ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮೋದಿ– ಟ್ವಿಟರ್‌ನಲ್ಲಿ ಬಿಸಿ ಬಿಸಿ ಚರ್ಚೆ

Last Updated 10 ಏಪ್ರಿಲ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ತಾರಾ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಕೊನೆಯ ಬಾರಿ  ಭೇಟಿ ನೀಡಿದ್ದು ಇದೇ ಫೆಬ್ರುವರಿಯಲ್ಲಿ. ಆ ಬಳಿಕ ಅವರು ಇತ್ತ ತಲೆ ಹಾಕದಿರುವ ವಿಚಾರವು ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಮೋದಿ ಬಾರದಿರುವುದು ಏಕೆ ಎಂಬ ಬಗ್ಗೆ ಟ್ವಿಟರ್‌ನಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

‘ಕರ್ನಾಟಕಕ್ಕೆ ಬನ್ನಿ’ ಎಂದು ಮೋದಿ ಬೆಂಬಲಿಗರು ಒಂದೆಡೆ ಬೇಡಿಕೆ ಮಂಡಿಸುತ್ತಿದ್ದಾರೆ. ಇನ್ನೊಂದೆಡೆ ಮೋದಿ ಟೀಕಾಕಾರರು, ‘ರಾಜ್ಯದಲ್ಲಿ ಬಿಜೆಪಿ ಸೋಲಬಹುದು ಎಂಬ ಭಯದಿಂದ ಪ್ರಧಾನಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ’ ಎನ್ನುತ್ತಿದ್ದಾರೆ.

ದಾವಣಗೆರೆಯಲ್ಲಿ ಫೆಬ್ರುವರಿ 27ರಂದು ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಸೀದಾ ರುಪಯ್ಯಾ’ ಎಂಬ ಹಣೆಪಟ್ಟಿ ಕಟ್ಟಿದ್ದರು. ಇದಾದ ಮೇಲೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮೂರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಭಾನುವಾರ ನಡೆದ ‘ಜನಾಶೀರ್ವಾದ ಯಾತ್ರೆ’ ಸಮಾರೋಪದಲ್ಲೂ ಅವರು ಭಾಗವಹಿಸಿದ್ದರು.

‘ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರಿಗಿಂತ ಯಡಿಯೂರಪ್ಪ ಉತ್ತಮರೆಂದು ಭಾವಿಸುತ್ತೀರಾ. ಇಲ್ಲಿನ ಫಲಿತಾಂಶದ ಬಗ್ಗೆ ಅರಿತಿರುವ ಮೋದಿ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ತರುಣ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ. ಸ್ವಾತಿ ಜೋಷಿ ಇನ್ನೂ ನೇರ ದಾಳಿ ನಡೆಸಿದ್ದಾರೆ. ‘ಪ್ರಧಾನಿ ಅವರು ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಭಯಗೊಂಡಿದ್ದಾರೆಯೇ ಅಥವಾ ಸೋಲು ನಿಶ್ಚಿತ ಎಂಬ ಕಾರಣಕ್ಕೆ ಅವರ ಆಂತರಿಕ ಗುಪ್ತಚರ ವಿಭಾಗವು ಕರ್ನಾಟಕದಿಂದ ದೂರ ಉಳಿಯುವಂತೆ ಸಲಹೆ ನೀಡಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಕರ್ನಾಟಕದ ಚುನಾವಣಾ ರಣರಂಗದಲ್ಲಿ ಮೋದಿ ಕಾಣಿಸಿಕೊಳ್ಳದಿರುವುದು ಕೆಲವು ನೆಟ್ಟಿಗರ ಆತಂಕಕ್ಕೂ ಕಾರಣವಾಗಿದೆ. ‘ಮೋದಿ ಇನ್ನೂ ಇಲ್ಲಿನ ಚುನಾವಣಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ರಾಜ್ಯಕ್ಕೆ ಭೇಟಿಯೂ ನೀಡಿಲ್ಲ. ಇದು ಆತಂಕಕಾರಿ ವಿಷಯ’ ಎಂದು ನಟೇಶ್‌ ಶೇಖರ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘ಅವರಿಗೆ ಯಡಿಯೂರಪ್ಪ ನಾಯಕತ್ವದ ಬಗ್ಗೆ ಸಮ್ಮತಿ ಇಲ್ಲ. ಅವರನ್ನು ರಾಜ್ಯದ ಭಾವಿ ಮುಖ್ಯಮಂತ್ರಿ ಎಂದು ಬಿಂಬಿಸಲು ಅವರಿಗೆ ಮನಸ್ಸಿದ್ದಂತಿಲ್ಲ’ ಎಂದೂ ಟ್ವೀಟ್‌ ಮಾಡಿದ್ದಾರೆ.

