ಬುಧವಾರ, ಜುಲೈ 15, 2020
22 °C
14 ವಿಧಾನಸಭೆ ಚುನಾವಣೆಗಳಲ್ಲಿ ಶೇ 7ರಷ್ಟು ಮಹಿಳೆಯರು ಸ್ಪರ್ಧೆ, ಶೇ 80ರಷ್ಟು ಸ್ಪರ್ಧಿಗಳಿಗೆ ಠೇವಣಿ ನಷ್ಟ

ಪುರುಷರಿಗಷ್ಟೇ ಮಣೆ, ಮಹಿಳೆ ಕಡೆಗಣನೆ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಪುರುಷರಿಗಷ್ಟೇ ಮಣೆ, ಮಹಿಳೆ ಕಡೆಗಣನೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈವರೆಗೆ ನಡೆದ ವಿಧಾನಸಭೆ ಚುನಾವಣೆಗಳ ಇತಿಹಾಸದ ಪುಟ ತಿರುವಿ ಹಾಕಿದರೆ, ಪುರುಷರದೇ ಪಾರುಪತ್ಯ ಢಾಳವಾಗಿ ಗೋಚರಿಸುತ್ತದೆ. ಮಹಿಳೆಯರಿಗೆ ರಾಜಕೀಯವಾಗಿ ದೊರೆಯಬೇಕಾದ ಪ್ರಾತಿನಿಧ್ಯ ‘ಮರೀಚಿಕೆ’ಯಾಗಿ ಉಳಿದಿದೆ.

ಲೋಕಸಭೆ ಹಾಗೂ  ವಿಧಾನಸಭೆ ಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪುರುಷ ಪ್ರಧಾನ ಸಮಾಜದಲ್ಲಿ ರಾಜ ಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿದ್ದರೂ ಪ್ರಬಲವಾಗಿ ಬೆಳೆಯಲು ಸಾಧ್ಯವಾಗಿಲ್ಲ. ಜಿಲ್ಲೆಯ ಭೂತಕಾಲದ ಚುನಾವಣಾ ಕಣಗಳ ಅಂಕಿಅಂಶ ಅವಲೋಕಿಸಿದರೆ ವೇದ್ಯವಾಗುತ್ತದೆ.

ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಆರಂಭಗೊಂಡ ಮೊದಲ ನಾಲ್ಕರಲ್ಲಿ ಮಹಿಳೆಯರು ಅತ್ತ ಕಣ್ಣು ಕೂಡ ಹಾಯಿಸಿಲ್ಲ. 21 ವರ್ಷಗಳ ನಂತರ (1972) ಮೊದಲ ಬಾರಿಗೆ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಪರಿಪಾಲನೆ ಪರಿಣಾಮವಾಗಿ ರೇಣುಕಾ ರಾಜೇಂದ್ರನ್ ಶಾಸಕಿಯಾಗಿ ವಿಧಾನಸೌಧ ಪ್ರವೇಶಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ನಡೆದ 14 ಚುನಾವಣೆಗಳಲ್ಲಿ (1951ರಿಂದ 2013ರವರೆಗೆ) ಒಟ್ಟು 438 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಪೈಕಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 30 ಮಾತ್ರ! ಅವರಲ್ಲಿ ಶಾಸಕಿಯರಾದವರು ಮೂರು ಮಂದಿಯಷ್ಟೇ!! ಐದು ಬಾರಿ ಮಹಿಳೆಯರು ಗೆಲುವು ಸಾಧಿಸಿದ್ದರೂ ಅವರಲ್ಲಿ ರೇಣುಕಾ ರಾಜೇಂದ್ರನ್ ಅವರೇ ಮೂರು ಸಲ ಶಾಸಕಿಯಾಗಿದ್ದರು ಎಂಬುದು ವಿಶೇಷ.

ಮೊದಲ ಹೆಜ್ಜೆ ಗುರುತು: 1972ರಲ್ಲಿ ದೇವರಾಜ ಅರಸು ಸಾಮಾಜಿಕವಾಗಿ ಶೋಷಿತ ಸಣ್ಣಪುಟ್ಟ ಜಾತಿಗಳ ಭರವಸೆಯ ಹೊಸ ಮುಖಗಳನ್ನು ರಾಜಕೀಯಕ್ಕೆ ಪರಿಚಯಿಸಿದರು. ಆಗ ಕೋಲಾರ ಜಿಲ್ಲೆಯಿಂದ ಗೆದ್ದ ಮೂವರು ದಲಿತರ ಪೈಕಿ ರೇಣುಕಾ ರಾಜೇಂದ್ರನ್ ಕೂಡ ಒಬ್ಬರು.

ಸ್ವಾತಂತ್ರ್ಯ ಹೋರಾಟಗಾರ ಚಿನ್ನಪ್ಪ ಅವರ ಪುತ್ರಿಯಾದ ಇವರು ಪರಿಶಿಷ್ಟ ಜಾತಿ ಮೀಸಲಾಗಿದ್ದ ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 1978ರಲ್ಲಿ ಎರಡನೇ ಬಾರಿ ಚಿಕ್ಕಬಳ್ಳಾಪುರದಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋದರ ಮಾವ, ಜನತಾಪಕ್ಷದ ಎ.ಮುನಿಯಪ್ಪ ಅವರ ವಿರುದ್ದ 10,370 ಮತಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1979ರಲ್ಲಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿಗೆ ಸೆಡ್ಡು ಹೊಡೆದರು.  ಈ ವೇಳೆ ಅರಸು ಸಂಪುಟದ ಬಹುಪಾಲು ಸಚಿವರು ಅವರಿಗೆ ನಿಷ್ಠರಾದರೆ, ಬೆರಳೆಣಿಕೆಯಷ್ಟು ಮಂದಿ ಇಂದಿರಾ ನೇತೃತ್ವದ ಕಾಂಗ್ರೆಸ್‌ಗೆ ನಿಷ್ಠರಾದವರ ಪೈಕಿ ರೇಣುಕಾ ರಾಜೇಂದ್ರನ್ ಕೂಡ ಒಬ್ಬರು.

1989ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೇಣುಕಾ ರಾಜೇಂದ್ರನ್ ಕಣಕ್ಕಿಳಿದಿದ್ದರು. ಅವರು 39,958 ಮತ ಗಳಿಸಿ ಜನತಾ ಪಕ್ಷದ ಕೆ.ಎಂ. ಮುನಿಯಪ್ಪ ಅವರನ್ನು ಪರಾಭವಗೊಳಿಸಿ ಮೂರನೇ ಬಾರಿಗೆ ಶಾಸಕಿಯಾದರು. 5 ಬಾರಿ ಚುನಾವಣೆಗೆ ಸ್ಪರ್ಧಿಸಿರುವ ರೇಣುಕಾ ಅವರು ಸದ್ಯ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಈವರೆಗೆ ಎಲ್ಲ ಕ್ಷೇತ್ರಗಳ ನಡುವೆ ಗೆದ್ದವರನ್ನು ಹೊರತುಪಡಿಸಿದಂತೆ 19 ಮಹಿಳೆಯರು ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸಾಮಾನ್ಯ ಕುಟುಂಬದಿಂದ ಬಂದ ಮಹಿಳೆ ಶಾಸಕಿ ಯಾದ ಉದಾಹರಣೆ ಇಲ್ಲ. ಆಯ್ಕೆಯಾದವರಿಗೆ ರಾಜಕೀಯದ ನಂಟಿದೆ. ಜತೆಗೆ ಮೀಸಲಾತಿ ಪ್ರಯೋಜನ ದೊರೆತಿದೆ.

ಐದು ಗೆಲುವು, ಮೂವರು ಶಾಸಕಿಯರು

ರೇಣುಕಾ ರಾಜೇಂದ್ರನ್ ಅವರು ತರುವಾಯ ಜಿಲ್ಲೆಯಲ್ಲಿ ಶಾಸಕಿಯಾಗಿ ಆಯ್ಕೆಯಾದವರು ಎನ್.ಜ್ಯೋತಿರೆಡ್ಡಿ. ಇವರು ಗೌರಿಬಿದನೂರು ಕ್ಷೇತ್ರದ ಮೊದಲ ಶಾಸಕ ನಾಗಯ್ಯ ರೆಡ್ಡಿ ಅವರ ಮೊಮ್ಮಗಳು.1994ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜ್ಯೋತಿರೆಡ್ಡಿ ಅವರು ಎರಡನೇ ಪ್ರಯತ್ನದಲ್ಲಿ ಕಾಂಗ್ರೆಸ್ ಹುರಿಯಾಳು ಎಸ್‌.ವಿ.ಅಶ್ವತ್ಥನಾರಾಯಣರೆಡ್ಡಿ ಅವರ ವಿರುದ್ಧ 10,891 ಮತಗಳ ಅಂತರದಿಂದ ಗೆದ್ದು ವಿಧಾನಸೌಧ ಪ್ರವೇಶಿಸುತ್ತಾರೆ.

