ಶುಕ್ರವಾರ, ಡಿಸೆಂಬರ್ 6, 2019
25 °C
ಉದ್ಯೋಗ ಮೇಳ ಉದ್ಘಾಟಿಸಿದ ಪ್ರಾಂಶುಪಾಲ ಜಯರಾಮರೆಡ್ಡಿ ಸಲಹೆ

ಸ್ವಾವಲಂಬಿ ಬದುಕಿಗೆ ಉದ್ಯೋಗ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾವಲಂಬಿ ಬದುಕಿಗೆ ಉದ್ಯೋಗ ಅಗತ್ಯ

ಕೋಲಾರ: ಉದ್ಯೋಗ ಗಿಟ್ಟಿಸಿಕೊಳ್ಳಲು ಅರ್ಹತೆ ಜತೆಗೆ ಆ ಕೆಲಸ ಮಾಡುವ ಆತ್ಮವಿಶ್ವಾಸ ಹೊಂದಿರಬೇಕು ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಜಯರಾಮರೆಡ್ಡಿ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಹಾಗೂ ಅಚಿವರ್ಸ್ ಸ್ಕಿಲ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚಿದೆ. ಹೀಗಾಗಿ ಉದ್ಯೋಗ ಸಿಕ್ಕುವುದು ತುಂಬಾ ಕಷ್ಟ’ ಎಂದು ಅಭಿಪ್ರಾಯಪಟ್ಟರು.

ಸ್ವಾವಲಂಬಿ ಬದುಕಿಗೆ ಉದ್ಯೋಗ ಅಗತ್ಯ. ಆ ಉದ್ಯೋಗ ಪಡೆಯಲು ಶಿಕ್ಷಣವೊಂದಿದ್ದರೆ ಸಾಲದು. ಜತೆಗೆ ಕೌಶಲ ತರಬೇತಿಯೂ ಅಗತ್ಯ. ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಶ್ಲಾಘನೀಯ ಎಂದರು.

ಈ ಹಿಂದೆ ಉದ್ಯೋಗಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಜನ ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಸಮಾಜ ಹಾಕಿದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡಲು ಸಮರ್ಥರು ಎಂದು ಸಾಬೀತು ಮಾಡಿದ್ದಾರೆ ಎಂದರು.

ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಉದ್ಯೋಗ ಮೇಳ ಆಯೋಜನೆಯಿಂದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗೆ ಅನುಕೂಲವಾಗಲಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಜನರ ಜೀವನ ಮಟ್ಟ ಸುಧಾರಣೆಯಾಗಲಿದೆ. ಕಾಲೇಜಿನಲ್ಲಿ ಹಿಂದಿನ ವರ್ಷ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಸಿಕ್ಕಿತ್ತು ಎಂದು ತಿಳಿಸಿದರು.

ಅಚಿವರ್ಸ್ ಸ್ಕಿಲ್ ಇಂಡಿಯಾ ಸಂಸ್ಥೆ ಸದಸ್ಯ ಕೀರ್ತಿಪ್ರಸಾದ್, ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ರಾಜೇಂದ್ರಕುಮಾರ್, ವಿಜಯ್‌ಕುಮಾರ್‌, ಪ್ರೊ.ಅಶ್ವತ್ಥ್‌ ಪಾಲ್ಗೊಂಡಿದ್ದರು.

ಮೇಳದಲ್ಲಿ 15 ಕಂಪನಿ

ಸಮಸ್ತ ಫೈನಾನ್ಸ್, ಎಚ್‌ಜಿಎಸ್‌, ಬ್ರೂಕರ್ ಕಿಂಗ್, ಮುತ್ತೂಟ್ ಫೈನಾನ್ಸ್, ಕನ್‍ಸ್ಯೂಮರ್ ವರ್ಡ್ ಸೇರಿದಂತೆ 15ಕ್ಕೂ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಪದವೀಧರರು ಮೇಳದಲ್ಲಿ ಸಂದರ್ಶನಕ್ಕೆ ಹಾಜರಾದರು.

ಪ್ರತಿಕ್ರಿಯಿಸಿ (+)