ಸಂತೋಷ್‌ ಅಯ್ಯಂಗಾರ್‌, ‘ರಾಜ್ಯದಲ್ಲಿ ಯಾವಾಗ ನಮಗಾಗಿ ಚುನಾವಣಾ ಪ್ರಚಾರ ಆರಂಭಿಸುತ್ತೀರಿ ಮೋದಿಜಿ’ ಎಂದು ಟ್ವೀಟ್‌ನಲ್ಲಿ ಕೇಳಿದ್ದಾರೆ. ಅಜಯ್‌ ವರ್ಮಾ ಅವರು, ‘ರಾಜ್ಯದ ಜನರು ಬಿಜೆಪಿ ಗೆಲುವಿನ ಕ್ಷಣಗಣನೆಯಲ್ಲಿ ತೊಡಗಿದ್ದಾರೆ. ನೀವು ರಾಜ್ಯದಲ್ಲಿ ಪ್ರಚಾರದಲ್ಲಿ ಭಾಗಿಯಾದರೆ ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಲಿದೆ’ ಎಂದು ಹೇಳಿದ್ದಾರೆ.

ಚುನಾವಣೆಗೆ ಅಣಿಯಾಗುತ್ತಿದ್ದ ರಾಜ್ಯಕ್ಕೆ ಪ್ರಧಾನಿ ಅವರು 2017ರ ಅಕ್ಟೋಬರ್‌ 29ರಂದು ಭೇಟಿ ನೀಡಿದ್ದರು. ಆಗ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಲ್ಲದೇ, ನಗರದ ಅರಮನೆ ಮೈದಾನದಲ್ಲಿ ನಡೆದಿದ್ದ ಸೌಂದರ್ಯ ಲಹರಿ ಪಾರಾಯಣೋತ್ಸವದ ಸಮಾರೋಪದಲ್ಲೂ ಭಾಗಿಯಾಗಿದ್ದರು. ಬೀದರ್‌– ಕಲಬುರ್ಗಿ ರೈಲ್ವೆ ಮಾರ್ಗವನ್ನು ಉದ್ಘಾಟಿಸಿದ್ದರು. ಇದೇ ವರ್ಷದ ಫೆಬ್ರುವರಿ 4ರಂದು ನಗರದಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ್ದರು. ಬಳಿಕ ಮೈಸೂರಿನಲ್ಲಿ ಫೆಬ್ರುವರಿ 19ರಂದು ನಡೆದಿದ್ದ ರ‍್ಯಾಲಿಯಲ್ಲೂ ಪಾಲ್ಗೊಂಡಿದ್ದರು.

‘ಕರ್ನಾಟಕದಲ್ಲಿ ಬಿಜೆಪಿ ಯುದ್ಧಕ್ಕೆ ಮುನ್ನವೇ ಸೋಲೊಪ್ಪಿಕೊಂಡಿರುವಂತೆ ತೋರುತ್ತಿದೆ! ಆ ಪಕ್ಷದ ಪರವಾದ ಚುನಾವಣಾ ಸಮೀಕ್ಷೆಗಳು ಹಾಗೂ ಮೋದಿ ಇಬ್ಬರೂ ಕಾಣಿಸುತ್ತಿಲ್ಲ’ ಎಂದು ಜಯ್‌ ಅಂಬಾಡಿ ಟ್ವೀಟ್‌ ಮಾಡಿದ್ದಾರೆ. ‘ಮೋದಿ ಅವರೇ ಎಂದಿನಂತೆ ನೀವು ಇಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೀರಿ ಎಂಬ ನಿರೀಕ್ಷೆ ನಮ್ಮದು. ಇದು ನೆನಪೋಲೆಯಷ್ಟೇ’ ಎಂದು ಉಷಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT