ಮೂರು ಕ್ಷೇತ್ರದ ಬಂಡಾಯ ತಪ್ಪಿಸಲು ಬಿಜೆಪಿ ತಂತ್ರ

7
ಡಾ.ಶಿವರಾಜ ಪಾಟೀಲ, ಮಾನಪ್ಪ ವಜ್ಜಲ್‌, ಶಿವನಗೌಡ ಪಾಟೀಲ, ತಿಪ್ಪರಾಜುಗೆ ಟಿಕೆಟ್‌

ಮೂರು ಕ್ಷೇತ್ರದ ಬಂಡಾಯ ತಪ್ಪಿಸಲು ಬಿಜೆಪಿ ತಂತ್ರ

Published:
Updated:

ರಾಯಚೂರು: ಜೆಡಿಎಸ್‌ನಿಂದ ಹೊರಬಂದ ಇಬ್ಬರು ಮಾಜಿ ಶಾಸಕರು ಸೇರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿರುವ ಬಿಜೆಪಿ, ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಪೈಪೋಟಿ ಮುಂದುವರೆದಿದೆ. ಬಂಡಾಯ

ವನ್ನು ತಪ್ಪಿಸಲು ವರಿಷ್ಠರು ವಿಳಂಬ ನೀತಿ ಅನುಸರಿಸಲಾಗುತ್ತಿದೆ.

ಮೊದಲ ಪಟ್ಟಿಯಲ್ಲಿ 2013 ರ ವಿಧಾನಸಭೆ ಅವಧಿಯಲ್ಲಿ ಜಿಲ್ಲೆಯಿಂದ ಶಾಸಕರಾಗಿದ್ದವರ ಹೆಸರುಗಳನ್ನು ಮಾತ್ರ ಘೋಷಿಸಲಾಗಿದೆ. ಲಿಂಗಸುಗೂರು ಕ್ಷೇತ್ರದಿಂದ ಮಾನಪ್ಪ ವಜ್ಜಲ್‌, ರಾಯಚೂರು ನಗರ ಕ್ಷೇತ್ರದಿಂದ ಡಾ.ಶಿವರಾಜ ಪಾಟೀಲ ಅವರಿಗೆ ಮೊದಲ ಪಟ್ಟಿಯಲ್ಲಿಯೆ ಬಿಜೆಪಿ ಟಿಕೆಟ್‌ ಖಚಿತಪಡಿಸಿದ್ದು ಗಮನಾರ್ಹ. ಜೆಡಿಎಸ್‌ನಿಂದ ಬಂದಿರುವ ನಾಯಕ

ರಿಗೆ ಟಿಕೆಟ್‌ ಕೊಡಬಾರದು ಎಂದು ಬಿಜೆಪಿಯ ಅನೇಕ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ಕೂಡಾ ಸಲ್ಲಿಸಿದ್ದರು.

ಮಾನಪ್ಪ ವಜ್ಜಲ್‌ ಅವರಿಗೆ ಟಿಕೆಟ್‌ ಕೊಡುವ ಸುಳಿವು ಅರಿತು ಬಿಜೆಪಿಯಲ್ಲಿದ್ದ ಸಿದ್ದು ಬಂಡಿ ಅವರು ಈಗಾಗಲೇ ಜೆಡಿಎಸ್‌ನಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಆದರೆ, ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಾಗಿದ್ದರೂ ಪಕ್ಷ ಬಿಟ್ಟು ಹೋಗುವಷ್ಟು ಅಸಮಾಧಾನ ತೋರಿಸಿಲ್ಲ. ಡಾ.ಶಿವರಾಜ ಪಾಟೀಲ ಅವರ ಹೆಸರು ಘೋಷಿಸಿರುವುದಕ್ಕೆ ಟಿಕೆಟ್‌ ಆಕಾಂಕ್ಷಿಗಳೆಲ್ಲರೂ ಸದ್ಯಕ್ಕೆ ತಟಸ್ಥ ಮನೋಭಾವ ತೋರಿಸುತ್ತಿದ್ದಾರೆ.

