸೋಮಶೇಖರ್‌ ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದರು.

ದಾಖಲೆ ಬರೆದ ಬಿ.ಸೋಮಶೇಖರ್‌: 1983ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದಾಗಲೇ ಬಿ.ಸೋಮಶೇಖರ್‌ ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ವಯಸ್ಕರ ಶಿಕ್ಷಣ ಸಚಿವರಾಗಿ ಕೆಲಸ ಮಾಡುವ ಅವಕಾಶ ಪಡೆದರು. ನಂತರ 1985ರಲ್ಲೂ ಆಯ್ಕೆಯಾಗಿ ಮತ್ತೆ ಹೆಗಡೆ ಸರ್ಕಾರದಲ್ಲಿ ಸಚಿವರಾಗಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಾಖಲೆ ನಿರ್ಮಿಸಿದರು. ನಂತರ ಜನತಾ ಪಕ್ಷ ಇಬ್ಭಾಗವಾಯಿತು. ಹೆಗಡೆ ಬಣದಲ್ಲಿ ಗುರುತಿಸಿಕೊಂಡು ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸೋಮಶೇಖರ್‌ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಾಜಮ್ಮ ವಿರುದ್ಧ ಸೋತರು. ಮೊದಲಿಗೆ ಈ ಕ್ಷೇತ್ರದಲ್ಲಿ ಮಹಿಳಾ ಶಕ್ತಿ ಅರಳಿತು.

1994ರ ಚುನಾವಣೆಯಲ್ಲಿ ಮತ್ತೆ ಗೆದ್ದ ಬಿ.ಸೋಮಶೇಖರ್‌ ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾದರು. ಕಾಪಿ ಹಗರಣದ ಮಸಿ ಅವರಿಗೆ ತಾಗಿ ರಾಜೀನಾಮೆ ನೀಡಿದರು. ನಂತರ ಆರೋಪ ಮುಕ್ತರಾದ ಅವರು ಮತ್ತೆ ಕಂದಾಯ ಸಚಿವರಾದರು. 1999ರಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿದ್ದ ಅವರು ನಾಲ್ಕನೇ ಬಾರಿ ಶಾಸಕರಾದರು. 2004ರ ಚುನಾವಣೆಯಲ್ಲಿ ದೇವೇಗೌಡರ ಕುಟುಂಬಕ್ಕೆ ಆಪ್ತರಾಗಿದ್ದ ಡಾ.ಕೆ.ಅನ್ನದಾನಿ ಗೆದ್ದರು.

ಬಂಡಾಯ ಎದ್ದ ನರೇಂದ್ರಸ್ವಾಮಿ: 1999 ಹಾಗೂ 2004ರ ಚುನಾವಣೆಯಲ್ಲಿ ಸೋತಿದ್ದ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿತು. ಆದರೆ ಪಕ್ಷದ ವಿರುದ್ಧ ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿ ಅಭೂತಪೂರ್ವ ಜಯ ದಾಖಲಿಸಿದರು. ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೂ ಆದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ನರೇಂದ್ರಸ್ವಾಮಿ ಎರಡನೇ ಬಾರಿಗೆ ಶಾಸಕರಾದರು.

ಕುತೂಹಲ ಮೂಡಿಸಿರುವ ಕ್ಷೇತ್ರ

ಈ ಬಾರಿಯ ಚುನಾವಣೆಯಲ್ಲಿ ಹಿರಿಯ ನಾಯಕ ಬಿ.ಸೋಮಶೇಖರ್‌ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಇದೇ ಕಡೆಯ ಚುನಾವಣೆ, ನನ್ನನ್ನು ಕೊನೆಯದಾಗಿ ವಿಧಾಸೌಧಕ್ಕೆ ಕಳುಹಿಸಿ ಎಂದು ಅವರು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಸತತವಾಗಿ ಎರಡು ಬಾರಿ ಶಾಸಕರಾಗಿರುವ ಪಿ.ಎಂ.ನರೇಂದ್ರಸ್ವಾಮಿ ಅವರು ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ತೆರಳಿದ್ದಾರೆ.ದೇವೇಗೌಡರ ಕುಟುಂಬಕ್ಕೆ ಆಪ್ತರಾದ ಡಾ.ಕೆ.ಅನ್ನದಾನಿ ಅವರು, ಎಚ್‌.ಡಿ.ಕುಮಾರಸ್ವಾಮಿ ಅವರ ಅಭಿವೃದ್ಧಿ ಮಾದರಿಗೆ ಓಟು ಕೊಡಿ ಎಂದು ಕೇಳುತ್ತಿದ್ದಾರೆ. ಮೂವರೂ ನಾಯಕರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಮಳವಳ್ಳಿ ಕ್ಷೇತ್ರ ಈಗ ಕುತೂಹಲ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry