ಬುಧವಾರ, ಜುಲೈ 15, 2020
22 °C
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನ

ಕಲ್ಲಂಗಡಿ ಸೇವನೆಗೆ ಮೊರೆ ಹೋದ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲಂಗಡಿ ಸೇವನೆಗೆ ಮೊರೆ ಹೋದ ಜನರು

ಭಾಲ್ಕಿ: ಎಲ್ಲೆಡೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ದೇಹಕ್ಕೆ ತಂಪಾದ ಅನುಭೂತಿ ನೀಡುವ ಕಲ್ಲಂಗಡಿ ಹಣ್ಣಿನ ಸೇವನೆಗೆ ಜನರು ಮೊರೆ ಹೋಗಿದ್ದಾರೆ.

ಈ ಕಾರಣಕ್ಕಾಗಿಯೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು, ಮಾರಾಟ ಮಾಡುವವರ ಆದಾಯ ದುಪ್ಪಟ್ಟಾಗಿದೆ. ಕಲ್ಲಂಗಡಿ ಬಹುತೇಕರಿಗೆ ಪ್ರಿಯವಾದ ಹಣ್ಣು. ಕಲ್ಲಂಗಡಿಯ ಕೆಂಪು ರಸದಿಂದ ಆರೋಗ್ಯಯುತ ದೇಹ ಪಡೆದುಕೊಳ್ಳಬಹುದು. ಕಲ್ಲಂಗಡಿ ಹೆಚ್ಚು ಪೌಷ್ಟಿಕಾಂಶ, ನ್ಯೂಟ್ರೀನ್ ಅಡಕವಾಗಿರುವ ಆರೋಗ್ಯದಾಯಿ ಪೇಯ ಕೂಡ ಆಗಿದೆ. ಅದು ದೇಹವನ್ನು ತಂಪುಗೊಳಿಸುತ್ತದೆ ಅಲ್ಲದೇ ಚೇತೋಹಾರಿಯೂ ಆಗಿದೆ.

ಪಟ್ಟಣದ ಬಸ್‌ ನಿಲ್ದಾಣ, ಮಹಾತ್ಮ ಗಾಂಧಿ, ಬಸವೇಶ್ವರ ವೃತ್ತ, ತರಕಾರಿ ಮಾರುಕಟ್ಟೆ ಪ್ರದೇಶ ಸೇರಿದಂತೆ ತಾಲ್ಲೂಕಿನ ಕೋನ ಮೇಳಕುಂದಾ, ಹುಮನಾಬಾದ್‌, ನೀಲಂಗಾ, ಜೈನಾಪೂರ ಮುಖ್ಯ ರಸ್ತೆಯಲ್ಲಿರುವ ಹೊಲಗಳ ಬಳಿ ಕಲ್ಲಂಗಡಿ ಹಣ್ಣಿನ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

‘ಕೆಲ ದಿನಗಳ ಹಿಂದೆ ₹ 10 ಕ್ಕೆ ಒಂದು ಕೆಜಿಯಂತೆ ಮಾರಾಟ ಮಾಡಲಾಗುತ್ತಿತ್ತು. ಈಗ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ₹ 15ಕ್ಕೆ ಒಂದು ಕೆಜಿಯಂತೆ ಮಾರಾಟ ಮಾಡಲಾಗುತ್ತಿದೆ. ಬಂಡಿಯಲ್ಲಿ ಮಾರಾಟ ಮಾಡುವವರ ಬಳಿ ಖರೀದಿಸುವುದಕ್ಕಿಂತ ಹೆಚ್ಚಾಗಿ ಜನರು ನೇರವಾಗಿ ಹೊಲಗಿಗೆ ತೆರಳಿ ಖರೀದಿಸುತ್ತಿದ್ದಾರೆ’ ಎಂದು ವ್ಯಾಪಾರಸ್ಥರಾದ ಮೈನೊದ್ದೀನ್‌, ಸಲೀಂ ಹೇಳಿದರು.

‘ಕಲ್ಲಂಗಡಿ ಹಣ್ಣು ದೇಹಕ್ಕೆ ಮಾತ್ರ ಸಹಕಾರಿವಲ್ಲದೆ ಚರ್ಮದ ಅರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿ ಶೇ.93ರಷ್ಟು ನೀರಿನ ಅಂಶವಿದೆ. ಇದು ಚರ್ಮದಲ್ಲಿ ಅಗತ್ಯ ತೇವಾಂಶ ಕಾಪಾಡಿ ಚರ್ಮವನ್ನು ತಾಜಾ ಮತ್ತು ಕಾಂತಿಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ವಿಟಮಿನ್ ಎ, ಇ, ಸಿ ಮತ್ತು ಬಿ6 ಒಳಗೊಂಡಂತೆ ಅನೇಕ ಖನಿಜಾಂಶಗಳಿವೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಸಂತೋಷ ಕಾಳೆ ತಿಳಿಸಿದರು.

ಕಲ್ಲಂಗಡಿ ಸೇವನೆ ಲಾಭ: ‘ಕಲ್ಲಂಗಡಿ ಹಣ್ಣಿನ ಹಿತಮಿತ ಸೇವನೆ ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ, ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಮೂತ್ರ ಸಮಸ್ಯೆ ನೀಗಿಸುತ್ತದೆ, ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ಕೊಬ್ಬು ಕಡಿಮೆ ಮಾಡಿ ತೂಕ ಇಳಿಸುತ್ತದೆ, ದೇಹಕ್ಕೆ ಅವಶ್ಯ ನೀರಿನಾಂಶ ನೀಡುತ್ತದೆ. ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನಾಂಶ ಇರುವುದರಿಂದ ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ’ ಎಂದು ಅವರು ವಿವರಿಸಿದರು.

**

ಬಿಸಿಲು ಹೆಚ್ಚಾಗುತ್ತಿರುವಂತೆ ಕಲ್ಲಂಗಡಿ ಹಣ್ಣಿನ ಖರೀದಿಗೆ ಬೇಡಿಕೆ ಹೆಚ್ಚಿದೆ. ಪ್ರತಿನಿತ್ಯ ₹ 7ರಿಂದ 8 ಸಾವಿರ ರೂಪಾಯಿ ಮೌಲ್ಯದ ಹಣ್ಣಿನ ಮಾರಾಟ ನಡೆದಿದೆ – 

ವಿನೋದ ಪಾಟೀಲ, ರೈತ.

**

–ಬಸವರಾಜ್‌ ಎಸ್‌.ಪ್ರಭಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.