ಭಾರಿ ಬಂಡಾಯ ನಿರೀಕ್ಷಿಸಿದ್ದ ರಾಯಚೂರು ನಗರ ಹಾಗೂ ಲಿಂಗಸುಗೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಮಸ್ಕಿ, ಸಿಂಧನೂರು ಹಾಗೂ ಮಾನ್ವಿ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಒತ್ತಡವನ್ನು ರಾಜ್ಯ ಮುಖಂಡರಿಗೆ ಒಡ್ಡುತ್ತಿದ್ದಾರೆ. ಮಾನ್ವಿಯಲ್ಲಿ ಗಂಗಾಧರ ನಾಯಕ, ಜಿ.ಆರ್‌. ನಾಯಕ ಆಕಾಂಕ್ಷಿಗಳಾಗಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಲ್ಲೆ ಟಿಕೆಟ್‌ಗಾಗಿ ಎರಡು ಬಣಗಳು ನಿರ್ಮಾಣವಾಗಿದ್ದು, ಟಿಕೆಟ್‌ ದೊರೆಯದ ಬಣವು ಬಂಡಾಯ ಬಾವುಟ ಹಾರಿಸಲು ತಯಾರಿ ಮಾಡಿಕೊಂಡಿದೆ. ಬಸನಗೌಡ ಹಾಗೂ ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ ಪರ ಬೆಂಬಲಿಗರು ಟಿಕೆಟ್‌ ಗಿಟ್ಟಿಸಿಕೊಳ್ಳಲು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ.

ಸಿಂಧನೂರು ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ ಸುಲಭವಿಲ್ಲ. ವಿರೂಪಾಕ್ಷಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತಿದೆ. ಆದರೆ, ಬಿಜೆಪಿಯಲ್ಲಿದ್ದು ಅಹಿಂದದೊಂದಿಗೆ ಗುರುತಿಸಿಕೊಂಡಿದ್ದ ವಿರೂಪಕ್ಷಪ್ಪ ಅವರಿಗೆ ಟಿಕೆಟ್‌ ನೀಡಬಾರದು ಎನ್ನುವ ಕೂಗನ್ನು ಕೆಲವರು ಎಬ್ಬಿಸಿದ್ದಾರೆ. ಕೊಲ್ಲಾ ಶೇಷಗಿರಿರಾವ್‌, ಹನುಮನಗೌಡ ಬೆಳಗುರ್ಕಿ, ಅಮರೇಗೌಡ ವಿರುಪಾಪುರ ಅವರು ಬಿಜೆಪಿ ಟಿಕೆಟ್‌ ಪಡೆಯುವುದಕ್ಕೆ ಕಸರತ್ತು ಮಾಡುತ್ತಿದ್ದಾರೆ.

2013 ರಲ್ಲಿ ಮಸ್ಕಿ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ, ಕೊಲ್ಲಾ ಶೇವಗಿರರಾವ್‌ ಅವರು ಗೆದ್ದ ಅಭ್ಯರ್ಥಿ ವಿರುದ್ಧ ಪ್ರತಿಸ್ಪರ್ಧಿಯಾಗಿದ್ದರು.

ಸಾಕಷ್ಟು ಬೆಂಬಲಿಗರನ್ನು ಹೊಂದಿರುವ ಮಹಾದೇವಪ್ಪ ಗೌಡ ಪೊಲೀಸ್‌ ಪಾಟೀಲ, ಕೊಲ್ಲಾ ಶೇವಗಿರರಾವ್‌ ಅವರು ಈ ಬಾರಿಯೂ ಚುನಾವಣೆಗೆ ನಿಲ್ಲಬೇಕು ಎನ್ನುವ ಉತ್ಸಾಹದಿಂದ ಟಿಕೆಟ್‌ ಕಾಯುತ್ತಿದ್ದಾರೆ.

ದೇವದುರ್ಗದಿಂದ ಬಿಜೆಪಿ ಶಾಸಕ ಶಿವನಗೌಡ ನಾಯಕ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರಿಗೆ ಮತ್ತೆ ಟಿಕೆಟ್‌ ಖಚಿತಗೊಂಡಿದೆ.

**

ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ಬಹಳ ಇದ್ದಾರೆ. ಮೂರು ದಿನಗಳಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಿ ಘೋಷಿಸಲಾಗುತ್ತದೆ – ಎನ್‌.ಶಂಕ್ರಪ್ಪ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry