ಅವಹೇಳನ, ಅಪಪ್ರಚಾರಕ್ಕೆ ನಿರ್ಬಂಧ

7
ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಸಭೆ, ಖಡಕ್‌ ಎಚ್ಚರಿಕೆ

ಅವಹೇಳನ, ಅಪಪ್ರಚಾರಕ್ಕೆ ನಿರ್ಬಂಧ

Published:
Updated:

ತುಮಕೂರು:ಯಾವುದೇ ಅಭ್ಯರ್ಥಿಯು ಪ್ರಚಾರ ಮಾಡುವಾಗ ಎದುರಾಳಿ ಅಭ್ಯರ್ಥಿಗಳ ಖಾಸಗಿ ವಿಚಾರ, ನಡತೆಗಳ ಬಗ್ಗೆ ಪ್ರಚಾರ ಮಾಡುವಂತಿಲ್ಲ. ವೈಯಕ್ತಿಕ ನಿಂದನೆ, ಅವಹೇಳನ ಹಾಗೂ ಅವರ ಶೀಲದ ಕುರಿತು ಪ್ರಚಾರ, ಅಪಪ್ರಚಾರ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಈ ಖಡಕ್ ಎಚ್ಚರಿಕೆ ನೀಡಿದರು.

ಎಲ್ಲ ರಾಜಕೀಯ ಪಕ್ಷಗಳು ಆಯೋಗದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಯಾವುದೇ ಅಡಚಣೆ ಉಂಟು ಮಾಡಬಾರದು ಎಂದು ಸೂಚಿಸಿದರು.

ಪ್ರಚಾರಕ್ಕೆ ಬಳಸುವಂತಿಲ್ಲ: ರಾಜಕೀಯ ಪಕ್ಷ, ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ದೇವಾಲಯ, ಮಸೀದಿ, ಚರ್ಚ್‌, ಜಿನಾಲಯ ಮತ್ತಿತರ ಧಾರ್ಮಿಕ ಸ್ಥಳಗಳನ್ನು ಬಳಸುವಂತಿಲ್ಲ. ಸಭೆ ಸಮಾರಂಭಗಳನ್ನು ಏರ್ಪಡಿಸುವ ಮುನ್ನ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಭೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಪ್ರಚಾರ ಸಾಮಗ್ರಿಗಳನ್ನು ಅಳವಡಿಸಬೇಕು ಹಾಗೂ ಸಭೆ ಮುಕ್ತಾಯವಾದ 2 ಗಂಟೆಯೊಳಗೆ ತೆರವುಗೊಳಿಸಬೇಕು ಎಂದು ಹೇಳಿದರು.

ವಿವಿಧ ಜಾತಿ ಮತ್ತು ಸಮುದಾಯಗಳ ಮಧ್ಯೆ ಅಥವಾ ಮತೀಯ ಅಥವಾ ಭಾಷಾ ಸಮೂಹಗಳ ಮಧ್ಯೆ ವೈಮನಸ್ಸು ಕೆರಳಿಸುವ, ಪರಸ್ಪರ ದ್ವೇಷ ಹುಟ್ಟಿಸುವ, ಉದ್ವೇಗಕ್ಕೆ ಕಾರಣವಾಗುವ ಚಟುವಟಿಕೆಗಳಲ್ಲಿ ತೊಡಗಬಾರದು. ಜಾತಿ, ಮತ ಮತ್ತು ಕೋಮು ಭಾವನೆಗಳ ಆಧಾರದ ಮೇಲೆ ಮತ ಯಾಚನೆ ಮಾಡುವಂತಿಲ್ಲ. ಮತದಾರರಿಗೆ ಆಮಿಷವೊಡ್ಡುವುದು, ಲಂಚ ನೀಡುವುದು, ಬೆದರಿಸಿರಬಾರದು. ಬೇರೊಬ್ಬರನ್ನು ಕರೆತಂದು ಇತರರ ಹೆಸರಿನಲ್ಲಿ ಮತ ಚಲಾಯಿಸಬಾರದು ಎಂದು ಹೇಳಿದರು.

ಎಚ್ಚರ ವಹಿಸಿ: ಪ್ರಚಾರದ ಸಮಯದಲ್ಲಿ ಗಲಭೆ, ದೊಂಬಿ, ಹಿಂಸೆ, ರಕ್ತಪಾತ, ಸಾವು ಮತ್ತಿತರ ಅಹಿತಕರ ಘಟನೆಗಳು ಸಂಭವಿಸದಂತೆ ಅಭ್ಯರ್ಥಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಯಾವುದೇ ವ್ಯಕ್ತಿಗೆ ಸೇರಿದ ಭೂಮಿ, ಕಟ್ಟಡ, ಕಾಂಪೌಂಡ್ ಗೋಡೆ ಮೇಲೆ ಆ ವ್ಯಕ್ತಿಯ ಲಿಖಿತ ಅನುಮತಿ ಪಡೆಯದೆ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸುವಂತಿಲ್ಲ. ಬ್ಯಾನರ್, ಭಿತ್ತಿ ಪತ್ರಗಳನ್ನು ಅಳವಡಿಸುವಂತಿಲ್ಲ. ಪ್ರಚಾರದ ವೇಳೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಶೇಖರ್ ಮಾತನಾಡಿ, ’ಜಾಹೀರಾತುಗಳನ್ನು ಪ್ರಚಾರ ಮಾಡಲು ಪೂರ್ವಾನುಮತಿ ಪಡೆಯಬೇಕು. ಮಾಧ್ಯಮ ಪ್ರಮಾಣೀಕರಣ ಹಾಗೂ ಮಾಧ್ಯಮ ಪರಿವೀಕ್ಷಣಾ ಸಮಿತಿಯನ್ನು ರಚನೆ ಮಾಡಲಾಗಿದೆ. ಜಾಹೀರಾತಿನ ಮೇಲೆ ಈ ಸಮಿತಿ ಕಣ್ಣಿಟ್ಟಿರುತ್ತದೆ’ ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಕಾರಿ ಅನೀಸ್ ಕಣ್ಮಣಿ ಜಾಯ್, ನೋಡಲ್ ಅಧಿಕಾರಿಗಳಾದ ರೂಪದೇವಿ, ರಮೇಶ್, ರೇವಣ್ಣ, ವಿಜಯಕುಮಾರ್, ಎಂಸಿಎಂಸಿ ಸಮಿತಿಯ ಸದಸ್ಯ ಕಾರ್ಯದರ್ಶಿ ಡಿ.ಮಂಜುನಾಥ ಇದ್ದರು.

ಮೆರವಣಿಗೆಗೆ ಅನುಮತಿ ಕಡ್ಡಾಯ

ಅಭ್ಯರ್ಥಿಗಳು ಏಪ್ರಿಲ್ 17ರಿಂದ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮೆರವಣಿಗೆ ಮಾಡುವ ಸ್ಥಳ, ವೇಳೆ, ಹಾದು ಹೋಗುವ ಮಾರ್ಗದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಕೆ.ಪಿ.ಮೋಹನ್‌ರಾಜ್‌ ತಿಳಿಸಿದರು. ನಾಮಪತ್ರ ಸಲ್ಲಿಸುವಾಗ ಇಬ್ಬರು ಸೂಚಕರು ಹಾಗೂ ಇಬ್ಬರು ಪಕ್ಷದ ಕಾರ್ಯಕರ್ತರು ಸೇರಿ 4 ಮಂದಿಗೆ ಮಾತ್ರ ಅಭ್ಯರ್ಥಿಯ ಜೊತೆಗಿರಲು ಅವಕಾಶವಿದೆ. ನಾಮಪತ್ರದೊಂದಿಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ವಿವರಗಳನ್ನು ಒದಗಿಸುವುದು ಕಡ್ಡಾಯ ಎಂದು ತಿಳಿಸಿದರು.

ತಾರಾ ಪ್ರಚಾರಕರು

ತಾರಾ ಪ್ರಚಾರಕರನ್ನು ನೇಮಿಸಿಕೊಳ್ಳಲು ಆಯೋಗವು ಅವಕಾಶ ನೀಡಿದೆ. ತಾರಾ ಪ್ರಚಾರಕರು ಪ್ರಚಾರ ಮಾಡುವ ದಿನಾಂಕ, ವೇಳೆ ಹಾಗೂ ಸ್ಥಳದ ಬಗ್ಗೆ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಸೋಮಶೇಖರ್‌ ತಿಳಿಸಿದರು.

ಕಾಸಿಗಾಗಿ ಸುದ್ದಿ

ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅಭ್ಯರ್ಥಿ ಅಥವಾ ಪಕ್ಷಕ್ಕೆ ಬೆಂಬಲಿಸುವ ಅಥವಾ ಉತ್ತೇಜಿಸುವ ರೀತಿಯಲ್ಲಿ ಲೇಖನ ಪ್ರಕಟ ಮಾಡಿದರೆ ಅಥವಾ ಪ್ರಸಾರ ಮಾಡಿದರೆ ಅದನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವುದು ಎಂದು ಸೋಮಶೇಖರ್‌ ತಿಳಿಸಿದರು. ಉಮೇದುವಾರರು ಎದುರಾಳಿಗಳನ್ನು ದೂಷಿಸುವ ರೀತಿಯ ಸುದ್ದಿಯನ್ನು ಏಕಪಕ್ಷೀಯವಾಗಿ ಪ್ರಸಾರ ಮಾಡಬಾರದು. ಇಂಥ ಸುದ್ದಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಅಧ್ಯಕ್ಷತೆಯ ಸಮಿತಿಯು ಕಾಸಿಗಾಗಿ ಸುದ್ದಿ ಅಥವಾ ಅನಧಿಕೃತ ಜಾಹೀರಾತು ಎಂದು ನಿರ್ಧರಿಸಿದ್ದಲ್ಲಿ ಸಂಬಂಧಿಸಿದ ಪಕ್ಷ ಅಥವಾ ಅಭ್ಯರ್ಥಿಗೆ  ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry