7

ಬದುಕೆಂಬ ನಿಶ್ಶಬ್ದ ನರ್ತನ...

Published:
Updated:
ಬದುಕೆಂಬ ನಿಶ್ಶಬ್ದ ನರ್ತನ...

ನೃತ್ಯವನ್ನು ನಾಟ್ಯಕಲೆಯನ್ನು ಬಲ್ಲವರು ಅರಿತಿರುತ್ತಾರೆ ಅದೊಂದು ಲಯಬದ್ಧ ನಡೆ ಎಂಬುದನ್ನು. ಆ ಸೌಂದರ್ಯವನ್ನು ಆಸ್ವಾದಿಸುವಾಗ, ಆ ಕಲೆಯ ಆನಂದವನ್ನು ಅನುಭವಿಸುವಾಗ ನೋಡುಗರೆದೆಯಲ್ಲೂ ನಾಟ್ಯದ ನಿಶ್ಶಬ್ದ ಪ್ರತಿಧ್ವನಿ ಕೇಳಿಸುತ್ತದೆ. ಜೀವನವೂ ಇಂತಹುದೊಂದು ನಾಟ್ಯವೇ. ಜೀವನ ನಡೆಯುವುದು ಲಯಬದ್ಧ ಗತಿಯಲ್ಲಿ. ಸೈನಿಕರ ಕವಾಯತು ಬೇರೆ, ಜನರ ಮೆರವಣಿಗೆ ಬೇರೆ. ಶಿಸ್ತುಬದ್ಧ ನಡೆ ಕವಾಯತು; ಕ್ರಮರಹಿತ ಚಲನೆ ಮೆರವಣಿಗೆ.

ಜೀವನ ಹೇಗೆ ಶಿಸ್ತುಬದ್ಧವಾಗಿರಬೇಕು ಎಂಬುದಕ್ಕೆ ಕವಾಯತು ಉತ್ತಮ ಉದಾಹರಣೆ. ಹೇಗೋ ಸಾಗಿಹೋಗುವುದು ಮೆರವಣಿಗೆ. ಅನೇಕ ದಿನಗಳ ತರಬೇತಿ, ಶಿಸ್ತು ಪಾಲನೆ, ಅಭ್ಯಾಸ - ಇವುಗಳ ಫಲವಾಗಿ ನಡೆಯುವ ಕವಾಯತು ಸುಂದರವಾಗಿ ಕಾಣುತ್ತದೆ. ನಮ್ಮ ಬದುಕು ಸೊಗಸಾಗಿ ಕಾಣಬೇಕಾದರೆ ಹೀಗೊಂದು ಕ್ರಮಬದ್ಧತೆ ಅಲ್ಲಿ ಗೋಚರಿಸಬೇಕು. ಇಂತಹವರು ರಸ್ತೆಯಲ್ಲಿ ನಡೆಯುವಾಗ ಸೈನಿಕರ ಕವಾಯತಿನಂತೆ ನಡೆಯುತ್ತಾರೆ ಎಂದರ್ಥವಲ್ಲ. ಇವರು ಮಾಡುವ ಪ್ರತಿಯೊಂದರಲ್ಲೂ ಕ್ರಮ, ಅಚ್ಚುಕಟ್ಟುತನ ಕಾಣುತ್ತದೆ. ಸರ್ ಎಂ. ವಿ. ಸದಾ ಶಿಸ್ತು ಶಿಷ್ಟಾಚಾರವನ್ನು ಪಾಲಿಸುತ್ತಿದ್ದವರು. ಅವರು ಅತಿಥಿಗಳನ್ನು ಬರಮಾಡಿಕೊಳ್ಳಲೂ ಸೂಟುಬೂಟುಧಾರಿಗಳಾಗಿ ಕಾಯುತ್ತಿದ್ದರಂತೆ. ವಸ್ತುಗಳನ್ನು ಇರಿಸಿಕೊಳ್ಳುವುದರಲ್ಲಿ ಒಪ್ಪ–ಓರಣ, ಕೆಲಸದಲ್ಲಿ ಅಚ್ಚುಕಟ್ಟುತನ – ಇವೆಲ್ಲ ಬದುಕಿನ ಕವಾಯತಿನ ಅಂಗಗಳು. ಕೇವಲ ಅನುಕರಣೆಯಿಂದ ಕಲಿಯಲಾಗದ ಹಲವಾರು ಗುಣಗಳಲ್ಲಿ ಈ ಕ್ರಮಬದ್ಧತೆಯೂ ಒಂದು. ಯಾರಂತೆಯೋ ದಿರಿಸನ್ನು ಧರಿಸಿದ ಮಾತ್ರಕ್ಕೆ ನಾವು ಅವರಾಗುವುದಿಲ್ಲ. ಪಾಲ್ ಮೆಯರ್ ಎಂಬಾತ, ‘ನಿಮ್ಮ ಪ್ರಗತಿಯನ್ನು ಬಹಳ ಎಚ್ಚರದಿಂದ ಗಂಟೆಯಿಂದ ಗಂಟೆಗೆ, ದಿನದಿಂದ ದಿನಕ್ಕೆ, ಮಾಸದಿಂದ ಮಾಸಕ್ಕೆ ಯೋಜಿಸಿ. ಯೋಜಿತ ಕಾರ್ಯಗಳು ಮತ್ತು ದಣಿವರಿಯದ ಉತ್ಸಾಹ ನಿಮ್ಮ ಶಕ್ತಿಯ ಸೆಲೆಯೇ ಆಗಿರುತ್ತದೆ’ ಎಂದಿದ್ದಾನೆ (Plan your progress carefully; hour by hour, day–by–day, month–by–month. Organised activity and maintained enthusiasm are the wellsprings of your power).

ನಮ್ಮ ಬದುಕನ್ನು ಕಟ್ಟಿಕೊಡುವುದೇ ಈ ಬಗೆಯ ಶಿಸ್ತಿನ ಅಳವಡಿಕೆ. ಕವಾಯತು ಶಿಸ್ತಿನ ಮೂರ್ತರೂಪ, ಅಭಿವ್ಯಕ್ತಿ. ಎಷ್ಟೋ ಅವ್ಯಕ್ತ ಕ್ರಮಸೂತ್ರಗಳ ವ್ಯಕ್ತರೂಪವೇ ಕವಾಯತು. ಹಿಂದೆಯೇ ಹೇಳಿದಂತೆ ಕೇವಲ ಅನುಕರಣೆ ಪ್ರಯೋಜನವಿಲ್ಲ. ಖಾದಿ ತೊಟ್ಟವರೆಲ್ಲ ಮಹಾತ್ಮ ಗಾಂಧಿಯಾಗಲಿಲ್ಲ. ಆದರೆ ಇಲ್ಲೂ ಒಂದು ಎಚ್ಚರವಿರಬೇಕು. ನಾವು ಗಾಂಧಿಯಾಗದಿದ್ದರೂ ಗಾಂಧಿತತ್ತ್ವಗಳನ್ನು ಪಾಲಿಸುವ ಜವಾಬ್ದಾರಿ, ನೆನಪು ಮಾಡಿಕೊಡುತ್ತಾದ್ದರಿಂದ ನಾವು ಖಾದಿ ಧರಿಸಬೇಕು! ಈ ಕ್ರಮವೆಂಬ ಅಂಶ ಜೀವನಕ್ಕೆ ಬಹಳ ಪೂರಕವಾದ ಅಂಶ. ವಿದ್ಯಾರ್ಥಿಯೊ, ವಿಜ್ಞಾನಿಯೊ – ತನ್ನ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಅಲ್ಲಿ ಒಂದು ಕ್ರಮವನ್ನು ಅಳವಡಿಸಿಕೊಳ್ಳಬೇಕು. ಕಾಲ–ಪ್ರಯತ್ನಗಳು ಸರಿಯಾದ ರೀತಿಯಲ್ಲಿ ಹೂಡಿಕೆ ಆದರೆ ಮಾತ್ರ ಸೂಕ್ತವಾದ ಫಲಿತಗಳು ದೊರೆಯುತ್ತವೆ. ದಿನದ 24 ಗಂಟೆಯನ್ನು ಯಾವ ಕ್ರಮದಲ್ಲಿ ಬಳಸಿಕೊಂಡಿದ್ದೇವೆ, ನಮ್ಮ ಪ್ರಯತ್ನಗಳು ಯಾವ ನಿಟ್ಟಿನಲ್ಲಿ ಸಾಗಿವೆ ಎಂಬುದರ ಬಗ್ಗೆ ನಮ್ಮ ಗಮನಿಕೆ ಇರಬೇಕು. ರಾಬರ್ಟ್ ಸೌತಿ ಎಂಬ ಆಂಗ್ಲ ಕವಿ, ಚಿಂತಕ ಹೀಗೆಂದಿದ್ದಾನೆ: ‘ಕ್ರಮ ಎಂಬುದು ಮನಸ್ಸಿನ ಸಮಸ್ಥಿತಿಯ ಸೂಚಕ, ದೈಹಿಕ ಆರೋಗ್ಯದ ಬಿಂಬ, ನಗರದ ಶಾಂತಿಯ ಸಂಕೇತ, ರಾಜ್ಯದ ಸುರಕ್ಷತೆಯ ಸೂಚಕ. ಮನೆಯ ತೊಲೆಗಳಂತೆ, ದೇಹದ ಮೂಳೆಗಳಂತೆ ಕ್ರಮವೆಂಬುದು ವ್ಯವಸ್ಥೆಯ ಅವಿಭಾಜ್ಯ ಅಂಗ’ ’ (Order is the sanity of the mind, the health of the body, the peace of the city, the security of the state. Like beams in a house or bones to a body, so is order to all things).

