ಶುಕ್ರವಾರ, ಆಗಸ್ಟ್ 14, 2020
23 °C
ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ತರಬೇತಿ

ಇವಿಎಂ, ವಿವಿಪ್ಯಾಟ್ ಕಾರ್ಯನಿರ್ವಹಣೆ ಪ್ರಾತ್ಯಕ್ಷಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವಿಎಂ, ವಿವಿಪ್ಯಾಟ್ ಕಾರ್ಯನಿರ್ವಹಣೆ ಪ್ರಾತ್ಯಕ್ಷಿಕೆ

ಬೆಳಗಾವಿ: ಚಲಾವಣೆಯಾದ ಪ್ರತಿ ಮತವನ್ನೂ ಖಾತ್ರಿಪಡಿಸುವ ಉದ್ದೇಶದಿಂದ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ವಿವಿ ಪ್ಯಾಟ್‌ಗಳನ್ನು (ಮತ ಖಾತ್ರಿ ಯಂತ್ರ) ಬಳಸಲಾಗುತ್ತಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬೆಳಗಾವಿ, ಹುಕ್ಕೇರಿ, ಖಾನಾಪುರ ಹಾಗೂ ಬೈಲಹೊಂಗಲ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿ ಪ್ಯಾಟ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.

‘ಪ್ರತಿ ಮತಗಟ್ಟೆಯಲ್ಲೂ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಜತೆಗೆ ವಿವಿಪ್ಯಾಟ್ (ವೆರಿಫೈಯೇಬಲ್ ವೋಟರ್ ಪೇಪರ್ ಆಡಿಟ್ ಟ್ರಾಲ್) ಪೆಟ್ಟಿಗೆ ಇರಿಸಲಾಗಿರುತ್ತದೆ. ಮತದಾರ ಮತಗಟ್ಟೆಗೆ ಬಂದಾಗ ಮತಯಂತ್ರದಲ್ಲಿ ಹಸಿರು ದೀಪ ಉರಿಯುತ್ತಿರುವುದನ್ನು ಖಚಿತಪಡಿಸಿಕೊಂಡು ಬ್ಯಾಲೆಟ್ ಯುನಿಟ್‌ನಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿ ಹೆಸರು/ ಚಿಹ್ನೆಯ ಎದುರು ಇರುವ ನೀಲಿ ಗುಂಡಿ ಒತ್ತಬೇಕು. ಬಳಿಕ ಆಯ್ಕೆ ಮಾಡಿಕೊಂಡ ಅಭ್ಯರ್ಥಿ ಹೆಸರು, ಚಿಹ್ನೆ ಎದುರು ಇರುವ ಕೆಂಪು ದೀಪ ಹಾಗೂ ಬೀಪ್ ಸದ್ದು ಮತ ಚಲಾವಣೆಗೊಂಡಿರುವುದನ್ನು ಖಚಿತಪಡಿಸುತ್ತದೆ. ಇದಾದ ಬಳಿಕ ಪಕ್ಕದಲ್ಲೇ ಇಟ್ಟಿರುವ ವಿವಿಪ್ಯಾಟ್ ಪೆಟ್ಟಿಗೆಯಲ್ಲಿ ಮತ ಚಲಾಯಿಸಿದ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆ ಒಳಗೊಂಡಿರುವ ಬ್ಯಾಲೆಟ್ ಚೀಟಿಯನ್ನು 7 ಸೆಕೆಂಡ್‌ಗಳವರೆಗೆ ಮತದಾರ ನೋಡಬಹುದು’ ಎಂದು ಮಾಹಿತಿ ನೀಡಿದರು.

‘ವಿವಿಪ್ಯಾಟ್ ಪರದೆ ಮೇಲೆ ಕಾಣಿಸುವ ಚೀಟಿಯು ಏಳು ಸೆಕೆಂಡ್‌ಗಳ ಬಳಿಕ ಸ್ವಯಂ ತುಂಡಾಗಿ ಅದರ ಕೆಳಗಿನ ಪೆಟ್ಟಿಗೆಯಲ್ಲಿ ಬೀಳುತ್ತದೆ. ಪ್ರತಿ ಮತದಾರ ತಾವು ಚಲಾಯಿಸಿದ ಮತವನ್ನು ವಿವಿಪ್ಯಾಟ್ ಪರದೆ ಮೇಲೆ ನೋಡುವ ಮೂಲಕ ಸ್ವಯಂ ಖಾತ್ರಿಪಡಿಸಿಕೊಳ್ಳಬಹುದು’ ಎಂದು ವಿವರಿಸಿದರು.

‘ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಗಳು ಯಶಸ್ವಿಯಾಗಲು ಡೇಟಾ ಎಂಟ್ರಿ ಆಪರೇಟರ್‌ಗಳ ಪಾತ್ರ ಪ್ರಮುಖವಾಗಿದೆ. ಪಂಚಾಯ್ತಿಯ ಪ್ರತಿ ಲೆಕ್ಕ ಹಾಗೂ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸುವ ಮೂಲಕ ಅಧಿಕಾರಿಗಳಿಗೆ ಸಹಕಾರ ನೀಡಬೇಕು’ ಎಂದು ಸೂಚಿಸಿದರು.

ಪಾಲಿಕೆ ಆಯುಕ್ತ ಕೃಷ್ಣೇಗೌಡ ತಾಯಣ್ಣವರ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ತರಬೇತುದಾರ ಗುರುರಾಜ ದೇಶಪಾಂಡೆ, ಇ-ಆಡಳಿತ ರಾಜ್ಯ ಸಂಯೋಜಕ ಅಮೃತರಾಜ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.