ಸೋಮವಾರ, ಡಿಸೆಂಬರ್ 9, 2019
19 °C
ಮುಖ್ಯಮಂತ್ರಿ ಭೇಟಿಯಾದ ‘ಕೈ’ ಪ್ರಮುಖರ ದಂಡು

ಕಾಂಗ್ರೆಸ್‌ ಟಿಕೆಟ್‌ಗೆ ತೀವ್ರ ಲಾಬಿ

Published:
Updated:
ಕಾಂಗ್ರೆಸ್‌ ಟಿಕೆಟ್‌ಗೆ ತೀವ್ರ ಲಾಬಿ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಟಿಕೆಟ್‌ ಅಂತಿಮಗೊಳಿಸುವ ಕಸರತ್ತು ಮುಂದುವರಿದಿರುವುದರ ಮಧ್ಯೆ, ಹಲವು ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಬುಧವಾರ ಭೇಟಿ ಮಾಡಿದರು.

ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ, ಜಾರಕಿಹೊಳಿ ಸಹೋದರರು, ಮಾಜಿ ಮೇಯರ್‌ಗಳಾದ ಜಿ. ಪದ್ಮಾವತಿ, ಡಿ. ವೆಂಕಟೇಶ ಮೂರ್ತಿ ಮತ್ತಿತರರು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಪಿ. ಯೋಗೇಶ್ವರ ವಿರುದ್ಧ ಎಚ್‌.ಎಂ. ರೇವಣ್ಣ ಅವರನ್ನು ಕಣಕ್ಕಿಳಿಸಲು ಸಿದ್ದರಾಮಯ್ಯ ಆಸಕ್ತಿ ತೋರಿದ್ದಾರೆ. ಚನ್ನಪಟ್ಟಣದಲ್ಲಿ ಕುರುಬ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮಾಗಡಿ ಕ್ಷೇತ್ರದಿಂದ ಈ ಹಿಂದೆ ಚುನಾಯಿತರಾಗಿದ್ದ ರೇವಣ್ಣ, ಸದ್ಯ ವಿಧಾನ ಪರಿಷತ್‌ ಸದಸ್ಯ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ, ಸಹಕಾರ ಸಚಿವ ರಮೇಶ ಜಾರಕಿಹೊಳಿ ಮತ್ತು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಟಿಕೆಟ್‌ ಹಂಚಿಕೆಯ ಗೊಂದಲ ನಾಯಕರ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಾರದು ಎಂದು ಅವರಲ್ಲಿ ಮುಖ್ಯಮಂತ್ರಿ ಮತ್ತೊಮ್ಮೆ ಹೇಳಿದರು ಎಂದು ಗೊತ್ತಾಗಿದೆ.

ರಾಜಾಜಿನಗರ ಟಿಕೆಟ್‌ ಆಕಾಂಕ್ಷಿ ಪದ್ಮಾವತಿ ಮತ್ತು ಪದ್ಮನಾಭ ನಗರದಿಂದ ಟಿಕೆಟ್‌ ಬಯಸಿರುವ ವೆಂಕಟೇಶ ಮೂರ್ತಿ ಜೊತೆಗೂ ಸಿದ್ದರಾಮಯ್ಯ ಕೆಲಹೊತ್ತು ಚರ್ಚೆ ನಡೆಸಿದರು. ಮುಖ್ಯಮಂತ್ರಿ ನಿವಾಸದ ಹೊರಗಡೆ ಜಮಾಯಿಸಿದ್ದ ಶಾಂತಿನಗರ ಶಾಸಕ ಎನ್‌.ಎ ಹ್ಯಾರಿಸ್‌ ಬೆಂಬಲಿಗರು, ಅವರಿಗೆ ಮತ್ತೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದರು. ಪುತ್ರ ಮೊಹಮದ್‌ ಗೂಂಡಾ ವರ್ತನೆಯ ಪರಿಣಾಮ ಹ್ಯಾರಿಸ್‌ ಟಿಕೆಟ್‌ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಗಣಿ ಸಚಿವ ವಿನಯ ಕುಲಕರ್ಣಿ ಕೂಡ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು. ಸಿದ್ದರಾಮಯ್ಯ ಗುರುವಾರ ಮತ್ತೆ ದೆಹಲಿಗೆ ತೆರಳಲಿದ್ದಾರೆ.

ಪ್ರತಿಕ್ರಿಯಿಸಿ (+)