ನ್ಯಾಯಾಲಯವನ್ನೇ ವಂಚಿಸಿ ಜಾಮೀನು

7

ನ್ಯಾಯಾಲಯವನ್ನೇ ವಂಚಿಸಿ ಜಾಮೀನು

Published:
Updated:

ಬೆಂಗಳೂರು: ಕೊಲೆ ಯತ್ನ ಆರೋಪದಡಿ ಜೈಲು ಸೇರಿದ್ದ ಆರೋಪಿ ರಮೇಶ್‌ ಎಂಬಾತ, ಮೇಯೊ ಹಾಲ್‌ನ 28ನೇ ನ್ಯಾಯಾಲಯವನ್ನು ವಂಚಿಸಿ ಜಾಮೀನು ಮಂಜೂರು ಮಾಡಿಸಿಕೊಂಡು ಜೈಲಿನಿಂದ ಹೊರಗೆ ಬಂದಿದ್ದಾನೆ.

ಪ್ರಕರಣದ ವಿಚಾರಣೆ ನಡೆಯುತ್ತಿದ್ದ 10ನೇ ಎಸಿಎಂಎಂ ನ್ಯಾಯಾಲಯದ ಶಿರಸ್ತೇದಾರರಾದ ಎಂ. ಲತಾ, ಆರೋಪಿಯ ಕೃತ್ಯದ ಸಂಬಂಧ ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಹಲಸೂರಿನ ಎಂ.ವಿ.ಗಾರ್ಡನ್‌ ನಿವಾಸಿ ರಮೇಶ್‌, 2016ರಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ್ದ. ಆ ಪ್ರಕರಣದಲ್ಲಿ ಆತನನ್ನು ಬಂಧಿಸಿದ್ದ ಪೊಲೀಸರು, ಜೈಲಿಗೆ ಕಳುಹಿಸಿದ್ದರು. ಅಂದಿನಿಂದ ಜೈಲಿನಲ್ಲೇ ಇದ್ದ ಆರೋಪಿಗೆ ಯಾವುದೇ ನ್ಯಾಯಾಲಯದಲ್ಲೂ ಜಾಮೀನು ಸಿಕ್ಕಿರಲಿಲ್ಲ. ಹೀಗಾಗಿ ಆತ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಧೀಶರ ದಿಕ್ಕು ತಪ್ಪಿಸಿ ಜಾಮೀನು ಪಡೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.

‘10ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿದ್ದ ಸಿ.ಸಿ ನಂ. 52089/2016 ಪ್ರಕರಣದ ಆರೋಪಿ ರಮೇಶ್‌, ಜಾಮೀನು ಮೇಲೆ ಮಾರ್ಚ್‌ 2ರಂದು ಬಿಡುಗಡೆ ಹೊಂದಿದ್ದಾನೆ. ತದನಂತರ ಜಾಮೀನು ಪ್ರತಿ ಪರಿಶೀಲನೆ ನಡೆಸಿದಾಗ, ಆತ ಅಕ್ರಮವೆಸಗಿ ಜಾಮೀನು ಪಡೆದಿರುವುದು ಗೊತ್ತಾಗಿದೆ. 4ನೇ ಅಪರ ಸಿಟಿ ಸಿವಿಲ್‌ ನ್ಯಾಯಾಲಯದ ಕ್ರಿ.ಸಂ. 25093/2018ರ (ಕೆ.ಜೆ.ಹಳ್ಳಿ ಠಾಣೆ) ಮೂಲ ಜಾಮೀನು ಪ್ರತಿಯನ್ನು ನಕಲು ಮಾಡಿ 28ನೇ ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯಾಲಯ ಹಾಗೂ ನ್ಯಾಯಾಧೀಶರನ್ನು ವಂಚಿಸಿ ಜಾಮೀನು ಮಂಜೂರು ಮಾಡಿಸಿಕೊಂಡಿದ್ದಾನೆ’ ಎಂದು ಲತಾ ದೂರಿನಲ್ಲಿ ತಿಳಿಸಿದ್ದಾರೆ. ಆ ಬಗ್ಗೆ ದಾಖಲೆ ನೀಡುವಂತೆ ಕೋರಿದ್ದೇವೆ ಎಂದು ವಿವರಿಸಿದರು.

ವರ್ಗವಾಗಿದ್ದ ನ್ಯಾಯಾಧೀಶರ ಸಹಿ ದುರ್ಬಳಕೆ: ಹೆಚ್ಚುವರಿ ಸಿಟಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ರೊಬ್ಬರು ಮೂರು ವರ್ಷಗಳ ಹಿಂದೆಯೇ ವರ್ಗವಾಗಿದ್ದಾರೆ. ಅವರ ಸಹಿಯನ್ನು ಆರೋಪಿ ನಕಲು ಮಾಡಿದ್ದಾನೆ. ಈ ಬಗ್ಗೆ ಆ ನ್ಯಾಯಾಧೀಶರಿಗೂ ಮಾಹಿತಿ ನೀಡಲಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗೆ 4ನೇ ಅಪರ ಸಿಟಿ ಸಿವಿಲ್‌ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಅದೇ ಜಾಮೀನು ಆದೇಶದ ಪ್ರತಿಯನ್ನು ಪಡೆದುಕೊಂಡಿದ್ದ ಆರೋಪಿ, ಅದರ ಮೊದಲ ಪುಟ ಹಾಗೂ ಕೊನೆ ಪುಟವನ್ನು ತಿದ್ದಿದ್ದ. ಹೊಸದಾಗಿ ನಕಲಿ ಜಾಮೀನು ಆದೇಶದ ಪ್ರತಿಯೊಂದ್ನು ಸಿದ್ಧಪಡಿಸಿದ್ದ. ಮೊದಲ ಹಾಗೂ ಕೊನೆ ಪುಟ ಹೊರತುಪಡಿಸಿ ಉಳಿದೆಲ್ಲ ಪುಟಗಳಲ್ಲಿ ತನ್ನ ಪ್ರಕರಣದ ಬಗ್ಗೆ ವಿವರಣೆ ಬರೆದಿದ್ದ.

ಅದನ್ನೇ ತನ್ನ ವಕೀಲರ ಮೂಲಕ 28ನೇ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಿ, ‘ಮೇಲು ಹಂತದ ನ್ಯಾಯಾಲಯದ ಜಾಮೀನು ನೀಡಿದೆ. ಅದರನ್ವಯ ಈ ಪ್ರಕರಣದಲ್ಲೂ ಜಾಮೀನು ಮಂಜೂರು ಮಾಡಿ’ ಎಂದು ಕೋರಿದ್ದ. ಆತ ಜಾಮೀನು ಅರ್ಜಿಯ ಜತೆಗೆ ಸಲ್ಲಿಸಿದ್ದ ಆದೇಶದ ಪ್ರತಿ ಅಸಲಿ ಎಂದು ತಿಳಿದ ನ್ಯಾಯಾಧೀಶರು, ಜಾಮೀನು ಸಹ ಮಂಜೂರು ಮಾಡಿದ್ದರು. ಅದರ ಪ್ರತಿಯನ್ನೇ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಕೊಟ್ಟು, ಅಲ್ಲಿಂದ ಆರೋಪಿ ಹೊರಗೆ ಬಂದಿದ್ದಾನೆ ಎಂದು ಪೊಲೀಸರು ವಿವರಿಸಿದರು.

ಆದೇಶ ಪರಿಶೀಲಿಸದ ಸಿಬ್ಬಂದಿ: ‘ಆರೋಪಿಯ ಜಾಮೀನು ಅರ್ಜಿ ಹಾಗೂ ನಕಲಿ ಆದೇಶ ಪ್ರತಿಯನ್ನು ನ್ಯಾಯಾಲಯದ ಸಿಬ್ಬಂದಿ ಪರಿಶೀಲನೆಗೆ ಒಳಪಡಿಸಿರಲಿಲ್ಲ. ಆ ಅರ್ಜಿಯನ್ನು ಯಥಾವತ್ತಾಗಿ ನ್ಯಾಯಾಧೀಶರ ವಿಚಾರಣೆಗೆ ನೀಡಿದ್ದರು. ಹೀಗಾಗಿ, ಆತನಿಗೆ ಸಲೀಸಾಗಿ ಜಾಮೀನು ಸಿಗುವಂತಾಯಿತು’ ಎಂದು ತಿಳಿಸಿದರು.

‘ಸಾಮಾನ್ಯವಾಗಿ ಎಲ್ಲ ಪ್ರಕರಣದಲ್ಲಿ ವಕೀಲರೇ ಆರೋಪಿಗಳ ಪರ ಜಾಮೀನು ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಜತೆಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸುತ್ತಾರೆ. ಪ್ರತಿ ಬಾರಿಯೂ ಸಿಬ್ಬಂದಿ, ಆ ಎಲ್ಲ ದಾಖಲೆಗಳ ಪರಿಶೀಲನೆ ನಡೆಸುವುದಿಲ್ಲ.ಸಿಬ್ಬಂದಿಯ ನಿರ್ಲಕ್ಷ್ಯವೇ ಇಂಥ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತಿದೆ. ಇದರಲ್ಲಿ ನ್ಯಾಯಾಲಯದ ಸಿಬ್ಬಂದಿ ಲೋಪವಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ಪೊಲೀಸರಿಗೆ ಸಿಕ್ಕ ಸುಳಿವು: 2016ರಲ್ಲಿ ನಡೆದಿದ್ದ ಪ್ರಕರಣವಾಗಿದ್ದರಿಂದ ಆರೋಪಿಯು ಸಲ್ಲಿಸಿದ್ದ ಜಾಮೀನಿಗೆ ಹಲಸೂರು ಠಾಣೆ ಪೊಲೀಸರು ಆಕ್ಷೇಪಣೆ ಸಲ್ಲಿಸಿರಲಿಲ್ಲ. ಆದರೆ, ಆರೋಪಿ ಬಿಡುಗಡೆಗೊಂಡ ಬಳಿಕ ಎರಡೂ ನ್ಯಾಯಾಲಯದ ಜಾಮೀನು ಮಂಜೂರು ಆದೇಶವನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ್ದರು. ಅದೇ ವೇಳೆ ಆರೋಪಿಯ ಕೃತ್ಯದ ಸುಳಿವು ಸಿಕ್ಕಿತು.

‘ಆದೇಶಗಳಲ್ಲಿ ಗೊಂದಲಗಳಿದ್ದವು. ಪ್ರಕರಣದ ಸಂಖ್ಯೆ ಆಧರಿಸಿ ಮಾಹಿತಿ ಕಲೆಹಾಕಿದ್ದೆವು. ಕೆ.ಜೆ.ಹಳ್ಳಿ ಠಾಣೆ ಸಿಬ್ಬಂದಿ, ಆದೇಶವು ನಕಲಿ ಎಂಬುದನ್ನು ಖಾತ್ರಿಪಡಿಸಿದರು. ಬಳಿಕ ನ್ಯಾಯಾಲಯದ ಅಧಿಕಾರಿಗಳಿಗೆವಿಷಯ ತಿಳಿಸಿದೆವು’ ಎಂದು ಹಲಸೂರು ಪೊಲೀಸರು ತಿಳಿಸಿದರು.

ಆರೋಪಿ ಕೃತ್ಯ ಹಲವರ ಸಹಕಾರ?

‘ಆರೋಪಿಯು ಜೈಲಿನಲ್ಲಿದ್ದುಕೊಂಡೇ ದಾಖಲೆಗಳನ್ನೆಲ್ಲ ನಕಲು ಮಾಡಿಸಿದ್ದಾನೆ. ಆತನಿಗೆ ಹಲವರು ಸಹಕಾರ ನೀಡಿರುವ ಮಾಹಿತಿ ಇದೆ. ಅವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ತನಿಖಾಧಿಕಾರಿ ಹೇಳಿದರು.

‘ವಂಚನೆ (ಐಪಿಸಿ 419, 420), ಸಹಿ ನಕಲು ಮಾಡಿರುವ (ಐಪಿಸಿ 465), ನಕಲಿ ದಾಖಲೆ ಸೃಷ್ಟಿ (ಐಪಿಸಿ 468), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಿದ (ಐಪಿಸಿ 471) ಆರೋಪದಡಿ ರಮೇಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಚುನಾವಣೆ ಕೆಲಸದ ಪ್ರಯುಕ್ತ ಪ್ರಕರಣದ ತನಿಖೆ ಚುರುಕುಗೊಳಿಸಲು ಆಗುತ್ತಿಲ್ಲ. ಆದರೂ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry