ಶುಕ್ರವಾರ, ಡಿಸೆಂಬರ್ 13, 2019
19 °C
ಮೊದಲ ಬಾರಿಗೆ ಜೈವಿಕ ಪ್ರಯೋಗಕ್ಕೆ ಮುಂದಾದ ಚೀನಾ

ಚಂದ್ರ ಲೋಕದಲ್ಲಿ ಆಲೂಗಡ್ಡೆ ಬಿತ್ತನೆ

ಪಿಟಿಐ Updated:

ಅಕ್ಷರ ಗಾತ್ರ : | |

ಚಂದ್ರ ಲೋಕದಲ್ಲಿ ಆಲೂಗಡ್ಡೆ ಬಿತ್ತನೆ

ಬೀಜಿಂಗ್‌: ಈ ವರ್ಷಾಂತ್ಯಕ್ಕೆ ಚಂದ್ರನ ಅಂಗಳಕ್ಕೆ ಬಿತ್ತನೆ ಆಲೂಗಡ್ಡೆ, ಹೂ ಬಿಡುವ ಕೆಲ ಸಸ್ಯಗಳು ಮತ್ತು ರೇಷ್ಮೆ ಮೊಟ್ಟೆಗಳನ್ನು ಕಳುಹಿಸಲು ಚೀನಾ ಸಿದ್ಧತೆ ನಡೆಸಿದೆ.

ಚಂದ್ರನ ವಾತಾವರಣದಲ್ಲಿ ಮೊದಲ ಬಾರಿಗೆ ಜೈವಿಕ ಪ್ರಯೋಗ ನಡೆಸಲು ಮುಂದಾಗಿರುವ ಚೀನಾ, ತನ್ನ ‘ಚಾಂಗ್‌’ಇ–4’ ಯೋಜನೆಯಡಿ ಇವುಗಳನ್ನು ಕಳುಹಿಸಲಿದೆ.

ವಿಶೇಷ ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾದ ದಿಂಡಿನ ಆಕಾರದ ಟಿನ್‌ವೊಂದರಲ್ಲಿ ಬಿತ್ತನೆಯ ಆಲೂಗಡ್ಡೆ, ಅರಬಿಡಾಪ್ಸಿಸ್‌ (ಎಲೆಕೋಸು ಮತ್ತು ಸಾಸಿವೆಗೆ ಸಂಬಂಧಿಸಿದ ಹೂ ಬಿಡುವ ಸಸ್ಯ) ಮತ್ತು ರೇಷ್ಮೆ ಹುಳುವಿನ ಮೊಟ್ಟೆಗಳನ್ನು ಕಳುಹಿಸಲಾಗುವುದು ಎಂದು ಚೀನಾ ಸರ್ಕಾರಿ ಸುದ್ದಿವಾಹಿನಿ ಕ್ಸಿನುವಾ ತಿಳಿಸಿದೆ.

ಇವುಗಳ ಜತೆಗೆ ಈ ಟಿನ್‌ನಲ್ಲಿ ನೀರು, ಪೌಷ್ಟಿಕ ದ್ರವ, ಗಾಳಿ, ಸಣ್ಣ ಗಾತ್ರದ ಕ್ಯಾಮೆರಾ ಮತ್ತು ದತ್ತಾಂಶ ಪ್ರಸರಣ ಸಾಧನ ಇರಲಿವೆ.

ಚೀನಾದ ಚಾಂಗ್‌ಕಿಂಗ್‌ ವಿಶ್ವವಿದ್ಯಾಲಯದ ನೇತೃತ್ವದಲ್ಲಿ 28 ವಿಶ್ವವಿದ್ಯಾಲಯಗಳು ಸೇರಿ ಈ ಪ್ರಯೋಗ ರೂಪಿಸಿವೆ.

ಬಿತ್ತನೆಯ ಆಲೂಗಡ್ಡೆಯು ಚಂದ್ರನ ಅಂಗಳದಲ್ಲಿ ಸಸಿಯಾಗಿ, ಹೂ ಬಿಡಲಿದೆ. ಆ ಪ್ರಕ್ರಿಯೆ ಕ್ಯಾಮೆರಾದಲ್ಲಿ ಸೆರೆಯಾಗಿ, ಆ ದೃಶ್ಯಗಳು ಭೂಮಿಗೆ ಪ್ರಸಾರವಾಗಲಿವೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಅರಬಿಡಾಪ್ಸಿಸ್ ಸಸ್ಯದ ಬೆಳವಣಿಗೆ ಅವಧಿ ಅತ್ಯಂತ ಕಡಿಮೆಯಿದ್ದು, ಸುಲಭವಾಗಿ ವೀಕ್ಷಿಸಬಹುದು. ಇನ್ನು ಚಂದ್ರನ ವಾತಾವರಣದಲ್ಲಿ ಆಲೂಗಡ್ಡೆ ಬೆಳೆದರೆ, ಅದನ್ನು ಗಗನಯಾತ್ರಿಗಳಿಗೆ ಆಹಾರವಾಗಿ ಬಳಸಬಹುದು.

ಚಂದ್ರನ ಅಂಗಳದಲ್ಲಿ ಸಣ್ಣ ಜೀವಮಂಡಲ ಸೃಷ್ಟಿಸುವುದು ಈ ಪ್ರಯೋಗದ ಉದ್ದೇಶ’ ಎಂದು ಚಾಂಗ್‌ಕಿಂಗ್ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಲಿಯು ಹೆನ್‌ಲಾಂಗ್‌ ತಿಳಿಸಿದ್ದಾರೆ.

**

ಟಿನ್‌ ಸ್ವರೂಪ

18 ಸೆಂ.ಮೀ ಉದ್ದ

16 ಸೆಂ.ಮೀ ವ್ಯಾಸ

800 ಮಿ.ಲೀ ಸಾಮರ್ಥ್ಯ

3 ಕೆ.ಜಿ ತೂಕ

ಪ್ರತಿಕ್ರಿಯಿಸಿ (+)