ಜೀವನದಲ್ಲಿ ಯಶಸ್ಸು ಗಳಿಸಬೇಕೆಂಬುವರು ಅಚ್ಚುಕಟ್ಟುತನವನ್ನೂ ಕ್ರಮವನ್ನೂ ಪಾಲಿಸಬೇಕು ಎಂದಾಗ, ಅಂತಹ ವ್ಯಕ್ತಿಗಳನ್ನು, ಮಾದರಿಗಳನ್ನು ಅನುಸರಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಕೇವಲ ಅವರ ಯಶಸ್ಸಿನ ಬಗ್ಗೆ ನಮ್ಮ ಪೂರ್ತಿ ಗಮನ ಕೇಂದ್ರೀಕೃತವಾಗಿ ಮುಖ್ಯವಾಗಿ ಆ ಯಶಸ್ಸಿನ ಮೂಲಸೂತ್ರಗಳನ್ನು ಅನುಸರಿಸುವುದನ್ನು ಮರೆಯುತ್ತೇವೆ. ಅಲ್ಲಿ ಗಮನ ಇರಬೇಕಾದ್ದು ಅವರ ವಿಜಯೋತ್ಸವದ ಬಗ್ಗೆ ಅಲ್ಲ, ಅವರ ನಡೆ–ನುಡಿಯ ಬಗ್ಗೆ, ಜೀವನ–ದರ್ಶನಗಳ ಬಗ್ಗೆ. ಮೀನುಗಾರನ ದೋಣಿ ವಿಶಾಲ ಸಾಗರದಲ್ಲಿ ಬಾಣದಂತೆ ಚಿಮ್ಮಿ ಸಾಗುತ್ತಿರುವುದನ್ನು ನೋಡುವುದೇ ಒಂದು ಚಂದ. ಆದರೆ ದೋಣಿಯ ವೇಗಕ್ಕೆ ಕಾರಣವಾದ ಲಯಬದ್ಧ ಹುಟ್ಟಿನ ತಾಳ-ಮೇಳವನ್ನು, ಹುಟ್ಟು ಹಾಕುತ್ತಿರುವ ತೋಳಿನ ಬಲವನ್ನು, ವೇಗ ಮತ್ತು ತೂಕವನ್ನು ಒಂದು ಸಮತೋಲನದಲ್ಲಿಟ್ಟು ದೋಣಿ ಮಗುಚಿಕೊಳ್ಳದಂತಹ ಸಾಮರ್ಥ್ಯವನ್ನು ನಾವು ಗಮನಿಸಬೇಕಲ್ಲವೇ? ಅನುಕರಣೆಗೂ ಅನುಸರಣೆಗೂ ಇರುವ ವ್ಯತ್ಯಾಸ ಇದೇ. ಅನುಕರಣೆ ಕೇವಲ ಗುರಿಯ ಮೇಲಣ ಗರಿ, ದೇಗುಲದ ಕಳಸಪೂಜೆ. ಆದರೆ ಅನುಸರಣೆ ಎಂದರೆ ಸಾಧನೆಯ ಪ್ರತಿ ಮಜಲಿನ ಸೂಕ್ಷ್ಮ ಅವಲೋಕನ, ಅರಿವು. ದೇವಸ್ಥಾನದ ಇಡೀ ನಕ್ಷೆಯ ಆಮೂಲಾಗ್ರ ಅಧ್ಯಯನ. ಈ ಬಗೆಯ ಅಧ್ಯಯನದಿಂದ ಅಂತಹದೇ ಮತ್ತೊಂದು ಕಟ್ಟಡ ತಯಾರಾಗಬಲ್ಲುದು. ಕೇವಲ ಕಳಸಪೂಜೆ ತಕ್ಷಣದ ಮಾನಸಿಕ ತೃಪ್ತಿಗೆ ಸಹಾಯಕ ಅಷ್ಟೆ. ವ್ಯಕ್ತಿ-ವ್ಯಕ್ತಿತ್ವಗಳ ಯಶೋಗಾಥೆಗಳಲ್ಲಿ ಅವರ ಸಿದ್ಧಿಗಳಿಗಿಂತ ಅವರ ಸಾಧನಪಥ ಮತ್ತು ವಿಧಾನಗಳತ್ತ ನಾವು ಗಮನ ನೀಡಬೇಕಾದ್ದು ಈ ನಿಟ್ಟಿನಿಂದ ಬಹಳ ಮುಖ್ಯ.

ನಂದಲಾಲ್ ಬೋಸ್ ಎಂಬ ಕಲಾವಿದ ಶ್ರೀರಾಮಕೃಷ್ಣ ಪರಮಹಂಸರು ಕೀರ್ತನಾನಂದದಲ್ಲಿ ಮೈ ಮರೆತು ನರ್ತಿಸುತ್ತಿರುವ ಚಿತ್ರ ರಚಿಸಿದ್ದಾನೆ. ಅದೊಂದು ರೇಖಾಚಿತ್ರ ಅಷ್ಟೆ. ಆದರೆ ಅದನ್ನು ನೋಡಿದಾಗೆಲ್ಲ ನಮಗೆ ಶ್ರೀರಾಮಕೃಷ್ಣರ ಅಪೂರ್ವ ಭಗವತ್‌ ಪ್ರೇಮದ ದರ್ಶನವಾಗುತ್ತದೆ. ಶ್ರೀರಾಮಕೃಷ್ಣರು ನಿರಕ್ಷರಕುಕ್ಷಿ. ಅವರು ನಾಟ್ಯ–ಸಂಗೀತಗಳನ್ನು ಕಲಿತಿರಲಿಲ್ಲ. ಆದರೆ ಅವರು ಹಾಡಲು ಆರಂಭಿಸಿದರೆ ಮೃಣ್ಮಯದೇವಿಯೂ ಚಿನ್ಮಯಿಯಾಗಿ ತನ್ಮಯಳಾಗಿ ಆಲಿಸುತ್ತಿದ್ದಳು. ಅವರು ಆನಂದದಿಂದ ನರ್ತಿಸತೊಡಗಿದರೆ ಆ ನಾಟ್ಯವನ್ನು ನಟರಾಜನೂ ನಿಂತು ನೋಡುವಂತಹದ್ದು ಆಗಿರುತ್ತಿತ್ತು. ಇದು ಹೇಗೆ ಸಾಧ್ಯವಾಯಿತು ಎಂದು ಆಲೋಚಿಸಿದಾಗ ಹೊಳೆಯುವುದು – ಅವರ ಇಡೀ ಬದುಕೇ ಒಂದು ನಿಶ್ಚಿತ ಕ್ರಮದಲ್ಲಿ ರೂಪಿತಗೊಂಡಿತ್ತು ಎಂಬುದು. ಅದು ಕೇವಲ Divine order! ಹೀಗಾಗಿ ಸಕಲ ಕಲೆಗಳು ಅವರಿಗೆ ಸಹಜವಾಗಿ ಒಲಿದಿತ್ತು. ಸಕಲ ದೈವೀಶಕ್ತಿಗಳೂ ಅವರಲ್ಲಿ ಮೇಳೈಸಿದ್ದವು. ಅವರ ಜೀವಿತಕಾಲದಲ್ಲಿ ಶ್ರೀರಾಮಕೃಷ್ಣರು ಭಾಗವಹಿಸಿದ ಉತ್ಸವಗಳೆಲ್ಲ ಆನಂದೋತ್ಸವವೇ ಆಗಿತ್ತು, ಅವರ ಸಹವಾಸವೇ ಸತ್ಸಂಗವಾಗಿತ್ತು. ಎಂತಹ ಕ್ರಮಭರಿತ ಜೀವನ ಅದು! ಹಾರ ತುರಾಯಿ ಕಿರೀಟ ಕೊನೆಗೆ ಕನಿಷ್ಠ ಸಂಕೇತವಾದ ಕಾಷಾಯವನ್ನೂ ಅವರು ಧರಿಸಲಿಲ್ಲ. ಆದರೆ ಅಂತೇ ಬಾಳಿದರು. ತೋರಾಣಿಕೆಗೆ ಅಲ್ಲಿ ಅವಕಾಶವೇ ಇಲ್ಲ – ಕೇವಲ ಇರಾಣಿಕೆ ಅವರ ಬದುಕು. ಅದರಲ್ಲಿಯೂ ಎಂತಹ ಕ್ರಮ! ಆಡಂಬರವಿಲ್ಲ, ಶಬ್ದಾಡಂಬರವೂ ಇಲ್ಲ. ಅವರು ಒಂದೂ ‘ಲೆಕ್ಚರ್’ ಕೊಡಲಿಲ್ಲ. ಭಕ್ತರೊಂದಿಗೆ ತಮ್ಮ ಸಂಭಾಷಣೆ ಸುದೀರ್ಘವಾಯಿತು ಎನಿಸಿದ ಕೂಡಲೇ ’ಓ, ನೋಡು - ನಾನೂ ಲೆಕ್ಚರ್ ಕೊಡಲು ಆರಂಭಿಸಿಬಿಟ್ಟೆ!’ ಎಂದು ಮಾತನ್ನು ಅಲ್ಲಿಗೇ ಮೊಟಕುಗೊಳಿಸಿ ವಿಷಯಾಂತರ ಮಾಡಿಬಿಡುತ್ತಿದ್ದರು, ಇಲ್ಲವೇ ಚಪ್ಪಾಳೆ ತಟ್ಟುತ್ತ ನಾಮಸಂಕೀರ್ತನೆ ಆರಂಭಿಸುತ್ತಿದ್ದರು. ತಮ್ಮ ಪತ್ನಿಗೆ ಅವರು ಧ್ಯಾನ, ಸಮಾಧಿ, ಶಿಷ್ಯಪೋಷಣೆ, ಸಂಭಾಷಣೆಯ ಚತುರತೆ ಇವಾವುಗಳನ್ನೂ ಕಲಿಸಲಿಲ್ಲ – ಅವರು ಹೇಳಿಕೊಟ್ಟ ವಿಷಯಗಳು ಸತತ ಜಪ, ದೇವರಲ್ಲಿ ವ್ಯಾಕುಲ ಪ್ರೀತಿ ಮತ್ತು ಕೆಲಸದಲ್ಲಿ ಶ್ರದ್ಧೆ. ದೇವರ ದೀಪಕ್ಕೆ ಬತ್ತಿಗಳನ್ನು ಮಾಡುವುದು, ಲಾಟೀನಿನ ಗಾಜು ಒರೆಸುವುದು, ಶ್ರದ್ಧೆ - ಭಕ್ತಿಯಿಂದ ಹೂಮಾಲೆ ಕಟ್ಟುವ ಬಗೆ – ಇವೆಲ್ಲ ‘ಸಾಮಾನ್ಯ’ ಕೆಲಸಗಳನ್ನು ಮಾಡುವುದು ಹೇಗೆಂದು ಹೇಳಿಕೊಟ್ಟರು. ಇದಲ್ಲವೆ ಕ್ರಮ-ಸುಕ್ರಮ? ಬಾಹ್ಯದಲ್ಲಿ ಯಾವಾಗ ಈ ಬಗೆಯ ಶಿಸ್ತು–ಅಚ್ಚುಕಟ್ಟುತನಗಳು ಅಭ್ಯಾಸ ಆಗುತ್ತವೋ ಆಗ ಅಂತರಂಗದ ಅಸ್ತವ್ಯಸ್ತಗಳೂ ಮರೆಯಾಗಿ ಅಲ್ಲೂ ಒಂದು ಕ್ರಮ ಕಾಣಿಸಿಕೊಳ್ಳುತ್ತದೆ. ಅದು ನಮ್ಮ ವ್ಯಕ್ತಿತ್ವದಲ್ಲಿ ಹೊಮ್ಮಲು ಆರಂಭ

ವಾಗುತ್ತದೆ. ಆಗ ಜಗತ್ತು – ‘ಓ ಇವನಲ್ಲೇನೊ ವಿಶೇಷವಿದೆ’ ಎಂದು ಭಾವಿಸಲಾ

ರಂಭಿಸುತ್ತದೆ. ಕನ್‍ಫೂಷಿಯಸ್ ಹೀಗೆನ್ನುತ್ತಾನೆ: ‘ಪ್ರಪಂಚವನ್ನು ಸುವ್ಯವಸ್ಥಿತಗೊಳಿಸಬೇಕಾದರೆ ಮೊದಲು ನಾವು ದೇಶವನ್ನು ವ್ಯವಸ್ಥಿತಗೊಳಿಸಬೇಕು; ದೇಶ ಸರಿಯಾಗಿರಬೇಕಾದರೆ ನಮ್ಮ ಕುಟುಂಬವು ಸರಿಯಿರಬೇಕು; ಕುಟುಂಬವು ನೆಟ್ಟಗಿರಬೇಕಾದರೆ ನಾವು ಕ್ರಮದ ಜೀವನ ನಡೆಸಬೇಕು; ನಮ್ಮ ವೈಯಕ್ತಿಕ ಜೀವನ ಕ್ರಮದಲ್ಲಿ ಇರಬೇಕಾದರೆ ನಮ್ಮ ಹೃದಯವು ಋಜುಮಾರ್ಗದಲ್ಲಿ ಇರಬೇಕು.’ (To put the world in order, we must put the nation in order; to put the nation in order, we must put the family in order; to put the family in order, we must cultivate our personal life; and to cultivate our personal life, we must first set our hearts right.) ರಮಣ–ರಾಮಕೃಷ್ಣರಂತಹವರ ಬದುಕಿನಲ್ಲಿ ನಾವು ಈ ಕ್ರಮವನ್ನು ಕಾಣುತ್ತೇವೆ. ಅವರದು ಹೆಜ್ಜೆ–ಗೆಜ್ಜೆಗಳಿಂದ ಕೂಡಿದ ನರ್ತನ. ಹೆಜ್ಜೆ ಕಂಡೂ ಕಾಣಿಸದಂತಿರುತ್ತದೆ, ಗೆಜ್ಜೆ ಕೇಳಿಸಿಯೂ ಕೇಳಿಸದಂತಿರುತ್ತದೆ. ಇದು ಇಂದ್ರಿಯ ಗ್ರಾಹ್ಯವಲ್ಲ, ಆದರೆ ಹೃದಯಸಂವೇದ್ಯ. ಅವರಿಗೆ ತಾವೊಂದು ಮಾದರಿ ಎಂಬ ಪ್ರಜ್ಞೆಯೂ ಇರಲಿಲ್ಲ. ಪ್ರಜ್ಞಾಪೂರ್ವಕವಾದದು ಪ್ರದರ್ಶನ. ಅಪ್ರಜ್ಞಾಪೂರ್ವಕವಾದದ್ದು ದರ್ಶನ. ಮುಗ್ಧಶಿಶುವೊಂದು ಜಗತ್ತಿನಲ್ಲಿದ್ದೂ ಇಲ್ಲದಂತೆ, ತನ್ನನ್ನು ಗಮನಿಸುತ್ತಿದ್ದಾರೊ ಇಲ್ಲವೊ ಎಂಬುದನ್ನು ಗಮನಿಸದೆ ತನಗೆ ತಾನೇ ಮಾತನಾಡಿಕೊಳ್ಳುತ್ತ ನಗುತ್ತ ಕೇಕೆ ಹಾಕಿ ಕುಣಿಯುವಂತೆ ಇದು. ಜಗದ ಜಂಜಡದ ನಡುವೆಯೇ ಅನಾಹತ ನಾದಕ್ಕೆ, ಅದರ ಲಯಕ್ಕೆ ತಮ್ಮ ದಿವ್ಯಭಾವವನ್ನು ಹೊಂದಿಸಿಕೊಂಡು ನರ್ತಿಸುವುದೇ ಗೆಜ್ಜೆಯಿಲ್ಲದ ಕುಣಿತ, ಅದೇ ಹೆಜ್ಜೆ ಮೂಡದ ಹಾದಿ. ನಮ್ಮ ಕೈಲಾದ ಮಟ್ಟಿಗೆ ನಾವೂ ಇದನ್ನು ಅನುಸರಿಸೋಣ, ಈ ಕಾರಣಕ್ಕಾಗಿಯೇ ಬದುಕೆಂಬ ನಿಶ್ಶಬ್ದ ನರ್ತನಕ್ಕೆ ಕವಿ ಕರೆಯುತ್ತಾನೆ – ಕುಣಿಯೋಣು ಬಾರ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry