ಪಾಟೀಲದ್ವಯರ ಪ್ರಾಬಲ್ಯದ ಬಬಲೇಶ್ವರ

7
ತಂದೆ–ಮಗನಿಗೆ ತಲಾ ನಾಲ್ಕು ಬಾರಿ ಅವಕಾಶ ನೀಡಿದ ಮತದಾರ; ಇಬ್ಬರೂ ಸಚಿವರಾದ ಹೆಗ್ಗಳಿಕೆ

ಪಾಟೀಲದ್ವಯರ ಪ್ರಾಬಲ್ಯದ ಬಬಲೇಶ್ವರ

Published:
Updated:

ವಿಜಯಪುರ: ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ‘ಹರಳಯ್ಯನ ಗುಂಡಿ’ಗಿದೆ.ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ.

ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ.

ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. ಇಲ್ಲಿನ ಪೀಠಾಧಿಪತಿ ಪಂಚಮಸಾಲಿ ಸಮಾಜದವರು. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ.

ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.

ಒಂದೇ ಕುಟುಂಬಕ್ಕೆ ಎಂಟು ಬಾರಿ ಅವಕಾಶ:

ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಎರಡೂ ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ದಿ.ಬಿ.ಎಂ.ಪಾಟೀಲ, ಸಚಿವ ಎಂ.ಬಿ.ಪಾಟೀಲಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ.

ದಶಕದ ಹಿಂದೆ ರಚನೆಗೊಂಡ ಬಬಲೇಶ್ವರ ಎರಡು ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗಿದ್ದು, ಎಂ.ಬಿ.ಪಾಟೀಲ ಸತತ ಎರಡು ಬಾರಿ ಗೆಲುವು ದಾಖಲಿಸಿದರೆ, ಪ್ರತಿಸ್ಪರ್ಧಿ ವಿಜುಗೌಡ ಪಾಟೀಲ ಪ್ರಬಲ ಪೈಪೋಟಿ ನೀಡುವ ಮೂಲಕ ‘ಪಾಟೀಲದ್ವಯರ’ ಅಖಾಡದಲ್ಲಿ ತುರುಸಿನ ವಾತಾವರಣ ನಿರ್ಮಿಸಿದ್ದಾರೆ.

ವಿಜುಗೌಡ ಬಿಜೆಪಿಗೆ ಸೇರ್ಪಡೆ ಯಾದ ಬಳಿಕ, ಎಂ.ಬಿ.ಪಾಟೀಲ ಲಿಂಗಾಯತ ಪ್ರತ್ಯೇಕ ಧರ್ಮದ ಹಕ್ಕೊತ್ತಾಯ ಚಳವಳಿಯ ಮುಂಚೂಣಿ ನಾಯಕತ್ವ ವಹಿಸಿಕೊಂಡ ನಂತರ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಚಿತ್ರಣ ರಾಜ್ಯದ ಗಮನ ಸೆಳೆದಿದೆ. ಪಾಟೀಲದ್ವಯರ ಪೈಪೋಟಿ ಜಿಲ್ಲೆಯ ರಾಜಕೀಯ ವಲಯದಲ್ಲೂ ತೀವ್ರ ಕುತೂಹಲ ಕೆರಳಿಸಿದೆ.

ಕ್ಷೇತ್ರ ವ್ಯಾಪ್ತಿ: ವಿಜಯಪುರ ತಾಲ್ಲೂಕಿನ ಕೆಲ ಭಾಗ. ತಿಕೋಟಾ, ಬಬಲೇಶ್ವರ ನೂತನ ತಾಲ್ಲೂಕು, ಮಮದಾಪುರ ವೃತ್ತ, ಕನಮಡಿ, ಹೊನವಾಡ, ಕೋಟ್ಯಾಳ, ನಾಗರಾಳ, ಬೋಳಚಿಕ್ಕಲಕಿ, ಕಂಬಾಗಿ, ಹೊನಗನಹಳ್ಳಿ, ಅತಾಲಟ್ಟಿ, ಅರಕೇರಿ, ಯತ್ನಾಳ, ಹುಬನೂರ, ಗೊಣಸಗಿ ಇತ್ಯಾದಿ... ಗ್ರಾಮಗಳು ಕ್ಷೇತ್ರ ವ್ಯಾಪ್ತಿಯಲ್ಲಿವೆ.