ಒಂದು ಕಾಲದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೆಗೌಡರ ‘ಮಾನಸ ಪುತ್ರಿ’ಯಂತಿದ್ದ ಜ್ಯೋತಿ ರೆಡ್ಡಿ ಅವರು ಕೆಲ ಭಿನ್ನಾಭಿಪ್ರಾಯಗಳಿಂದ ಜೆಡಿಎಸ್ ತೊರೆದು ಬಿಜೆಪಿ ಸೇರಿದರು. ಸದ್ಯ ಇವರು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ.

ಶಾಸಕಿಯರಿಲ್ಲದೆ ಒಂದೂವರೆ ದಶಕ!

ಚಿಕ್ಕಬಳ್ಳಾಪುರ ಕ್ಷೇತ್ರ ಸುಮಾರು 30 ವರ್ಷಗಳ ಕಾಲ (1978 ರಿಂದ 2008ರ ವರೆಗೆ) ಮೀಸಲು ಕ್ಷೇತ್ರವಾಗಿತ್ತು.ಮೂರು ದಶಕಗಳ ಈ ಸುದೀರ್ಘ ಅವಧಿಯಲ್ಲಿ 25 ವರ್ಷಗಳ ಕಾಲ ಪರಿಶಿಷ್ಟ ಜಾತಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರ ಎ.ಮುನಿಯಪ್ಪ ಅವರ ಕುಟುಂಬದವರು ಇಲ್ಲಿ ಸರಣಿಯಲ್ಲಿ ಪ್ರತಿನಿಧಿಸಿ ಗೆಲುವು ಸಾಧಿಸುತ್ತಾರೆ. ರೇಣುಕಾ ರಾಜೇಂದ್ರನ್ ಅವರು ಮುನಿಯಪ್ಪ ಅವರ ಸಹೋದರಿ ಸರೋಜಾ ಅವರ ಪುತ್ರಿ.

ರೇಣುಕಾ ಅವರ ತರುವಾಯ 1999ರಲ್ಲಿ ಮುನಿಯಪ್ಪ ಅವರ ಮೊಮ್ಮಗಳು ಕೆ.ವಿ.ಅನಸೂಯಮ್ಮ ನಟರಾಜನ್ ಅವರು ಮೀಸಲಾತಿ ಮತ್ತು ಕುಟುಂಬ ರಾಜಕಾರಣದ ಬಲದಿಂದ ಗೆದ್ದು ಶಾಸಕಿಯಾದರು. ಅವರೇ ಕೊನೆಯ ಶಾಸಕಿ. ಒಂದೂವರೆ ದಶಕದಿಂದ ಒಬ್ಬ ಮಹಿಳೆಯೂ ಆಯ್ಕೆಯಾಗಿಲ್ಲ.

ಏಕೈಕ ಸ್ಪರ್ಧಿಗೂ ಠೇವಣಿ ನಷ್ಟ!

ಈವರೆಗೂ ಆಂಜನೇಯರೆಡ್ಡಿ ಮತ್ತು ಗಂಗಿರೆಡ್ಡಿ ಕುಟುಂಬಗಳ ರಾಜಕೀಯ ಕುಸ್ತಿ ‘ಅಖಾಡ’ವಾಗುತ್ತಲೇ ಬಂದಿರುವ ಚಿಂತಾಮಣಿ ಕ್ಷೇತ್ರದಲ್ಲಿ ಪುರುಷ ಪಾರಮ್ಯಕ್ಕೆ ಎಣೆ ಇಲ್ಲದಂತಾಗಿದೆ. ಮೊದಲಿನಿಂದಲೂ ಸಾಮಾನ್ಯ ಕ್ಷೇತ್ರವಾಗಿರುವ ಇಲ್ಲಿ ರೆಡ್ಡಿಗಳದ್ದೇ ದರ್ಬಾರ್. ‘ಪಾಳೇಗಾರಿಕೆ’ ಸ್ವರೂಪದ ರಾಜಕಾರಣ ಕಂಡು ಚುನಾವಣೆ ಎಂದರೆ ಬೆಚ್ಚಿದವರೇ ಅಧಿಕ. ಮಹಿಳೆಯ ಸ್ಪರ್ಧೆಯಂತೂ ಇಲ್ಲಿ ಕನಸಿನ ಮಾತಾಗಿದೆ.

ಈವರೆಗಿನ 14 ಚುನಾವಣೆಗಳಲ್ಲಿ ಇಲ್ಲಿ ಸ್ಪರ್ಧಿಸಿದ್ದು ಒಬ್ಬಳೇ ಒಬ್ಬ ಮಹಿಳೆ ಎನ್ನುವುದು ವಿಶೇಷ! ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಚೌಡರೆಡ್ಡಿ ಕುಟುಂಬದ ನಡುವಿನ ಶೀತಲ ಸಮರದ ಪರಿಣಾಮ ಇಲ್ಲಿ ಕಳೆದ ಚುನಾವಣೆಯಲ್ಲಿ (2013) ವಾಣಿ ಕೃಷ್ಣಾರೆಡ್ಡಿ ಅವರು ಮೊದಲಿಗರಾಗಿ ಚುನಾವಣೆಗೆ ಸ್ಪರ್ಧಿಸುವಂತಾಯಿತು.

ಚೌಡರೆಡ್ಡಿ ಅವರ ಪುತ್ರ ಡಾ.ಎಂ.ಸಿ.ಸುಧಾಕರ್ ಅವರಿಗೆ ಮುನಿಯಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸುವಂತೆ ಹೇಳಿದರೂ ಒಪ್ಪದೆ ಪಕ್ಷೇತರರಾಗಿ ಸ್ಪರ್ಧಿಸಿದರು. ಹೀಗಾಗಿ ಕೊನೆ ಕ್ಷಣದಲ್ಲಿ ಜೆಡಿಎಸ್‌ನಲ್ಲಿದ್ದ ವಾಣಿ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು.ಸುಧಾಕರ್‌ ಅವರನ್ನು ಸೋಲಿಸಲೇಬೇಕು ಎಂಬ ಜಿದ್ದಿನಿಂದ ಜೆಡಿಎಸ್‌ಗೆ ಮತದಾನ ಮಾಡಿಸಿದರು. ಇದರಿಂದಾಗಿ ಸುಧಾಕರ್ ಸೋತರು, ವಾಣಿ ಠೇವಣಿ ಕಳೆದುಕೊಂಡರು ಎನ್ನುತ್ತಾರೆ ಸ್ಥಳೀಯ ರಾಜಕಾರಣದ ತಜ್ಞರು.

ಆದಿಜಾಂಬವ ಸಮುದಾಯದ ಸಚಿವೆ

ಜಿಲ್ಲೆಯಲ್ಲಿ ಶಾಸಕಿಯಾಗಿ ಮೊದಲು ವಿಧಾನಸೌಧ ಮೆಟ್ಟಿಲು ಹತ್ತಿದ ರೇಣುಕಾ ರಾಜೇಂದ್ರನ್ ಅವರಿಗೆ ಸಚಿವರಾಗಿ ಕೆಲಸ ಮಾಡುವ ಅದೃಷ್ಟ ಒಲಿಯಿತು. 1980ರಲ್ಲಿ ರಾಜ್ಯ ರಾಜಕಾರಣದ ಪಲ್ಲಟಗಳ ನಡುವೆ ಆರ್.ಗುಂಡೂರಾವ್ ಮುಖ್ಯಮಂತ್ರಿಯಾದಾಗ ರೇಣುಕಾ ಸಚಿವರಾದರು. ಆದರೆ ಅದು ಬಹುಕಾಲ ಉಳಿಯಲಿಲ್ಲ.1982ರಲ್ಲಿ ವಕೀಲ ಎ.ಕೆ. ಸುಬ್ಬಯ್ಯ ಅವರು ರೇಣುಕಾ ವಿರುದ್ಧ ಲಂಚದ ಆರೋಪ ಮಾಡಿದ್ದು, ಸಚಿವ ಸ್ಥಾನಕ್ಕೆ ಎರವಾಯಿತು. ಸಚಿವರಾದವರಲ್ಲಿ ಆದಿಜಾಂಬವ ಸಮುದಾಯಕ್ಕೆ ಸೇರಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಇವರದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.