ಭಾನುವಾರ, ಡಿಸೆಂಬರ್ 15, 2019
25 °C
ಮಹಿಳೆಯರ 50 ಮೀಟರ್ಸ್‌ ರೈಫಲ್‌ ಪ್ರೋನ್‌ ವಿಭಾಗದಲ್ಲಿ ಪದಕದ ಸಾಧನೆ

ಶೂಟಿಂಗ್‌: ತೇಜಸ್ವಿನಿಗೆ ಒಲಿದ ಬೆಳ್ಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಶೂಟಿಂಗ್‌: ತೇಜಸ್ವಿನಿಗೆ ಒಲಿದ ಬೆಳ್ಳಿ

ಬ್ರಿಸ್ಬೇನ್‌: ಅಪೂರ್ವ ಸಾಮರ್ಥ್ಯ ತೋರಿದ ಭಾರತದ ತೇಜಸ್ವಿನಿ ಸಾವಂತ್‌, ಕಾಮನ್‌ವೆಲ್ತ್‌ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಬೆಲ್‌ಮೊಂಟ್‌ ಶೂಟಿಂಗ್‌ ಕೇಂದ್ರ ದಲ್ಲಿ ಗುರುವಾರ ನಡೆದ ಮಹಿಳೆಯರ 50 ಮೀಟರ್ಸ್‌ ರೈಫಲ್ ಪ್ರೋನ್‌ ವಿಭಾಗದಲ್ಲಿ ತೇಜಸ್ವಿನಿ, ಎರಡನೆ ಸ್ಥಾನ ಗಳಿಸಿದರು. ಅವರು ಒಟ್ಟು 618.9 ಸ್ಕೋರ್‌ ಸಂಗ್ರಹಿಸಿದರು.

ತೇಜಸ್ವಿನಿ ಅವರು ಕಾಮನ್‌ವೆಲ್ತ್‌ ಕೂಟದಲ್ಲಿ ಗೆದ್ದ ಆರನೆ ಪದಕ ಇದಾಗಿದೆ. ಈ ಹಿಂದೆ ಅವರು ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಜಯಿಸಿದ್ದರು.

ಸ್ಕಾಟ್ಲೆಂಡ್‌ನ ಸಿಯೊನೈದ್‌ ಮೆಕಿಂತೋಷ್‌ (618.1 ಸ್ಕೋರ್‌) ಕಂಚು ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಅಂಜುಮ್‌ ಮೌಡ್ಗಿಲ್‌ 16ನೆ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಅಂಜುಮ್‌ 602.2 ಸ್ಕೋರ್‌ ಕಲೆಹಾಕಿದರು. ಫೈನಲ್‌ನಲ್ಲಿ ಒಟ್ಟು 20 ಮಂದಿ ಭಾಗವಹಿಸಿದ್ದರು.

ಪುರುಷರ 25 ಮೀಟರ್ಸ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್ ವಿಭಾಗದ ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಭಾರತದ ನೀರಜ್ ಕುಮಾರ್‌ ಅಗ್ರಸ್ಥಾನ ಗಳಿಸಿದರು. ಅವರು 291 ಪಾಯಿಂಟ್ಸ್‌ ಕಲೆಹಾಕಿದರು.

ಭಾರತದ ಮತ್ತೊಬ್ಬ ಶೂಟರ್‌ ಅನೀಶ್‌ ಭಾನವಾಲಾ ಮೂರನೆ ಸ್ಥಾನ ತಮ್ಮದಾಗಿಸಿಕೊಂಡರು. ಅವರು 286 ಪಾಯಿಂಟ್ಸ್‌ ಸಂಗ್ರಹಿಸಿದರು. ಅರ್ಹತಾ ಸುತ್ತಿನಲ್ಲಿ ಒಟ್ಟು 13 ಮಂದಿ ಶೂಟರ್‌ಗಳು ಕಣದಲ್ಲಿದ್ದರು.

‘2020ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಿಗದಿಯಾಗಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ. ಇದಕ್ಕೂ ಮುನ್ನ ಈ ವರ್ಷದ ಆಗಸ್ಟ್‌ನಲ್ಲಿ ಜಕಾರ್ತದಲ್ಲಿ ನಡೆಯುವ ಏಷ್ಯನ್‌ ಕ್ರೀಡಾಕೂಟ ಹಾಗೂ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ ಆಯೋಜನೆಯಾಗಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲಲು ಶ್ರಮಿಸುತ್ತೇನೆ. ಇದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತೇನೆ’ ಎಂದು ತೇಜಸ್ವಿನಿ ತಿಳಿಸಿದ್ದಾರೆ.

**

ಕಾಮನ್‌ವೆಲ್ತ್‌ ಕೂಟದಲ್ಲಿ ಆರನೆ ಪದಕ ಗೆದ್ದಿರುವುದಕ್ಕೆ ಅತೀವ ಖುಷಿಯಾಗಿದೆ. ಮುಂಬರುವ ಕೂಟಗಳಲ್ಲಿ ಚಿನ್ನ ಜಯಿಸಲು ಪ್ರಯತ್ನಿಸುತ್ತೇನೆ.

-ತೇಜಸ್ವಿನಿ ಸಾವಂತ್‌, ಭಾರತದ ಶೂಟರ್‌

ಪ್ರತಿಕ್ರಿಯಿಸಿ (+)