2008ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರವನ್ನು ಬಬಲೇಶ್ವರ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ ಬಸವನಬಾಗೇವಾಡಿ ಕ್ಷೇತ್ರದಲ್ಲಿದ್ದ ಮಮದಾಪುರ ಹೋಬಳಿಯ 28 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ತಿಕೋಟಾ ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು ನಾಗಠಾಣ ನೂತನ ಕ್ಷೇತ್ರದ ಪಾಲಾದವು.

2,09,117 ಮತದಾರರು

ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮಾರ್ಚ್ ಅಂತ್ಯದವರೆಗೂ ಒಟ್ಟು 2,09,117 ಮತದಾರರಿದ್ದಾರೆ. 253 ಮತಗಟ್ಟೆಗಳಿವೆ. ಪಂಚಮಸಾಲಿ ಮತದಾರರು 24,055 ಇದ್ದರೆ, ಜಂಗಮ 2,274, ಗಾಣಿಗ 10,168, ರಡ್ಡಿ 8,193, ಬಣಜಿಗ 7,422, ಕಮ್ಮಾರ 2,834, ಸವಿತಾ ಸಮಾಜ 3,667, ಮಾಳಿ 6,807, ನೇಕಾರ 2,311, ಮಡಿವಾಳ 2,919, ಪರಿಶಿಷ್ಟ ಜಾತಿ 20,984, ಪರಿಶಿಷ್ಟ ಪಂಗಡ 3,253, ಲಂಬಾಣಿ 15,695, ಕುರುಬ 27,323, ಮುಸ್ಲಿಂ 19,023, ಬ್ರಾಹ್ಮಣ 3,208, ಗಂಗಾ ಮತಸ್ಥ 3,289, ಉಪ್ಪಾರ 2,555, ಕುಂಬಾರ 4,844, ವಿಶ್ವಕರ್ಮ 4,307, ಜೈನ 969, ರಜಪೂತ 4,119, ಮರಾಠ 2,504, ಕುಡು ಒಕ್ಕಲಿಗ ಅಂದಾಜು 9,528 ಮತದಾರರು ಸೇರಿದಂತೆ ಇನ್ನಿತರೆ ಜಾತಿಯ ಮತದಾರರಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

‘ಮೇಲ್ದರ್ಜೆಗೇರಲಿ’

‘ದ್ರಾಕ್ಷಿ ಕಣಜ ತಿಕೋಟಾ ರಫ್ತು ಕೇಂದ್ರವಾಗಿ ಅಭಿವೃದ್ಧಿಗೊಳ್ಳಬೇಕು. ವೈನ್‌ ಉದ್ಯಮ ಇನ್ನಷ್ಟು ವೇಗದಲ್ಲಿ ಬೆಳೆಯಬೇಕು. ವೈನ್‌ ಪಾರ್ಕ್‌ ನಿರ್ಮಾಣಗೊಳ್ಳಬೇಕಿದೆ. ಬಬಲೇಶ್ವರ, ತಿಕೋಟಾ ನೂತನ ತಾಲ್ಲೂಕು ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಎರಡು ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು’ ಎನ್ನುತ್ತಾರೆ ತಿಕೋಟಾದ ಬಾಗವಾನ.

ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿನ ಕೆರೆಗಳಿಗೆ ನೀರು ತುಂಬಲಾಗಿದೆ. ಕಾಲುವೆ ನಿರ್ಮಿಸಲಾಗಿದೆ. ಆದರೆ ರೈತರ ಹೊಲಕ್ಕೆ ನೀರು ಹರಿದಿಲ್ಲ. ಇದಕ್ಕೆ ಇನ್ನೆಷ್ಟು ದಿನ ಬೇಕಾಗಬಹುದು ? ಭೂಸ್ವಾಧೀನಪಡಿಸಿಕೊಂಡ ರೈತರ ಜಮೀನಿಗೆ ಪರಿಹಾರ ನೀಡುವುದು ಯಾವಾಗ ಎಂದು ಪ್ರಶ್ನಿಸುತ್ತಾರೆ ಆರ್‌.ಎಸ್‌.ಬಿರಾದಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry