ಭಾನುವಾರ, ಡಿಸೆಂಬರ್ 15, 2019
19 °C
ಡೇಟಿಂಗ್‌ ಜಾಲತಾಣದಲ್ಲಿ ಖಾತೆ ತೆರದಿದ್ದ ಆರೋಪಿ ಬಿಎ ಪದವೀಧರ ಸೆರೆ

ಯುವತಿಯರ ಸೋಗಿನಲ್ಲಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವತಿಯರ ಸೋಗಿನಲ್ಲಿ ವಂಚನೆ

ಬೆಂಗಳೂರು: ಯುವತಿಯರ ಸೋಗಿನಲ್ಲಿ ಯುವಕರನ್ನು ಪರಿಚಯ ಮಾಡಿಕೊಂಡು, ಡೇಟಿಂಗ್‌ಗೆ ಬರುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಬಿಎ ಪದವೀಧರ ಸಾಗರ್ ರಾವ್‌ (25) ಎಂಬಾತನನ್ನು ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೈಟ್‌ಫೀಲ್ಡ್‌ ಬಳಿಯ ವಿನಾಯಕ ಲೇಔಟ್‌ನ ನಿವಾಸಿಯಾದ ಆರೋಪಿ, ಪದವಿ ಮುಗಿದ ಬಳಿಕ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದ. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಅವಾಗಲೇ ‘ಫ್ರೀ ಡೇಟಿಂಗ್‌ ಡಾಟ್ ಕಾಮ್‌’ ಜಾಲತಾಣ ಹಾಗೂ ‘ಫ್ರೀ ಡೇಟಿಂಗ್’ ಆ್ಯಪ್‌ನಲ್ಲಿ ಯುವತಿಯರ ಹೆಸರಿನಲ್ಲಿ ಖಾತೆ ತೆರೆದಿದ್ದ ಆತ, ಅದರ ಮೂಲಕವೇ ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

‘ಶಿಲ್ಪಾ, ಸೋನಿಯಾ, ಮನೀಷಾ ಜೈನ್ ಹೆಸರಿನಲ್ಲಿ ಆರೋಪಿ ಖಾತೆ ಹೊಂದಿದ್ದ. ಆ ಖಾತೆಗಳಿಗೆ ಹಲವು ಯುವಕರು ಸಂದೇಶ ಕಳುಹಿಸುತ್ತಿದ್ದರು. ಅದಕ್ಕೆ ಆರೋಪಿಯು ಪ್ರತಿಕ್ರಿಯಿಸುತ್ತಿದ್ದ. ಯುವಕರ ಮೊಬೈಲ್‌ ಸಂಖ್ಯೆ ಪಡೆದುಕೊಂಡು ನಿರಂತರವಾಗಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಸಹ ಕಳುಹಿಸುತ್ತಿದ್ದ. ಡೇಟಿಂಗ್‌ಗೆ ಬರುವುದಾಗಿಯೂ ಹೇಳಿ ಯುವಕರನ್ನು ನಂಬಿಸುತ್ತಿದ್ದ.

‘ನನ್ನ ತಂದೆ–ತಾಯಿಗೆ ಹುಷಾರಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ನೀವು ಹಣ ಕೊಟ್ಟರೆ, ಅದನ್ನು ಆಸ್ಪತ್ರೆಗೆ ಕಟ್ಟುತ್ತೇನೆ. ನಂತರ, ನೀವು ಕರೆದ ಕಡೆ ಡೇಟಿಂಗ್‌ಗೆ ಬರುತ್ತೇನೆ’ ಎಂದು ಯುವಕರಿಗೆ ಸಂದೇಶ ಕಳುಹಿಸುತ್ತಿದ್ದ. ಅದನ್ನು ನಂಬುತ್ತಿದ್ದ ಯುವಕರು, ಆತನ ಬ್ಯಾಂಕ್‌ ಖಾತೆ ಹಣ ಜಮೆ ಮಾಡುತ್ತಿದ್ದರು. ಆ ಬಳಿಕ ಆರೋಪಿ, ಆ ಯುವಕರೊಂದಿಗೆ ಮಾತನಾಡುವುದನ್ನೇ ನಿಲ್ಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಬೆಂಗಳೂರಿನ ನಿವಾಸಿಯೊಬ್ಬರ ಮಗನನ್ನು ಆ್ಯಪ್‌ ಮೂಲಕ ಸಂಪರ್ಕಿಸಿದ್ದ ಆರೋಪಿ, ಆತನಿಂದ ₹71,000 ಪಡೆದುಕೊಂಡಿದ್ದ. ಅದು ತಿಳಿಯುತ್ತಿದ್ದ ನಿವಾಸಿಯು 2017ರ ಅಕ್ಟೋಬರ್ 10ರಂದು ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಿದ್ದೇವೆ. ಆತನಿಂದ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದೇವೆ ಎಂದರು.

**

ಪ್ರೇಯಸಿಗೆ ಉಡುಗೊರೆ

‘ಕಾಲೇಜು ಸಹಪಾಠಿ ಯುವತಿಯೊಬ್ಬರನ್ನು ಆರೋಪಿಯು ಪ್ರೀತಿಸುತ್ತಿದ್ದ. ಯುವಕರನ್ನು ವಂಚಿಸಿ ಗಳಿಸಿದ್ದ ಹಣದಲ್ಲೇ ಆತ, ಪ್ರೇಯಸಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಆ ಯುವತಿಯನ್ನು ಸಂಪರ್ಕಿಸಿ ಹೇಳಿಕೆ ಪಡೆಯಬೇಕಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಇತ್ತೀಚೆಗಷ್ಟೇ ಆರೋಪಿಗೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಅದಾದ ನಂತರವೂ ಆತ ಹಲವರನ್ನು ವಂಚಿಸಿದ್ದಾನೆ. ಯಾರ‍್ಯಾರು ವಂಚನೆಗೀಡಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದರು.

ಪ್ರತಿಕ್ರಿಯಿಸಿ (+)