ಆರೋಪಕ್ಕೆ ಮಣಿಯುವುದಿಲ್ಲ: ಸೊಬರದಮಠ

7
ಭಿನ್ನಮತದ ನಡುವೆಯೇ ಎರಡು ನಿರ್ಣಯ ಸ್ವೀಕಾರ; ಎಚ್ಚರಿಕೆ ನೀಡಿದ ಹೋರಾಟ ಸಮಿತಿ

ಆರೋಪಕ್ಕೆ ಮಣಿಯುವುದಿಲ್ಲ: ಸೊಬರದಮಠ

Published:
Updated:

ನರಗುಂದ: ‘ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಶೀಘ್ರವೇ ದೆಹಲಿಗೆ ತೆರಳಿ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 1000ನೇ ದಿನ ಮಂಗಳವಾರ ಅವರು ಮಾತನಾಡಿ, ‘ಮಹದಾಯಿ ಹೋರಾಟಕ್ಕೆ ರಾಜ್ಯಮಟ್ಟದಲ್ಲಿ ಎಲ್ಲರಿಂದ ಬೆಂಬಲ ಲಭಿಸದೆ. ಈ ಹೋರಾಟ ಜನಾಂದೋಲನವಾಗಿ ಬದಲಾಗಿದೆ. ಯಾವುದೇ ಶಾಸಕ, ಸಂಸದರಿಂದಲೂ ಈ ರೀತಿಯ ಧರಣಿ ಸಾಧ್ಯವಿಲ್ಲ. ಇದನ್ನು ರೈತರ ಬೆಂಬಲದಿಂದ ಮಾಡಿ ತೋರಿಸಿದ್ದೇವೆ. ಈಗ ವಿಧಾನಸಭೆ ಚುನಾವಣೆ ಹೊಸ್ತಿಲ್ಲಲ್ಲಿ ಇದ್ದೇವೆ. ಆದ್ದರಿಂದ, ಪ್ರತಿಯೊಬ್ಬರೂ ವಿವಿಧ ಪಕ್ಷದ ಅಭ್ಯರ್ಥಿಗಳಿಗೆ ಮಹದಾಯಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಬೇಕಿದೆ. ಇದು ಇಂದಿನ ಸಭೆಯ ಮೊದಲ ನಿರ್ಣಯ, ಮಹದಾಯಿ ಜಾರಿಗೆ ರಾಷ್ಟ್ರಪತಿಗೆ ಮನವಿ ಸಲ್ಲಿಸುವುದು ಎರಡನೆಯ ನಿರ್ಣಯ’ ಎಂದು ಸೊಬರದಮಠ ಹೇಳಿದರು.

ಚುನಾವಣೆಗೆ ಸ್ಪರ್ಧಿಸಲು ವಿರೋಧ: ‘ಮಹದಾಯಿ ಹೋರಾಟಗಾರರು ಚುನಾವಣೆಗೆ ಸ್ಪರ್ಧಿಸುವುದಕ್ಕೆ, ಆರಂಭದಿಂದಲೂ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಎಲ್ಲ ನಿರ್ಣಯಗಳನ್ನು ರಾಜ್ಯ ಘಟಕದ ಅಧ್ಯಕ್ಷನಾಗಿ ನಾನೇ ಪ್ರಕಟಿಸಿದ್ದೇನೆ. ಅದೇ ರೀತಿ ರೈತ ಸೇನೆಯಿಂದ ಹಾಗೂ ಮಹದಾಯಿ ಹೆಸರಿನಲ್ಲಿ ಚುನಾವಣೆಗೆ ನಿಲ್ಲುವುದು ಬೇಡ ಎಂದು ಏ. 5ರಂದು ನಿರ್ಣಯ ಪ್ರಕಟಿಸಲಾಗಿದೆ. ಆದರೆ, ಈಗ ಅಂಬಲಿ ಅವರು ನಾನೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದೆ ಎಂದು ಹೇಳಿದ್ದಾರೆ. ಈ ರೀತಿಯ ಆರೋಪ ಸರಿಯಲ್ಲ. ಯಾವ ಆರೋಪಗಳಿಗೂ ನಾನು ಮಣಿಯುವುದಿಲ್ಲ. ನನ್ನ ಹೋರಾಟ ನಿರಂತರ’ ಎಂದರು.

ಮುಂಡರಗಿಯ ರೈತ ಮುಖಂಡ ವೈ.ಎನ್‌.ಗೌಡರ ಮಾತನಾಡಿ ‘ರಾಜಕಾರಣಿಗಳು ಬ್ರೀಟೀಷರಿಗಿಂತ ಅಪಾಯಕಾರಿ. ಆದ್ದರಿಂದ ರೈತರು ಜಾಗೃತಗೊಂಡು ಅವರಿಗೆ ತಕ್ಕ ಪಾಠ ಕಲಿಸಬೇಕಿದೆ’ ಎಂದರು.

ಧರಣಿಯಲ್ಲಿ ರಾಮದುರ್ಗದ ಶಿವಮೂರ್ತಿ ಸ್ವಾಮೀಜಿ, ಅವರಾದಿಯ ಶಿವಮೂರ್ತಿ ಸ್ವಾಮೀಜಿ, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ಬಿ.ವಿ.ಸೋಮಾಪುರ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ರಮೇಶ ನಾಯ್ಕರ, ಅರ್ಜುನ ಮಾನೆ, ರಾಘವೇಂದ್ರ ಗುಜಮಾಗಡಿ, ಶ್ರೀಶೈಲ ಮೇಟಿ, ಲಚ್ಚವ್ವ ಜೋತೆನ್ನವರ ಹೂಗಾರ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಅರ್ಜುನ ಮಾನೆ, ಚನ್ನಪ್ಪಗೌಡ ಪಾಟೀಲ ಹಾಗೂ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಭಾಗವಹಿಸಿದ್ದರು.

ರಾಜೀನಾಮೆಗೆ ಸಿದ್ಧ ಎಂದ ಅಂಬಲಿ

ರೈತ ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಶಂಕ್ರಣ್ಣ ಅಂಬಲಿ ಮಾತನಾಡಿ, ‘ಸೊಬರದಮಠ ಅವರೇ ಚುನಾವಣೆ ಸಿದ್ಧತೆ ಮಾಡಿಕೊಳ್ಳಿ ಎಂದಿದ್ದರು. ಅದಕ್ಕೆ ನಾನು, ಮಾಧ್ಯಮಗಳಿಗೆ ಈ ರೀತಿ ಹೇಳಿಕೆ ನೀಡಿದ್ದೇನೆ. ಈಗ ಎಲ್ಲರೂ ನನ್ನನ್ನು ಖಳನಾಯಕನಂತೆ ನೋಡುವಂತಾಗಿದೆ. ಈಗಲೂ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳುತ್ತೇನೆ. ಆದರೆ, ಸಮಿತಿಯಿಂದ ಉಚ್ಛಾಟನೆ ಮಾಡುವುದಾಗಿ ಹೇಳಿದ್ದಾರೆ. ಅವರು ಉಚ್ಛಾಟನೆ ಮಾಡುವುದು ಬೇಕಿಲ್ಲ. ನಾನೇ ರಾಜೀನಾಮೆ ನೀಡುತ್ತೇನೆ. ನನ್ನ ಹೋರಾಟ ಮುಂದುವರಿಸುತ್ತೇನೆ’ ಎಂದರು. ಇವರಿಗೆ ಹೋರಾಟಗಾರ ಶಂಕ್ರಗೌಡ ಪಾಟೀಲ ಧ್ವನಿಗೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry